ಬೆಂಗಳೂರು : ಬಹುತೇಕ ಪ್ರತಿಯೊಬ್ಬರೂ ಜೀವನದಲ್ಲಿ ಹೊಸ ಮನೆ ನಿರ್ಮಿಸಬೇಕೆಂದು ಕನಸು ಕಾಣುತ್ತಾರೆ. ಹೊಸ ಮನೆಯ ನಿರ್ಮಾಣದಲ್ಲಿ ಪ್ರಮುಖ ಅಂಶ ವಾಸ್ತು. ಕೆಲವರಿಗೆ ಮನೆ ನಿರ್ಮಿಸುವಾಗ ಪೂರ್ಣ ವಾಸ್ತು ಪಾಲನೆ ಸಾಧ್ಯವಾಗದ ಪರಿಸ್ಥಿತಿ ಇರುತ್ತದೆ. ಕೊನೇ ಪಕ್ಷ ಮನೆಯ ಒಳಾಂಗಣ ವಿನ್ಯಾಸ ಮತ್ತು ಅಲಂಕಾರದ ವಿಷಯದಲ್ಲಾದರೂ ಪರಿಪೂರ್ಣ ವಾಸ್ತು ಪಾಲನೆ ಮಾಡಿದರೆ ಅದರ ಪ್ರಯೋಜನ ಪಡೆದುಕೊಳ್ಳಲು ಸಾಧ್ಯ. ಮನೆ ಎಂದ ಮೇಲೆ ಬಳಕೆಗಾಗಿ ಹಲವು ವಸ್ತುಗಳನ್ನು ತರುತ್ತಾರೆ. ಆದರೆ ಅಂತಹ ದಿನಬಳಕೆಯ ವಸ್ತುಗಳು ಮತ್ತು ಅಲಂಕಾರಕ್ಕಾಗಿ ಜೋಡಿಸುವ ವಸ್ತುಗಳನ್ನು ಹಾಗೆ ಎಲ್ಲೆಂದರಲ್ಲಿ ಇಡುವುದು ವಾಸ್ತು ಪ್ರಕಾರ ಸರಿಯಾದ ಕ್ರಮವಲ್ಲ. ಪ್ರತಿಯೊಂದು ವಸ್ತುವನ್ನು ಹಿನ್ನೆಲೆಯನ್ನರಿತು ಆಯಾ ದಿಕ್ಕು ಮತ್ತು ಸ್ಥಳದಲ್ಲಿ ಇರಿಸುವುದರಿಂದ ಹೆಚ್ಚು ಪ್ರಯೋಜನ ಪಡೆಯಬಹುದು. ಜೀವನದಲ್ಲಿ ಒಮ್ಮೆ ಸಿಗುವ ಮಹತ್ವದ ಅವಕಾಶ ಹೊಸ ಮನೆಯ ನಿರ್ಮಾಣ. ಮನೆಯ ನಿರ್ಮಾಣ ಅಂದುಕೊಂಡಂತಿದ್ದರೆ ಹೆಚ್ಚಿನ ಆನಂದ ಸಾಧ್ಯ. ಕೆಲವೊಮ್ಮೆ ಪರಿಸ್ಥಿತಿಗೆ ಅನುಗುಣವಾಗಿ ಹೊಂದಾಣಿಕೆ ಅನಿವಾರ್ಯ. ಮನೆ ಕಟ್ಟಿದ ನಂತರ ಬದಲಿಸುವುದು, ಒಡೆಯುವುದು ಸಾಧ್ಯವಿಲ್ಲ. ಆದರೆ ಮನೆಯ ಒಳಾಂಗಣ ವಿನ್ಯಾಸ ಮತ್ತು ಅಲಂಕಾರವನ್ನು ಯಾವಾಗ ಬೇಕಾದರೂ ವಾಸ್ತುಪ್ರಕಾರ ಬದಲಿಸಿಕೊಳ್ಳಬಹುದು.
ಮನೆಯ ಪ್ರವೇಶ ದ್ವಾರದ ಬಳಿ 7 ಬಿಳಿ ಕುದುರೆಯ ೆಟೋ ಹಾಕಬೇಕು. ಪ್ರವೇಶದ್ವಾರದಲ್ಲಿ ಕುದುರೆ ಲಾಳವನ್ನು ಹಾಕುವ ಪದ್ಧತಿಯೂ ಇದೆ. ಚಿಕ್ಕ ಜಾತಿಯ ಬಿದಿರು ಗಿಡಗಳನ್ನು ಕೆಂಪು ರಿಬ್ಬನ್‌ನಿಂದ ಕಟ್ಟಿ ಅದನ್ನು ಮನೆಯ ಪೂರ್ವ ದಿಕ್ಕಿನಲ್ಲಿ ಇಡುವುದು ಶ್ರೇಯಸ್ಕರ. ವಿವಿಧ ಬಣ್ಣದ ಕ್ರಿಸ್ಟಲ್ ಹರಳುಗಳನ್ನು ಗಾಜಿನ ಭರಣಿಯಲ್ಲಿ ಹಾಕಿ ಮಲಗುವ ಕೋಣೆಯಲ್ಲಿಡಬೇಕು. ಮನೆಯ ಹೆಬ್ಬಾಗಿಲಿನ ಅಕ್ಕ ಪಕ್ಕ ಸೊಂಡಿಲು ಎತ್ತಿಕೊಂಡಿರುವ ಆನೆಯ ಫೋಟೋ ಅಥವಾ ವಿಗ್ರಹ ಇಡಬೇಕು. ಆಗ್ನೇಯ ಅಥವಾ ಉತ್ತರ ದಿಕ್ಕಿನಲ್ಲಿ ಮೀನಿನ ಅಕ್ವೇರಿಯಂ ಇಡಬೇಕು. ಎಲ್ಲರಿಗೂ ಕಾಣುವ ಹಾಗೆ ಮನೆಯ ಒಂದು ಮೂಲೆಯಲ್ಲಿ ಬೋನ್ಸಾಯ್ ಜಾತಿಯ ಸಸ್ಯ ಅಥವಾ ಮನಿಪ್ಲಾಂಟ್‌ಗಳನ್ನು ಇಡಬೇಕು. ಮನೆಯ ಪಶ್ಚಿಮ ದಿಕ್ಕಿನಲ್ಲಿ ಚೀನಿ ಘಂಟೆಗಳನ್ನು ನೇತು ಹಾಕಬೇಕು. ದೇವರ ಕೋಣೆಯ ಮೇಲೆ ಸ್ವಸ್ತಿಕ್ ಚಿತ್ರವನ್ನು ಹಾಕಬೇಕು. ಮನೆಯ ಉತ್ತರ ದಿಕ್ಕಿನಲ್ಲಿ ನೀರಿನ ಕಾರಂಜಿ ಅಥವಾ ನೀರಿನ ಇನ್ನಿತರೆ ವಸ್ತುವನ್ನು ಇಡಬೇಕು. ಉತ್ತರ ಅಥವಾ ವಾಯುವ್ಯದಲ್ಲಿ ಲೋಹದ ಆಮೆಯನ್ನು ಹಾಕಬೇಕು. ಲಾಫಿಂಗ್ ಬುದ್ಧನ ವಿಗ್ರಹವನ್ನು ಸಾಮಾನ್ಯವಾಗಿ ಎಲ್ಲರೂ ಬಳಸುತ್ತಾರೆ. ಇವುಗಳ ಜೊತೆಗೆ ಗಡಿಯಾರ, ಕನ್ನಡಿ ಮತ್ತಿತರ ದಿನಬಳಕೆಯ ವಸ್ತುಗಳನ್ನು ಕೂಡಾ ವಾಸ್ತುಪ್ರಕಾರ ಅಳವಡಿಸುವುದು ಶ್ರೇಯಸ್ಕರ ಹಾಗೂ ಅಲಂಕಾರಿಕವೂ ಹೌದು.