- ಎಲ್ಲವನ್ನು ಹಂಚಿಕೊಳ್ಳುವ ಗಂಡ-ಹೆಂಡತಿ ನಡುವಿನ ಸಂಬಂಧ ಶ್ರೇಷ್ಠವಾದದ್ದು
- ಇಬ್ಬರು ಕೂಡಿ ಬಾಳಿದರೆ ಬದುಕೇ ಸ್ವರ್ಗವಾಗುತ್ತದೆ
- ಪತಿ-ಪತ್ನಿ ಸಂಬಂಧದಲ್ಲಿ 3ನೇ ವ್ಯಕ್ತಿ ಎಂಟ್ರಿಯಾದರೆ ಸಾಕು ಆ ಸಂಬಂಧ ಅಲ್ಲಿಗೆ ಮುಗಿದಂಗೆ
- ನಿಮ್ಮ ಸಂಗಾತಿಯಲ್ಲಿನ ಈ 8 ಬದಲಾವಣೆಗಳು ಮೋಸದ ಲಕ್ಷಣಗಳಾಗಿರಬಹುದು
Partner Cheating : ಕಷ್ಟ-ಸುಖ, ನೋವು-ನಲಿವು ಹಾಗೂ ದೇಹ ಎಲ್ಲವನ್ನು ಹಂಚಿಕೊಳ್ಳುವ ಗಂಡ-ಹೆಂಡತಿ ನಡುವಿನ ಸಂಬಂಧ ಶ್ರೇಷ್ಠವಾದದ್ದು. ಇಬ್ಬರು ಕೂಡಿ ಬಾಳಿದರೆ ಬದುಕೇ ಸ್ವರ್ಗವಾಗುತ್ತದೆ. ಯಾವುದೇ ಪರಿಸ್ಥಿತಿ ಬರಲಿ ತಾಳ್ಮೆಯಿಂದ ತಮ್ಮ ತಿಳುವಳಿಕೆಯ ಮೂಲಕ ಎಲ್ಲವನ್ನು ಸರಿದೂಗಿಸಿಕೊಂಡು ಹೋದರೆ ಏನೇ ಸಮಸ್ಯೆ ಬಂದರು ಪರಿಹರಿಸಬಹುದು. ಸಂಬಂಧದಲ್ಲಿ ಒಂದು ಚೂರು ಬಿರುಕು ಮೂಡಿದರು ಬದಕೇ ದುಃಖಮಯವಾಗುತ್ತದೆ. ಅದರಲ್ಲೂ ಪತಿ-ಪತ್ನಿ ಸಂಬಂಧದಲ್ಲಿ ಮೂರನೇ ವ್ಯಕ್ತಿ ಎಂಟ್ರಿಯಾದರೆ, ಸಾಕು ಆ ಸಂಬಂಧ ಅಲ್ಲಿಗೆ ಮುಗಿದಂಗೆ.
ಗಂಡ-ಹೆಂಡತಿಯ ನಡುವಿನ ಉತ್ತಮ ಸಂಬಂಧಕ್ಕಾಗಿ, ಇಬ್ಬರ ನಡುವೆ ಯಾವುದೇ ಸಮಸ್ಯೆಗಳು ಇರಬಾರದು. ಆದಾಗ್ಯೂ, ಹೆಚ್ಚಿನ ಸಂದರ್ಭಗಳಲ್ಲಿ, ಗಂಡ ಹೆಂಡತಿಯ ನಡುವಿನ ಸಣ್ಣಪುಟ್ಟ ಘರ್ಷಣೆಗಳಿಗೆ ಮೂರನೇ ವ್ಯಕ್ತಿ ಕಾರಣವಾಗಿರುತ್ತಾರೆ. ಆದ್ದರಿಂದ, ಅಂತಹ ಜನರನ್ನು ಮುಂಚಿತವಾಗಿ ಗುರುತಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಂಡರೆ ಮಾತ್ರ, ತುಂಬಾ ಶಾಂತಿಯುತ ಜೀವನವನ್ನು ನಡೆಸಬಹುದು. ಸ್ವಾಭಾವಿಕವಾಗಿ, ಗಂಡ-ಹೆಂಡತಿಯ ನಡುವೆ ಯಾವುದೇ ರಹಸ್ಯಗಳು ಇರುವುದಿಲ್ಲ ಮತ್ತು ಇರಬಾರದು. ಒಂದು ವೇಳೆ ಇದ್ದರೆ ಆ ಸಂಬಂಧ ಹೆಚ್ಚು ದಿನ ಉಳಿಯುವುದಿಲ್ಲ. ಗಂಡ-ಹೆಂಡತಿಯ ನಡುವೆ ಮೂರನೇ ವ್ಯಕ್ತಿ ಬಂದಾಗ, ನಿಮ್ಮ ಸಂಗಾತಿಯ ನಡವಳಿಕೆಯಲ್ಲಿ ಆಗುವ ಬದಲಾವಣೆಗಳ ಮೂಲಕ ನೀವು ಪತ್ತೆಹಚ್ಚಬಹುದು.
ಹೌದು, ಮನಶ್ಶಾಸ್ತ್ರಜ್ಞರ ಪ್ರಕಾರ, ಸಂಗಾತಿಯ ಮೋಸದ ಚಿಹ್ನೆಗಳು ನಾವು ಯೋಚಿಸುವುದಕ್ಕಿಂತಲೂ ಹೆಚ್ಚು ಸೂಕ್ಷ್ಮವಾಗಿರುತ್ತವೆ. ಸಂಗಾತಿಯ ನಡವಳಿಕೆಯಲ್ಲಿ ಕಂಡುಬರುವ ಈ ಎಂಟು ಬದಲಾವಣೆಗಳು ಮೋಸದ ಲಕ್ಷಣಗಳಾಗಿರಬಹುದು ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ, ಆ ಲಕ್ಷಣಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಮಾತನ್ನು ನಿಯಂತ್ರಿಸುವುದು
ನೀವು ಬೇರೆಯವರ ಜೊತೆ ಮಾತನಾಡುವಾಗ, ನಿಮ್ಮ ಸಂಗಾತಿ ತಕ್ಷಣ ನಿಮ್ಮ ಮಾತನ್ನು ಮಧ್ಯದಲ್ಲೇ ಕಿತ್ತುಕೊಂಡು, ಅದನ್ನು ತನ್ನದೇಯಾದ ರೀತಿಯಲ್ಲಿ ಮುಂದುವರಿಸಿ ಹೇಳುತ್ತಾರೆಯೇ? ಅಧ್ಯಯನಗಳ ಪ್ರಕಾರ, ಇದು ತಮ್ಮ ಸಂಬಂಧ ಸುರಕ್ಷಿತವಾಗಿದೆ ಎಂದು ತೋರ್ಪಡಿಸಿಕೊಳ್ಳುವ ಒಂದು ಪ್ರಯತ್ನವಾಗಿದೆ. ಹೊರಗಿನವರಿಗೆ ನಿಮ್ಮ ಸಂಬಂಧದ ಬಗ್ಗೆ ತಪ್ಪು ಗ್ರಹಿಕೆ ಉಂಟು ಮಾಡಬಾರದು ಎಂಬ ಉದ್ದೇಶವಾಗಿರುತ್ತದೆ.
ಎಲ್ಲದಕ್ಕೂ ಒಪ್ಪಿಗೆ ನೀಡುವುದು
ನಿಮ್ಮ ಸಂಗಾತಿ ಈ ಹಿಂದೆ ಮಾಡುತ್ತಿದ್ದ ವಾದಗಳಿಗೆ ಈಗ ಮಣಿಯುತ್ತಿದ್ದಾರೆಯೇ? ಹಾಗಿದ್ದಲ್ಲಿ, ಜಾಗರೂಕರಾಗಿರಿ. ಏಕೆಂದರೆ, ವಾದಗಳು ಮುಂದುವರಿದರೆ ತಮ್ಮ ರಹಸ್ಯಗಳು ಬಹಿರಂಗಗೊಳ್ಳುತ್ತವೆ ಎಂಬ ಭಯದಿಂದ ಅವರು ವಿಷಯವನ್ನು ಬದಲಾಯಿಸಲು, ನೀವು ಏನು ಹೇಳಿದರೂ ಬೇಗನೆ ಒಪ್ಪಿಕೊಳ್ಳಬಹುದು.
ಗೌಪ್ಯತೆ
ಗೌಪ್ಯತೆ ಅನ್ನೋದು ಮಿತಿ ಎನ್ನುವುದಕ್ಕೆ ಒಂದು ಸೈಕಾಲಜಿಕಲ್ ಪದವಾಗಿದೆ. ಈ ಪದವನ್ನು ನಿಮ್ಮ ಸಂಗಾತಿ ಪದೇಪದೆ ಬಳಸಿದರೆ, ಅವರ ಮೇಲೆ ಗಮನವಿರಲಿ. ಹೆಚ್ಚು ಗೌಪ್ಯತೆಯನ್ನು ಬೇಡುವುದು ವಂಚನೆಯ ಸಂಕೇತವಾಗಬಹುದು. ಯಾರಾದರೂ ತಮ್ಮ ಫೋನ್ ಅನ್ನು ಮುಟ್ಟಲು ಬಿಡದಿರುವುದು ಅಥವಾ ಪಾಸ್‌ವರ್ಡ್‌ಗಳನ್ನು ಆಗಾಗ್ಗೆ ಬದಲಾಯಿಸುವಂತಹ ವಿಷಯಗಳು ಕೂಡ ಇದರಲ್ಲಿ ಸೇರಿವೆ.
ಉಫ್! ತಪ್ಪಿಸಿಕೊಂಡೆ
ಅನುಮಾನಾಸ್ಪದ ವಿಷಯಗಳ ಬಗ್ಗೆ ಮಾತನಾಡಿದ ಬಳಿಕ ನೀವೇನಾದರೂ ವಿಷಯವನ್ನು ಬದಲಾಯಿಸಿದ ಸಂದರ್ಭದಲ್ಲಿ, ನಿಮ್ಮ ಸಂಗಾತಿ ಇದ್ದಕ್ಕಿದ್ದಂತೆ ಭಾರಿ ನಿರಾಳತೆಯ ಮುಖಭಾವ ತೋರಿಸುತ್ತಾರೆಯೇ? ಹೌದು ಎಂದಾದರೆ, ಅವರು ನಿಮ್ಮಿಂದ ಏನನ್ನಾದರೂ ಮರೆಮಾಡುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬಹುದು.
ಅನಗತ್ಯ ವಿವರಣೆಗಳು
ನೀವು ಏನೇ ಸಣ್ಣ ವಿಚಾರಗಳನ್ನು ಕೇಳಿದರೂ ಅನಗತ್ಯ ಮಾಹಿತಿಗಳನ್ನು ಒದಗಿಸುತ್ತಾರೆ ಮತ್ತು ಸಾಧ್ಯವಾದಷ್ಟು ಚಿಕ್ಕ ವಿವರಗಳನ್ನು ಸಹ ವಿವರಿಸುತ್ತಾರೆ. ಇದು ಸುಳ್ಳನ್ನು ಸತ್ಯದಂತೆ ಕಾಣುವಂತೆ ಕಥೆಗಳನ್ನು ಹೆಣೆಯಲು ಅವರು ಬಳಸುವ ರಕ್ಷಣಾ ತಂತ್ರವಾಗಿದೆ.
ಹಾಸ್ಯ ಮತ್ತು ವ್ಯಂಗ್ಯ
ಗಂಭೀರ ವಿಷಯಗಳ ಬಗ್ಗೆ ಮಾತನಾಡುವಾಗ, ಅವುಗಳನ್ನು ಗೇಲಿ ಮಾಡುವುದು ಅಥವಾ ವ್ಯಂಗ್ಯವಾಗಿ ಮಾತನಾಡುವುದು, ಆಳವಾದ ಭಾವನೆಗಳನ್ನು ಮುಟ್ಟದೆ ಸತ್ಯವನ್ನು ಮುಚ್ಚಿಡುವ ಒಂದು ಮಾರ್ಗವಾಗಿದೆ.
ನಿಮ್ಮನ್ನು ವಿಲನ್ ಆಗಿ ಬಿಂಬಿಸುವುದು
ಮೋಸ ಮಾಡುವವರು ತಮ್ಮ ತಪ್ಪುಗಳಿಂದ ಗಮನವನ್ನು ಬೇರೆಡೆ ಸೆಳೆಯಲು ತಮ್ಮ ಸಂಗಾತಿಯನ್ನು ದೂಷಿಸುವುದು ಸಾಮಾನ್ಯ ತಂತ್ರವಾಗಿದೆ. ನೀವು ಬೇರೆಯವರೊಂದಿಗೆ ಮಾತನಾಡುವುದನ್ನು ದೊಡ್ಡ ಅಪರಾಧವೆಂದು ನೋಡುತ್ತಾರೆ ಮತ್ತು ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಸಣ್ಣ ತಪ್ಪುಗಳನ್ನು ಉತ್ಪ್ರೇಕ್ಷಿಸುವ ಮೂಲಕ ನಿಮ್ಮನ್ನು ಖಳನಾಯಕನಂತೆ ಚಿತ್ರಿಸುತ್ತಾರೆ.
ದೈಹಿಕ ಭಾಷೆಯಲ್ಲಿ ಬದಲಾವಣೆ
ಮಾತನಾಡುವಾಗ ತೊದಲುವುದು, ಉಸಿರನ್ನು ಹಿಡಿದಿಟ್ಟುಕೊಂಡಂತೆ ಕಾಣುವುದು, ಕಣ್ಣು ಮಿಟುಕಿಸದೆ ದಿಟ್ಟಿಸುತ್ತಿರುವುದು ಮತ್ತು ಕುತ್ತಿಗೆಯಲ್ಲಿ ಸ್ನಾಯುಗಳು ಬಿಗಿಯಾಗುವುದು ಮುಂತಾದ ದೈಹಿಕ ಬದಲಾವಣೆಗಳು ಸುಳ್ಳುಗಾರರಲ್ಲಿ ಸಾಮಾನ್ಯ.
ಅಂದಹಾಗೆ, ಈ ಎಲ್ಲಾ ಚಿಹ್ನೆಗಳು ಕಾಣುತ್ತಿವೆ ಎಂದ ಮಾತ್ರಕ್ಕೆ ನಿಮ್ಮ ಸಂಗಾತಿ ಮೋಸ ಮಾಡುತ್ತಿದ್ದಾರೆ ಎಂದು ಖಚಿತವಾಗಿ ಹೇಳಲಾಗದು. ಈ ಬದಲಾವಣೆಗಳು ಸಂಭವಿಸಿದರೆ, ಅದರ ಬಗ್ಗೆ ಚರ್ಚಿಸಲು ಮನಶ್ಶಾಸ್ತ್ರಜ್ಞರನ್ನು ಸಂಪರ್ಕಿಸುವ ಸಮಯ ಎಂದು ಹೇಳಬಹುದು, (ಏಜೆನ್ಸೀಸ್).