ಲೈಫ್‌ಸ್ಟೈಲ್

ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಂಬೆ ಹಣ್ಣಿನ ಲೇಹ್ಯ ಮಾಡೋದು ಹೇಗೆ..

Mysuru Rural

ಕೊರೋನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವಲ್ಲಿ ಜನರ ಸಂಪರ್ಕ ದಿಂದ ದೂರವಿರುವುದು ಎಷ್ಟು ಮುಖ್ಯವಾಗಿದೆಯೋ, ಅಷ್ಟೇ ಮುಖ್ಯವಾದದ್ದು ನಾವೀಗ ಪೌಷ್ಟಿಕ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರವನ್ನು ತೆಗೆದುಕೊಳ್ಳುವುದು. ಹೆಚ್ಚಿನ ಸೊಪ್ಪು ತರಕಾರಿ ಹಣ್ಣುಗಳ ಜೊತೆಯಲ್ಲಿ ವಿಟಮಿನ್ ಸಿ ಜಾಸ್ತಿ ಇರುವ ವಸ್ತುಗಳನ್ನು ಬಳಸುವುದು ಒಳ್ಳೆಯದು. ಅದರಲ್ಲಿ ಒಂದು ಮುಖ್ಯವಾದ ಪದಾರ್ಥ ನಿಂಬೆಹಣ್ಣು. ನಿಂಬೆಹಣ್ಣಿನಲ್ಲಿ ರೋಗ ನಿರೋಧಕ ಶಕ್ತಿ ಹೇರಳವಾಗಿದೆ.

ನಿಂಬೆ ಹಣ್ಣಿನ ಲೇಹ್ಯಕ್ಕೆ ಬೇಕಾಗುವ ಸಾಮಗ್ರಿಗಳು3 ದೊಡ್ಡ ನಿಂಬೆಹಣ್ಣು.

2 ಚಮಚ ಜೀರಿಗೆ,

2 ಚಮಚ ಕಾಳುಮೆಣಸು

ಚಿಟಿಕೆ ಅರಿಶಿನ ಪುಡಿ

ಚಿಟಿಕೆ ಉಪ್ಪು

ರುಚಿಗೆ ತಕ್ಕಷ್ಟು ಬೆಲ್ಲ.

ಮಾಡುವ ವಿಧಾನ: 3 ದೊಡ್ಡ ನಿಂಬೆ ಹಣ್ಣನ್ನು ಚೆನ್ನಾಗಿ ತೊಳೆದು ಕೊಳ್ಳಬೇಕು. ಪಾತ್ರೆಯೋಂದರಲ್ಲಿ ನಿಂಬೆಹಣ್ಣುಗಳು ಮುಳುಗುವಷ್ಟು ಪ್ರಮಾಣದ ನೀರಿಗಿಂತ ಸ್ವಲ್ಪ ಜಾಸ್ತಿ ಹಾಕಿ, ಜೀರಿಗೆ, ಅರಿಶಿಣ ಪುಡಿ, ಕಾಳು ಮೆಣಸು ಸೇರಿಸಿ, ಸಣ್ಣ ಉರಿಯಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಬೇಕು. ನಿಂಬೆಹಣ್ಣು ಚೆನ್ನಾಗಿ ಬೇಯುವಷ್ಟರಲ್ಲಿ ನೀರು ಸಾಕಷ್ಟು ಆರಿರುತ್ತದೆ. ಆರಿದ ನಂತರ, ಮೆತ್ತನೆಯ ನಿಂಬೆ ಹಣ್ಣು ಮತ್ತದರ ಬೇಯಿಸಿ ಉಳಿದ ನೀರಿನ ಮಿಶ್ರಣದ ಜೊತೆ, ಚಿಟಿಕೆ ಉಪ್ಪು, ನಿಂಬೆಯ ಕಹಿಯ ರುಚಿಗೆ ಒಗ್ಗಿಕೊಳ್ಳುವಷ ಬೆಲ್ಲ ಹಾಕಿ ಮಿಕ್ಸರಿ ನಲ್ಲಿ ನುಣ್ಣಗೆ ಅರೆದು ಕೊಳ್ಳಬೇಕು. ಈ ಮಿಶ್ರಣವನ್ನು ಬಾಣಲಿಯಲ್ಲಿ ಹಾಕಿ ಸ್ವಲ್ಪ ಸಮಯ ಸಣ್ಣ ಉರಿಯಲ್ಲಿ ಕೈಯಾಡಿಸುತ್ತಾ ಇದ್ದರೆ, ಪಾಕ ಸಿದ್ಧವಾಗಿ ನಿಂಬೆಹಣ್ಣಿನ ಲೇಹ್ಯ ತಯಾರು.. ಸ್ವಲ್ಪ ಕಹಿ, ಖಾರ, ಸಿಹಿ ಎಲ್ಲ ಹದವಾಗಿ ಇರುವ ಈ ಲೇಹವನ್ನು ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ಪ್ರತಿನಿತ್ಯ ಸೇವಿಸುವುದು ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು.

ಸೌಮ್ಯಾ ಬೀನಾ