ಲೈಫ್‌ಸ್ಟೈಲ್

ಮೂತ್ರ ಸಲೀಸಾಗಲು ನೀರೆಷ್ಟು ಕುಡಿಯಬೇಕು? ಇಲ್ಲಿದೆ ಮಾಹಿತಿ

ಜಗತ್ತು ಆರೋಗ್ಯದಿಂದ ಇರಬೇಕಾದರೆ ಪರಿಸರ ಶುದ್ಧತೆ, ಸ್ವಚ್ಛ ದೇಶವಷ್ಟೇ ಇದ್ದರೆ ಸಾಲದು. ಸ್ವಚ್ಛ ದೇಹವೂ ಇರಬೇಕು. ನಮ್ಮ ದೇಹದ ನಿರಂತರ ಆಂತರಿಕ ಕ್ರಿಯಾಚಟುವಟಿಕೆಗಳಿಂದ ಮಲ, ಮೂತ್ರ, ಬೆವರು ಉತ್ಪತ್ತಿಯಾಗುತ್ತವೆ. ದೇಹದ ಕಲ್ಮಶಗಳೆಲ್ಲ ಇವುಗಳೊಡನೆ ಹೊರಸಾಗಿ ಶರೀರವು ಶುದ್ಧವಾಗುತ್ತದೆ. ಕೆಲವರ ದೇಹವು ಅತೀವವಾದ ದುರ್ಗಂಧದಿಂದಾಗಿ ಅಸಹನೀಯವಾಗುತ್ತದೆ. ನೀರು ಕಡಿಮೆ ಕುಡಿದರೆ ಬೆವರು ಸಾಂದ್ರಿತವಾಗಿ ಅದರಲ್ಲಿರುವ ಮಲಿನ ಅಂಶಗಳು ದುರ್ವಾಸನೆಯನ್ನು ಹೊಂದುತ್ತದೆ.

ಯಥೇಚ್ಛವಾಗಿ ನೀರು ಕುಡಿಯುವುದರಿಂದ ಬಹುತೇಕ ಸಂದರ್ಭಗಳಲ್ಲಿ ಸಮಸ್ಯೆ ಪರಿಹಾರವಾಗುತ್ತದೆ. ಹಾಗಿದ್ದರೆ ಒಬ್ಬ ಆರೋಗ್ಯವಂತ ವ್ಯಕ್ತಿ ದಿನಕ್ಕೆ ನೀರೆಷ್ಟು ಕುಡಿಯಬೇಕು ಎಂಬ ಪ್ರಶ್ನೆ ಏಳುತ್ತದೆ. ದೇಹದ ತೂಕಕ್ಕೆ ಸರಿಯಾಗಿ ಕುಡಿಯುವ ನೀರಿನ ಪ್ರಮಾಣ ನಿರ್ಧರಿಸಬೇಕೆಂದು ಆಧುನಿಕ ವೈದ್ಯಜಗತ್ತು ಹೇಳುತ್ತದೆ. ಆದರೆ ಆಯುರ್ವೆದ ಹೇಳುವುದೇ ಬೇರೆ! ಪ್ರಮುಖವಾಗಿ ನಮ್ಮ ಶರೀರದ ಪ್ರಕೃತಿಯನ್ನು ಅವಲಂಬಿಸಿ ಮೂತ್ರದ ಪ್ರಮಾಣ ನಿರ್ಧರಿತವಾಗುತ್ತದೆ. ವಾತ ಪ್ರಕೃತಿಯವರು ಅತಿಕಡಿಮೆ, ಪಿತ್ತದೇಹಿಗಳು ಮಧ್ಯಮ ಪ್ರಮಾಣದಲ್ಲಿ, ಕಫ ಶರೀರಿಗಳು ಅತ್ಯಧಿಕ ಪ್ರಮಾಣದಲ್ಲಿ ಮೂತ್ರ ಮಾಡುತ್ತಾರೆ. ಇದಲ್ಲದೆ ವಾಸಿಸುವ ಪ್ರದೇಶವೂ ಪ್ರಭಾವ ಬೀರುತ್ತದೆ. ಋತುಕಾಲದ ಹವಾಮಾನಕ್ಕೆ ಅನುಗುಣವಾಗಿಯೂ ವ್ಯತ್ಯಾಸವುಂಟಾಗುತ್ತದೆ.

ಬೆಳಗ್ಗೆ ಹೆಚ್ಚು, ಮಧ್ಯಾಹ್ನ ಮಧ್ಯಮ, ಸಂಜೆಯ ಸಮಯ ದಲ್ಲಿ ಕಡಿಮೆ ಪ್ರಮಾಣದಲ್ಲಿ ಮೂತ್ರ ವಿಸರ್ಜನೆಯಾಗುತ್ತದೆ. ವಯಸ್ಸಿಗನುಗುಣ ವಾಗಿಯೂ ಬಾಲ್ಯದಲ್ಲಿ ಹೆಚ್ಚು, ಮಧ್ಯ ವಯಸ್ಸಿನಲ್ಲಿ ಮಧ್ಯಮ ಪ್ರಮಾಣ, ವೃದ್ಧಾಪ್ಯದಲ್ಲಿ ಹೆಚ್ಚುಬಾರಿ ಮೂತ್ರ ಪ್ರವೃತ್ತಿ ಬಂದರೂ ಪ್ರಮಾಣದಲ್ಲಿ ಮೂತ್ರವು ಕಡಿಮೆ ಇರುತ್ತದೆ. ಸೇವಿಸುವ ಆಹಾರಕ್ಕ ನುಗುಣವಾಗಿ ಹಣ್ಣುಗಳು ಹಾಗೂ ದ್ರವಾಹಾರಗಳಿಂದ ಹೆಚ್ಚು, ಸೊಪ್ಪು ತರಕಾರಿಗಳು ಹಾಗೂ ಘನಾಹಾರ ಸೇವಿಸಿದ್ದರೆ ಕಡಿಮೆ ಪ್ರಮಾಣದಲ್ಲಿ ಮೂತ್ರ ಪ್ರವೃತ್ತಿಯಾಗುವುದು. ಆಹಾರಗಳ ಗುಣವಿಶೇಷಗಳನ್ನು ಹೊಂದಿಕೊಂಡು ಕಬ್ಬಿನಹಾಲು, ಎಳನೀರು, ಕಲ್ಲಂಗಡಿಹಣ್ಣು, ಬೂದುಗುಂಬಳಕಾಯಿಯಿಂದ ಅಧಿಕ ಮೂತ್ರ ಪ್ರವಾಹ, ಅತ್ತಿಹಣ್ಣು, ನುಗ್ಗೆಸೊಪ್ಪು, ನೇರಳೆಹಣ್ಣು, ಮಾವಿನಹಣ್ಣು ಸೇವಿಸಿದಾಗ ಮೂತ್ರದ ಪ್ರಮಾಣ ಕಡಿಮೆಯಾಗುತ್ತದೆ.

ವ್ಯಕ್ತಿಯ ಮಾನಸಿಕ ಸ್ಥಿತಿಗತಿಯನ್ನು ಹೊಂದಿಕೊಂಡು ಒತ್ತಡ, ಆತಂಕಗಳಲ್ಲಿದ್ದಾಗ ಪದೇಪದೇ ಮೂತ್ರ ವಿಸರ್ಜಿಸಬೇಕಾ ಗಬಹುದು. ಸಂತೋಷ, ಸಂಭ್ರಮದಲ್ಲಿದ್ದಾಗ ಮೂತ್ರ ವಿಸರ್ಜಿ ಸುವುದನ್ನೇ ಮರೆಯುವುದಿದೆ! ಶಾರೀರಿಕ ಶ್ರಮ ಹೆಚ್ಚಾಗಿ ಅಧಿಕ ಬೆವರು ಸುರಿದಾಗ ಮೂತ್ರ ಪ್ರಮಾಣ ಕಡಿಮೆಯಾಗುತ್ತದೆ. ಹವಾನಿಯಂತ್ರಿತ ಕೊಠಡಿಯಲ್ಲಿ ದಿನವಿಡೀ ಕುಳಿತು ಕೆಲಸ ಮಾಡುವವರಿಗೆ ಮೂತ್ರ ಪ್ರವೃತ್ತಿ, ಪ್ರಮಾಣ ಎರಡೂ ಹೆಚ್ಚಾಗುತ್ತದೆ. ವ್ಯಕ್ತಿಯು ರೋಗಗಳಿಂದ ಬಳಲುತ್ತಿದ್ದಾಗ ಆ ರೋಗದ ಲಕ್ಷಣವಾಗಿಯೂ ಮೂತ್ರದ ಪ್ರಮಾಣದಲ್ಲಿ ಏರುಪೇರುಗಳಾಗುತ್ತವೆ.

ಹೀಗಾಗಿ ಸ್ವಸ್ಥರಾಗಿ ಬದುಕಬೇಕಾದರೆ ದಿನವೊಂದಕ್ಕೆ ನೀರೆಷ್ಟು ಕುಡಿಯಬೇಕು ಎಂಬುದು ಯಕ್ಷಪ್ರಶ್ನೆಯಂತೆ ಕಾಡುತ್ತದೆ. ಏಕೆಂದರೆ ಜೀವನದಲ್ಲಿ ಯಾವುದೇ ದೊಡ್ಡ ರೋಗಗಳಿಂದ ಬಳಲದ ನೂರುವರ್ಷ ಪ್ರಾಯದ ವ್ಯಕ್ತಿಯು ಕೇವಲ ಊಟದ ಜೊತೆ ಮಾತ್ರ ನೀರು ಕುಡಿಯುವವರಿರುತ್ತಾರೆ! ಇನ್ನೂ ಕೆಲವರು ಆಹಾರದಲ್ಲಿ ಎಷ್ಟು ನೀರು ಹೋಗುತ್ತದೋ ಅಷ್ಟರಿಂದಲೇ ಬದುಕಿ ಅಚ್ಚರಿ ಮೂಡಿಸುತ್ತಾರೆ. ಮತ್ತೊಂದಿಷ್ಟು ಜನರಿಗೆ ಬಾಯಾರಿಕೆ ಆದಾಗ ಮಾತ್ರವೇ ನೀರು ಕುಡಿಯುವ ಪರಿಪಾಠವಿರುತ್ತದೆ. ಮತ್ತಷ್ಟು ಮಂದಿ ಹೋಗುತ್ತ ಬರುತ್ತ ದಿನವಿಡೀ ನೀರು ಕುಡಿಯುವುದನ್ನು ಅಭ್ಯಾಸಮಾಡಿಕೊಂಡಿರುತ್ತಾರೆ. ಅತಿಯಾಗಿ ನೀರು ಸೇವಿಸುತ್ತಿದ್ದರೆ ದೀರ್ಘಕಾಲ ಅತಿಸಾರ ದಿಂದ ಬಳಲಬೇಕಾಗಿ ಬರ ಬಹುದು ಎಂಬ ಆಯುರ್ವೆದದ ಎಚ್ಚರಿಕೆಯ ಮಾತನ್ನೂ ನೋಡುತ್ತೇವೆ!

ಮೂತ್ರಪಿಂಡಗಳ ವೈಫಲ್ಯವಿದ್ದಾಗ ಎಲ್ಲಾ ದ್ರವಾ ಹಾರಗಳೂ ಸೇರಿ ಒಂದು ಲೀಟರ್​ಗಿಂತ ಕಡಿಮೆ ಸೇವಿಸಬೇಕು, ನೀರು ಕಡಿಮೆ ಕುಡಿದಷ್ಟು ಉತ್ತಮ ಎಂದು ವೈದ್ಯರು ಉಪದೇಶಿಸುತ್ತಾರೆ. ಇವೆಲ್ಲ ಮಾಹಿತಿಗಳ ಕಾರಣದಿಂದಲೇ ಜನರಲ್ಲಿ ಗೊಂದಲವಿರುವುದು. ವೇದ, ಉಪನಿಷತ್ತುಗಳಲ್ಲೇ ಈ ವಿಚಾರ ಪ್ರಸ್ತಾಪವಾಗಿದೆ. ಒಬ್ಬ ಆರೋಗ್ಯವಂತ ವ್ಯಕ್ತಿ ಪ್ರತಿನಿತ್ಯ ಆರು ಬಾರಿ ಪೂರ್ಣಪ್ರಮಾಣದಲ್ಲಿ ಮೂತ್ರ ವಿಸರ್ಜಿಸಬೇಕು. ಇದಕ್ಕೆ ಷಣ್ಮೂತ್ರೀ ಎಂದಿದೆ. ಅದರರ್ಥ ಆರು ಬಾರಿ ಚೆನ್ನಾಗಿ ಮೂತ್ರ ಮಾಡಲು ಎಷ್ಟು ನೀರು ಕುಡಿಯಬೇಕೋ ಅದನ್ನು ಅನುಸರಿಸಿ ಪ್ರತಿಯೊಬ್ಬ ವ್ಯಕ್ತಿಯೂ ನೀರು ಸೇವಿಸಬೇಕು! ದಿನದಲ್ಲಿ ಒಂದೇ ಲೋಟ ನೀರು ಕುಡಿದು ಆರು ಬಾರಿ ಚೆನ್ನಾಗಿ ಆಗುತ್ತಿದ್ದರೆ ಆ ವ್ಯಕ್ತಿ ಚಿಂತಿಸಬೇಕಾದ ಅಗತ್ಯವಿಲ್ಲ! ಇದಕ್ಕಾಗಿಯೇ ಅಂತವರು ನೂರ್ಕಾಲ ಬದುಕಿ ಚೆನ್ನಾಗಿರುವುದನ್ನು ನೋಡುತ್ತೇವೆ.

ಎರಡು ಲೀಟರ್ ನೀರು ಕುಡಿದರೂ ಐದೇಬಾರಿ ಮೂತ್ರವಾಗುತ್ತಿದ್ದರೆ ಸ್ವಲ್ಪ ಹೆಚ್ಚು ನೀರು ಕುಡಿಯಬೇಕೆಂದರ್ಥ. ಸ್ತ್ರೀಯರು 2 ಲೀಟರ್, ಪುರುಷರು 2.6 ಲೀಟರ್ ನೀರು ಕುಡಿಯಬೇಕೆಂದು ಎಲ್ಲರಿಗೂ ಮಾಡುವ ಸಮಾನ ಉಪದೇಶ ಇಲ್ಲಿ ಅರ್ಥ ಕಳೆದುಕೊಳ್ಳುತ್ತದೆ. ಬಾಯಾರಿಕೆ ಹಾಗೂ ಮೂತ್ರ ಇವೆರಡೂ ಜೀವಿತಾವಧಿಯಲ್ಲಿ ತಡೆಯಲೇಬಾರದ ವೇಗಗಳಲ್ಲಿ ಸೇರಿವೆ ಎನ್ನುತ್ತದೆ ಆಯುರ್ವೆದ. ಹಾಗಾಗಿ ಬಾಯಾರಿಕೆ, ಮೂತ್ರಗಳನ್ನು ತಡೆಯದೆ, ಷಣ್ಮೂತ್ರೀ ತತ್ತ್ವದೊಂದಿಗೆ ನಾವು ಕುಡಿಯಬೇಕಾದ ನೀರು, ಮಾಡಬೇಕಾದ ಮೂತ್ರಗಳನ್ನು ನಿರ್ಧರಿಸಿಕೊಳ್ಳಬೇಕಾದುದು ಮಾರ್ವಿುಕ ವಿಚಾರ.