ಚಿದಂಬರ ಮುನವಳ್ಳಿ
ನೂರಾರು ಜನರು ವಾಸಿಸುತ್ತಿದ್ದ ಆ ಅಪಾರ್ಟಮೆಂಟ್ನ ವಿಶಾಲವಾದ ಆವರಣದಲ್ಲಿ ಈಜುಗೊಳ ಒಂದನ್ನು ನಿರ್ವಿುಸಲಾಯಿತು. ಅದು ತಯಾರಾದ ಮೊದಲನೇ ದಿನವೇ ಅದನ್ನು ವೀಕ್ಷಿಸಲು ಸುತ್ತಮುತ್ತಲ ಜನ ಬರತೊಡಗಿದರು. ಸುಂದರವಾದ ಹಾಸುಗಲ್ಲುಗಳಿಂದ ಹೊಳೆಯುವ ನೆಲ, ಸುತ್ತಲೂ ತಿರುಗಾಡಲು ಪಾದಚಾರಿ ಪಥ, ಬಿಸಿಲಿಗೆ ಮೈಯೊಡ್ಡಿ ವಿಶ್ರಮಿಸಲು ಆರಾಮಕುರ್ಚಿಗಳು, ತಿಳಿನೀಲಿ ಬಣ್ಣದಿಂದ ಕಂಗೊಳಿಸುವ ನೀರು ಸೇರಿ ಎಲ್ಲ ಸೌಲಭ್ಯಗಳೂ ಇದ್ದವು. ಆದರೆ ಆ ಈಜುಗೊಳ ಪ್ರದೇಶಕ್ಕೆ ಪ್ರವೇಶ ಮಾಡಿದ ಸುಮಾರು ಇಪ್ಪತ್ತು ಹೆಜ್ಜೆ ಅಂತರದಲ್ಲಿ ಒಂದು ಚೌಕಾಕಾರದ ಟೈಲ್ (ಹಾಸುಗಲ್ಲು) ಕಾಣೆಯಾಗಿ ಆ ಜಾಗದಲ್ಲಿ ಒಂದು ಸಣ್ಣ ತೆಗ್ಗುಂಟಾಗಿ ಸ್ವಲ್ಪ ಮಣ್ಣು ಹೊರ ಚೆಲ್ಲಿತ್ತು. ಅಲ್ಲಿಂದ ಸಾಗಿ ಬರುವ ಪ್ರತಿಯೊಬ್ಬ ವ್ಯಕ್ತಿಯೂ ಅದನ್ನು ನೋಡಿದಾಕ್ಷಣ ಅಲ್ಲಿಯೇ ದೃಷ್ಟಿ ನೆಟ್ಟು ‘ಒಹೋ ಇದು ಹೀಗೇಕಾಗಿದೆ?’ ಎಂದು ಅಲ್ಲಿಯೇ ನಿಂತುಬಿಡುತ್ತಿದ್ದ. ಬಂದವರೆಲ್ಲರೂ ಗುಂಪಾಗಿ ಸೇರಿ ಅದೊಂದನ್ನೇ ಮಾತನಾಡುತ್ತಿದ್ದರು. ಹಾಗೆಯೇ ಮುಂದೆ ಸಾಗುತ್ತಿದ್ದಂತೆ ಇನ್ನೂ ವಿವಿಧ ಬಣ್ಣದ ಹಾಸುಗಲ್ಲುಗಳು, ಒಳ್ಳೆಯ ಕೆತ್ತನೆಯ ಕಲ್ಲುಗಳ ಗೋಡೆ, ತುಂತುರು ಹನಿಯ ಸ್ನಾನದ ವ್ಯವಸ್ಥೆ, ಬಟ್ಟೆ ಬದಲಾಯಿಸಲು ಪ್ರತ್ಯೇಕ ಕೊಠಡಿಗಳು, ನೀರಿಗೆ ಇಳಿಯಲು ಅಮೃತಶಿಲೆಯ ಮೆಟ್ಟಿಲುಗಳು ಮುಂತಾದವುಗಳೆಲ್ಲ ಇದ್ದರೂ ಜನರು ಅವುಗಳನ್ನು ಪ್ರಶಂಸಿಸುವುದು ಬಿಡಿ ಆನಂದಿಸುವ ಮನಃಸ್ಥಿತಿಯಲ್ಲೂ ಇರಲಿಲ್ಲ. ಆ ಕಾಣೆಯಾದ ಕಲ್ಲಿನ ಜಾಗವೊಂದೇ ಅವರ ಮನಸ್ಸಿನಲ್ಲಿ ತುಂಬಿ ಬಿಟ್ಟಿತ್ತು. ಮನೆಗೆ ತೆರಳಿದ ಮೇಲೆ ಮರುದಿನ ಸಾಮಾಜಿಕ ಜಾಲತಾಣದಲ್ಲಿಯೂ ಅದರದ್ದೇ ಸುದ್ದಿ.
ಜೀವನದಲ್ಲಿ ಬಹುತೇಕ ಜನರ ದುಃಖಕ್ಕೆ ಕಾರಣ, ಅಭಾವವಲ್ಲ. ಎಲ್ಲ ಇದ್ದರೂ ಇಲ್ಲದಿರುವುದರ ಬಗ್ಗೆ ಯೋಚಿಸುವ ಮನಸ್ಸು. ಡೆನ್ನಿಸ್ ಪ್ರಾಗೇರ್ ಎಂಬ ಮನೋ ವಿಶ್ಲೇಷಕ ‘ಮನುಷ್ಯನ ಸ್ವಭಾವವು ಕೇವಲ ಅಪೂರ್ಣತೆಯನ್ನೇ ನೋಡುತ್ತದೆ’ ಎಂದಿದ್ದಾನೆ. ಅದನ್ನು ಪೂರ್ಣ ಮಾಡಿದ ಮೇಲೆ ಇನ್ನೊಂದು ಅಪೂರ್ಣತೆಯತ್ತ ಹೊರಳುತ್ತದೆ. ಸಭೆ, ಸಮಾರಂಭಗಳಿಗೆ ಹೋದಾಗ ಅದನ್ನು ಆನಂದಿಸುವ ಬದಲು ಬರೀ ಹುಳುಕು ಹುಡುಕುವ ಕೆಲಸ ನಡೆಯುತ್ತದೆ. ಅಷ್ಟೇ ಏಕೆ, ಸ್ವಂತದ ವಿಷಯದಲ್ಲೂ ತಾನು ಕಪ್ಪಗಿದ್ದೇನೆ, ಕುಳ್ಳ, ದಪ್ಪವಾಗಿದ್ದೇನೆ, ಬೋಳುತಲೆ ಇದೆ, ಕನ್ನಡಕ ಬಂದಿದೆ... ಹೀಗೆ ಮುಂತಾದ ಕ್ಷುಲ್ಲಕ ಕಾರಣಗಳ ಬಗ್ಗೆ ಯೋಚಿಸುತ್ತ ತನ್ನಲ್ಲಿರುವ ಇನ್ನುಳಿದ ಅತ್ಯಮೂಲ್ಯ ವಿಶೇಷತೆಗಳನ್ನೇ ಮರೆತು ಬಿಡುತ್ತಾನೆ. ಇಂಥ ಮನಃಸ್ಥಿತಿಯು ಆನಂದವನ್ನು ಅನುಭವಿಸುವುದಕ್ಕೆ ದೊಡ್ಡ ತೊಡಕಾಗಿ ಪರಿಣಮಿಸುತ್ತದೆ. ಅದಕ್ಕೆಂದೇ ಗೋಪಾಲಕೃಷ್ಣ ಅಡಿಗರು ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂದಿದ್ದಾರೆ. ಯಾರೂ ಪರಿಪೂರ್ಣರಲ್ಲ. ಅದನ್ನು ಸಾಧಿಸಲು ಸದಾಕಾಲ ಪ್ರಯತ್ನಿಸಬೇಕು. ಆದರೆ ಆನಂದ ಹೊಂದಲು ಕೆಲಸ ಮಾಡುವುದಕ್ಕಿಂತ ಆನಂದದಿಂದ ಕೆಲಸ ಮಾಡುವುದು ಒಳ್ಳೆಯದಲ್ಲವೇ?
(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)