ಲೈಫ್‌ಸ್ಟೈಲ್

ಮಾವಿನ ಹಣ್ಣು ತಿಂದು ಸಿಪ್ಪೆ ಬಿಸಾಡುವ ಬದಲು ಈ ರೀತಿ ಬಳಸಿ ಆಮೇಲೆ ಅದರ ಚಮತ್ಕಾರ ನೋಡಿ!

ಬೇಸಿಗೆ ಕಾಲ ಬಂತೆಂದರೆ ಸಾಕು ಪ್ರತಿಯೊಬ್ಬರು ಮಾವಿನ ಹಣ್ಣಿನ ರುಚಿಯನ್ನು ಸವಿಯುತ್ತಾರೆ. ಈ ಸೀಸನ್​ನಲ್ಲಿ ಮಾವಿನ ಹಣ್ಣಿಗೆ ತುಂಬಾ ಬೇಡಿಕೆ ಇರುತ್ತದೆ. ಮಾವಿನಹಣ್ಣು ರುಚಿಕರ ಮಾತ್ರವಲ್ಲದೆ ನಮ್ಮ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಗಳನ್ನು ನೀಡುತ್ತದೆ. ಅನೇಕ ಜನರು ಮಾವಿನ ಹಣ್ಣನ್ನು ಮಾತ್ರ ಸವಿಯಲು ಇಷ್ಟಪಡುತ್ತಾರೆ. ಆದರೆ, ಅದರ ಸಿಪ್ಪೆಯನ್ನು ಬಹುತೇಕರು ಇಷ್ಟಪಡುವುದೇ ಇಲ್ಲ. ಹೀಗಾಗಿ ಸಿಪ್ಪೆ ಬೀಸಾಡುತ್ತಾರೆ. ಆದರೆ, ಸಿಪ್ಪೆಯಲ್ಲೂ ಅನೇಕ ಆರೋಗ್ಯಕರ ಲಾಭಗಳಿವೆ. ನಾವೀಗ ಸಿಪ್ಪೆಯ ಉಪಯೋಗದ ಬಗ್ಗೆ ತಿಳಿಯೋಣ.

ಚರ್ಮಕ್ಕೆ ಒಳ್ಳೆಯದು

ಮಾವಿನ ಸಿಪ್ಪೆಯಲ್ಲಿ ಫೈಬರ್, ಆ್ಯಂಟಿಆಕ್ಸಿಡೆಂಟ್‌ಗಳು, ವಿಟಮಿನ್ ಸಿ, ಎ, ಕೆ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಇದು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಅನೇಕ ಚರ್ಮ ಸಂಬಂಧಿ ಸಮಸ್ಯೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಮುಖದ ಮೇಲೆ ಅಕಾಲಿಕ ಸುಕ್ಕುಗಳು ಅಥವಾ ವಯಸ್ಸಾದಂತೆ ಕಾಣುವ ಗುರುತುಗಳನ್ನು ಕಡಿಮೆ ಮಾಡುತ್ತದೆ. ಮಾವಿನ ಸಿಪ್ಪೆ ಇವೆಲ್ಲವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಇದಕ್ಕಾಗಿ ಮಾವಿನ ಸಿಪ್ಪೆಯನ್ನು ಪೇಸ್ಟ್ ರೀತಿ ಮಾಡಿ ಮುಖಕ್ಕೆ ಹಚ್ಚಿಕೊಳ್ಳಿ.

ಮಾವಿನ ಸಿಪ್ಪೆಯ ಉಪ್ಪಿನಕಾಯಿ

ನೀವು ಉಪ್ಪಿನಕಾಯಿ ಇಷ್ಟಪಡುವವರಾಗಿದ್ದರೆ, ಮಾವಿನ ಸಿಪ್ಪೆಯಲ್ಲಿ ಉಪ್ಪಿನಕಾಯಿ ಮಾಡಬಹುದು. ಮಾಡುವ ವಿಧಾನವೆಂದರೆ, ಕುಕ್ಕರ್‌ನಲ್ಲಿ ಮಾವಿನ ಸಿಪ್ಪೆಯನ್ನು ಹಾಕಿ ಮತ್ತು ಒಂದು ಚಮಚ ಉಪ್ಪು ಮತ್ತು ಸ್ವಲ್ಪ ಅರಿಶಿನ ಪುಡಿಯನ್ನು ಸೇರಿಸಿ, ಕುಕ್ಕರ್​ನಲ್ಲಿ ಅರ್ಧ ಕಪ್ ನೀರು ಸುರಿದು ಗ್ಯಾಸ್ ಮೇಲೆ ಇಡಿ. ಮೂರು ವಿಜಲ್ ಬಂದ ನಂತರ ಸಿಪ್ಪೆಯನ್ನು ನೀರಿನಿಂದ ಬೇರ್ಪಡಿಸಿ ಇನ್ನೊಂದು ಪಾತ್ರೆಯಲ್ಲಿ ಇಡಿ. ಇದಾದ ಬಳಿಕ ಸಿಪ್ಪೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ವಿವಿಧ ಮಸಾಲೆಗಳನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ನಂತರ ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ, ಇಂಗು ಮತ್ತು ಸಾಸಿವೆ ಹಾಕಿ. ಅದು ಕಂದು ಬಣ್ಣಕ್ಕೆ ತಿರುಗಿದ ನಂತರ, ಬಾಣಲೆಗೆ ಜೀರಿಗೆ ಮತ್ತು ಮಾವಿನ ಸಿಪ್ಪೆಯನ್ನು ಸೇರಿಸಿ, ಎಣ್ಣೆಯಲ್ಲಿ ಬೇಯಿಸಿದರೆ ಉಪ್ಪಿನಕಾಯಿ ರೆಡಿ.

ಮಾಶ್ವರೈಸರ್​ ಆಗಿ ಬಳಕೆ

ಎರಡು ಮಾವಿನ ಹಣ್ಣಿನ ಸಿಪ್ಪೆ ಮತ್ತು 1/4 ಕಪ್ ಕಚ್ಚಾ ತೆಂಗಿನ ಎಣ್ಣೆ ತೆಗೆದುಕೊಳ್ಳಿ. ಮಾವಿನ ಸಿಪ್ಪೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ. ಬಳಿಕ ಬಾಣಲೆಗೆ ಕೊಬ್ಬರಿ ಎಣ್ಣೆ ಹಾಕಿ ಸಿಪ್ಪೆಯ ಚೂರುಗಳನ್ನು ಹಾಕಿ ಕಡಿಮೆ ಉರಿಯಲ್ಲಿ ಸ್ವಲ್ಪ ಹೊತ್ತು ಬೇಯಿಸಿ. ಅದು ಕೆಂಪು ಬಣ್ಣಕ್ಕೆ ತಿರುಗಿದಾಗ, ಅದನ್ನು ಫಿಲ್ಟರ್ ಮಾಡಿ ಮತ್ತು ತಣ್ಣಗಾಗಲು ರೆಫ್ರಿಜರೇಟರ್​​ನಲ್ಲಿ ಇರಿಸಿ. ಬಳಿಕ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ನಂತರ ಇದನ್ನು ಮಾಯಿಶ್ಚರೈಸರ್ ಆಗಿ ಬಳಸಬಹುದು.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ . ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.