ಒಂದೇ ಸಲಕ್ಕೆ ಎರಡು ಪುಸ್ತಕ ಓದುವ ಅಭ್ಯಾಸ ನಿಮಗಿದೆಯಾ? 
ಲೈಫ್‌ಸ್ಟೈಲ್

ಎರಡು ಪುಸ್ತಕ ಒಟ್ಟಿಗೆ ಓದೋ ಅಭ್ಯಾಸ ಒಳ್ಳೆಯದಾ? ಮನೋವಿಜ್ಞಾನ ಹೇಳೋದೇನು? | Book Reading

Book Reading: ಒಂದು ಪುಸ್ತಕ ಪೂರ್ತಿ ಓದುವ ಮೊದಲೇ ಇನ್ನೊಂದು ಪುಸ್ತಕ ಶುರು ಮಾಡುವ ಅಭ್ಯಾಸ ನಿಮಗಿದೆಯಾ? ಚಿಂತೆ ಬಿಡಿ, ಅದು ಯಾವುದೇ ತಪ್ಪಲ್ಲ. ಬದಲಾಗಿ, ಅದು ನಿಮ್ಮ ಮೆದುಳಿಗೆ ತುಂಬಾ ಒಳ್ಳೆಯದು ಅಂತ ಮನೋವಿಜ್ಞಾನ ಹೇಳುತ್ತೆ. ಒಂದೇ ಸಲಕ್ಕೆ ಎರಡು ಪುಸ್ತಕ ಓದೋದು ಈಗ ತುಂಬಾ ಕಾಮನ್ ಆಗಿದ್ದು, ಇದರ ಹಿಂದೆ ಹಲವು ಮನೋವೈಜ್ಞಾನಿಕ ಅಂಶಗಳಿವೆ.

ಮನುಷ್ಯನ ಮನಸ್ಥಿತಿ ದಿನವಿಡೀ ಒಂದೇ ರೀತಿ ಇರುವುದಿಲ್ಲ. ಬೆಳಗಿನ ಸಮಯದಲ್ಲಿ ಗಂಭೀರ ವಿಚಾರಗಳಿರುವ ಪುಸ್ತಕ ಓದಲು ಆಸಕ್ತಿಯಿದ್ದರೆ, ರಾತ್ರಿ ಮಲಗುವ ಮುನ್ನ ಮನಸ್ಸಿಗೆ ನೆಮ್ಮದಿ ನೀಡುವ ಕಾದಂಬರಿ ಓದಲು ಇಷ್ಟವಾಗಬಹುದು. ಹೀಗೆ ಆಯಾ ಸಮಯದ ಮನಸ್ಥಿತಿಗೆ ತಕ್ಕಂತೆ ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಓದುವ ಆಸಕ್ತಿ ನಿರಂತರವಾಗಿರುತ್ತದೆ.

ಸೃಜನಶೀಲತೆ ಹೆಚ್ಚಿಸುತ್ತದೆ

ಅಲ್ಲದೆ, ಒಂದೇ ಪುಸ್ತಕದ ಕಠಿಣ ವಿಷಯ ಅಥವಾ ನಿಧಾನಗತಿಯ ನಿರೂಪಣೆಯಿಂದ ಬೋರ್ ಆದಾಗ, ಇನ್ನೊಂದು ಪುಸ್ತಕಕ್ಕೆ ಬದಲಾಯಿಸುವುದರಿಂದ ಮೆದುಳಿಗೆ ಹೊಸತನ ಸಿಕ್ಕಿ ಓದುವುದನ್ನು ಪೂರ್ತಿ ನಿಲ್ಲಿಸುವುದು ತಪ್ಪುತ್ತದೆ. ಮುಖ್ಯವಾಗಿ, ಎರಡು ವಿಭಿನ್ನ ವಿಷಯಗಳನ್ನು ಒಟ್ಟಿಗೆ ಓದುವಾಗ ಮೆದುಳು ಅವುಗಳ ನಡುವೆ ಹೊಸ ಸಂಬಂಧಗಳನ್ನು ಹುಡುಕುತ್ತದೆ. ಇದು ಸೃಜನಶೀಲತೆ ಮತ್ತು ಆಳವಾದ ತಿಳುವಳಿಕೆಯನ್ನು ಹೆಚ್ಚಿಸುತ್ತದೆ.

ಯಾವಾಗ ಸಮಸ್ಯೆಯಾಗಬಹುದು?

ಒಟ್ಟಿಗೆ ಎರಡು ಪುಸ್ತಕ ಓದುವಾಗ ಕೆಲವೊಮ್ಮೆ ಅನಾನುಕೂಲಗಳೂ ಆಗಬಹುದು. ಎರಡೂ ಪುಸ್ತಕಗಳು ಒಂದೇ ರೀತಿಯ ಕಥಾಹಂದರ ಅಥವಾ ಒಂದೇ ವಿಷಯಕ್ಕೆ ಸಂಬಂಧಿಸಿದ್ದರೆ, ಪಾತ್ರಗಳು ಮತ್ತು ಮಾಹಿತಿಗಳು ಮನಸ್ಸಿನಲ್ಲಿ ಗೊಂದಲ ಉಂಟುಮಾಡಬಹುದು. ಪದೇ ಪದೇ ಪುಸ್ತಕ ಬದಲಾಯಿಸುವುದರಿಂದ ಒಂದು ಕಥೆಯ ಆಳಕ್ಕೆ ಇಳಿಯಲು ಸ್ವಲ್ಪ ಸಮಯ ಹಿಡಿಯಬಹುದು. ಜೊತೆಗೆ, ಹಲವು ಪುಸ್ತಕಗಳನ್ನು ಅರ್ಧಕ್ಕೆ ನಿಲ್ಲಿಸುವ ಅಭ್ಯಾಸವಿದ್ದರೆ ಅದು ಮನಸ್ಸಿನಲ್ಲಿ 'ಅಪೂರ್ಣತೆಯ ಭಾವನೆ' ಮೂಡಿಸಿ ಸಣ್ಣ ಮಟ್ಟದ ಒತ್ತಡಕ್ಕೆ ಕಾರಣವಾಗಬಹುದು.

ಎರಡು ಪುಸ್ತಕ ಹೇಗೆ ಓದುವುದು?

ಒಂದೇ ಸಮಯದಲ್ಲಿ ಎರಡು ಪುಸ್ತಕಗಳನ್ನು ಓದುವವರು ಒಂದು ಸರಳ ನಿಯಮ ಪಾಲಿಸುವುದು ಉತ್ತಮ. ಅದೇನೆಂದರೆ, ಎರಡೂ ಪುಸ್ತಕಗಳು ವಿಭಿನ್ನ ಪ್ರಕಾರಕ್ಕೆ ಸೇರಿರಲಿ. ಉದಾಹರಣೆಗೆ, ಒಂದು ಕಾದಂಬರಿಯಾದರೆ ಮತ್ತೊಂದು ಜೀವನಚರಿತ್ರೆ ಅಥವಾ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಪುಸ್ತಕವಾಗಿರಲಿ. ಹೀಗೆ ವಿಭಿನ್ನ ವಿಷಯಗಳನ್ನು ಆಯ್ಕೆ ಮಾಡಿಕೊಂಡರೆ ಗೊಂದಲ ಕಡಿಮೆಯಾಗುತ್ತದೆ ಮತ್ತು ಎರಡೂ ಪುಸ್ತಕಗಳ ಓದನ್ನು ಆಸಕ್ತಿಯಿಂದ ಮುಂದುವರಿಸಬಹುದು.