ಒಂದು ಬಾರಿ ಹೀಗೆ ಅವನು ತನ್ನ ಊರಿಗೆ ಮರಳುವಾಗ ಹೊತ್ತು ಮುಳುಗುತ್ತಿತ್ತು. ಅವನು ಒಂದು ಕ್ಷಣ ಯೋಚಿಸಿ ಇಂದು ಕತ್ತಲಾಗುತ್ತಿದೆ, ಇಂಥ ಸಮಯದಲ್ಲಿ ಹೋಗುವುದು ಅಪಾಯಕಾರಿ, ಇಂದು ಇಲ್ಲಿಯೇ ತಂಗಿ ನಾಳೆ ಪ್ರಯಾಣಿಸುವುದೇ ಸೂಕ್ತ ಎಂದು ಯೋಚಿಸಿ ಮರಳಿ ಹೋಗಲು ಅಣಿಯಾಗುತ್ತಿದ್ದಂತೆ, ಅದೇ ದಾರಿಯಲ್ಲಿ ಸಾಗುತ್ತಿದ್ದ ವ್ಯಕ್ತಿಯೊಬ್ಬ ಅಕ್ಕಸಾಲಿಗನನ್ನು ಕುರಿತು, ಯಾಕೆ ಮರಳಿ ಹೋಗುತ್ತಿರುವೆ? ನಾನು ಕೂಡ ಅದೇ ಊರಿಗೆ ಹೋಗಬೇಕಿದೆ, ಇಬ್ಬರೂ ಜೊತೆಯಾಗಿ ಹೋಗಬಹುದು, ಅಲ್ಲವೇ? ಎಂದು ಕೇಳಿದಾಗ, ಇಲ್ಲ ಈಗಲೇ ಕತ್ತಲಾಗುತ್ತಿದೆ, ದಾರಿಯಲ್ಲಿ ಕಳ್ಳರು, ದರೋಡೆಕೋರರ ಹಾವಳಿ ಇದೆ. ನನ್ನ ಹತ್ತಿರ ಚಿನ್ನ ಮತ್ತು ಹಣ ಇದೆ, ನಾನು ನಾಳೆ ಬರುತ್ತೇನೆ ಎಂದು ಹಿಂದಕ್ಕೆ ಹೊರಟ. ಆಗ ಆ ವ್ಯಕ್ತಿ ನಾನು ಅದೇ ಊರಿಗೆ ಹೋಗಬೇಕು, ಭಯ ಯಾಕೆ?, ಇಬ್ಬರೂ ಜೊತೆಯಾಗಿ ಹೋದರಾಯಿತು ಎಂದು ಒತ್ತಾಯಿಸಿ ಕರೆದುಕೊಂಡು ಹೊರಟ.
ಕಾಡಿನ ಮಧ್ಯೆ ಹೋಗುತ್ತಿರುವಾಗ ಕುದುರೆಗಳ ಹೆಜ್ಜೆಯ ಸದ್ದು ಕೇಳಿಸತೊಡಗಿತು. ಅಕ್ಕಸಾಲಿಗನಿಗೆ ದರೋಡೆಕೋರರು ಬರುತ್ತಿರುವ ಸಂಗತಿ ಗೊತ್ತಾಗಿ ಪಕ್ಕದಲ್ಲಿದ್ದ ಮರವೇರಿ ಕುಳಿತ. ಅವನ ಜೊತೆಯಲಿದ್ದ ವ್ಯಕ್ತಿಗೂ ಮರವೇರಲು ತಿಳಿಸಿದ. ಆದರೆ ಅವನು ಮದ್ಯದ ಅಮಲಿನಲ್ಲಿದ್ದರಿಂದ ಮರವೇರಲು ಸಾಧ್ಯವಾಗದೆ ಅಲ್ಲಿಯೇ ಕೆಳಗೆ ಕುಳಿತುಬಿಟ್ಟ. ದರೋಡೆಕೋರರು ಅವನನ್ನು ಹಿಡಿದು ನಿನ್ನ ಬಳಿಕ ಇರುವ ಹಣ, ಒಡವೆ ಕೊಡು ಎಂದು ಹೇಳಿದರು. ಅವನು ತನ್ನ ಹತ್ತಿರ ಏನೂ ಇಲ್ಲ, ಇರುವುದು ಇದೊಂದೇ ಬೆಳ್ಳಿ ನಾಣ್ಯ, ಅದನ್ನು ತೆಗೆದುಕೊಂಡು ನನ್ನನ್ನು ಬಿಟ್ಟುಬಿಡಿ ಎಂದು ಬೇಡಿಕೊಂಡ. ಸುಳ್ಳು ಹೇಳುತ್ತಿರುವೆಯಾ, ಯಾವುದೋ ನಾಣ್ಯಕೊಟ್ಟು ಬೆಳ್ಳಿ ನಾಣ್ಯ ಎನ್ನುತ್ತಿರುವೆಯಾ ? ನಿಜ ಹೇಳದಿದ್ದರೆ ಕೊಂದು ಬಿಡುತ್ತೇವೆ ಎಂದು ಬೆದರಿಸಿದರು. ಆಗ ಅವನು, ಸುಳ್ಳು ಹೇಳುತ್ತಿಲ್ಲ, ನನ್ನನ್ನು ಬಿಟ್ಟು ಬಿಡಿ, ಬೇಕಾದರೆ ಮರದ ಮೇಲೆ ಅಕ್ಕಸಾಲಿಗ ಇದ್ದಾನೆ ಅವನನ್ನೆ ಕೇಳಿ ಎಂದಾಗ, ಮರದ ಮೇಲಿದ್ದ ಅಕ್ಕಸಾಲಿಗನನ್ನು ಕೆಳಗೆ ಇಳಿಸಿ ಅವನಿಗೂ ಥಳಿಸಿ ಅವನ ಬಳಿ ಇದ್ದ ಚಿನ್ನಾಭರಣ ಮತ್ತು ಹಣ ಎಲ್ಲವನ್ನೂ ದೋಚಿಕೊಂಡು ಹೋದರು. ಅಕ್ಕಸಾಲಿಗ ಕೆಟ್ಟ ವ್ಯಕ್ತಿಯ ಸಹವಾಸದಿಂದ ತೊಂದರೆ ಅನುಭವಿಸಿದ. ಎಲ್ಲವನ್ನೂ ಕಳೆದುಕೊಂಡು ಪಶ್ಚಾತ್ತಾಪ ಪಡುವಂತಾಯಿತು.
ದುರ್ಜನರ ಸಂಗದಿಂದ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾಗಿ ನಾವು ದುರ್ಜನರ ಸಂಗದಿಂದ ದೂರವಿದ್ದು ಸಜ್ಜನರ ಸಾಂಗತ್ಯದಲ್ಲಿ ಇರುವುದು ಅತ್ಯಂತ ಅವಶ್ಯಕ. ನಾವು ಸತ್ಯವಂತರ, ಸದಾಚಾರಿಗಳ, ಸ್ನೇಹ ಸಂಪಾದಿಸಬೇಕು. ನಮ್ಮ ಬದುಕು ಸಾರ್ಥಕವಾಗ ಬೇಕಾದರೆ ಉತ್ತಮರ ಸಹವಾಸ ಮಾಡಬೇಕು. ಅಂತೆಯೇ ನಮಗೆ ಸಜ್ಜನರ ಸಾಂಗತ್ಯ, ಸಾರ್ಥಕ, ಪರಿಪೂರ್ಣ, ಹಾಗೂ ಅರ್ಥಪೂರ್ಣ ಬದುಕಿಗೆ ದಾರಿದೀಪವಾಗಬಲ್ಲದು. ದುರ್ಜನರ ಸಂಗದಿಂದ ದೋಷದ ದಳ್ಳುರಿ ಉಂಟಾಗುತ್ತದೆ. ಅದರಿಂದ ನಾವು ತೊಂದರೆ, ಭಯ, ಹಿಂಸೆ ಅನುಭವಿಸಬೇಕಾಗುತ್ತದೆ. ಸಜ್ಜನರದಲ್ಲದವರ ಸಾಂಗತ್ಯ, ದಾರಿಯಲ್ಲಿ ಹೊರಟ ದೆವ್ವವನ್ನು ಮನೆಗೆ ಕರೆತಂದಂತಾಗುತ್ತದೆ. ಅಂತರಂಗ ಶುದ್ದವಿಲ್ಲದವರ ಸಂಗ ಸಂಕಟದ ನಂಜು ಎಂಬ ಗಾದೆ ಮಾತು ಅರ್ಥ ಪೂರ್ಣ. ಸಜ್ಜನರ ಸಾಂಗತ್ಯದಲ್ಲಿ ಬದುಕಿನ ಸಾರ್ಥಕತೆಯನ್ನು ಕಾಣಲು ಸಾಧ್ಯ. ಸಜ್ಜನರ ಸಹವಾಸ ನಡೆ ನುಡಿಗಳಲ್ಲಿ ಸಾಮರಸ್ಯ ಮೂಡಬಲ್ಲದು, ಬದುಕು ಸಂಸ್ಕಾರಗೊಳ್ಳಬಲ್ಲದು, ಅಜ್ಞಾನದ ತಮಂಧ ಘನವ ಕಳೆದು ಸಂಭ್ರಮದ ದೀಪಾವಳಿ ಬೆಳಗಬಲ್ಲದು. ಸಜ್ಜನರ ಸಾಂಗತ್ಯದಲ್ಲಿ ಸಂಗಮಿಸಿದಾಗ ಮಾತ್ರ ನಾವು ಬದುಕಿನ ಸಂಭ್ರಮ ಕಾಣಬಹುದು.
(ಲೇಖಕರು ಹವ್ಯಾಸಿ ಬರಹಗಾರರು)