ಲೈಫ್‌ಸ್ಟೈಲ್

ನಾರದನ ಪ್ರಶ್ನೆಗೆ ಕೃಷ್ಣನ ನಾಟಕ

Webdesk - Manjunatha B
|ನಾಗೇಶ್ ಜಿ. ವೈದ್ಯ

ಯಾವುದನ್ನೂ ಪರಾಮಶಿಸದೇ ಒಪ್ಪಿಕೊಳ್ಳದ ನಾರದ, ಒಮ್ಮೆ ಶ್ರೀಕೃಷ್ಣನಿಗೆ ಪ್ರಶ್ನೆಯೊಂದನ್ನು ಕೇಳಿದ. ಪ್ರಭು ರುಕ್ಮಿಣಿ, ಸತ್ಯಭಾಮೆಯರು ನಿಮ್ಮ ಪತ್ನಿಯರೆಂದು ತಿಳಿದೂ, ಮೂರೂ ಲೋಕದಲ್ಲಿ ಎಲ್ಲರೂ ರಾಧೆಯ ಪ್ರೀತಿಯನ್ನು ಕೊಂಡಾಡುವವರೇ. ನನಗೇಕೋ ಅದು ಸರಿಯೆನಿಸದು. ಅವರೆಲ್ಲರೂ ಸರಿಸಮಾನರಲ್ಲವೇ?

ಕೃಷ್ಣ ಹಣೆಯ ಮೇಲೆ ಕೈ ಇಟ್ಟುಕೊಂಡ. ನಾರದರೇ, ನನಗೇಕೋ ವಿಪರೀತ ತಲೆನೋವು. ಈ ಪ್ರಶ್ನೆಗೆ ಈಗ ಉತ್ತರಿಸಲಾಗದು. ಸಾಧ್ಯವಾದರೆ ಔಷಧ ತೆಗೆದುಕೊಂಡು ಬನ್ನಿ ಎಂದು ನಿವೇದಿಸಿದ.

ನಾರದನಿಗೆ ಗಲಿಬಿಲಿಯಾಯಿತು. ಸಾಕ್ಷಾತ್ ಶ್ರೀಕೃಷ್ಣ ಸಹಾಯಕ್ಕಾಗಿ ತನ್ನಲ್ಲಿ ಬೇಡಿಕೊಳ್ಳುವುದೆಂದರೇನು! ಪ್ರಭು, ಕೊರಿಕೆಯೇಕೆ? ಆದೇಶ ಮಾಡಿ. ಈಗಲೇ ತರುವೆ ಎನ್ನುತ್ತ ದೇವತೆಗಳ ವೈದ್ಯ, ಧನ್ವಂತರಿಯನ್ನು ಭೇಟಿಯಾಗಲು ಹೊರಟುನಿಂತ.

ಕೃಷ್ಣ ಅವನನ್ನು ತಡೆದ. ನಾರದರೇ, ಇದು ಸಾಮಾನ್ಯ ಔಷಧಿಯಿಂದ ಹೋಗುವಂಥದ್ದಲ್ಲ. ಇದಕ್ಕೆ ನನ್ನ ರಾಣಿಯ ಪಾದದ ಧೂಳು ಬೇಕು. ಅದನ್ನು ಹಣೆಗೆ ಲೇಪಿಸಿಕೊಂಡರೆ, ಈ ನೋವು ಮಾಯವಾಗುತ್ತದೆ ಎಂದ. ನಾರದ ತಲೆ ಅಲ್ಲಾಡಿಸಿ ಹೊರಟುಹೋದ. ನಾರದ ರುಕ್ಮಿಣಿಯನ್ನು ಭೇಟಿಯಾಗಿ ವಿಷಯ ತಿಳಿಸಿದಾಗ ಆಕೆ ಮುನಿಸಿಕೊಂಡಳು. ನಾರದರೇ ನಿಮಗೇನಾಗಿದೆ? ಸ್ವಾಮಿಯ ಹಣೆಗೆ ನನ್ನ ಪಾದದ ಧೂಳನ್ನು ಹಚ್ಚುವುದೇ? ಕನಸಿನಲ್ಲೂ ಇದನ್ನು ಯೋಚಿಸಲಾಗದು ಎಂದು ನಾರದನ ನಿವೇದನೆಯನ್ನು ತಿರಸ್ಕರಿಸಿದಳು.

ನಾರದ ಸತ್ಯಭಾಮೆಯ ಬಳಿ ಓಡಿದ. ಪಾದದ ಧೂಳನ್ನು ಕೊಡುವಂತೆ ಕೇಳಿಕೊಂಡ. ಆಕೆಗೆ ಇದೆಲ್ಲ ನಾರದನ ಚೇಷ್ಟೆ ಎನಿಸಿ ನಕ್ಕುಬಿಟ್ಟಳು. ನಾರದರೇ, ಇದೇನು ನೀವು ಹೇಳುತ್ತಿರುವುದು? ಭಗವಂತನಿಗೆ ಎಂದಾದರೂ ತಲೆನೋವು ಬರಲು ಸಾಧ್ಯವೇ? ಇದು ನಿಮಗೂ ಗೊತ್ತಿರಬೇಕಲ್ಲ! ಎಂದು ಪ್ರಶ್ನಿಸಿದಳು.

ನಾರದ ಬೇರೆ ದಾರಿ ಕಾಣದೆ, ರಾಧೆಯ ಬಳಿ ನಡೆದ. ನಾರದ ಹೇಳಿದ ಸುದ್ದಿ ಕೇಳಿ ರಾಧೆ ವಿಹ್ವಲಳಾದಳು. ಆತಂಕದಿಂದ ಅವಳ ಹಣೆಯಲ್ಲಿ ಬೆವರು ಮೂಡಿತು. ಅಯ್ಯೋ, ನನ್ನ ಸ್ವಾಮಿ ನೋವಿನಿಂದ ಅದೆಷ್ಟು ನರಳುತ್ತಿರುವರೋ. ನೀವು ನೇರವಾಗಿ ನನ್ನ ಬಳಿ ಬರಬಾರದಿತ್ತೆ? ಎನ್ನುತ್ತಲೇ ತನ್ನ ಪಾದದ ಧೂಳನ್ನು ಸಂಗ್ರಹಿಸಿ, ಬಟ್ಟೆಯಲ್ಲಿ ಕಟ್ಟಿಕೊಟ್ಟಳು. ತುಂಬಾ ಉಪಕಾರವಾಯಿತು ಎಂದ ನಾರದರ ಮಾತನ್ನು ಕೇಳಿಸಿಕೊಳ್ಳದೆ, ನಡೆಯಿರಿ, ಇದು ಮಾತಾಡುವ ಸಮಯವಲ್ಲ. ಬೇಗ ಇದನ್ನು ನನ್ನ ಸ್ವಾಮಿಗೆ ತಲುಪಿಸಿ ಎಂದು ಗೋಗರೆದಳು.

ನಾರದ ಮರಳಿ ಬಂದಾಗ, ಶ್ರೀಕೃಷ್ಣ ನಗುತ್ತ ಸ್ವಾಗತಿಸಿದ. ಸ್ವಾಮಿ, ತಲೆನೋವು ಹೊರಟುಹೋಯಿತೆ? ಎಂದು ಪ್ರಶ್ನಿಸಿದ ನಾರದ. ನಾರದರೇ, ಯಾವ ನೋವೂ ಇಲ್ಲ. ನಿಮ್ಮ ಪ್ರಶ್ನೆಗೆ ಈಗ ಉತ್ತರ ಸಿಕ್ಕಿರಬೇಕಲ್ಲವೇ? ಎಂದು ಮುಗುಳ್ನಕ್ಕ. ನಾರದನಿಗೆ ಕೃಷ್ಣ ಆಡಿದ ನಾಟಕ ಅರಿವಾಯಿತು. ಪ್ರಭುವನ್ನು ಅದಮ್ಯವಾಗಿ ಪ್ರೀತಿಸುವ ರಾಧೆ ನಿಜವಾಗಿಯೂ ಪ್ರಶಂಸೆಗೆ ಅರ್ಹಳು ಎಂದೂ ಅರ್ಥವಾಯಿತು.