ಬೆಂಗಳೂರು: ಇಂದಿನ ಕಾಲದಲ್ಲಿ ಸ್ಮಾರ್ಟ್‌ಫೋನ್(Mobile Addiction) ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದೆ. ಬೆಳಿಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೂ ಮೊಬೈಲ್ ನಮ್ಮ ಜೊತೆಯಲ್ಲೇ ಇರುತ್ತದೆ. ಆದರೆ ನಿಮ್ಮ ಪಾರ್ಟ್ನರ್ ನಿಮ್ಮ ಜೊತೆಗೆ ಸಮಯ ಕಳೆಯುವಾಗಲೂ ಪದೇಪದೇ ಫೋನ್ ನೋಡುತ್ತಿದ್ದರೆ, ಅದನ್ನು ಕೇವಲ ಪ್ರೀತಿ ಅಥವಾ ಕೆಲಸದ ಒತ್ತಡ ಎಂದು ನಿರ್ಲಕ್ಷಿಸಬೇಡಿ ಎಂದು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ.
ಮನೋವಿಜ್ಞಾನ ತಜ್ಞರ ಪ್ರಕಾರ, ಈ ರೀತಿಯ ವರ್ತನೆಯ ಹಿಂದೆ ಫೋನ್ ವ್ಯಸನ, ಆತಂಕ ಅಥವಾ ಸಂಬಂಧದಲ್ಲಿನ ಕೆಲವು ಸಮಸ್ಯೆಗಳೂ ಇರಬಹುದು. ಇತ್ತೀಚಿನ ಹಲವು ಅಧ್ಯಯನಗಳು ಕೂಡ ಇದೇ ವಿಚಾರವನ್ನು ಹೇಳುತ್ತಿವೆ.
ಏನಿದು 'ಫಬ್ಬಿಂಗ್'?
ಒಬ್ಬ ವ್ಯಕ್ತಿ ತನ್ನ ಎದುರಿನಲ್ಲಿರುವ ವ್ಯಕ್ತಿಯನ್ನು ಕಡೆಗಣಿಸಿ ಮೊಬೈಲ್‌ನಲ್ಲಿ ತಲ್ಲೀನನಾಗಿರುವ ಸ್ಥಿತಿಯನ್ನು "ಫಬ್ಬಿಂಗ್" (Phubbing) ಎಂದು ಕರೆಯಲಾಗುತ್ತದೆ. ಇದು Phone ಮತ್ತು Snubbing ಎಂಬ ಎರಡು ಪದಗಳಿಂದ ರೂಪುಗೊಂಡಿದೆ.
ಪಾರ್ಟ್ನರ್ ಜೊತೆ ಮಾತನಾಡುವಾಗಲೂ ಮೊಬೈಲ್ ಸ್ಕ್ರೋಲ್ ಮಾಡುವುದು, ನಿರಂತರವಾಗಿ ನೋಟಿಫಿಕೇಶನ್‌ಗಳನ್ನು ಪರಿಶೀಲಿಸುವುದು ಈ ಸಮಸ್ಯೆಯ ಪ್ರಮುಖ ಲಕ್ಷಣಗಳಾಗಿವೆ.
1. ನೋಮೊಫೋಬಿಯಾ
"ನೋ ಮೊಬೈಲ್ ಫೋನ್ ಫೋಬಿಯಾ" ಎಂಬ ಪದದ ಸಂಕ್ಷಿಪ್ತ ರೂಪವೇ ನೋಮೊಫೋಬಿಯಾ. ಮೊಬೈಲ್ ದೂರವಾದರೆ ಅಥವಾ ನೆಟ್‌ವರ್ಕ್ ಇಲ್ಲದಿದ್ದರೆ ಆತಂಕವಾಗುವ ಸ್ಥಿತಿಯನ್ನು ಇದು ಸೂಚಿಸುತ್ತದೆ.ಇಂತಹವರು ಯಾವುದೇ ಸಂದೇಶ ಬಂದಿದೆಯೇ ಎಂದು ಪದೇ ಪದೇ ಫೋನ್ ಪರಿಶೀಲಿಸುತ್ತಿರುತ್ತಾರೆ. ಇದೊಂದು ರೀತಿಯ ಮಾನಸಿಕ ಒತ್ತಡದ ಲಕ್ಷಣವಾಗಿರಬಹುದು.
2. ಫೋಮೊ (FOMO)
ಸಾಮಾಜಿಕ ಜಾಲತಾಣಗಳಲ್ಲಿ ಏನಾದರೂ ಹೊಸದಾಗಿ ನಡೆದಿದೆಯೇ ಎಂಬ ಭಯವನ್ನು FOMO (Fear Of Missing Out) ಎಂದು ಕರೆಯುತ್ತಾರೆ. ಹೊಸ ಪೋಸ್ಟ್, ಹೊಸ ವಿಡಿಯೋ ಅಥವಾ ಸ್ನೇಹಿತರ ಚರ್ಚೆ ತಪ್ಪಿಹೋಗಬಾರದು ಎಂಬ ಕಾರಣಕ್ಕೆ ಕೆಲವರು ನಿರಂತರವಾಗಿ ಫೋನ್ ನೋಡುತ್ತಿರುತ್ತಾರೆ. ಇದರ ಪರಿಣಾಮವಾಗಿ ಪಕ್ಕದಲ್ಲಿರುವ ವ್ಯಕ್ತಿಯೊಂದಿಗೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ.
3. ಸಂಬಂಧದಲ್ಲಿ ಬೇಸರ
ಮನೋವಿಜ್ಞಾನಿಗಳ ಪ್ರಕಾರ, ಕೆಲವು ಸಂದರ್ಭಗಳಲ್ಲಿ ಸಂಬಂಧದಲ್ಲಿ ಆಸಕ್ತಿ ಕಡಿಮೆಯಾಗುವುದು ಅಥವಾ ಬೇಕಾದಷ್ಟು ಗಮನ ಸಿಗದಿರುವುದು ಕೂಡ ಫೋನ್ ಬಳಕೆಯನ್ನು ಹೆಚ್ಚಿಸಬಹುದು.ಇಂತಹವರು ನೈಜ ಜೀವನದಿಂದ ದೂರವಾಗಿ ಡಿಜಿಟಲ್ ಜಗತ್ತಿನಲ್ಲಿ ಹೆಚ್ಚು ಸಮಯ ಕಳೆಯಲು ಆರಂಭಿಸುತ್ತಾರೆ. ಮೊಬೈಲ್ ಅವರಿಗೆ ತಾತ್ಕಾಲಿಕ ಮನರಂಜನೆಯ ಸಾಧನವಾಗುತ್ತದೆ.
4. ಡೋಪಮೈನ್ ವ್ಯಸನ
ಮೊಬೈಲ್‌ನಲ್ಲಿ ಲೈಕ್, ಕಾಮೆಂಟ್ ಅಥವಾ ನೋಟಿಫಿಕೇಶನ್ ಬಂದಾಗ ಮೆದುಳಿನಲ್ಲಿ ಡೋಪಮೈನ್ ಎಂಬ ರಾಸಾಯನಿಕ ಬಿಡುಗಡೆಯಾಗುತ್ತದೆ. ಇದು ಸಂತೋಷದ ಭಾವನೆಯನ್ನು ಉಂಟುಮಾಡುತ್ತದೆ.ಕಾಲಕ್ರಮೇಣ ಈ ಅನುಭವವೇ ವ್ಯಸನವಾಗಬಹುದು. ಪರಿಣಾಮವಾಗಿ ಪಾರ್ಟ್ನರ್ ಜೊತೆ ಮಾತನಾಡುವುದಕ್ಕಿಂತ ಫೋನ್ ನೋಡುವುದೇ ಹೆಚ್ಚು ಮುಖ್ಯವಾಗುತ್ತದೆ.
ಸಂಶೋಧನೆ ಏನು ಹೇಳುತ್ತದೆ?
University of Kent ನಡೆಸಿದ ಅಧ್ಯಯನದ ಪ್ರಕಾರ, ಸಾಮಾಜಿಕ ಜಾಲತಾಣ ಮತ್ತು ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚು ಅಂಟಿಕೊಂಡಿರುವವರು ತಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಲು ಕಷ್ಟಪಡುತ್ತಾರೆ. ಇದು ಸಂಬಂಧದ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ತಿಳಿಸಿದೆ.
ಸಂಬಂಧ ಉಳಿಸಿಕೊಳ್ಳಲು ಈ ಸಲಹೆ ಪಾಲಿಸಿ
ನೋ-ಫೋನ್ ನಿಯಮ: ಊಟದ ಸಮಯದಲ್ಲಿ ಅಥವಾ ಮಲಗುವ ಮೊದಲು ಫೋನ್ ಬಳಕೆ ಮಾಡದ ನಿಯಮ ರೂಪಿಸಿ.
ಮುಕ್ತ ಸಂಭಾಷಣೆ: ಕೋಪಗೊಳ್ಳುವ ಬದಲು ನಿಮ್ಮ ಭಾವನೆಗಳನ್ನು ಪಾರ್ಟ್ನರ್‌ಗೆ ಶಾಂತವಾಗಿ ತಿಳಿಸಿ.
ಕ್ವಾಲಿಟಿ ಟೈಮ್: ವಾರದಲ್ಲಿ ಒಂದು ದಿನ ಫೋನ್‌ಗಳಿಂದ ದೂರವಿದ್ದು ಒಟ್ಟಿಗೆ ಸಮಯ ಕಳೆಯಿರಿ.
ಡಿಜಿಟಲ್ ಡಿಟಾಕ್ಸ್: ಸಾಮಾಜಿಕ ಜಾಲತಾಣ ಬಳಕೆಯನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿ.
ಸಂಬಂಧದಲ್ಲಿ ಪ್ರೀತಿ, ನಂಬಿಕೆ ಮತ್ತು ಸಂಭಾಷಣೆ ಮುಖ್ಯ. ಆದ್ದರಿಂದ ಪಾರ್ಟ್ನರ್ ಪದೇ ಪದೇ ಫೋನ್ ನೋಡುತ್ತಿದ್ದರೆ ಅದನ್ನು ಸಣ್ಣ ವಿಷಯ ಎಂದು ಕಡೆಗಣಿಸದೆ ಅದರ ಹಿಂದಿನ ಕಾರಣವನ್ನು ಅರ್ಥಮಾಡಿಕೊಳ್ಳುವುದು ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ,(ಏಜೆನ್ಸೀಸ್).