ಮೊದಲನೆಯದಾಗಿ ಬೇಕಾಗುವ ಸಾಮಗ್ರಿಗಳು ಮತ್ತು ಅವುಗಳನ್ನು ಪಡೆಯುವ ವಿಧಾನವನ್ನು ನೋಡೋಣ. ಗಾಣದಲ್ಲಿ ತಯಾರಿಸಿದ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆ 250 ಮಿಲೀ, ಭೃಂಗರಾಜದ ರಸ ಅಥವಾ ಕಷಾಯ 250 ಮಿಲೀ, ನೆಲ್ಲಿಕಾಯಿ ರಸ ಅಥವಾ ಕಷಾಯ 250 ಮಿಲೀ, ತೆಂಗಿನ ಕಾಯಿಯ ಹಾಲು 250 ಮಿಲೀ, ಆಕಳ ಹಾಲು 750 ಮಿಲೀ, ಕರಿಬೇವಿನ ಜ್ಯೂಸ್ 250 ಮಿಲೀ, ಜ್ಯೇಷ್ಠ ಮಧುವಿನ ತುಂಡುಗಳು 60 ಗ್ರಾಂ, ಮೆಂತೆ ಸುಮಾರು 2 ಚಮಚ. ಇವಿಷ್ಟು ಸಾಮಗ್ರಿಗಳನ್ನು ಸೇರಿಸಿ ಎಣ್ಣೆಯನ್ನು ತಯಾರಿಸಬೇಕು.
ತಯಾರಿಸುವ ವಿಧಾನ: ಲಭ್ಯವಿದ್ದರೆ ನೆಲ್ಲಿಕಾಯಿ, ಭೃಂಗರಾಜ ಮುಂತಾದವುಗಳನ್ನು ಹಸಿಯಾಗಿರುವಾಗ ತಂದು ಅದನ್ನು ರುಬ್ಬಿ ರಸ ತೆಗೆದುಕೊಳ್ಳಬೇಕು. ಇಲ್ಲದೇ ಹೋದರೆ 60 ಗ್ರಾಂ ಭೃಂಗರಾಜವನ್ನು ಗ್ರಂಧಿಗೆ ಅಂಗಡಿಯಿಂದ ತಂದು ಅದಕ್ಕೆ ಒಂದು ಲೀಟರ್ ನೀರು ಹಾಕಿ ಸಣ್ಣ ಉರಿಯಲ್ಲಿ ಕುದಿಸಿ 250 ಮಿಲೀಗೆ ಬತ್ತಿಸಿ ಸೋಸಿ ಇಟ್ಟುಕೊಳ್ಳಬೇಕು. ಇದೇ ರೀತಿ ನೆಲ್ಲಿಕಾಯಿಯನ್ನು ಕೂಡ ಕುದಿಸಿ 250 ಮಿಲೀಗೆ ಬತ್ತಿಸಿ ಸೋಸಿ ಇಟ್ಟುಕೊಳ್ಳಬೇಕು. ಈಗ ಕೊಬ್ಬರಿ ಎಣ್ಣೆ, ಭೃಂಗರಾಜದ ಕಷಾಯ, ನೆಲ್ಲಿಕಾಯಿಯ ಕಷಾಯ, ತೆಂಗಿನಹಾಲು, ಆಕಳ ಹಾಲು, ಕರಿಬೇವಿನ ಜ್ಯೂಸ್, ಜ್ಯೇಷ್ಠ ಮಧು ಮತ್ತು ಮೆಂತೆಗಳನ್ನು ಒಟ್ಟಿಗೆ ಪಾತ್ರೆಯಲ್ಲಿ ಹಾಕಿ ಸಣ್ಣ ಉರಿಯಲ್ಲಿ ಕಾಯಿಸುತ್ತಾ ಇರಬೇಕು. ಹೀಗೆ ಕಾಯಿಸಿ ಕೇವಲ ಎಣ್ಣೆ ಮಾತ್ರ ಉಳಿಯುವವರೆಗೆ ಮುಂದುವರಿಸಬೇಕು. ಒಂದು ದಿನಕ್ಕೆ ಒಂದೆರಡು ತಾಸು ಮಾತ್ರ ಕಾಯಿಸಿ ಹಾಗೇ ಇಟ್ಟು ಮತ್ತೆ ಮರುದಿನ ಅಥವಾ 2-3 ದಿನಗಳ ಕಾಲ ಅಷ್ಟಷ್ಟೇ ಹೊತ್ತು ಕಾಯಿಸುತ್ತಾ ಹೋಗಬಹುದು.
ಒಮ್ಮೆ ಪ್ರಾರಂಭಿಸಿದ ಮೇಲೆ ಅದನ್ನು ಮುಗಿಸಿಯೇ ಬೆಂಕಿಯಿಂದ ಇಳಿಸಬೇಕೆಂಬ ನಿಯಮವಿಲ್ಲ. ಎಣ್ಣೆ ಸರಿಯಾಗಿ ತಯಾರಾಯಿತು ಎಂದು ತಿಳಿದುಕೊಳ್ಳಲು ಕೆಲವು ವಿಧಾನಗಳಿವೆ. ಕಾಯಿಸುತ್ತಾ, ಕಾಯಿಸುತ್ತಾ ನೀರಿನ ಅಂಶ ಆವಿಯಾಗಿ ಕೆಳಗಡೆ ಇರುವಂತಹ ಜ್ಯೇಷ್ಠ ಮಧು, ಮೆಂತೆ ಅಥವಾ ಉಳಿದ ಜ್ಯೂಸ್ಗಳ ಕಲ್ಕ ಬತ್ತಿ ಮಾಡುವಷ್ಟರ ಮಟ್ಟಿಗೆ ಒಣಗುತ್ತವೆ. ಆ ಬತ್ತಿಯನ್ನು ತೆಗೆದು ಬೆಂಕಿಯ ಮೇಲೆ ಹಾಕಿದಾಗ ಅದು ನೀರಿದ್ದರೆ ಚಟಪಟ ಎಂದು ಶಬ್ಧ ಮಾಡುತ್ತದೆ. ಆ ಶಬ್ಧವಾಗುತ್ತಿಲ್ಲವೆಂದರೆ ನೀರೆಲ್ಲಾ ಆವಿಯಾಗಿದೆ ಎಂದರ್ಥ. ನೀರು ಸಂಪೂರ್ಣವಾಗಿ ಆವಿಯಾಗದೇ ಉಳಿದರೆ ಆ ಎಣ್ಣೆ ಕೆಲವೇ ದಿನಗಳಲ್ಲಿ ಹಾಳಾಗಿ ಹೋಗುತ್ತದೆ. ನೀರು ಆವಿಯಾದ ನಂತರವೂ ಕಾಯಿಸಿದರೆ ಅಂತಹ ಎಣ್ಣೆಯನ್ನು ತಲೆಗೆ ಹಚ್ಚುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಹಾಗಾಗಿ ಇದನ್ನು ಸೂಕ್ಷ್ಮವಾಗಿ ಗಮನಿಸಿ ತಯಾರಿಸಿಕೊಳ್ಳಬೇಕು. ಸಾಮಾನ್ಯವಾಗಿ ಅಡುಗೆ ಮಾಡಿ ರೂಢಿಯಿರುವ ತಾಯಂದಿರಿಗೆ ತಯಾರಿಸುವಾಗ ಅಷ್ಟು ಕಷ್ಟವಾಗಲಿಕ್ಕಿಲ್ಲ. ಒಮ್ಮೆ ಗೊಂದಲವಾದರೂ ಎರಡನೇ ಬಾರಿ ತಯಾರಿಸುವಾಗ ಸ್ವಷ್ಟತೆ ಬರುತ್ತದೆ.
ತಯಾರಾದ ಎಣ್ಣೆಯನ್ನು ಸೋಸಿಕೊಂಡು ಒಂದು ಗಾಜಿನ ಬಾಟಲಿಯಲ್ಲಿ ಹಾಕಿಟ್ಟುಕೊಳ್ಳಬೇಕು. ಕೊಬ್ಬರಿ ಎಣ್ಣೆಯನ್ನು ಬಳಸಿದ್ದರೆ ತಂಪಿನ ಕಾಲದಲ್ಲಿ ಗಟ್ಟಿಯಾಗಬಹುದು. ಹಾಗಾದರೆ ಬೆಚ್ಚಗಿನ ನೀರಿನಲ್ಲಿ ಬಾಟಲಿಯನ್ನಿಟ್ಟು ಕರಗಿಸಿಕೊಳ್ಳಬೇಕಾಗುತ್ತದೆ. ಈ ಎಣ್ಣೆಯನ್ನು ವಾರದಲ್ಲಿ ಕನಿಷ್ಠ ಎರಡು ದಿನ ( ಸಾಧ್ಯವಾದರೆ ಪ್ರತಿದಿನ) ರಾತ್ರಿ ಕೂದಲಿನ ಬುಡಕ್ಕೆ ಹಚ್ಚಿ, ಬೆಳಿಗ್ಗೆ ಸ್ನಾನ ಮಾಡಿದರೆ ಫಲಿತಾಂಶವನ್ನು 2-3 ತಿಂಗಳಿನಲ್ಲಿ ಕಾಣಲು ಸಾಧ್ಯ.