ಆದರ್ಶದ ಮಾತನ್ನು ಆಡುವುದು ಸುಲಭ. ಅದರ ಅನುಷ್ಠಾನ ಕಷ್ಟ. ಆದರೆ ಅದನ್ನು ರೂಢಿಸಿಕೊಂಡ ಬದುಕು ಮತ್ತೊಬ್ಬರಿಗೆ ಪ್ರೇರಣೆಯಾಗುತ್ತದೆ. ನಮ್ಮ ಪೂರ್ವಜರು ಮತ್ತೊಬ್ಬರಿಗೆ ಉಪದೇಶ ಮಾಡದೆ ಸತ್ಯ, ಪ್ರಾಮಾಣಿಕತೆಯನ್ನು ಬದುಕಿನ ರೀತಿಯನ್ನಾಗಿಸಿಕೊಂಡರು. ಆ ಕಾರಣಕ್ಕಾಗಿಯೇ ಇತಿಹಾಸ ಅವರನ್ನು ಗೌರವದಿಂದ ಸ್ಮರಿಸುತ್ತದೆ. ಮಾತ್ರವಲ್ಲ, ಅವರೆಲ್ಲ ಪ್ರಾತಃಸ್ಮರಣೀಯರಾಗಿ ಇಂದಿಗೂ ನಮ್ಮಗಳ ವಕ್ರ ಸ್ವಭಾವಗಳನ್ನು ತಿದ್ದುತ್ತ ಸನ್ಮಾರ್ಗದ ಬದುಕಿನ ದಾರಿ ತೋರುತ್ತಿದ್ದಾರೆ ಎನ್ನುವುದಕ್ಕೆ ಮಹಾಭಾರತದ ಈ ಘಟನೆ ಸಾಕ್ಷಿ.
ಅದಾಗಲೇ ಹದಿನೆಂಟು ದಿನಗಳ ಆ ಮಹಾಯುದ್ಧ ಮುಗಿದು ಶ್ರೀಕೃಷ್ಣನ ಕೃಪೆಯಿಂದ ಧರ್ಮಜ ಮಹಾರಾಜನಾಗಿ ಪಟ್ಟಾಭಿಷಿಕ್ತನಾಗಿದ್ದ. ತಮ್ಮ ಭೀಮನಿಗೆ ರಾಜ್ಯದ ಕೋಶಾಧ್ಯಕ್ಷನ ಜವಾಬ್ದಾರಿ ಲಭಿಸಿತ್ತು. ಯುದ್ಧದಲ್ಲಾದ ಕೌರವಪುತ್ರರ ದಾರುಣ ಅಂತ್ಯ ತಂದೆ ಧೃತರಾಷ್ಟ್ರನನ್ನು ಧೃತಿಗೆಡಿಸಿತ್ತು. ಕ್ಷತ್ರಿಯ ಧರ್ವನುಸಾರ ಈ ಶೋಕಸಾಗರದ ವೈರಾಗ್ಯದಿಂದ ಮುಕ್ತಿ ಪಡೆಯಲು ಆತ ವಾನಪ್ರಸ್ಥ ಸ್ವೀಕರಿಸಿ ಕಾಡಿಗೆ ತೆರಳಬೇಕಾಗಿರುವುದು ಸಹಜವೇ ಆಗಬೇಕಿತ್ತು! ಆದರೆ ಧರ್ಮರಾಯ ನೀಡುತ್ತಿದ್ದ ರಾಜಮರ್ಯಾದೆ, ಅರಮನೆಯ ವೈಭೋಗ, ದೊಡ್ಡಪ್ಪನೆಂಬ ಗೌರವ ಆತನಿಗೆ ವಾನಪ್ರಸ್ಥದ ಯೋಚನೆಯನ್ನೇ ಮರೆಸಿತ್ತು! ವಿದುರ ಮತ್ತು ಭೀಮನ ಒತ್ತಾಯಕ್ಕೆ ಮಣಿದು ಬಲವಂತದಿಂದ ವನವಾಸಕ್ಕೆ ಹೋಗುವ ಮನಸ್ಸು ಮಾಡಿದ್ದ.
ಈ ನಡುವೆ ತನ್ನ ಮಕ್ಕಳಾದ ದುರ್ಯೋಧನ ಮತ್ತಿತರರ ಶ್ರಾದ್ಧಕರ್ಮಗಳನ್ನು ವೈಭವದಿಂದ ಮಾಡಬೇಕು ಎನ್ನುವುದು ಆತನ ಮನೋಭಿಲಾಷೆಯಾಗಿತ್ತು. ಅದರ ವೆಚ್ಚಕ್ಕೆ ಹಣ ಕೊಡುವಂತೆ ಮಹಾರಾಜ ಧರ್ಮರಾಯನಲ್ಲಿ ಹೇಳಿ ಕಳಿಸಿದ. ಧರ್ಮರಾಯ ಕೋಶಧ್ಯಕ್ಷನಾದ ಭೀಮನನ್ನು ಕರೆದು, ‘ದೊಡ್ಡಪ್ಪನ ಮಕ್ಕಳ ಶ್ರಾದ್ಧವಿಧಿಗೆ ಬೊಕ್ಕಸದಿಂದ ಹಣ ನೀಡು’ ಎಂದು ಸೂಚಿಸಿದ. ಧರ್ಮರಾಯ ಹಸ್ತಿನಾಪುರದ ಚಕ್ರವರ್ತಿಯಾಗಿದ್ದರೂ ಸಾರ್ವಜನಿಕ ಹಣ ಎನ್ನುವ ಕಾರಣಕ್ಕೆ ಭೀಮ ಆತನ ಸೂಚನೆಯನ್ನು ಮನ್ನಿಸದೇ ಹೋದ. ‘ಇದು ಕೊನೆಯ ಬಾರಿ, ಅವರ ಇಚ್ಛೆಯನ್ನು ಈಡೇರಿಸು. ಇನ್ನೆಂದೂ ದೊಡ್ಡಪ್ಪ ಹಣ ಕೇಳುವುದಿಲ್ಲ’ ಎಂದು ಧರ್ಮರಾಯ ಕೇಳಿಕೊಂಡರೂ ಭೀಮ ಮಾತ್ರ ಧರ್ಮದ ನೀತಿನಿಯಮಗಳನ್ನು ಗಾಳಿಗೆ ತೂರಿ ಜಗತ್ತಿನ ಅಶಾಂತಿಗೆ ಕಾರಣವಾದ ದುಷ್ಟರ ಶ್ರಾದ್ಧಕಾರ್ಯಕ್ಕಾಗಲೀ, ರಾಜಕೀಯದಿಂದ ನಿವೃತ್ತಿ ಹೊಂದಿದವರಿಗಾಗಲೀ ತೆರಿಗೆಯಿಂದ ಬಂದಿರುವ ಪ್ರಜಾಕಲ್ಯಾಣಕ್ಕಾಗಿಯೇ ಮೀಸಲಾಗಿರುವ ಹಣವನ್ನು ಬಳಸುವುದು ಧರ್ಮ ಸಮ್ಮತವಲ್ಲ ಎಂದು ಧರ್ಮರಾಯನಿಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿದ. ಆದರೆ ಪಾಂಡವಪುತ್ರರೇ ಈ ಶ್ರಾದ್ಧವಿಧಿಯ ಖರ್ಚುವೆಚ್ಚ ಭರಿಸಲು ಮುಂದೆ ಬಂದಾಗ ಭೀಮ ಅದನ್ನು ವಿರೋಧಿಸಲಿಲ್ಲ.
ನಿಜ, ಸಾರ್ವಜನಿಕ ಜೀವನದಲ್ಲಿರುವ ನಾವು ಸಾರ್ವಜನಿಕರ ಹಣ ಅಥವಾ ವಸ್ತುಗಳನ್ನು ಸ್ವಕಾರ್ಯಕ್ಕೆ ಅಥವಾ ಸ್ವಾರ್ಥಕ್ಕೆ ಬಳಸುವುದು ಧರ್ಮ ಸಮ್ಮತವಲ್ಲ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ. ನಾವು ಸಾರ್ವಜನಿಕ ಸೇವಕರು. ನಮಗೆ ಸಿಕ್ಕ ಜವಾಬ್ದಾರಿ ಸ್ಥಾನ ಅದು ಸೇವೆಗೆ ಹೊರತು, ಅಧಿಕಾರ ಸ್ಥಾಪನೆಗಾಗಿ ಅಲ್ಲ ಎಂಬ ಭಾವ ನಮ್ಮೊಳಗೆ ಮೊಳೆತರೆ ಸ್ವಹಿತದ ಆಕಾಂಕ್ಷೆ ಮತ್ತು ಸ್ವಾರ್ಥ ಚಿಂತನೆ ನಮ್ಮನ್ನು ಬಾಧಿಸದು ಅಲ್ಲವೇ?!
| ಡ್ಯಾನಿ ಪಿರೇರಾ (ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)