ಲೈಫ್‌ಸ್ಟೈಲ್

ತಪ್ಪುಗಳನ್ನು ತಿದ್ದಿಕೊಳ್ಳೋಣ

ಸುದೀಪ್​ ವಿ.ಎನ್​
 ಭಾರತಿ ಎ. ಕೊಪ್ಪ

‘ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು’ ಎಂಬಂತಹ ಸಾಧನೆ ಮಾಡಿದವರು ಲಾಲ್ ಬಹದ್ದೂರ್ ಶಾಸ್ತ್ರಿ. ಆದರೆ ಅವರ ಬಾಲ್ಯ ಅಷ್ಟೊಂದು ಸುಖಕರವಾಗಿರಲಿಲ್ಲ. ಅವರು ಕೇವಲ ಆರು ವರ್ಷದ ಹುಡುಗನಾಗಿರುವಾಗ ಒಮ್ಮೆ ನಡೆದ ಘಟನೆ. ಇವರು ತಮ್ಮ ಜೊತೆಗಾರ ಸ್ನೇಹಿತರೊಂದಿಗೆ ಹಣ್ಣಿನ ತೋಟಕ್ಕೆ ನುಗ್ಗಿದರು. ಇವರ ಜೊತೆಗಾರರು ಮರ ಹತ್ತಿದರು. ಲಾಲ್ ಬಹದ್ದೂರ್ ಮರದ ಕೆಳಗೆ ನಿಂತಿದ್ದರು. ಹಾಗೆಯೇ ಬಳಿಯಲ್ಲಿದ್ದ ಗಿಡದ ಹೂ ಒಂದನ್ನು ಕಿತ್ತುಕೊಂಡರು. ಅಷ್ಟರಲ್ಲಾಗಲೇ ತೋಟದ ಕಾವಲುಗಾರ ಈ ಹುಡುಗನನ್ನು ಕಂಡ. ಮರ ಹತ್ತಿದ ಹುಡುಗರು ಕಾವಲಗಾರನ ಕೈಗೆ ಸಿಗದಂತೆ ಪಟಪಟನೆ ಕೆಳಗಿಳಿದು ಓಡಿ ಹೋದರು. ಆ ಕ್ಷಣದಲ್ಲಿ ಕಾವಲುಗಾರನ ಕೈಗೆ ಸಿಕ್ಕಿ ಬಿದ್ದದ್ದು ಬಾಲಕ ಲಾಲ ಬಹದ್ದೂರ್ ಮಾತ್ರ.

ಕಾವಲುಗಾರ ಹುಡುಗನಿಗೆ ಚೆನ್ನಾಗಿ ಥಳಿಸಿದ. ಬಹದ್ದೂರರಿಗೆ ಬಹಳ ಅಳು ಬಂತು. ‘ನಾನು ತಂದೆ ಇಲ್ಲದ ಹುಡುಗ ನನ್ನನ್ನು ಹೊಡೆಯಬೇಡಿ’ ಎಂದು ಅಳುತ್ತ ಹೇಳಿದ. ಈ ಮಾತು ಕೇಳಿದ ಕಾವಲುಗಾರನಿಗೆ ಕರುಣೆ ಉಕ್ಕಿತು. ‘ತಂದೆ ಇಲ್ಲದ ಹುಡುಗನಾದ್ದರಿಂದ ಒಳ್ಳೆಯ ನಡತೆ ಕಲಿಯಬೇಕಪ್ಪ’ ಎಂದು ಹೇಳಿದ. ತೋಟದವನ ಮಾತು ಪುಟ್ಟ ಹುಡುಗನ ಮನಸ್ಸಿಗೆ ನಾಟಿತು. ತೋಟದಿಂದ ಹಿಂದಿರುಗುತ್ತಲೇ, ‘ಇನ್ನು ಮೇಲೆ ಚೆನ್ನಾಗಿ ನಡೆದುಕೊಳ್ಳುತ್ತೇನೆ. ತಂದೆ ಇಲ್ಲದ್ದರಿಂದಲೇ ಒಳ್ಳೆಯ ಗುಣ ಕಲಿಯಬೇಕು’ ಎಂದು ಮನಸ್ಸಿನಲ್ಲಿ ಪ್ರತಿಜ್ಞೆ ಮಾಡಿಕೊಂಡ. ಆ ತೋಟದ ಕಾವಲುಗಾರ ಹೇಳಿದಾಗ ಮನಸ್ಸಿಗೆ ನಾಟಿದ ಸದ್ಗುಣದ ಅರಿವು ಮುಂದೆ ಎಂದೂ ಮಾಸಲಿಲ್ಲ. ಅವರು ದೊಡ್ಡವರಾದ ಮೇಲೂ ಸದ್ಗುಣಗಳ ಗಣಿಯಾಗಿ ಸಮಾಜದಲ್ಲಿ ಸರ್ವಶ್ರೇಷ್ಠ ಸ್ಥಾನದಲ್ಲಿ ನಿಂತರು.

ಲಾಲ ಬಹದ್ದೂರರು ಒಂದು ವರ್ಷದ ಕೂಸಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡವರು. ತಂದೆ ಇಲ್ಲದ ಕೊರತೆಯನ್ನು ಮೆಟ್ಟಿನಿಂತು ಕುಟುಂಬದ ಕಷ್ಟಗಳ ನಡುವೆಯೇ ಬಾಲ್ಯವನ್ನು ಕಳೆದು ಸರಿ-ತಪ್ಪುಗಳನ್ನು ಪರಾಮರ್ಶನ ಮಾಡುತ್ತ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡವರು. ತಮ್ಮ ದೇಶಪ್ರೇಮದ ಹೆಗ್ಗುರುತಾಗಿ ದೇಶದ ಉನ್ನತ ಸ್ಥಾನ ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸಿದಾಗಲೂ ಚಿಕ್ಕ ಮೂರ್ತಿ, ಚೊಕ್ಕ ಮೂರ್ತಿಯಾಗಿ, ಮನಸ್ಸು, ಮಾತು, ಕೆಲಸ ಎಲ್ಲವನ್ನೂ ಪರಿಶುದ್ಧವಾಗಿ ನಡೆಸಿದರು.

ಲಾಲ ಬಹದ್ದೂರರಂತೆ ನಮ್ಮಲ್ಲೂ ಕೂಡ ಹಲವರಿಗೆ ಜೀವನದಲ್ಲಿ ಅನೇಕ ಕೊರತೆಗಳು ಇರುತ್ತವೆ. ಏಕ ಪೋಷಕತ್ವ, ಹಣಕಾಸಿನ ಕೊರತೆ, ಬಡತನ, ಅನಾರೋಗ್ಯ ಇಂತಹ ಹತ್ತಾರು ಸಮಸ್ಯೆಗಳು ಬಾಲ್ಯದಿಂದ ಹಿಡಿದು ಜೀವನದ ಅನೇಕ ಹಂತಗಳಲ್ಲಿ ಕಾಡಬಹುದು. ತೋಟದ ಕಾವಲುಗಾರನ ಮಾತು ಮನಸ್ಸಿಗೆ ನಾಟಿ ದೃಢ ಸಂಕಲ್ಪ ಮಾಡಿದ ಲಾಲ ಬಹದ್ದೂರರಂತೆ, ಜೀವನದ ಕಷ್ಟಕಾಲದಲ್ಲಿ ನಮಗೆ ಒಂದಷ್ಟು ಅನುಭವಗಳಾದಾಗ, ಅದು ಹಿತವಚನಗಳೇ ಆಗಿರಲಿ, ಪರಿಸರದ ಪ್ರಭಾವಗಳೇ ಆಗಿರಲಿ ಅವುಗಳಿಂದ ಪ್ರೇರಿತವಾಗಿ ಸನ್ಮಾರ್ಗದ ದೃಢ ಸಂಕಲ್ಪವನ್ನು ತೊಡಬೇಕು. ಭವಿಷ್ಯದ ಸಾಧನೆಯ ಮೂಲಮಂತ್ರ ನಮ್ಮ ಸಕಾರಾತ್ಮಕ ದೃಢ ಸಂಕಲ್ಪದಲ್ಲಿದೆ. ‘ತನ್ನ ತಪ್ಪನ್ನು ನೋಡಿ ಅವುಗಳನ್ನು ತಿದ್ದಿಕೊಳ್ಳುತ್ತ ಪಶ್ಚಾತ್ತಾಪದಿಂದ ನೊಂದಿರುವವನೇ ತನ್ನ ಉದ್ಧಾರವನ್ನು ಮಾಡಿಕೊಳ್ಳುವನು’ ಎಂಬ ಶ್ರೀ ಶ್ರೀಧರ ಸ್ವಾಮಿಗಳ ಅಣಿಮುತ್ತಿನಂತೆ ನಮ್ಮಿಂದ ತಪ್ಪುಗಳಾಗಿದ್ದಲ್ಲಿ ಅದನ್ನು ತಿದ್ದಿಕೊಳ್ಳುತ್ತ, ಮುಂದೆ ಅಂತಹ ತಪ್ಪುಗಳಾಗದಂತೆ ಎಚ್ಚರ ವಹಿಸೋಣ.

(ಲೇಖಕರು ಶಿಕ್ಷಕರು ಮತ್ತು ಹವ್ಯಾಸಿ ಬರಹಗಾರರು)