ಲೈಫ್‌ಸ್ಟೈಲ್

ನಿದ್ದೆ ಮಾಡೋವಾಗ ಗೊರಕೆ ನಿಲ್ಲಿಸಲು ಇಲ್ಲಿದೆ ಸರಳ ಉಪಾಯ..!

Webdesk - Athul Damale

ನವದೆಹಲಿ: ರಾತ್ರಿ ನಿದ್ದೆ ಮಾಡುವಾಗ ನೀವು ಪಕ್ಕದಲ್ಲಿ ಇದ್ದವರಿಗೆ ಗೊರಕೆ ಹೊಡೆಯುತ್ತಾ ಒಬ್ಬರಾ? ಹಾಗಾದರೆ ನೀವು ಇದನ್ನು ಓದಲೇಬೇಕು. ಏಕೆಂದರೆ ಗೊರಕೆ ಮತ್ತೆ ಬಾರದ ಹಾಗೆ ಮಾಡಿ ಬಿಡಬಹುದು!

ಗೊರಕೆ ಎಂದರೆ ಏನು? ಯಾಕೆ ಬರುತ್ತೆ?
ಮೊದಲಿಗೆ ನಾವು ಗೊರಕೆ ಹೊಡೆಯುವಾಗ ದೇಹದಲ್ಲಿ ಏನಾಗುತ್ತಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಸಾಧಾರಣವಾಗಿ ನಾವು ಮೂಗಲ್ಲಿ ಉಸಿರಾಡುವುದು. ಆದರೆ ಗೊರಕೆ ಹೊಡೆಯುವಾಗ, ಬಾಯಿಯ ಮೇಲಿನ ಭಾಗ, ಬಾಯೊಳಗೆ ಹಿಂದಕ್ಕೆ ಇರುವ ಟಾನ್ಸಿಲ್​ಗಳು ಕೆಳಕ್ಕೆ ಇಳಿದು ಉಸಿರನ್ನು ತಡೆ ಹಿಡಿಯುತ್ತವೆ. ಆಗ ಬಾಯಿಂದ ಗೊರಕೆ ಸದ್ದು ಬರುತ್ತದೆ.

ಗೊರಕೆ ಹಿಂದೆ ಯಾರ ಕೈವಾಡ ಇರುತ್ತೆ?

ಬೊಜ್ಜು ಅಥವಾ ಅತೀತೂಕ:

ಶರೀರದಲ್ಲಿ ಬೊಜ್ಜು ಹೆಚ್ಚಾದಾಗ ಅಥವಾ ಶರೀರದ ತೂಕ ಹೆಚ್ಚಾದಾಗ, ನಮ್ಮ ಭಾರಕ್ಕೇ ಬಾಯಿಯ ಮೇಲ್ಭಾಗ ಕೆಳಕ್ಕೆ ಇಳಿದು ಗೊರಕೆಗೆ ಕಾರಣವಾಗಬಹುದು. ಬಾಡಿ ಮಾಸ್​ ಇಂಡೆಕ್ಸ್​ ಎಂದರೆ ಎತ್ತರ ಹಾಗೂ ತೂಕದ ಒಂದು ರೇಶ್ಯೋ. ಇದೊಂದು ಆರೋಗ್ಯವನ್ನು ಮಾಪನ ಮಾಡುವ ವಿಧಾನ. ಇದರಲ್ಲಿ ಶರೀರ 'ಒಬೆಸಿಟಿ' ಹಂತಕ್ಕೆ ತಲುಪಿದವರಲ್ಲಿ ಹೆಚ್ಚಿನ ಸಂಖ್ಯೆಯ ಜನರು ಗೊರಕೆ ಹೊಡೆಯುತ್ತಾರೆ. ಒಟ್ಟು ಗೊರಕೆ ಹೊಡೆಯುವವರಲ್ಲಿ ಶೇಕಡ 71ರಷ್ಟು ಜನ ಅತಿ ತೂಕದಿಂದ ಬಳಲುವವರೇ.

ಮದ್ಯಪಾನ ಹಾಗೂ ಕೆಲವು ಔಷಧಿಗಳು:

ಮದ್ಯಪಾನಿಗಳು ಮತ್ತು ಕೆಲವು ರೀತಿಯ ಔಷಧಿಗಳನ್ನು ಸೇವಿಸುವವರಲ್ಲಿ ಗೊರಕೆ ಕಾಣಬಹುದು. ಆಂಟಿಹಿಸ್ಟಮೈನ್‌ಗಳು, ಆ್ಯಂಟಿ ಡಿಪ್ರೆಸೆಂಟ್​ಗಳಂತಹ ಕೆಲವು ನಿದ್ರಾಹೀನತೆ ಉಂಟುಮಾಡುವ ಔಷಧಗಳು ಗೊರಕೆಗೆ ಕಾರಣವಾಗಬಹುದು.

ಈ ಔಷಧಗಳು ನಿಮ್ಮ ಸ್ನಾಯುಗಳನ್ನು ಹೆಚ್ಚು ರಿಲ್ಯಾಕ್ಸ್​ ಮಾಡಬಹುದು. ಇದರಿಂದ ಉಸಿರಾಟಕ್ಕೆ ಸಂಬಂಧಪಟ್ಟ ಸ್ನಾಯುಗಳೂ ರಿಲ್ಯಾಕ್ಸ್​ ಆಗಿ ಗೊರಕೆಗೆ ಕಾರಣವಾಗಬಹುದು.

ಶರೀರದಲ್ಲೇ ಇರುವ ಸಮಸ್ಯೆಗಳು:
ನೀಮ್ಮ ಬಾಯಲ್ಲಿ ದೊಡ್ಡ ಟಾನ್ಸಿಲ್‌ಗಳಿದ್ದರೆ, ಸಣ್ಣ ದವಡೆ, ಮೂಗಿನ ಹೊಳ್ಳೆಗಳಲ್ಲಿ ಏನಾದರೂ ಸಮಸ್ಯೆ ಇದ್ದರೆ, ಅವು ನಿಮ್ಮ ಉಸಿರಾಟಕ್ಕೆ ತೊಂದರೆ ನೀಡಬಹುದು. ಇದರಿಂದಾಗಿಯೂ ಸಮಸ್ಯೆಗಳು ಉಂಟಾಗುತ್ತವೆ.

ಶೀತ ಅಥವಾ ಅಲರ್ಜಿಗಳು
ಶೀತ ಅಥವಾ ಅಲರ್ಜಿಯ ಕಾರಣದಿಂದಾಗಿ ನಿಮ್ಮ ಮೂಗು ಬ್ಲಾಕ್​ ಆಗಿದ್ದರೆ ನೀವು ಹೆಚ್ಚು ಗೊರಕೆ ಹೊಡೆಯುತ್ತೀರಿ. ಅನಾರೋಗ್ಯದಿಂದ ಬಳಲುತ್ತಿರುವಾಗ, ಬಾಯಿಯ ಮೂಲಕ ಹೆಚ್ಚು ಉಸಿರಾಡಲು ಜನ ಇಷ್ಟಪಡುತ್ತಾರೆ. ಇದರಿಂದಾಗಿಯೂ ಗೊರಕೆ ಉಂಟಾಗುತ್ತೆ.

ಸ್ಲೀಪ್ ಅಪ್ನಿಯಾ
ಸ್ಲೀಪ್ ಅಪ್ನಿಯಾ, ನಿದ್ದೆಗೆ ಸಂಬಂಧಿಸಿದ ಉಸಿರಾಟದ ಸಮಸ್ಯೆಯಾಗಿದ್ದು, ನೀವು ಮಲಗಿರುವಾಗ ನಿಮ್ಮ ಗಂಟಲಿನ ಸ್ನಾಯುಗಳು ವಿಶ್ರಾಂತಿ ಪಡೆದು ನಿಮ್ಮ ಉಸಿರಾಟವನ್ನು ನಿರ್ಬಂಧಿಸುತ್ತವೆ. ಇದರಿಂದಾಗಿ ರಾತ್ರಿ ನಿದ್ದೆ ಮಾಡುವಾಗ ಸ್ವಲ್ಪ ಸಮಯದವರೆಗೆ ಉಸಿರಾಟ ನಿಂತು ಹೋಗುತ್ತದೆ.

ಪರಿಹಾರ ಏನು?
ಕೆಲವು ವ್ಯಾಯಾಮಗಳ ಹೊರತಾಗಿ ಗೊರಕೆಯನ್ನು ನಿವಾರಿಸಲು ನೀವು ತೆಗೆದುಕೊಳ್ಳಬಹುದಾದ ಕೆಲವು ಸಾಂಪ್ರದಾಯಿಕ ವಿಧಾನಗಳಿವೆ. ನಿಮ್ಮ ಗೊರಕೆಯ ಕಾರಣ ಏನು ಎಂದು ಗೊತ್ತಾದ ಮೇಲೆ ಪರಿಹಾರದ ಕಡೆಗೆ ಗಮನಿಸಬಹುದು.

ಮೊದಲನೆಯದಾಗಿ ಬೊಜ್ಜಿನ ಸಮಸ್ಯೆಯಿಂದ ಬಳಲುವವರು ತೂಕವನ್ನು ಕಳೆದುಕೊಳ್ಳಲೇ ಬೇಕು. ಅದಲ್ಲದೇ ರಾತ್ರಿ ಮಲಗುವ ಮುಂಚೆ ಮದ್ಯಪಾನ ಮಾಡಬಾರು. ಮದ್ಯಪಾನ ವಾಸ್ತವವಾಗಿ ನಿದ್ರೆಗೆ ಅಡ್ಡಿಪಡಿಸುತ್ತದೆ. ನಿಮ್ಮ ತಲೆಯನ್ನು ಹೆಚ್ಚು ಎತ್ತರದಲ್ಲಿ ಇರಿಸಿ ಮಲಗಬೇಕು. ಇದರಿಂದ ನಿಮ್ಮ ಗಂಟಲಿನ ಹಿಂಭಾಗದಲ್ಲಿರುವ ಸ್ಯಾಯುಗಳು ಕುಸಿಯುವುದಿಲ್ಲ.

ಔಷಧಗಳಿಂದ ಸಮಸ್ಯೆ ಉಂಟಾಗುತ್ತಿದೆ ಎಂದಾದರೆ ನೀವು ವೈದ್ಯರನ್ನು ಭೇಟಿ ಮಾಡಬೇಕು. ಅವರ ಸಲಹೆ ಮೇರೆಗೆ ಔಷಧ ತೆಗೆದುಕೊಳ್ಳುವ ಸಮಯವನ್ನು ಬದಲಾಯಿಸುವುದು ಮುಂತಾದವುಗಳನ್ನು ಮಾಡಬಹುದು.

ಶಸ್ತ್ರಚಿಕಿತ್ಸೆ: ಟಾನ್ಸಿಲ್ ತೆಗೆಯುವಿಕೆ (ಟಾನ್ಸಿಲೆಕ್ಟಮಿ), ಅಡೆನಾಯ್ಡ್ ತೆಗೆಯುವಿಕೆ (ಅಡೆನೊಡೆಕ್ಟಮಿ), ಅಂಗುಳಿನ ಶಸ್ತ್ರಚಿಕಿತ್ಸೆ ಮತ್ತು ವಿಚಲನಗೊಂಡ ಸೆಪ್ಟಮ್ ಅನ್ನು ಸರಿಪಡಿಸುವುದು ಎಲ್ಲವೂ ಗೊರಕೆ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಈ ವಿಧಾನಕ್ಕೆ ಮುಂದಾಗುವ ಮುನ್ನ ವೈದ್ಯರನ್ನು ಭೇಟಿ ಮಾಡಲೇ ಬೇಕು.

ಮಾರುಕಟ್ಟೆಯಲ್ಲಿ ಗೊರಕೆ ನಿಯಂತ್ರಣಕ್ಕಾಗಿ ಕೆಲವು ಸಾಧನಗಳೂ ಸಿಗುತ್ತವೆ. ಇವನ್ನು ಉಪಯೋಗಿಸಬಹುದು. ಆದರೆ ನೈಸರ್ಗಿಕವಾಗಿ ಗೊರಕೆಯನ್ನು ನಿಯಂತ್ರಿಸಿದರೆ ಉತ್ತಮ. ಉಪಕರಣದ ಹಿಂದೆ ಹೋದರೆ ಮೂಲ ಸಮಸ್ಯೆ ಹಾಗೆಯೇ ಉಳಿದುಕೊಳ್ಳುವ ಸಾಧ್ಯತೆ ಇರುತ್ತದೆ. (ಏಜೆನ್ಸೀಸ್​)