Late night cravings Healthy midnight snacks 
ಲೈಫ್‌ಸ್ಟೈಲ್

ಮಧ್ಯರಾತ್ರಿ ಹಸಿವಾದರೆ ಈ 10 ಪೌಷ್ಠಿಕ ಆಹಾರ ತಿನ್ನಿ; ಗ್ಯಾಸ್ಟ್ರಿಕ್, ಬೊಜ್ಜಿನ ಸಮಸ್ಯೆ ಕಾಡೋದಿಲ್ಲ!.. Late Night Cravings

Late-night cravings Healthy midnight snacks: ತಡರಾತ್ರಿ ಕೆಲಸ ಮುಗಿಸಿ ಊಟ ಮಾಡುವುದು, ಮಲಗಲು ಹೋದಾಗ ಏನಾದರೂ ತಿನ್ನಬೇಕು ಎಂದೆನಿಸುವುದು, ಹಸಿವಾಗುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ. ಆದರೆ, ಈ ಸಮಯದಲ್ಲಿ ಚಿಪ್ಸ್​, ಪಿಜ್ಜಾ, ಬರ್ಗರ್​​ನಂತಹ ಜಿಡ್ಡು ಪದಾರ್ಥ ತಿನ್ನೋದು ಅಪಾಯಕಾರಿ ಎನ್ನುತ್ತಾರೆ ತಜ್ಞರು. ಇದರಿಂದ ದೇಹದಲ್ಲಿ ಕೊಬ್ಬು, ಸಕ್ಕರೆ ಮತ್ತು ಉಪ್ಪಿನಂಶ ಹೆಚ್ಚಿರುವುದರಿಂದ ಅಸಿಡಿಟಿ, ಹೊಟ್ಟೆ ಉಬ್ಬರ ಮತ್ತು ತೂಕ ಹೆಚ್ಚಾಗುವಂತೆ ಮಾಡುತ್ತದೆ.
ಹೀಗಾಗಿ ರಾತ್ರಿ ವೇಳೆ ತೀರಾ ಏನನ್ನಾದರೂ ತಿಂದು ಬಿಡಬೇಕು ಎಂದೆನಿಸದರೆ, ಈ ವೇಳೆ ಬೇಗನೆ ಜೀರ್ಣವಾಗುವ ಪ್ರೋಟೀನ್ ಮತ್ತು ಫೈಬರ್ ಒಳಗೊಂಡಿರುವ ಆಹಾರಗಳನ್ನು ಸೇವಿಸಿ ಎನ್ನುತ್ತಾರೆ ಆಹಾರ ತಜ್ಞರು. ಹಾಗಾದ್ರೆ ರಾತ್ರಿ ವೇಳೆ ಸೇವಿಸಬಹುದಾದ ಲಘು ಆಹಾರ ಯಾವುದು ಎನ್ನುವುದನ್ನು ತಿಳಿದುಕೊಳ್ಳೋಣ.

ಯಾವೆಲ್ಲ ಆಹಾರ ಸೇವಿಸಬಹುದು

ಸಕ್ಕರೆ ರಹಿತ ಮೊಸರು

  • ಸಕ್ಕರೆ ರಹಿತ ಸಾಮಾನ್ಯ ಮೊಸರು ರಾತ್ರಿ ಲಘು ಆಹಾರಕ್ಕೆ ಉತ್ತಮ. ಇದರಲ್ಲಿರುವ ಪ್ರೋಟೀನ್ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಪ್ರೋಬಯಾಟಿಕ್ಸ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ನೈಸರ್ಗಿಕ ಸಿಹಿಗಾಗಿ ಇದಕ್ಕೆ ಸ್ವಲ್ಪ ಬಾಳೆಹಣ್ಣು ಅಥವಾ ಬೆರ್ರಿ ಹಣ್ಣುಗಳನ್ನು ಸೇರಿಸಬಹುದು.
ಉಗುರು ಬೆಚ್ಚಗಿನ ಹಾಲು
  • ರಾತ್ರಿ ವೇಳೆ ಉಗುರು ಬೆಚ್ಚಗಿನ ಹಾಲು ಕುಡಿಯುವುದು ರಾತ್ರಿ ನೆಮ್ಮದಿಯ ನಿದ್ರೆಗೆ ಸಹಕಾರಿ. ಇದು ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಒದಗಿಸುತ್ತದೆ. ಸಕ್ಕರೆ ಸೇರಿಸದೆ ಕುಡಿಯುವುದು ಒಳ್ಳೆಯದು. ಲ್ಯಾಕ್ಟೋಸ್ ಅಲರ್ಜಿ ಇರುವವರು ಪ್ಲಾಂಟ್-ಬೇಸ್ಡ್ ಮಿಲ್ಕ್ ಬಳಸಬಹುದು.
ಸ್ನಾಯುಗಳಿಗೆ ವಿಶ್ರಾಂತಿ ನೀಡುವ ಬಾಳೆಹಣ್ಣು
  • ಇದು ಸುಲಭವಾಗಿ ಜೀರ್ಣವಾಗುತ್ತದೆ. ಇದರಲ್ಲಿರುವ ಪೊಟ್ಯಾಸಿಯಮ್ ಮತ್ತು ಮ್ಯಾಗ್ನೀಸಿಯಮ್ ಸ್ನಾಯುಗಳಿಗೆ ವಿಶ್ರಾಂತಿ ನೀಡುತ್ತದೆ. ಒಂದು ಸಣ್ಣ ಬಾಳೆಹಣ್ಣು ತಿಂದರೆ ಸಿಹಿ ತಿನ್ನುವ ಹಂಬಲವೂ ದೂರವಾಗುತ್ತದೆ.
ಓಟ್ ಮೀಲ್

  • ಓಟ್ಸ್ ಕೇವಲ ಬ್ರೇಕ್‌ಫಾಸ್ಟ್‌ಗೆ ಮಾತ್ರವಲ್ಲ, ರಾತ್ರಿಗೂ ಒಳ್ಳೆಯದು. ಇದರಲ್ಲಿ ಫೈಬರ್ ಹೆಚ್ಚಿರುವುದರಿಂದ ನಿಧಾನವಾಗಿ ಜೀರ್ಣವಾಗಿ ದೀರ್ಘಕಾಲ ಹಸಿವಾಗದಂತೆ ತಡೆಯುತ್ತದೆ. ಸಕ್ಕರೆ ಅಥವಾ ಚಾಕೊಲೇಟ್ ಸಿರಪ್ ಬಳಸಬೇಡಿ.

ಒಂದು ಹಿಡಿ ಒಣಹಣ್ಣುಗಳು
  • ಬಾದಾಮಿ, ವಾಲ್‌ನಟ್ಸ್ ಮತ್ತು ಪಿಸ್ತಾಗಳನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬಹುದು. ಇವುಗಳಲ್ಲಿ ಆರೋಗ್ಯಕರ ಕೊಬ್ಬು, ಪ್ರೋಟೀನ್ ಮತ್ತು ಫೈಬರ್ ಇರುತ್ತವೆ. ಆದರೆ ಅತಿಯಾಗಿ ತಿನ್ನಬಾರದು.
ಆಪಲ್ ಮತ್ತು ಪೀನಟ್ ಬಟರ್
  • ಸೇಬು ಹಣ್ಣಿನ ಸ್ಲೈಸ್‌ಗಳ ಜೊತೆಗೆ ಒಂದು ಚಮಚ ನೈಸರ್ಗಿಕ ಪೀನಟ್ ಬಟರ್ (ಸಕ್ಕರೆ ರಹಿತ) ಸೇರಿಸಿ ತಿಂದರೆ ಫೈಬರ್ ಮತ್ತು ಪ್ರೋಟೀನ್ ಸಮತೋಲನ ಸಿಗುತ್ತದೆ.

ಹೋಲ್ ಗ್ರೇನ್ ಟೋಸ್ಟ್

  • ಒಂದು ಸ್ಲೈಸ್ ಧಾನ್ಯದ ಬ್ರೆಡ್ ಮೇಲೆ ಪನೀರ್, ಹಮ್ಮಸ್ ಅಥವಾ ಪೀನಟ್ ಬಟರ್ ಹಚ್ಚಿ ತಿನ್ನಬಹುದು. ಇದು ರಕ್ತದಲ್ಲಿ ಸಕ್ಕರೆ ಮಟ್ಟ ತಕ್ಷಣ ಏರದಂತೆ ತಡೆಯುತ್ತದೆ.

ಪನೀರ್ ಹಾಗೂ ಬೇಯಿಸಿದ ಮೊಟ್ಟೆ
  • ಕಡಿಮೆ ಕೊಬ್ಬಿನಂಶವಿರುವ ಹಸಿ ಪನೀರ್ ತುಂಡುಗಳು ಪ್ರೋಟೀನ್‌ನಿಂದ ಸಮೃದ್ಧವಾಗಿವೆ. ಇದನ್ನು ಫ್ರೈ ಮಾಡದೆ ಅಥವಾ ಮಸಾಲೆ ಹಾಕದೆ ಹಾಗೆಯೇ ತಿನ್ನಬೇಕು. ಒಂದು ಬೇಯಿಸಿದ ಮೊಟ್ಟೆ ರಾತ್ರಿಯ ಹಸಿವನ್ನು ನೀಗಿಸಲು ಸಾಕು. ಇದು ದೇಹಕ್ಕೆ ಉತ್ತಮ ಪ್ರೋಟೀನ್ ನೀಡುತ್ತದೆ ಮತ್ತು ಕ್ಯಾಲೊರಿ ಕೂಡ ಕಡಿಮೆ ಇರುತ್ತದೆ. ಸಿಹಿ ತಿನ್ನಬೇಕೆನಿಸಿದರೆ ತಾಜಾ ಹಣ್ಣುಗಳಳಾದ ಸೇಬು, ಪೇರಳೆ, ಪಪ್ಪಾಯ, ಕಲ್ಲಂಗಡಿ ಅಥವಾ ಕಿವಿ ಹಣ್ಣುಗಳನ್ನು ತಿನ್ನಬಹುದು. ಇವು ಹೊಟ್ಟೆಗೆ ತಂಪು ನೀಡುತ್ತವೆ

ಅಸಿಡಿಟಿ ತಡೆಯಲು ತಜ್ಞರ ಟಿಪ್ಸ್

  • ಮಲಗುವ ಕನಿಷ್ಠ 2 ರಿಂದ 3 ಗಂಟೆಗಳ ಮುಂಚಿತವಾಗಿ ರಾತ್ರಿಯ ಊಟಮುಗಿಸಿ.
  • ತಡರಾತ್ರಿಯ ಸ್ನ್ಯಾಕ್ಸ್ ಕೇವಲ 150-250 ಕ್ಯಾಲೊರಿಗಳಷ್ಟೇ ಇರಲಿ.
  • ಆಹಾರ ತಿಂದ ತಕ್ಷಣ ಹಾಸಿಗೆಯ ಮೇಲೆ ಮಲಗಬೇಡಿ.
ಮಧ್ಯರಾತ್ರಿಯ ಆಹಾರವು ಹಗುರವಾದ, ಕಡಿಮೆ ಕ್ಯಾಲೊರಿ ಮತ್ತು ಸುಲಭವಾಗಿ ಜೀರ್ಣವಾಗುವಂತಿರಬೇಕು.
ಮೊಸರು, ಹಾಲು, ಬಾಳೆಹಣ್ಣು, ಪನೀರ್ ಮತ್ತು ಬೇಯಿಸಿದ ಮೊಟ್ಟೆ ತಡರಾತ್ರಿಯ ಹಸಿವಿಗೆ ಅತ್ಯುತ್ತಮ ಆಯ್ಕೆಗಳು.ತಿಂದ ತಕ್ಷಣ ಮಲಗುವುದು ಮತ್ತು ಮಸಾಲೆ ಆಹಾರ ಸೇವಿಸುವುದು ಅಸಿಡಿಟಿಗೆ ಮುಖ್ಯ ಕಾರಣ, (ಏಜೆನ್ಸೀಸ್).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.