ದಿನನಿತ್ಯ ಬಳಸಲ್ಪಡುವ ಹಸಿರು ಸೊಪ್ಪುಗಳಲ್ಲೊಂದು ಪುದಿನ. ಅಡುಗೆಯ ರುಚಿಯನ್ನು ಹೆಚ್ಚಿಸುವ ಇದು ಆರೋಗ್ಯದ ದೃಷ್ಟಿಯಿಂದ ಕೂಡ ತುಂಬ ಒಳ್ಳೆಯದು. ಪಲಾವ್, ಚಟ್ನಿ, ತಂಬುಳಿ ಮುಂತಾದ ಆಹಾರಪದಾರ್ಥಗಳಲ್ಲಿ ಪುದಿನ ಎಲೆಗಳನ್ನು ಬಳಸುತ್ತಾರೆ. ಮಾಂಸದ ಅಡುಗೆಗಳಲ್ಲೂ ಇದರ ಬಳಕೆಯಿದೆ.
ಪುದಿನ ಬಳಸಿ ಎಣ್ಣೆಯನ್ನು ತಯಾರಿಸುತ್ತಾರೆ. ಅನೇಕ ರೋಗಗಳ ನಿವಾರಣೆಗೆ ಸಹಕಾರಿಯಾದ ಪುದಿನ ಎಣ್ಣೆ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಸುಗಂಧಭರಿತ ಪುದಿನ ಸಸ್ಯವು ಸ್ವಾಭಾವಿಕವಾಗಿಯೇ ರೋಗಾಣುಗಳನ್ನು ಹೊಡೆದೋಡಿಸುವ ಗುಣವುಳ್ಳದ್ದು. ಸೋಪು, ಟೂತ್ ಪೇಸ್ಟ್ ಮತ್ತು ಮೌತ್ ವಾಷ್ಗಳ ತಯಾರಿಕೆಯಲ್ಲಿ ಕೂಡ ಇದನ್ನು ಉಪಯೋಗಿಸಲಾಗುತ್ತದೆ.
- ಪುದಿನ ಎಲೆಯ ಕಷಾಯವನ್ನು ದಿನಕ್ಕೆ ಎರಡು ಬಾರಿ ಸೇವಿಸುವುದರಿಂದ ನೆಗಡಿ, ಕೆಮ್ಮು ಹತೋಟಿಗೆ ಬರುತ್ತದೆ.
- ಪುದಿನ ಸೊಪ್ಪು ಮೆಂಥಾಲ್ ಎಂಬ ರಾಸಾಯನಿಕವನ್ನು ಹೊಂದಿರುವುದರಿಂದ ಅದರ ಎಲೆಯ ಕಷಾಯಸೇವನೆಯು ಉಸಿರಾಟದ ತೊಂದರೆಯನ್ನು ದೂರಮಾಡುತ್ತದೆ.
- ಕುದಿಸಿದ ಬಿಸಿನೀರಿಗೆ ಪುದಿನ ಎಲೆಗಳನ್ನು ಹಾಕಿ ಅದರ ಹಬೆಯನ್ನು ತೆಗೆದುಕೊಳ್ಳುವುದರಿಂದ ಮೂಗು ಕಟ್ಟಿಕೊಂಡಿರುವುದು ಸರಿಯಾಗಿ ಉಸಿರಾಟ ಸರಾಗವಾಗುತ್ತದೆ.
- ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುವ ಸಾಮರ್ಥ್ಯವಿರುವುದರಿಂದಲೇ ಇದನ್ನು ಟೂತ್ ಪೇಸ್ಟ್ ಗಳಲ್ಲಿ ಬಳಸಲಾಗುತ್ತದೆ. ನಿತ್ಯ ಕೆಲವು ಪುದಿನ ಎಲೆಗಳನ್ನು ಜಗಿಯುವುದರಿಂದ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಬಹುದು.
- ಪುದಿನ ಎಲೆಯ ರಸಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಅಜೀರ್ಣದ ಸಮಸ್ಯೆ ನಿವಾರಣೆಯಾಗಿ ಜೀರ್ಣಕ್ರಿಯೆ ಹೆಚ್ಚುತ್ತದೆ.
- ಪುದಿನ ಎಲೆಯ ಪರಿಮಳವನ್ನು ಆಘ್ರಾಣಿಸುವುದರಿಂದ ವಾಕರಿಕೆಯ ಲಕ್ಷಣಗಳು ಕಡಿಮೆಯಾಗುತ್ತವೆ. ್ಣಯತವಾಗಿ ಪುದಿನ ಎಲೆಗಳ ಕಷಾಯ ಕುಡಿಯುವವರಿಂದ ಕರುಳಿನ ಸಮಸ್ಯೆ ಬರದಂತೆ ತಡೆಯಬಹುದು.‘
- ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ಅಂಶವನ್ನು ಪುದಿನ ಎಲೆಗಳು ಹೊಂದಿದ್ದು, ಇದರ ಸೇವನೆ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.
- ಮುಖಕ್ಕೆ ಪುದಿನ ಎಲೆಗಳ ಪೇಸ್ಟ್ ಲೇಪಿಸುವುದರಿಂದ ಮೊಡವೆ ನಿವಾರಣೆಯಾಗುತ್ತದೆ.
- ಪುದಿನ ಎಲೆಗಳ ರಸ ಹಚ್ಚುವುದರಿಂದ ಅಲರ್ಜಿಯಿಂದ ಚರ್ಮದ ಮೇಲೆ ಕಾಣಿಸಿಕೊಳ್ಳುವ ಸಣ್ಣ ಗುಳ್ಳೆಗಳನ್ನು ಹೋಗಲಾಡಿಸಬಹುದು.