ಸಾಂದರ್ಭಿಕ ಚಿತ್ರ  
ಲೈಫ್‌ಸ್ಟೈಲ್

ಈ ಸಣ್ಣ ಎಚ್ಚರಿಕೆ ಕಡೆಗಣಿಸಿದ್ರೆ ಲಿವರ್ ಕ್ಯಾನ್ಸರ್ ಗ್ಯಾರಂಟಿ! ಯಾವ ವಯಸ್ಸಿನವರಿಗೂ ತಪ್ಪಿದ್ದಲ್ಲ | Hepatitis

ಪ್ರಮುಖ ಮುಖ್ಯಾಂಶಗಳು

  • 500ಕ್ಕೂ ಹೆಚ್ಚು ಕೆಲಸ ಮಾಡುವ ಅಂಗಕ್ಕೆ ಹೊಡೆತ ನೀಡುವ ನಿಶ್ಶಬ್ದ ವೈರಸ್
  • ಹೆಪಟೈಟಿಸ್‌ನ ಈ ಅಪಾಯಕಾರಿ ಲಕ್ಷಣಗಳನ್ನು ಎಂದೂ ಕಡೆಗಣಿಸಬೇಡಿ
  • ಮದ್ಯಪಾನ, ಫ್ಯಾಟಿ ಲಿವರ್ ಸೇರಿ ಅಪಾಯ ಹೆಚ್ಚಿಸುವ ಅಂಶಗಳಿವು
  • ಲಸಿಕೆ, ಸರಳ ಜೀವನಶೈಲಿಯಿಂದ ತಡೆಯಿರಿ ಲಿವರ್ ಕ್ಯಾನ್ಸರ್
Hepatitis: ಲಿವರ್/ಯಕೃತ್ತು ಮಾನವ ದೇಹದ ಅತ್ಯಂತ ದೊಡ್ಡ ಒಳಗಿನ ಅಂಗ. ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕುವುದು ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಸೇರಿದಂತೆ ಬರೋಬ್ಬರಿ 500ಕ್ಕೂ ಹೆಚ್ಚು ಪ್ರಮುಖ ಕೆಲಸಗಳನ್ನು ಸರಾಗವಾಗಿ ನಿರ್ವಹಿಸುವ ಈ ಅಂಗವನ್ನು ನೀವು ಚೆನ್ನಾಗಿ ನೋಡಿಕೊಳ್ಳದೆ ಹೋದರೆ, ಮುಂದೊಂದು ದಿನ ಅದೇ ನಿಮ್ಮನ್ನು ಸಾವಿನ ದವಡೆಗೆ ತಳ್ಳಿದರೂ ಆಶ್ಚರ್ಯಬೇಡ.
ಲಿವರ್​ನಲ್ಲಿ ಕಾಣಿಸಿಕೊಳ್ಳುವ 'ಹೆಪಟೈಟಿಸ್' (ಯಕೃತ್ತಿನ ಉರಿಯೂತ) ಎಂಬ ವೈರಲ್ ಸೋಂಕನ್ನು ಆರಂಭದಲ್ಲೇ ನೀವು ನಿರ್ಲಕ್ಷಿಸಿದರೆ, ಅದು ಹಂತ ಹಂತವಾಗಿ ಬೆಳೆದು ಮಾರಕ ಲಿವರ್ ಕ್ಯಾನ್ಸರ್‌ಗೆ ತಿರುಗುವ ಅಪಾಯ ಹೆಚ್ಚು. ಇತ್ತೀಚಿನ ವೈದ್ಯಕೀಯ ವರದಿಗಳ ಪ್ರಕಾರ, ಹೆಚ್ಚಿನ ಜನರಲ್ಲಿ ಈ ಕಾಯಿಲೆ ಯಾವುದೇ ಪ್ರಮುಖ ರೋಗಲಕ್ಷಣಗಳನ್ನು ತೋರಿಸದೆ ವರ್ಷಗಟ್ಟಲೆ ದೇಹದಲ್ಲಿ ಕಳ್ಳನಂತೆ ಅಡಗಿರುತ್ತದೆ ಎಂದು ಹೇಳಲಾಗಿದೆ.

ಹೆಪಟೈಟಿಸ್‌ನಿಂದ ಕ್ಯಾನ್ಸರ್‌ ಹೇಗೆ?

ಹೆಪಟೈಟಿಸ್‌ ಎ, ಬಿ, ಸಿ, ಡಿ ಮತ್ತು ಇ ಸೇರಿದಂತೆ ಹಲವು ರೀತಿಯ ವೈರಸ್‌ಗಳಿದ್ದರೂ, ಹೆಪಟೈಟಿಸ್ ಬಿ ಮತ್ತು ಸಿ ಅತ್ಯಂತ ಅಪಾಯಕಾರಿ ಎನ್ನಲಾಗಿದೆ. ಇವು ದೇಹವನ್ನು ಪ್ರವೇಶಿಸಿ ದೀರ್ಘಕಾಲದವರೆಗೆ ಉರಿಯೂತವನ್ನು ಉಂಟುಮಾಡುತ್ತವೆ. ಇದನ್ನು ಕ್ರಾನಿಕ್ ಹೆಪಟೈಟಿಸ್ ಎಂದು ಕರೆಯಲಾಗಿದೆ.
ಫೈಬ್ರೋಸಿಸ್: ಸತತ ವೈರಸ್ ದಾಳಿಯಿಂದ ಯಕೃತ್ತಿನ ಜೀವಕೋಶಗಳು ನಾಶವಾಗಿ, ಆ ಜಾಗದಲ್ಲಿ 'ಸ್ಕಾರ್ ಟಿಶ್ಯೂ' ರೂಪುಗೊಳ್ಳುತ್ತದೆ.
ಸಿರೋಸಿಸ್: ಈ ಸ್ಥಿತಿ ಹಲವು ವರ್ಷಗಳ ಕಾಲ ಮುಂದುವರಿದಾಗ ಲಿವರ್ ಸಂಪೂರ್ಣವಾಗಿ ಬಾಡಿಕೊಂಡು ತನ್ನ ಕಾರ್ಯಾಚರಣೆಯನ್ನು ಶೇ.90ರಷ್ಟು ಸ್ಥಗಿತಗೊಳಿಸಿರುತ್ತದೆ.
ಲಿವರ್ ಕ್ಯಾನ್ಸರ್ (Hepatocellular Carcinoma): ಸಿರೋಸಿಸ್‌ಗೆ ಒಳಗಾದ ಜೀವಕೋಶಗಳಲ್ಲಿ ಡಿಎನ್‌ಎ ವ್ಯತ್ಯಾಸಗೊಂಡು ಕಾಲಕ್ರಮೇಣ ಅವು ಕ್ಯಾನ್ಸರ್ ಜೀವಕೋಶಗಳಾಗಿ ಬದಲಾಗುತ್ತವೆ ಎಂದು ವಿವರಿಸಲಾಗಿದೆ.

ಶೇ.70ರಷ್ಟು ಹಾನಿಗೊಂಡ ಮೇಲಷ್ಟೇ ಲಕ್ಷಣಗಳು!

ಲಿವರ್​ ಶೇ.70ರಷ್ಟು ಡ್ಯಾಮೇಜ್ ಆದರೆ ಮಾತ್ರ ಗಂಭೀರ ರೋಗಲಕ್ಷಣಗಳು ಹೊರಗೆ ಕಾಣಿಸಲು ಆರಂಭಿಸುತ್ತೆ. ಇಲ್ಲಿ ಏನಾದರೂ ನಿರ್ಲಕ್ಷಿಸಿದರೆ, ಜೀವ ಉಳಿಸಿಕೊಳ್ಳುವುದು ಬಹುತೇಕ ಕಷ್ಟ. ಕೆಳಗೆ ಹೇಳಿರುವ ರೋಗಲಕ್ಷಣಗಳು ಕಾಣಿಸಿಕೊಂಡರೆ ಯಾವುದೇ ಕಾರಣಕ್ಕೂ ಕಡೆಗಣಿಸಬೇಡಿ.
  1. ಕಾಮಾಲೆ (Jaundice): ರಕ್ತದಲ್ಲಿ ಬಿಲಿರುಬಿನ್ ಮಟ್ಟ ಹೆಚ್ಚಾಗಿ ಕಣ್ಣಿನ ಬಿಳಿ ಭಾಗ ಹಾಗೂ ಚರ್ಮ ಹಳದಿ ಬಣ್ಣಕ್ಕೆ ತಿರುಗುವ ಲಕ್ಷಣವನ್ನು ಜಾಂಡೀಸ್​ ಎಂದು ಕರೆಯಲಾಗಿದೆ. ಇದು ಕಾಣಿಸಿಕೊಂಡ್ರೆ ಎಚ್ಚರವಿರಲಿ
  2. ಹಸಿವಿನ ಅಭಾವ/ ತೂಕ ನಷ್ಟ: ಊಟ ಮಾಡಲು ಮನಸ್ಸಾಗದಿರುವುದು ಮತ್ತು ಯಾವುದೇ ವ್ಯಾಯಾಮ ಮಾಡದಿದ್ದರೂ ದಿಢೀರ್ ತೂಕ ಇಳಿಕೆಯಾಗುವುದು
  3. ವಿಪರೀತ ಆಯಾಸ: ವಿಶ್ರಾಂತಿ ತೆಗೆದುಕೊಂಡರೂ ಪದೇ ಪದೇ ದೇಹ ದಣಿದಿದೆ ಎನ್ನುವಂತೆ ಸುಸ್ತು ಕಾಡುವುದು
  4. ಹೊಟ್ಟೆ ನೋವು/ ಊತ: ಹೊಟ್ಟೆಯ ಮೇಲ್ಭಾಗದ ಬಲಗಡೆ ನೋವು ಹಾಗೂ ನೀರು ತುಂಬಿಕೊಳ್ಳುವುದರಿಂದ ಹೊಟ್ಟೆ ಊದಿಕೊಳ್ಳುವುದು
  5. ಚರ್ಮದ ಬದಲಾವಣೆ: ತ್ವಚೆಯಲ್ಲಿ ಅತಿಯಾದ ತುರಿಕೆ ಹಾಗೂ ಜೇಡರ ಬಲೆಯಂತೆ ರಕ್ತನಾಳಗಳು ಗೋಚರಿಸುವುದು
  6. ಮೂತ್ರ/ಮಲ: ಬಣ್ಣದ ವ್ಯತ್ಯಾಸ ಕಂಡುಬರುವುದು

ಈ ಅಪಾಯ ಹೆಚ್ಚಿಸುವ ಪ್ರಮುಖ ಅಂಶಗಳು

ಸೋಂಕು ಮತ್ತು ಮದ್ಯಪಾನ: ಚಿಕಿತ್ಸೆ ಪಡೆಯದ ಹೆಪಟೈಟಿಸ್ ಬಿ ಮತ್ತು ಸಿ ಸೋಂಕು ಕ್ಯಾನ್ಸರ್ ಅಪಾಯವನ್ನು 20ರಿಂದ 30 ಪಟ್ಟು ಹೆಚ್ಚಿಸುತ್ತದೆ. ಸೋಂಕಿನ ಜೊತೆಗೆ ಮದ್ಯಪಾನ ಮಾಡುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ.
  1. ಫ್ಯಾಟಿ ಲಿವರ್/ ಬೊಜ್ಜು: ನಾನ್​ ಅಲ್ಕೋಹಾಲಿಕ್​ ಫ್ಯಾಟಿ ಲಿವರ್ (NAFLD), ಬೊಜ್ಜು ಮತ್ತು ಮಧುಮೇಹ ಲಿವರ್ ಆರೋಗ್ಯವನ್ನು ಡ್ಯಾಮೇಜ್ ಮಾಡುತ್ತವೆ. ​
  2. ಸೆಲ್ಫ್​ ಮೆಡಿಕೇಷನ್​: ವೈದ್ಯರ ಸಲಹೆಯಿಲ್ಲದೆ ನೋವು ನಿವಾರಕಗಳು ಹಾಗೂ ಅವೈಜ್ಞಾನಿಕ ಔಷಧಿಗಳನ್ನು ಪದೇ ಪದೇ ಸೇವಿಸುವುದು ಲಿವರ್​ಗೆ ಹೊಡೆತ ಎಂಬುದು ಗೊತ್ತಿರಲಿ.
  3. ವಂಶಪಾರಂಪರ್ಯ: ಕುಟುಂಬದಲ್ಲಿ ಯಾರಿಗಾದರೂ ಲಿವರ್ ಕ್ಯಾನ್ಸರ್ ಅಥವಾ ಹೆಪಟೈಟಿಸ್ ಇತಿಹಾಸವಿದ್ದರೆ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚು.

ಪರಿಹಾರ, ಕಂಟ್ರೋಲ್​ ಹೇಗೆ?

ರೋಗಲಕ್ಷಣಗಳು ಕಾಣಿಸಿಕೊಳ್ಳುವವರೆಗೆ ಕಾಯದೆ ಆಗಾಗ್ಗೆ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಮೊದಲ ಹಂತದ ಮದ್ದು.
  • ನಿಯಮಿತ ತಪಾಸಣೆ: ರಕ್ತ ಪರೀಕ್ಷೆಗಳು (LFT & Alpha-fetoprotein), ಅಲ್ಟ್ರಾಸೌಂಡ್ ಸ್ಕ್ಯಾನಿಂಗ್, ಫೈಬ್ರೋಸ್ಕಾನ್ ಅಥವಾ ಸಿಟಿ/ಎಂಆರ್​ಐ ಸ್ಕ್ಯಾನ್ ಮೂಲಕ ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಬಹುದು. ಪ್ರತಿ 6 ತಿಂಗಳಿಗೊಮ್ಮೆ ಈ ತಪಾಸಣೆ ಮಾಡಿಸಿಕೊಂಡರೆ, ಅದರಲ್ಲಿ ಶೇ.70ರಷ್ಟು ಡ್ಯಾಮೇಜ್ ಆಗಿರುವುದು ಗೊತ್ತಾದರೆ, ಶಸ್ತ್ರಚಿಕಿತ್ಸೆ ಅಥವಾ ಲಿವರ್ ಟ್ರಾನ್ಸ್‌ಪ್ಲಾಂಟ್ ಮೂಲಕ ಸಂಪೂರ್ಣವಾಗಿ ಗುಣಮುಖರಾಗಬಹುದು.
  • ಲಸಿಕೆ ಮತ್ತು ಔಷಧಿ: ಹೆಪಟೈಟಿಸ್ 'ಬಿ'ಗೆ ಪರಿಣಾಮಕಾರಿ ಲಸಿಕೆ ಲಭ್ಯವಿದೆ. ಹೆಪಟೈಟಿಸ್ 'ಸಿ' ಗೆ ಲಸಿಕೆ ಇಲ್ಲ. ಆದರೂ ಅದನ್ನು ಸಂಪೂರ್ಣವಾಗಿ ಗುಣಪಡಿಸುವ ಆಂಟಿ ವೈರಲ್ ಔಷಧಗಳಿವೆ.
  • ಜೀವನಶೈಲಿ ಬದಲಾವಣೆ: ಧೂಮಪಾನ, ಮದ್ಯಪಾನ ಸಂಪೂರ್ಣ ತ್ಯಜಿಸಬೇಕು. ಎಣ್ಣೆಯಲ್ಲಿ ಕರಿದ ಪದಾರ್ಥಗಳು ಮತ್ತು ಅತಿಯಾದ ಸಿಹಿಯನ್ನು ಕಡಿತಗೊಳಿಸಿ. ನಾರಿನಂಶವಿರುವ ತರಕಾರಿ, ಹಣ್ಣು ಹಾಗೂ ಒಮೆಗಾ-3 ಸಮೃದ್ಧವಾಗಿರುವ ಮೀನು/ಬೀಜಗಳು ಸೇವಿಸಿ.
  • ವ್ಯಾಯಾಮ: ದಿನಕ್ಕೆ 30ರಿಂದ 40 ನಿಮಿಷಗಳ ವ್ಯಾಯಾಮ ಫ್ಯಾಟಿ ಲಿವರ್ ಅಪಾಯವನ್ನು ಹಂತ ಹಂತವಾಗಿ ಕಡಿಮೆ ಮಾಡುತ್ತದೆ.

ನಿಮ್ಮ ಗಮನಕ್ಕೆ: ಮೇಲ್ಕಂಡ ವಿಷಯ ನಿಮಗೆ ಮಾಹಿತಿ ನೀಡುವ ಸಲುವಾಗಿ ಹಂಚಿಕೊಂಡಿರುವುದಷ್ಟೇ. ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡಿಸಿಕೊಳ್ಳುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದೇ ಲಿವರ್ ಕ್ಯಾನ್ಸರ್ ವಿರುದ್ಧ ಹೋರಾಡಲು ದೊಡ್ಡ ಅಸ್ತ್ರ. ಹೆಚ್ಚಿನ ಮಾಹಿತಿಗಾಗಿ ವೈದ್ಯರನ್ನು ಸಂಪರ್ಕಿಸುವುದು ಉತ್ತಮ ಸಲಹೆ,(ಏಜೆನ್ಸೀಸ್).