ಲೈಫ್‌ಸ್ಟೈಲ್

ನಿಮಗೆ ಗೊತ್ತಾ ನಿಮ್ಮ ನಿದ್ರೆಗೆ ಯಾರಾದರೂ ಭಂಗ ತಂದರೆ ನೀವು ಕೇಸ್​ ದಾಖಲಿಸಬಹುದು! ಇಲ್ಲಿದೆ ಮಾಹಿತಿ... Sleep

Sleep : ಒಬ್ಬ ವ್ಯಕ್ತಿಗೆ ನಿದ್ರೆ ಎಂಬುದು ತುಂಬಾನೇ ಮುಖ್ಯ. ನಿದ್ರೆ ಇಲ್ಲದೆ ಆರೋಗ್ಯವಾಗಿರಲು ಸಾಧ್ಯವೇ ಇಲ್ಲ. ಅಲ್ಲದೆ, ಮುಖದಲ್ಲಿ ಚೈತನ್ಯವೂ ಇರುವುದಿಲ್ಲ. ಮುಖ ಹೂವಿನಂತೆ ಬಾಡಿ ಹೋಗುತ್ತದೆ. ಅದೇ ರೀತಿ ನಮಗೆ ಸಾಕಷ್ಟು ನಿದ್ರೆ ಬಂದರೆ ದಿನವಿಡೀ ಸಕ್ರಿಯವಾಗಿ ಕೆಲಸ ಮಾಡಬಹುದು. ಮೆದುಳಿನ ಚಟುವಟಿಕೆ ಮತ್ತು ಮಾನಸಿಕ ಸ್ಥಿತಿ ಒಟ್ಟಾರೆ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಹೀಗಾಗಿ ಜೀವನದಲ್ಲಿ ನಿದ್ರೆ ಬಹಳ ಮುಖ್ಯ.

ನಿದ್ರೆ ಮಾಡುವಾಗಲೂ ನೆಮ್ಮದಿಯುತ ನಿದ್ರೆ ತುಂಬಾ ಮುಖ್ಯ. ಯಾವುದೇ ಕಾರಣಕ್ಕೂ ನಿದ್ರೆಗೆ ಭಂಗ ಉಂಟಾಗಬಾರದು. ಕೆಲವೊಮ್ಮೆ ನಮ್ಮ ನಿದ್ರೆಗೆ ಯಾರಿಂದಲಾದರೂ ಅಡಚಣೆ ಉಂಟಾಗುತ್ತದೆ. ಕೆಲವೊಮ್ಮೆ ನಮ್ಮ ಪಕ್ಕದ ಮನೆಯವರಿಂದ ಅಥವಾ ಎದರುಗಡೆ ಮನೆಯವರಿಂದ ನಿದ್ರೆಗೆ ಭಂಗ ಉಂಟಾಗಬಹುದು. ಈ ರೀತಿ ಒಮ್ಮೆಯಾದರೆ ಪರವಾಗಿಲ್ಲ, ಆದರೆ, ಪದೇಪದೆ ನಡೆದರೆ ಸಾಕಷ್ಟು ಹಿಂಸೆ ಅನುಭವಿಸಬೇಕಾಗುತ್ತದೆ. ನಿದ್ರೆ ಭಂಗ ಉಂಟಾದಾಗ ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ ಅಂತ ಸುಮ್ಮನಾಗಿಬಿಡುತ್ತೇವೆ. ಆದರೆ, ನಮ್ಮ ನಿದ್ರೆಗೆ ಭಂಗ ತರುವವರ ವಿರುದ್ಧವೂ ನಾವು ಪ್ರಕರಣ ದಾಖಲಿಸಬಹುದು ಅನ್ನೋದು ನಿಮಗೆ ತಿಳಿದಿದೆಯೇ?

ಹೌದು, ಭಾರತದಲ್ಲಿ ನಿದ್ರೆ ಮಾಡುವ ಹಕ್ಕನ್ನು ಮೂಲಭೂತ ಹಕ್ಕು ಎಂದು ಗುರುತಿಸಲಾಗಿದೆ. ಇದರರ್ಥ ಪ್ರತಿಯೊಬ್ಬ ನಾಗರಿಕನು ಭಾರತೀಯ ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಯಾವುದೇ ತೊಂದರೆಯಿಲ್ಲದೆ ಶಾಂತಿಯುತವಾಗಿ ನಿದ್ರಿಸುವ ಹಕ್ಕನ್ನು ಹೊಂದಿದ್ದಾನೆ. ಇದು 'ಜೀವನದ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ'ವನ್ನು ಖಾತರಿಪಡಿಸುತ್ತದೆ.

2012 ರಲ್ಲಿ, ದೆಹಲಿಯಲ್ಲಿ ಬಾಬಾ ರಾಮದೇವ್ ಅವರು ಸಮಾವೇಶ ನಡೆಸುವಾಗ ನಿದ್ರಿಸುತ್ತಿದ್ದ ಜನರ ಮೇಲೆ ಪೊಲೀಸರು ಕ್ರಮ ತೆಗೆದುಕೊಂಡಿದ್ದರು. ಇದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಭಾರತದ ಸುಪ್ರೀಂ ಕೋರ್ಟ್ ನಿದ್ರೆಯ ಮಹತ್ವವನ್ನು ಮೂಲಭೂತ ಹಕ್ಕಾಗಿ ಎತ್ತಿಹಿಡಿದಿದೆ. ಯಾರನ್ನಾದರೂ ನಿದ್ರೆಯಿಂದ ವಂಚಿತ ಅಥವಾ ಭಂಗಗೊಳಿಸುವುದು ಅವರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿತು.

ಮಾನವ ಅಸ್ತಿತ್ವ ಮತ್ತು ಉಳಿವಿಗೆ ಅಗತ್ಯವಾದ ಸೂಕ್ಷ್ಮ ಆರೋಗ್ಯ ಸಮತೋಲನವನ್ನು ಕಾಪಾಡಿಕೊಳ್ಳಲು ನಿದ್ರೆ ನಿರ್ಣಾಯಕವಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಆದ್ದರಿಂದ, ನಿದ್ರೆಯನ್ನು ಮೂಲಭೂತ ಮಾನವ ಅಗತ್ಯವೆಂದು ಪರಿಗಣಿಸಲಾಗುತ್ತದೆ.

ಇನ್ನು ಸೈಯದ್ ಮಕ್ಸೂದ್ ಅಲಿ ವರ್ಸಸ್ ಮಧ್ಯಪ್ರದೇಶ ರಾಜ್ಯ ಪ್ರಕರಣದಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಸಹ ಮೂಲಭೂತ ಹಕ್ಕಾಗಿ ನಿದ್ರೆಯ ಮಹತ್ವವನ್ನು ಎತ್ತಿ ತೋರಿಸಿದೆ. ಪ್ರತಿಯೊಬ್ಬ ನಾಗರಿಕನಿಗೆ ಉತ್ತಮ ವಾತಾವರಣದಲ್ಲಿ ಬದುಕುವ ಮತ್ತು ರಾತ್ರಿಯಲ್ಲಿ ಶಾಂತಿಯುತವಾಗಿ ನಿದ್ರಿಸುವ ಹಕ್ಕಿದೆ ಎಂದು ಅದು ಹೇಳಿದೆ.

ಯಾವುದೇ ನಾಗರಿಕನು ತನ್ನ ನಿದ್ರೆಯ ಹಕ್ಕು, ಶಾಂತಿಯುತ ಜೀವನ ಮತ್ತು ಆಲೋಚನೆಗಳಿಗೆ ಅಡ್ಡಿಪಡಿಸುವ ಶಬ್ದವನ್ನು ಸಹಿಸಿಕೊಳ್ಳುವಂತೆ ಒತ್ತಾಯಿಸಬಾರದು. ಇದು ನಿಯಮಗಳ ಉಲ್ಲಂಘನೆಯ ಅಡಿಯಲ್ಲಿ ಬರುತ್ತದೆ. ಈ ಹಕ್ಕನ್ನು ರಕ್ಷಿಸಲು, ಅಧಿಕಾರಿಗಳು ಮತ್ತು ವ್ಯಕ್ತಿಗಳು ಅಥವಾ ಯಾರೇ ಆಗಲಿ ಇತರರ ನಿದ್ರೆಗೆ ಭಂಗ ತರಬಾರದು. ಶಾಂತಿಯುತ ವಿಶ್ರಾಂತಿಯನ್ನು ಉತ್ತೇಜಿಸುವ ವಾತಾವರಣವನ್ನು ಸೃಷ್ಟಿಸುವುದು ಕೇವಲ ಸೌಕರ್ಯವಲ್ಲ, ಆದರೆ ಆರೋಗ್ಯಕರ ಮತ್ತು ಸಂತೋಷದ ಸಮಾಜಕ್ಕೆ ಕೊಡುಗೆ ನೀಡುವ ಮೂಲಭೂತ ಹಕ್ಕು ಎಂದು ಎಲ್ಲರೂ ತಿಳಿದುಕೊಳ್ಳಬೇಕು.

ಅಂದಹಾಗೆ, ನಿದ್ರೆಯ ಹಕ್ಕಿನ ಮಹತ್ವವನ್ನು ಒಟ್ಟಾರೆಯಾಗಿ ಗಮನಿಸುವುದಾದರೆ, ಇದು ಮಾನವನ ಆರೋಗ್ಯ ಮತ್ತು ಕ್ಷೇಮಕ್ಕೆ ಅತ್ಯಗತ್ಯವಾದ ಅಂಶವಾಗಿದೆ. ವಿಜ್ಞಾನಿಗಳ ಪ್ರಕಾರ, ನಿದ್ರೆಯ ಕೊರತೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳುಂಟಾಗಬಹುದು, ಉದಾಹರಣೆಗೆ ಜೊಲ್ಲಿನಲ್ಲಿ ಅಮೈಲೇಸ್ ಕಿಣ್ವದ ಪ್ರಮಾಣ ಹೆಚ್ಚಾಗುತ್ತದೆ. ಇದು ಒತ್ತಡ ಮತ್ತು ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದೆ. (ಏಜೆನ್ಸೀಸ್​)