ಒಂದು ಕಪ್ ಚಹಾದಲ್ಲಿ ಎಷ್ಟು ಕ್ಯಾಲೊರಿ ಇರುತ್ತೆ ಗೊತ್ತಾ? ಆರೋಗ್ಯಕ್ಕೆ ಯಾವ ಟೀ ಬೆಸ್ಟ್? ದಿನಕ್ಕೆ ಎಷ್ಟು ಕಪ್​ ಕುಡಿಯಬೇಕು? Tea  
ಲೈಫ್‌ಸ್ಟೈಲ್

ಒಂದು ಕಪ್ ಚಹಾದಲ್ಲಿ ಎಷ್ಟು ಕ್ಯಾಲೊರಿ ಇರುತ್ತೆ ಗೊತ್ತಾ? ಆರೋಗ್ಯಕ್ಕೆ ಯಾವ ಟೀ ಬೆಸ್ಟ್? ದಿನಕ್ಕೆ ಎಷ್ಟು ಕಪ್​ ಕುಡಿಯಬೇಕು? Tea

ಪ್ರಮುಖ ಮುಖ್ಯಾಂಶಗಳು

  • ಒಂದು ಕಪ್ ಚಹಾದಲ್ಲಿ ಎಷ್ಟು ಕ್ಯಾಲೊರಿ ಇರುತ್ತೆ ಗೊತ್ತಾ?
  • ಆರೋಗ್ಯದ ದೃಷ್ಟಿಯಿಂದ ಯಾವ ಚಹಾ ಕುಡಿಯುವುದು ಉತ್ತಮ? ತಜ್ಞರ ಸಲಹೆ ಇಲ್ಲಿದೆ
  • ದಿನಕ್ಕೆ 2 ಕಪ್‌ಗಿಂತ ಹೆಚ್ಚು ಚಹಾ ಕುಡಿಯುವ ಮುನ್ನ ಯೋಚಿಸಿ!
  • ಫಿಟ್ ಆಗಿರಲು ಸಕ್ಕರೆ ಚಹಾಕ್ಕೆ ಇಂದೇ ಬ್ರೇಕ್ ಹಾಕಿ
Tea : ನಮ್ಮಲ್ಲಿ ಬಹುತೇಕರಿಗೆ ಬೆಳಗ್ಗೆ ಎದ್ದ ತಕ್ಷಣ ಗಂಟಲಿಗೆ ಒಂದು ಕಪ್ ಬಿಸಿ ಬಿಸಿ 'ಚಹಾ' ಬೀಳದಿದ್ದರೆ ದಿನವೇ ಆರಂಭವಾಗುವುದಿಲ್ಲ. ತಲೆನೋವು ಇರಲಿ, ದಣಿವಾಗಿರಲಿ ಅಥವಾ ಮೂಡ್ ಆಫ್ ಆಗಿರಲಿ, ತಕ್ಷಣ ನೆನಪಾಗುವುದೇ ಒಂದು ಕಪ್ ಸ್ಟ್ರಾಂಗ್ ಚಹಾ. ಆದರೆ, ನಾವು ಪ್ರತಿದಿನ ಇಷ್ಟಪಟ್ಟು ಕುಡಿಯುವ ಈ ಚಹಾದಲ್ಲಿ ಎಷ್ಟು ಪ್ರಮಾಣದ ಕ್ಯಾಲೊರಿಗಳಿವೆ ಎಂಬ ಸರಿಯಾದ ತಿಳಿವಳಿಕೆ ನಮ್ಮಲ್ಲಿ ಹಲವರಿಗಿಲ್ಲ. ವೈದ್ಯಕೀಯ ತಜ್ಞರ ಪ್ರಕಾರ, ನಾವು ದಿನಾಲೂ ಕುಡಿಯುವ ಒಂದು ಕಪ್ ಚಹಾದಲ್ಲಿನ ಕ್ಯಾಲೊರಿಗಳ ಪ್ರಮಾಣವು ಪ್ರಮುಖವಾಗಿ ಅದಕ್ಕೆ ನಾವು ಬಳಸುವ ಹಾಲು, ಸಕ್ಕರೆ ಸೇರಿದಂತೆ ವಿವಿಧ ಪದಾರ್ಥಗಳ ಮೇಲೆಯೇ ಸಂಪೂರ್ಣವಾಗಿ ನಿರ್ಧಾರವಾಗುತ್ತದೆ!
ಹಾಗಾದರೆ, ಯಾವ ಚಹಾ ಆರೋಗ್ಯಕ್ಕೆ ಉತ್ತಮ? ದಿನಕ್ಕೆ ಎಷ್ಟು ಕಪ್​ ಚಹಾ ಕುಡಿಯಬೇಕು? ಅತಿಯಾಗಿ ಟೀ ಕುಡಿದರೆ ಯಾವೆಲ್ಲ ಆರೋಗ್ಯ ಸಮಸ್ಯೆ ಕಾಡುತ್ತದೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುವುದಾದರೆ, ಮುಂದೆ ಓದಿ.
ಬ್ಲಾಕ್ ಟೀ ಮತ್ತು ಗ್ರೀನ್ ಟೀ: ನೀವು ತೂಕ ಇಳಿಸಿಕೊಳ್ಳಲು ಬಯಸುತ್ತಿದ್ದರೆ ಅಥವಾ ಫಿಟ್‌ನೆಸ್ ಬಗ್ಗೆ ಕಾಳಜಿ ಹೊಂದಿದ್ದರೆ ಬ್ಲಾಕ್ ಟೀ ಅಥವಾ ಗ್ರೀನ್ ಟೀ ಅತ್ಯುತ್ತಮ ಆಯ್ಕೆಯಾಗಿದೆ. ಏಕೆಂದರೆ, ಹಾಲು ಮತ್ತು ಸಕ್ಕರೆಯನ್ನು ಬಳಸದೆ ಕೇವಲ ನೀರನ್ನು ಮಾತ್ರ ಬಳಸಿ ತಯಾರಿಸುವ ಈ ಚಹಾಗಳಲ್ಲಿ ಕೇವಲ ೦ ಯಿಂದ ೨ ಕ್ಯಾಲೊರಿಗಳಷ್ಟೇ ಇರುತ್ತವೆ. ಹೀಗಾಗಿ ಇದು ಯಾವುದೇ ಹಾನಿಯಿಲ್ಲದೆ ದೇಹಕ್ಕೆ ಚುರುಕುತನವನ್ನು ನೀಡುತ್ತದೆ.
ಹಾಲಿನ ಚಹಾ (ಸಕ್ಕರೆ ರಹಿತ): ಕೆಲವರು ಆರೋಗ್ಯದ ದೃಷ್ಟಿಯಿಂದ ಚಹಾಕ್ಕೆ ಸಕ್ಕರೆ ಹಾಕದಿದ್ದರೂ ಹಾಲನ್ನು ಮಾತ್ರ ಕಡ್ಡಾಯವಾಗಿ ಬಳಸುತ್ತಾರೆ. ಸಕ್ಕರೆ ಸೇರಿಸದ ಕೇವಲ ಹಾಲಿನ ಚಹಾವನ್ನು ಕುಡಿಯುವುದರಿಂದ ನಮ್ಮ ದೇಹಕ್ಕೆ ಸುಮಾರು 20 ರಿಂದ 30 ಕ್ಯಾಲೊರಿಗಳು ಸೇರ್ಪಡೆಯಾಗುತ್ತವೆ. ಬಳಸುವ ಹಾಲಿನ ಗಡಸುತನಕ್ಕೆ ಅನುಗುಣವಾಗಿ ಈ ಕ್ಯಾಲೊರಿ ಪ್ರಮಾಣದಲ್ಲಿ ಸ್ವಲ್ಪ ಏರುಪೇರಾಗಬಹುದು.
ಹಾಲು ಮತ್ತು ಸಕ್ಕರೆ ಮಿಶ್ರಿತ ಸಾಮಾನ್ಯ ಚಹಾ: ನಮ್ಮ ಮನೆಗಳಲ್ಲಿ ಸಾಮಾನ್ಯವಾಗಿ ದಿನನಿತ್ಯ ತಯಾರಿಸುವ ಒಂದು ಕಪ್ ಹಾಲಿನ ಚಹಾಕ್ಕೆ ಒಂದು ಚಮಚ ಸಕ್ಕರೆ ಸೇರಿಸಿ ಕುಡಿದರೆ, ಅದು ನಮ್ಮ ದೇಹಕ್ಕೆ ಗರಿಷ್ಠ 50 ರಿಂದ 80 ಕ್ಯಾಲೊರಿಗಳನ್ನು ನೀಡುತ್ತದೆ. ನಾವು ಪ್ರತಿದಿನ ಎಷ್ಟು ಕಪ್ ಚಹಾ ಕುಡಿಯುತ್ತೇವೆ ಮತ್ತು ಅದಕ್ಕೆ ಎಷ್ಟು ಸಕ್ಕರೆ ಹಾಗೂ ಗಟ್ಟಿಯಾದ ಹಾಲನ್ನು ಬಳಸುತ್ತೇವೆ ಎನ್ನುವುದರ ಆಧಾರದ ಮೇಲೆ ನಮ್ಮ ದೇಹ ಸೇರುವ ಒಟ್ಟು ಕ್ಯಾಲೊರಿಗಳ ಪ್ರಮಾಣ ನಿರ್ಧಾರವಾಗುತ್ತದೆ.
ಕ್ಯಾಲೊರಿಗಳ ಪ್ರಮಾಣ ಏನೇ ಇದ್ದರೂ, ಅತಿಯಾಗಿ ಚಹಾ ಕುಡಿಯುವುದು ಆರೋಗ್ಯಕ್ಕೆ ಖಂಡಿತಾ ಒಳ್ಳೆಯದಲ್ಲ ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ. ದಿನಕ್ಕೆ ಎರಡಕ್ಕಿಂತ ಹೆಚ್ಚು ಕಪ್ ಚಹಾ ಕುಡಿಯುವ ಅಭ್ಯಾಸವು ಭವಿಷ್ಯದಲ್ಲಿ ಜೀರ್ಣಕ್ರಿಯೆಯ ತೊಂದರೆಗಳು, ನಿದ್ರಾಹೀನತೆ ಮತ್ತು ಅಸಿಡಿಟಿಯಂತಹ ಹತ್ತಾರು ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಆದ್ದರಿಂದ, ದೇಹದ ತೂಕವನ್ನು ಇಳಿಸಿಕೊಳ್ಳಲು ಬಯಸುವವರು ಹಾಗೂ ಸದಾ ಫಿಟ್ ಮತ್ತು ಆರೋಗ್ಯವಾಗಿರಬೇಕು ಎಂದುಕೊಳ್ಳುವವರು ಚಹಾಕ್ಕೆ ಬಳಸುವ ಸಕ್ಕರೆ ಮತ್ತು ಹಾಲಿನ ಪ್ರಮಾಣವನ್ನು ಆದಷ್ಟು ಕಡಿಮೆ ಮಾಡಬೇಕು. ಇದರೊಂದಿಗೆ, ದಿನಕ್ಕೆ ಕೇವಲ ಒಂದರಿಂದ ಎರಡು ಕಪ್ ಚಹಾ ಕುಡಿಯುವುದಕ್ಕೆ ಮಾತ್ರ ತಮ್ಮನ್ನು ತಾವು ಸೀಮಿತಗೊಳಿಸಿಕೊಳ್ಳುವುದು ಅತ್ಯಂತ ಉತ್ತಮ ಎಂದು ತಜ್ಞರು ಸಲಹೆ ನೀಡಿದ್ದಾರೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ, (ಏಜೆನ್ಸೀಸ್​).