ಆರೋಗ್ಯಕರ ಜೀವನ ಎಲ್ಲರ ಹಕ್ಕು. ಆದರೆ, ಇತ್ತೀಚಿನ ವರ್ಷಗಳಲ್ಲಿ ಜೀವನಶೈಲಿ ಸಮಸ್ಯೆಯಿಂದ ಆರೋಗ್ಯದ ಸಮಸ್ಯೆಗಳು ಹೆಚ್ಚಿದ್ದು, ಕುಟುಂಬಗಳ ವೈದ್ಯಕೀಯ ವೆಚ್ಚ ಗಣನೀಯವಾಗಿ ಏರಿಕೆಯಾಗುತ್ತಿದೆ. ಯೋಗ ಸಮಗ್ರ ಆರೋಗ್ಯವನ್ನು ಒದಗಿಸಬಲ್ಲದು. ಹಾಗಾಗಿಯೇ ಭಾರತಭೂಮಿಯಲ್ಲಿ ಪ್ರಾಚೀನ ಕಾಲದಿಂದಲೂ ಯೋಗ ಜೀವನಶೈಲಿ ಚಾಲ್ತಿಯಲ್ಲಿದ್ದು, ಮತ್ತೆ ಇದರತ್ತ ಮರಳಬೇಕಿದೆ. ಸರಳವಾದ ಯೋಗಾಸನಗಳಿಂದ ಹಲವು ಕಾಯಿಲೆಗಳನ್ನು ನಿವಾರಿಸಬಹುದು, ದೂರವಿಡಬಹುದು. ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಅಂಥ ಕೆಲವು ಉಪಯುಕ್ತ ಯೋಗಾಸನಗಳ ಪರಿಚಯ ಇಲ್ಲಿದೆ.
ಆತ್ಮಪ್ರೇಮ್ ಡಾ.ಧನ್ವಂತರಿ ಗುರೂಜಿ
ಯೋಗಾಭ್ಯಾಸ ರೋಗನಿರೋಧಕ ಶಕ್ತಿಯಂತೆ ಕಾರ್ಯನಿರ್ವಹಿಸುತ್ತದೆ. ಆರೋಗ್ಯವೆಂದರೆ ಕೇವಲ ಕಾಯಿಲೆಯಿಂದ ದೂರವಿರುವುದು ಎಂದಲ್ಲ. ವಿಶ್ವ ಅರೋಗ್ಯ ಸಂಸ್ಥೆಯ ಪ್ರಕಾರ ಶಾರೀರಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕವಾಗಿ ಉನ್ನತಿ ಹೊಂದಲು ಯೋಗ ವಿಜ್ಞಾನದಿಂದ ಸಾಧ್ಯ. ಸಮಗ್ರಯೋಗ ಚಿಕಿತ್ಸೆಯಲ್ಲಿ ಅನ್ನಮಯಕೋಶ, ಪ್ರಾಣಮಯಕೋಶ, ಮನೋಮಯಕೋಶ, ವಿಜ್ಞಾನಮಯಕೋಶ, ಆನಂದಮಯಕೋಶಗಳಿಗೆ ಪ್ರಾಧಾನ್ಯ. ಇವುಗಳಿಗೆ ಸಂಬಂಧಪಟ್ಟ ಯೋಗ ಪ್ರಕಾರಗಳು ಅಂದರೆ, ಆಸನಗಳು, ಆಹಾರ, ಕ್ರಿಯಾ, ಉಸಿರಾಟದ ಅಭ್ಯಾಸ, ಪ್ರಾಣಾಯಾಮ, ಧ್ಯಾನ ಹಾಗೂ ಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗ, ಅಷ್ಟಾಂಗ ಯೋಗ, ಸಂಯಮ ಯೋಗ ಈ ರೀತಿಯಾಗಿ ಚಿಕಿತ್ಸೆ ನೀಡಲಾಗುತ್ತದೆ. ಜೀವನಶೈಲಿ ಬದಲಾವಣೆಯಿಂದ (ಅಂದರೆ ಆಹಾರ, ವಿಹಾರ, ಆಚಾರ, ವಿಚಾರ, ವ್ಯವಹಾರ) ಮಾನಸಿಕ ನೆಮ್ಮದಿ ಪಡೆಯಲು ಯೋಗ ಸಹಾಯಕಾರಿ.
ಸಂಧಿವಾತ ಕಾಯಿಲೆಗಳಿಗೆ ಸೂಕ್ಷ ವ್ಯಾಯಾಮಗಳು ಅಗತ್ಯ. ಕಪಾಲಭಾತಿ ಈ ನಿಟ್ಟಿನಲ್ಲಿ ಪ್ರಯೋಜನಕಾರಿ. ಕಪಾಲಭಾತಿಯು ಬಲವಂತದ ನಿಶ್ವಾಸಗಳು ಮತ್ತು ನಿಷ್ಕ್ರಿಯ ಇನ್ಹಲೇಷನ್ಗಳನ್ನು ಒಳಗೊಂಡಿರುತ್ತದೆ, ಇದು ಉಸಿರಾಟದ ವ್ಯವಸ್ಥೆಗೆ ನೈಸರ್ಗಿಕ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ, ದೇಹದಿಂದ ವಿಷ, ಮಾಲಿನ್ಯಕಾರಕಗಳು ಮತ್ತು ಹಳೆಯ ಗಾಳಿಯನ್ನು ತೆರವುಗೊಳಿಸುತ್ತದೆ. ರುಮಟಾಯ್ಡ್ ಸಂಧಿವಾತಕ್ಕೆ ಯಾವುದೇ ಶಾಶ್ವತ ಚಿಕಿತ್ಸೆ ಇಲ್ಲದಿದ್ದರೂ, ಸ್ಟ್ರೆಚಿಂಗ್, ವ್ಯಾಯಾಮ ಮತ್ತು ಸಂಕೋಚನ ಸೇರಿದಂತೆ ದೈಹಿಕ ಚಿಕಿತ್ಸೆಯು ರೋಗಲಕ್ಷಣಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಸ್ನಾಯುವಿನ ಬಲವನ್ನು ನಿರ್ವಿುಸಲು ನಿರಂತರ ವ್ಯಾಯಾಮ ಅತ್ಯಗತ್ಯ.
ಕಪಾಲಭಾತಿಯು ಯೋಗದ (ಪ್ರಾಣಾಯಾಮ) ಮೂಲ ಉಸಿರಾಟ ತಂತ್ರವಾಗಿದೆ. ಇದು ಎದೆಯುರಿ, ಆಮ್ಲೀಯತೆ ಮತ್ತು ಅನಿಲವನ್ನು ನಿವಾರಿಸುತ್ತದೆ. ಶ್ವಾಸಕೋಶದ ಶಕ್ತಿ ಮತ್ತು ಸಾಮರ್ಥ್ಯವನ್ನು ಸುಧಾರಿಸುತ್ತದೆ. ಏಕಾಗ್ರತೆ ಮತ್ತು ಸ್ಮರಣೆಯನ್ನು ಹೆಚ್ಚಿಸುತ್ತದೆ ಮತ್ತು ಉಬ್ಬಸ ಮತ್ತು ಇತರ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಲು ಸಹ ಬಳಸಬಹುದು.
ಸರ್ವಾಂಗಾಸನವು ಮಿದುಳಿಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಮಿದುಳಿನಲ್ಲಿರುವ ಹೈಪೋಥಾಲಮಸ್ ಉತ್ತೇಜಿಸಲ್ಪಡುತ್ತದೆ, ಇದು ಥೈರಾಯ್ಡ್ ಹಾರ್ವೇನ್ ಬಿಡುಗಡೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ಗ್ರಂಥಿಗಳು ಮತ್ತು ನರಗಳ ರಚನೆಗಳು ಟೋನ್ ಆಗುತ್ತವೆ. ಸರ್ವಾಂಗಾಸನ ಮಾಡುವಾಗ ಜಲಂಧರ ಬಂಧವು ನೈಸರ್ಗಿಕವಾಗಿ ರೂಪುಗೊಳ್ಳುತ್ತದೆ, ಇದು ಥೈರಾಯ್ಡ್, ಪ್ಯಾರಾಥೈರಾಯ್ಡ್ ಮತ್ತು ಪಿಟ್ಯುಟರಿ ಗ್ರಂಥಿಗಳ ಕಾರ್ಯವನ್ನು ಸುಧಾರಿಸುತ್ತದೆ.
ಈ ಆಸನವನ್ನು ಮಾಡುವಾಗ ರಕ್ತವು ಕುತ್ತಿಗೆಯಲ್ಲಿ ಸಂಗ್ರಹವಾಗುತ್ತದೆ. ರಕ್ತವು ಥೈರಾಯ್ಡ್ ಗ್ರಂಥಿಗೆ ಬಲವಂತವಾಗಿ ಹರಿಯುತ್ತದೆ ಮತ್ತು ಆ ಕಾರಣದಿಂದಾಗಿ ಆ ಭಾಗವು ಬಲಗೊಳ್ಳುತ್ತದೆ. ಹೈಪೋಥೈರಾಯ್್ಡೆ ಸರ್ವಾಂಗಾಸನ ಮತ್ತು ಉಜ್ಜಯಿ ಪ್ರಾಣಾಯಾಮ ಬಹಳ ಪರಿಣಾಮಕಾರಿ.
ಮಧುಮೇಹ
ಸೂರ್ಯ ನಮಸ್ಕಾರವು ನಿರ್ದಿಷ್ಟ ಅನುಕ್ರಮದಲ್ಲಿ ನಿರ್ವಹಿಸುವ ಕ್ರಿಯಾತ್ಮಕ ಯೋಗ ಭಂಗಿಗಳ ಸರಣಿಯನ್ನು ಒಳಗೊಂಡಿದೆ. ಸೂರ್ಯ ನಮಸ್ಕಾರವು ಆಮ್ಲಜನಕ ಮತ್ತು ಗ್ಲೂಕೋಸ್ಗಾಗಿ ಜೀವಕೋಶಗಳ ಅಗತ್ಯಗಳನ್ನು ಹೆಚ್ಚಿಸುತ್ತದೆ. ಈ ಅವಶ್ಯಕತೆಗಳನ್ನು ಪೂರೈಸಲು, ಮಿದುಳಿನ ಸಂಕೇತದ ಮೂಲಕ ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಅರ್ಧಮತ್ಸೆ್ಯೕಂದ್ರಾಸನ, ಯೋಗ ಮುದ್ರೆ ಮತ್ತು ಮಂಡೂಕಾಸನದಂತಹ ಕುಳಿತಿರುವ ಭಂಗಿಗಳು ಮೇದೋಜ್ಜೀರಕ ಗ್ರಂಥಿಯ ಕಾರ್ಯವನ್ನು ಸುಧಾರಿಸುತ್ತವೆ. ಭಂಗಿಗಳನ್ನು ವೈಯಕ್ತಿಕ ಸಾಮರ್ಥ್ಯವನ್ನು ಅವಲಂಬಿಸಿ ಸುಮಾರು 30 ಸೆಕೆಂಡುಗಳಿಂದ 1 ನಿಮಿಷದವರೆಗೆ ನಿರ್ವಹಿಸಬೇಕು ಮತ್ತು ಅವಧಿಯನ್ನು ಕ್ರಮೇಣ ಹೆಚ್ಚಿಸಬಹುದು. ಟೈಪ್ 2 ಮಧುಮೇಹ ಹೊಂದಿರುವ ವ್ಯಕ್ತಿಗಳಲ್ಲಿ ಯೋಗ ಭಂಗಿಗಳು ಗ್ಲೂಕೋಸ್ ಬಳಕೆ ಮತ್ತು ಕೊಬ್ಬಿನ ಪುನರ್ವಿತರಣೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತವೆ.
ಅನುಲೋಮ ವಿಲೋಮ (ಪರ್ಯಾಯ ಮೂಗಿನ ಹೊಳ್ಳೆ ಉಸಿರಾಟ), ಚಂದ್ರನಾಡಿ (ಎಡ ಮೂಗಿನ ಹೊಳ್ಳೆ ಉಸಿರಾಟ), ಸೀತ್ಕಾರಿ (ತಂಪಾಗಿಸುವ ಉಸಿರಾಟ), ಮತ್ತು ಭ್ರಮರಿಯಂಥ (ಜೇನುನೊಣದ ಉಸಿರಾಟ) ನಿಧಾನ ಪ್ರಾಣಾಯಾಮಗಳು ಸೆರೆಬ್ರಲ್ ರಕ್ತದ ಹರಿವು ಮತ್ತು ಆಮ್ಲಜನಕೀಕರಣವನ್ನು ಹೆಚ್ಚಿಸುತ್ತವೆ, ಇದರಿಂದಾಗಿ ಮಿದುಳಿನ ಕೇಂದ್ರಗಳ ನರಕೋಶದ ಚಟುವಟಿಕೆಗಳು ಸುಧಾರಿಸುತ್ತವೆ.
ಭ್ರಮರಿ ಪ್ರಾಣಾ ಯಾಮದಿಂದ (ಹಮ್ಮಿಂಗ್ ಬೀ ಉಸಿರಾಟ) ಸೃಷ್ಟಿಯಾಗುವ ಕಂಪನಗಳು ಮನಸ್ಸನ್ನು ಶಾಂತಗೊಳಿಸುತ್ತವೆ. ಭಸ್ತ್ರಿಕಾ ಪ್ರಾಣಾಯಾಮವು (ಬೆಲ್ಲೋ-ಬ್ರೀಥಿಂಗ್) ಪೀನಲ್, ಪಿಟ್ಯುಟರಿ ಮತ್ತು ಮೂತ್ರಜನಕಾಂಗದ ಗ್ರಂಥಿಗಳ ನಿಯಂತ್ರಣದಲ್ಲಿ ಸಹಾಯಕ, ಇದು ಚಯಾಪಚಯ ಕ್ರಿಯೆಯ ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಧ್ಯಾನದ ಅಭ್ಯಾಸದ ಮೂಲಕ ಸಾಧಿಸಿದ ಮಾನಸಿಕ ಸ್ಥಿರತೆಯು ಮಧುಮೇಹ ರೋಗಿಗಳಿಗೆ ಸಹಾಯ ಮಾಡುತ್ತದೆ. ಧ್ಯಾನ ಚಿಕಿತ್ಸೆಯು ಜೀವನದ ಗುಣಮಟ್ಟ ಹೆಚ್ಚಿಸಿ, ಆತಂಕವನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡ ನಿಯಂತ್ರಿಸುತ್ತದೆ.
ಅಸ್ತಮಾ
ಭುಜಂಗಾಸನ ಅಥವಾ ಕೋಬ್ರಾ ಭಂಗಿಯು ಅಧೋಮುಖಶ್ವಾನಾಸನ, ಬಾಲಾಸನ ಅಸ್ತಮಾ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಬೆನ್ನು ಬಾಗಿಸುವ ಆಸನಗಳು ಮತ್ತು ಬೆನ್ನುಮೂಳೆಯನ್ನು ಉದ್ದಗೊಳಿಸುವ ಆಸನಗಳು ಭಂಗಿಯನ್ನು ಸುಧಾರಿಸಲು ಮತ್ತು ಉಸಿರಾಟವನ್ನು ಸುಗಮಗೊಳಿಸಲು ನೆರವಾಗುತ್ತವೆ.
ಕಪಾಲಭಾತಿಯು ಅಸ್ತಮಾ ಮತ್ತು ಇತರ ಉಸಿರಾಟದ ಸಮಸ್ಯೆಗಳಿಗೆ ಪ್ರಯೋಜನಕಾರಿ, ಇದು ಉಸಿರನ್ನು ಹೊರಹಾಕುವಾಗ ಕಿಬ್ಬೊಟ್ಟೆಯ ಅಂಗಗಳನ್ನು ಮಸಾಜ್ ಮಾಡುವ ಮೂಲಕ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ನೇತಿಯಂತಹ ಯೋಗ ಶುದ್ಧೀಕರಣ ಅಭ್ಯಾಸಗಳು ಮೂಗಿನ ಹೊಳ್ಳೆಗಳ ಒಳಭಾಗವನ್ನು ಸಂವೇದನಾಶೀಲವಾಗಿಸುತ್ತವೆ.
ಯೋಗ ದಿನದ ಹಿನ್ನೆಲೆ
ಪ್ರಧಾನಿ ನರೇಂದ್ರ ಮೋದಿ ಅವರು 2014ರ ಸೆಪ್ಟೆಂಬರ್ 27ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಸ್ತಾಪ ಮುಂದಿಟ್ಟರು. ಇದಕ್ಕೆ ವಿಶ್ವಸಂಸ್ಥೆ ಅನುಮೋದನೆ ನೀಡಿತು. 2015ರ ಜೂನ್ 21ರಂದು ಪ್ರಥಮ ಯೋಗ ದಿನವನ್ನು ವಿಶ್ವದಾದ್ಯಂತ ಆಚರಿಸಲಾಯಿತು. ಯೋಗವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ದೈಹಿಕ-ಮಾನಸಿಕ ಆರೋಗ್ಯದ ಒಂದು ಅದ್ಭುತ ಕ್ರಮ. ವೇದ ಸಾಹಿತ್ಯದಲ್ಲಿ, ಪೌರಾಣಿಕ ಕಥೆಗಳಲ್ಲಿ, ಭಾರತೀಯ ಧರ್ಮಗ್ರಂಥಗಳಲ್ಲಿ ಯೋಗದ ಉಲ್ಲೇಖವಿದೆ. ಸಹಸ್ರಾರು ವರ್ಷಗಳಿಂದ ಸಂತರು ಮತ್ತು ಆಧ್ಯಾತ್ಮಿಕ ಗುರುಗಳು ಯೋಗಾಭ್ಯಾಸವನ್ನು ಜೀವನಶೈಲಿಯಾಗಿ ರೂಪಿಸಿಕೊಂಡ ವಿಶಿಷ್ಟ ಇತಿಹಾಸವಿದೆ. ಯೋಗದ ವಿವಿಧ ಆಸನಗಳನ್ನು ದೇಹದ ಒಂದು ಅಥವಾ ಹೆಚ್ಚಿನ ಭಾಗಗಳಿಗೆ ವ್ಯಾಯಾಮ ಆಗುವ ರೀತಿಯಲ್ಲಿ ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿದೆ.
ಯೋಗವನ್ನು ಸರಿಯಾದ ರೀತಿಯಲ್ಲಿ ಮತ್ತು ನಿರ್ದಿಷ್ಟ ಅನುಕ್ರಮದಲ್ಲಿ ಅಭ್ಯಸಿಸಬೇಕಾಗುತ್ತದೆ. ಹೀಗಾಗಿ, ಪರಿಣತ ಗುರುಗಳ, ತರಬೇತುದಾರರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ಮಾಡುವುದು ಸೂಕ್ತ. ಭಾರತದ ಯೋಗ ಗುರುಗಳಿಗೆ ಜಗತ್ತಿನಾದ್ಯಂತ ಬೇಡಿಕೆ ಇದ್ದು, ವಿದೇಶಗಳಲ್ಲಿ ಶಿಕ್ಷಕರಾಗಿ ಸಾಕಷ್ಟು ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತದ ಪ್ರವಾಸೋದ್ಯಮ ಬೆಳಗವಣಿಗೂ ಯೋಗ ಕೊಡುಗೆ ನೀಡುತ್ತಿದೆ. ಯೋಗವು ಕೇವಲ ದೈಹಿಕ ಕಸರತ್ತಲ್ಲ, ಅದರಲ್ಲಿ ಮಾನಸಿಕ ಆರೋಗ್ಯದ ಗುಟ್ಟು ಸಹ ಇದೆ. ಹೀಗಾಗಿ ಮಾನವನ ಸಮಗ್ರ ಆರೋಗ್ಯಕ್ಕೆ ಯೋಗ ಪೂರಕ.