ಅದಕಾಗಿ ಇದಕಾಗಿ ಮತ್ತೊಂದಕಾಗಿ||
ಅಧಿಕಾರ ಸಿರಿ ಸೊಗಸು ಕೀರ್ತಿಗಳ ನೆನೆದು ಮನ ಕುತಿಯತಿಹುದಾವಗಂ ಮಂಕುತಿಮ್ಮ||
ವಿದೇಶಿ ಮಹಿಳೆಯೊಬ್ಬಳು ಶಾಂತಿ, ಸಮಾಧಾನ ಹುಡುಕುತ್ತ ನೇಪಾಳಕ್ಕೆ ಬಂದಾಗ ದಾರಿಯಲ್ಲಿ ಒಬ್ಬ ವೃದ್ಧ ಸಂನ್ಯಾಸಿಯನ್ನು ಕಂಡಳು. ಸಂನ್ಯಾಸಿ ಚೀಲದೊಳಕ್ಕೆ ಕೈ ಹಾಕಿ ಏನನ್ನೋ ಮತ್ತೆ ಮತ್ತೆ ಮುಟ್ಟಿ ತಡವುತ್ತಿದ್ದ. ಕುತೂಹಲ ತಡೆಯಲಾರದ ಮಹಿಳೆ ಸಂನ್ಯಾಸಿಯನ್ನು ‘ಅದೇಕೆ ಪದೇಪದೆ ಚೀಲವನ್ನು ಮುಟ್ಟುತ್ತೀರಿ?’ ಎಂದು ಕೇಳಿಯೇ ಬಿಟ್ಟಳು.
ಆಗ ಸಂನ್ಯಾಸಿ ಒಮ್ಮೆ ಹಾಗೆಯೇ ಅವಳೆಡೆ ನೋಡಿ ಮುಗುಳ್ನಗೆ ಬೀರುತ್ತ ಚೀಲದೊಳಗಿಂದ ಒಂದು ಕೊಳೆತ ಬಾಳೆಹಣ್ಣನ್ನು ಹೊರ ತೆಗೆದು ದೂರಕ್ಕೆಸೆದು, ‘ಇದು ಕಳೆದುಹೋದ ಬದುಕು. ಈಗ ಅದರ ಕುರಿತು ಚಿಂತಿಸುವುದರಿಂದ ಫಲವಿಲ್ಲ’ ಎಂದ. ಇನ್ನು ಸರಿಯಾಗಿ ಬೆಳೆಯದ ಮತ್ತೊಂದು ಎಳೆಯ ಬಾಳೆಕಾಯಿಯೊಂದನ್ನು ಹೊರ ತೆಗೆದು ತೋರಿಸುತ್ತ ‘ಇದು ಮುಂದೆ ಬದುಕಬೇಕಾದ ಬದುಕು. ಈಗಲೇ ತಲೆ ಕೆಡಿಸಿಕೊಂಡು ಕೂರುವುದು ವ್ಯರ್ಥ’ ಎಂದು ಪುನಃ ಚೀಲದೊಳಗೆ ತುರುಕಿದ.
ಕೊನೆಯಲ್ಲಿ ಮತ್ತೊಮ್ಮೆ ಚೀಲದೊಳಗೆ ಕೈ ಹಾಕಿ ಮತ್ತೊಂದು ಮಾಗಿದ, ತಿನ್ನಲು ಯೋಗ್ಯವಾದ ಹಣ್ಣನ್ನು ಹೊರ ತೆಗೆದು ಮಹಿಳೆಗೆ ಅರ್ಧಕೊಟ್ಟು ತಾನೂ ಅರ್ಧ ತಿಂದ. ‘ಈ ಹಣ್ಣು ವರ್ತಮಾನ ಕಾಲ. ತನ್ನ ಕೈಯೊಳಗಿರುವುದು. ದುಡಿಯಲು, ತಿನ್ನಲು ಸರಿಯಾಗಿರುವುದು.
ನಿರ್ಭಯವಾಗಿ, ಸಮಾಧಾನದಿಂದ ತಿನ್ನಬಹುದು’ ಎಂದ. ಶಾಂತಿಯನ್ನು ಹುಡುಕಿಕೊಂಡು ಹೊರಟ ಮಹಿಳೆಗೆ ತನ್ನ ಅಶಾಂತಿಗೆ, ಅಸಮಾಧಾನಕ್ಕೆ ಕಾರಣ ಏನೆಂದು ಅರ್ಥವಾಗಿ ಅಲ್ಲಿಂದಲೇ ತನ್ನ ದೇಶಕ್ಕೆ ಮರಳಿದಳು. ನಮ್ಮ ಜೀವನವು ಅನೇಕ ಸಂದರ್ಭದಲ್ಲಿ ಇದೇ ರೀತಿಯಾಗಿ ಕಳೆದುಹೋಗುತ್ತದೆ, ಅಲ್ಲವೆ? ಗತಿಸಿದ, ಪ್ರಯೋಜನಕ್ಕೆ ಇಲ್ಲದ ಘಟನೆಗಳನ್ನು ಪುನಃ ಪುನಃ ನನೆಸಿಕೊಂಡು ಕಣ್ಣೀರಿಡುತ್ತೇವೆ, ವ್ಯಥೆ ಪಡುತ್ತೇವೆ. ಅಥವಾ ‘ನಾಳೆ ಏನಾಗವುದೋ’ ಎಂದು ನಮ್ಮ ಮುಷ್ಟಿಯಲ್ಲಿ ಇಲ್ಲದ ಭವಿಷ್ಯದ ಕುರಿತು ಮತ್ತೆ ಮತ್ತೆ ಯೋಚಿಸಿ ಭಯಭೀತರಾಗುತ್ತೇವೆ.
ನಿನ್ನೆ, ನಾಳೆ ಇವೆರಡರ ಯೋಚನೆ, ಚಿಂತೆಯಲ್ಲಿ ಅನಾವಶ್ಯಕವಾಗಿ ಸಿಲುಕಿ, ನಲುಗಿ ನಮ್ಮ ಪಾಲಿಗಿರುವ ಇಂದಿನ ಸುದಿನವನ್ನು ಕಳೆದುಕೊಳ್ಳುತ್ತೇವೆ. ಆದ್ದರಿಂದ ಗತಿಸಿದ್ದನ್ನು ಮನದಿಂದ ದೂರ ಎಸೆದು, ನಾಳೆಯದರ ಕುರಿತು ಅತಿಯಾಗಿ ಯೋಚಿಸದೆ ನಮ್ಮ ಕೈಯೊಳಗಿನ ಈ ದಿನವನ್ನು ಖುಷಿಯಿಂದ ಕಳೆದುಬಿಡೋಣ. ಅಲ್ಲವೇ?
| ಪ್ರತಿಮಾ ಕೋಮಾರ (ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)