ತಾಯಿ ಪುಟ್ಟ ಮಗಳೊಂದಿಗೆ ಕಿರಾಣಿಅಂಗಡಿಗೆ ಹೋಗಿದ್ದಳು. ಪ್ರತಿತಿಂಗಳ ಕಿರಾಣಿಸಾಮಾನುಗಳನ್ನು ಅಲ್ಲಿಯೇ ತೆಗೆದುಕೊಳ್ಳುತ್ತಿದ್ದರಿಂದ ಅಂಗಡಿಮಾಲೀಕ ಚಿರಪರಿಚಿತ. ಅಂಗಡಿಗೆ ಹೋದ ಸಂದರ್ಭದಲ್ಲಿ ಅಲ್ಲಿ ಮೊದಲ ಸಾಲಿನಲ್ಲಿ ಇಟ್ಟಿದ್ದ ಮಿಠಾಯಿ ಡಬ್ಬಿ ಕಡೆಗೆ ಮಗುವಿನ ದೃಷ್ಟಿ ಸಹಜವಾಗಿ ಹರಿಯಿತು. ಅದನ್ನು ಗಮನಿಸಿದ ಮಾಲೀಕನು ‘ಪುಟ್ಟಿ! ಎಷ್ಟುಬೇಕೋ ಅಷ್ಟು ಮಿಠಾಯಿ ತೆಗೆದುಕೋ’ ಎಂದು ಅಕ್ಕರೆಯಿಂದ ಹೇಳಿದ. ಅವಳು ತೆಗೆದುಕೊಳ್ಳಲಿಲ್ಲ. ಮಧ್ಯಪ್ರವೇಶಿಸಿದ ತಾಯಿ, ‘ಮಗಳೇ! ಅವರು ಅಷ್ಟು ಪ್ರೀತಿಯಿಂದ ಹೇಳುತ್ತಿದ್ದಾರೆ ತೆಗೆದುಕೋ’ ಎಂದು ಮಮತೆಯಿಂದ ಹೇಳಿದಳು. ಆದರೂ ಅವಳು ತೆಗೆದುಕೊಳ್ಳಲಿಲ್ಲ. ಮಗುವಿಗೆ ಸಂಕೋಚವಿರಬಹುದೆಂದು ತಿಳಿದ ಮಾಲೀಕನು ತಾನೇ ಡಬ್ಬಿಯೊಳಗೆ ಕೈಹಾಕಿ ಒಂದಿಷ್ಟು ಮಿಠಾಯಿಗಳನ್ನು ತೆಗೆದು ಮಗುವಿಗೆ ಕೊಟ್ಟ. ನಸುನಕ್ಕು, ಮಾಲೀಕನಿಗೆ ಧನ್ಯವಾದ ಹೇಳಿ, ತಾಯಿ-ಮಗಳು ಮನೆಗೆ ಬಂದರು. ಮನೆಗೆ ತಲುಪಿದ ಮೇಲೆ- ‘ಮಗಳೇ, ಅವರು ಅಷ್ಟು ಹೇಳಿದರೂ ನೀನೇಕೆ ಮಿಠಾಯಿ ತೆಗೆದುಕೊಳ್ಳಲಿಲ್ಲ?’ ಎಂದು ತಾಯಿ ಕೇಳಿದಳು. ಅದಕ್ಕೆ ಮಗಳಿತ್ತ ಮಾರ್ವಿುಕ ಉತ್ತರ- ‘ನನ್ನ ಕೈ ಪುಟ್ಟದಿದೆ. ನಾನೇ ತೆಗೆದುಕೊಂಡಿದ್ದರೆ ಒಂದೆರಡು ಮಿಠಾಯಿ ಮಾತ್ರ ಸಿಗುತ್ತಿತ್ತು. ಆದರೆ ಅವರ ಕೈ ದೊಡ್ಡದಿದ್ದದ್ದರಿಂದ ಅವರೇ ಕೊಟ್ಟಿದ್ದಕ್ಕೆ ಹತ್ತಾರು ಮಿಠಾಯಿಗಳು ಸಿಕ್ಕಿದವು’.
ಇದೊಂದು ಪುಟ್ಟ ಘಟನೆಯಾ ದರೂ, ತಿಳಿಸುವ ಸಂದೇಶ ದೊಡ್ಡದು. ‘ಪ್ರಯೋಜನಮನುದ್ದಿಶ್ಯ ನ ಮಂದೋ ಧಿಪಿ ಪ್ರವರ್ತತೇ’ ‘ಪ್ರಯೋಜನ ಇಲ್ಲದೇ ಒಬ್ಬ ದಡ್ಡನೂ ಕೆಲಸ ಮಾಡಲಾರ’ ಎನ್ನುವುದು ಜಗದ ಜನರ ಮನಃಸ್ಥಿತಿ. ನಾವು ಮಾಡುವ ಪ್ರತಿಯೊಂದು ಕರ್ಮಕ್ಕೂ ಏನಾದರೂ ಫಲವನ್ನು ಬಯಸುವುದು ನಮ್ಮ ರೂಢಿ. ಮದುವೆಯಾಗಬೇಕು, ಮಕ್ಕಳಾಗಬೇಕು, ಆರೋಗ್ಯ ಬೇಕು ಇತ್ಯಾದಿ ಫಲಗಳನ್ನು ಬಯಸಿಯೇ ಕರ್ಮಗಳನ್ನು ಮಾಡುತ್ತೇವೆ. ಬೇರೆ ಯಾವ ಫಲದ ಅಪೇಕ್ಷೆಪಡದೇ, ‘ಭಗವಂತ ಸಂತುಷ್ಟನಾಗಲಿ’ ಎಂಬ ನಿಷ್ಕಾಮ ಮನೋಭಾವ ನಮ್ಮಲ್ಲಿಲ್ಲ.
ಇದರ ಪರಿಣಾಮ? ಭಗವಂತ ಮಹಾಬುದ್ಧಿವಂತ. ನಾವು ಏನು ಫಲವನ್ನು ಬಯಸಿ ಕರ್ಮ ಮಾಡಿರುತ್ತೇವೆಯೋ ಆ ಫಲವನ್ನು ಮಾತ್ರ ಕೊಟ್ಟು ಮುಗಿಸಿಬಿಡುತ್ತಾನೆ. ಅದಕ್ಕಾಗಿ ಶಾಸ್ತ್ರ ಬುದ್ಧಿಮಾತು ಹೇಳುತ್ತದೆ- ‘ಕುರ್ವತೇ ಕರ್ಮ ಯತ್ಪ್ರೀತಯೇ ಸಜ್ಜನಾಃ’ ‘ಆ ಈ ಫಲಗಳನ್ನು ಕೇಳಿಕೊಂಡು ಕರ್ಮಗಳನ್ನು ಮಾಡಬೇಡಿ. ಭಗವಂತನ ಪ್ರೀತಿಗಾಗಿ ಕರ್ಮ ಮಾಡಿ. ಹಾಗೆ ಮಾಡಿದರೆ, ನೀವು ಬೇಡದಿದ್ದರೂ ನಿಮಗೆ ಬೇಕಾದ ಎಲ್ಲ ಅಭೀಷ್ಟಗಳನ್ನೂ ಭಗವಂತ ತಾನೇ ಕೈಯೆತ್ತಿ ಕೊಡುತ್ತಾನೆ’. ‘ನನಗೆ ಇನ್ನಾವ ವರವೂ ಬೇಡ, ನಿನ್ನ ಅನುಗ್ರಹವಿದ್ದರೆ ಸಾಕು’ ಎಂದು ನಿಷ್ಕಾಮಭಕ್ತಿ ಮಾಡಿದ ಭಕ್ತರಿಗೆ ಭಗವಂತ ಮೋಕ್ಷಾದಿ ಸಕಲಪುರುಷಾರ್ಥಗಳನ್ನೂ ಕೊಟ್ಟು ಅನುಗ್ರಹಿಸಿದ ನೂರಾರುಕಥೆಗಳನ್ನು ಇತಿಹಾಸದಲ್ಲಿ ಕೇಳುತ್ತೇವೆ. ಮಗು ತಾನೇ ಕೈಹಾಕಿ ತೆಗೆದುಕೊಂಡಿದ್ದರೆ ಒಂದೆರಡು ಮಿಠಾಯಿಗಳು ಮಾತ್ರ ಸಿಗುತ್ತಿತ್ತು. ಅದನ್ನರಿತ ಆ ಮಗು, ಮಾಲೀಕನೇ ಕೈಹಾಕಿ ಮಿಠಾಯಿ ತೆಗೆದುಕೊಡುವಂತೆ ಮಾಡಿ, ಆತನಿಂದ ಹತ್ತಾರು ಮಿಠಾಯಿಗಳನ್ನು ಪಡೆದು ಬುದ್ಧಿವಂತಿಕೆ ತೋರಿತು. ಅದರಂತೆ ನಾವೇ ಆ ಈ ಅಪೇಕ್ಷೆಗಳನ್ನು ಬೇಡಿ, ಪಡೆದು ದಡ್ಡರಾಗುವುದು ಬೇಡ. ದೇವ ರಲ್ಲಿ ನಾವಾಗಿಯೇ ಏನೂ ಬೇಡದೇ, ದೇವರ ಅನುಗ್ರಹ ಮಾತ್ರ ಬಯಸಿ, ಆ ಮೂಲಕ ದೇವರೇ ಕೈಎತ್ತಿ ನಮ್ಮ ಎಲ್ಲ ಇಷ್ಟಾರ್ಥಗಳನ್ನೂ ಕೊಡುವಂತೆ ಬುದ್ಧಿವಂತಿಕೆ ತೋರೋಣ.
(ಲೇಖಕರು ಸಂಸ್ಕೃತ ವಿದ್ವಾಂಸರು)