ರಾಮಾಯಣದಲ್ಲಿ ಶ್ರೀರಾಮನ ಸೈನ್ಯದಲ್ಲಿ ಹನುಮಂತ, ಜಾಂಬವಂತ, ಸುಗ್ರೀವರಂಥ ಪರಾಕ್ರಮಿಗಳ ಸಾಲಿನಲ್ಲಿ ಕಾಣಲು ಸಿಗುವ ಮತ್ತೊಬ್ಬ ಮಹಾವೀರನೆಂದರೆ ಅದು ಅಂಗದ. ಇವನು ಕಿಷ್ಕಿಂಧೆಯ ರಾಜನಾಗಿದ್ದ ವಾಲಿಯ ಪುತ್ರ. ವಾಲಿಯು ತನ್ನ ತಮ್ಮನಾದ ಸುಗ್ರೀವನ ಮೇಲೆ ಇಲ್ಲ-ಸಲ್ಲದ ಆರೋಪ ಹೊರಿಸಿ ಅವನನ್ನು ಹೊಡೆದು-ಬಡಿದು ಅವನ ಹೆಂಡತಿಯನ್ನು ತನ್ನ ವಶದಲ್ಲಿಟ್ಟುಕೊಂಡು ಅವನನ್ನು ರಾಜ್ಯಭ್ರಷ್ಟನನ್ನಾಗಿ ಮಾಡಿದ್ದ, ಮುಂದೆ ಸುಗ್ರೀವನಿಗೆ ಶ್ರೀರಾಮನ ಜೊತೆ ಮಿತ್ರತ್ವ ಉಂಟಾಗಿ, ಸುಗ್ರೀವನಿಗೆ ಆದ ಅನ್ಯಾಯವನ್ನು ಸರಿಪಡಿಸಲು ಶ್ರೀರಾಮನು ನಿರ್ಧರಿಸಿದ. ಅದರಂತೆ, ಶ್ರೀರಾಮನು ಅಧರ್ವಿುಯಾದ ವಾಲಿಯನ್ನು ಒಂದೇ ಬಾಣದಿಂದ ಕೊಂದು ಸುಗ್ರೀವನನ್ನು ಕಿಷ್ಕಿಂಧೆಯ ಮಹಾರಾಜನನ್ನಾಗಿಯೂ, ವಾಲಿಯ ಪುತ್ರ ಅಂಗದನನ್ನು ಯುವರಾಜನನ್ನಾಗಿಯೂ ನೇಮಿಸಿದನು.
ಮುಂದೆ ಸೀತಾಮಾತೆಯನ್ನು, ರಾವಣನಿಂದ ಬಿಡಿಸುವ ಸಲುವಾಗಿ ರಾಮ-ಲಕ್ಷ್ಮಣರ ನೇತೃತ್ವದಲ್ಲಿ ಸುಗ್ರೀವನ ಬೃಹತ್ವಾನರ ಸೈನ್ಯವು ಲಂಕೆಯ ಹೊರವಲಯದಲ್ಲಿ ಬೀಡು ಬಿಟ್ಟಿತು. ಯಾವ ಕ್ಷಣದಲ್ಲಾದರೂ ಯುದ್ಧ ಘೊಷಣೆಯಾಗುವ ಲಕ್ಷಣಗಳಿದ್ದವು. ರಣರಂಗಧೀರನಾದರೂ, ಶಾಂತಿಪ್ರಿಯನಾಗಿದ್ದ ಶ್ರೀರಾಮನು ಶಾಂತಿ-ಸಂಧಾನದ ಉದ್ದೇಶದಿಂದ ರಾವಣನಿಗೆ ಅಂತಿಮ ಅವಕಾಶವನ್ನು ನೀಡಲು ಬಯಸಿದನು. ‘ಒಂದು ವೇಳೆ ಸೀತೆಯನ್ನು ಈಗಲೂ ಗೌರವಯುತವಾಗಿ ಶ್ರೀರಾಮನಿಗೆ ಹಿಂದಿರುಗಿಸಿದರೆ ರಾವಣನನ್ನು ಈಗಲೂ ಕ್ಷಮಿಸುವುದಾಗಿಯೂ, ಯುದ್ಧವನ್ನು ತಪ್ಪಿಸಬಹುದು’ ಎಂದು ಶಾಂತಿದೂತನಾಗಿ ಅಂಗದನನ್ನು ರಾವಣನ ಸಭೆಗೆ ಕಳುಹಿಸಿದನು. ಅದರಂತೆ ಅಂಗದನು ಶ್ರೀರಾಮನ ಇಚ್ಛೆಯನ್ನು ರಾವಣನ ಮುಂದೆ ತುಂಬಿದ ಸಭೆಯಲ್ಲಿ ಪ್ರಕಟಿಸಿದನು.
ಆದರೆ ದುರಾಚಾರಿಯಾದ ರಾವಣನು, ಈಗ ತನ್ನೆದುರು ಬಂದಿರುವವನು ತನ್ನ ಹಳೆಯ ಮಿತ್ರ ವಾಲಿಯ ಪುತ್ರ ಅಂಗದನೆಂದು ತಿಳಿದು, ಮನದಲ್ಲೇ ಕುತಂತ್ರ ಹೆಣೆದನು. ಅಂಗದನ ಮನಸ್ಸಿನಲ್ಲಿ ಹುಳಿ ಹಿಂಡಿ, ಶ್ರೀರಾಮನ ಸೈನ್ಯದಲ್ಲಿ ಬಿರುಕು-ಭಿನ್ನಾಭಿಪ್ರಾಯಗಳನ್ನು ಮೂಡಿಸುವುದು ರಾವಣನ ಉದ್ದೇಶವಾಗಿತ್ತು. ಅದರಂತೆ ರಾವಣನು ಅಂಗದನಿಗೆ- ‘ಅಂಗದಾ, ಇದೇನಿದು ನಿನ್ನ ತಂದೆಯನ್ನು ಕೊಂದವನ ಮೇಲೆ ನಿನಗೇಕೆ ಇಷ್ಟೊಂದು ನಿಷ್ಠೆ? ನಿನ್ನ ತಂದೆಯನ್ನು ಕೊಂದವನ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು ನಿನಗೆ ಅನ್ನಿಸುತ್ತಿಲ್ಲವೇ? ಆದ್ದರಿಂದ ನನ್ನ ಮಾತು ಕೇಳು. ನಿನ್ನ ತಂದೆ ನನ್ನ ಹಳೆಯ ಮಿತ್ರ. ನೀನು ಈಗಲೇ ರಾಮನ ಪಕ್ಷವನ್ನು ಬಿಟ್ಟು, ನನ್ನ ಜೊತೆ ಕೈಜೋಡಿಸು. ಯುದ್ಧ ಮುಗಿದ ನಂತರ ನಿನ್ನನ್ನು ಕಿಷ್ಕಿಂಧೆಯ ಮಹಾರಾಜನನ್ನಾಗಿ ಮಾಡುತ್ತೇನೆ. ನಾವಿಬ್ಬರೂ ಮಿತ್ರರಾಗಿ ಸಂತೋಷದಿಂದ ಇರೋಣ’ ಎಂದು ಆಮಿಷ ಒಡ್ಡಿದನು. ಆದರೆ ಇದ್ಯಾವುದಕ್ಕೂ ಒಪ್ಪದ ಅಂಗದನು ತನ್ನ ತಂದೆಯು ಸಾಯುವ ಕೊನೆಯ ಗಳಿಗೆಯಲ್ಲಿ ಹೇಳಿದ್ದ ಮಾತುಗಳನ್ನು ನೆನಪಿಸಿಕೊಂಡು, ರಾವಣನ ಈ ಪ್ರಸ್ತಾಪವನ್ನು ತಿರಸ್ಕರಿಸಿ ಹೊರಗೆ ಬಂದನು. ವಂಚನೆ-ಆಮಿಷಗಳಿಗೆ ಬಲಿಯಾಗದೆ, ವಿವೇಚನೆಯಿಂದ ಅಂಗದನು ನ್ಯಾಯಯುತವಾದ ಮಾರ್ಗವನ್ನು ಆಯ್ಕೆ ಮಾಡಿಕೊಂಡನು.
ಹೀಗೇ, ನಮ್ಮ ಬದುಕಿನಲ್ಲೂ ಹಲವರು ವಿವಿಧ ರೀತಿಯ ಆಸೆ, ಆಮಿಷಗಳನ್ನು ಹೆಚ್ಚಿನ ಲಾಭಕ್ಕೋ ಅಥವಾ ತಮ್ಮ ದುರುದ್ದೇಶ ಸಾಧಿಸಲೆಂದೋ ನಮಗೆ ನೀಡುತ್ತಿರುತ್ತಾರೆ. ಆದರೆ ನಾವು ಯಾವುದು ಸರಿ, ಯಾವುದು ತಪ್ಪು, ಯಾರು ನಮಗೆ ನಿಜವಾದ ಹಿತೈಷಿಗಳು, ಯಾರು ನಮ್ಮ ಹಿತಶತ್ರುಗಳು ಎನ್ನುವುದನ್ನು ಸೂಕ್ಷ್ಮವಾಗಿ ಗ್ರಹಿಸಬೇಕು. ವಿವೇಚನೆಯಿಂದ ಸಂದರ್ಭಾನುಸಾರ ನಿರ್ಧಾರಗಳನ್ನು ಕೈಗೊಳ್ಳಬೇಕು. ಆಗ ನಮ್ಮ ಜೀವನವು ಯಶಸ್ವಿಯಾಗಿಯೂ, ಸಂತೋಷದಾಯಕವಾಗಿಯೂ ಇರುತ್ತದೆ.
(ಲೇಖಕರು ಸಾಫ್ಟ್ವೇರ್ ಇಂಜಿನಿಯರ್, ಹವ್ಯಾಸಿ ಬರಹಗಾರರು)