ಲೈಫ್‌ಸ್ಟೈಲ್

ಮನೋಲ್ಲಾಸ: ಪರೋಪಕಾರದ ಸಂತೃಪ್ತಿ

vinaymk1969

| ಡಾ. ವಿ.ಎಚ್.ಮೂಲಿಮನಿ

ಶಾಲೆ ಪ್ರಾರಂಭವಾಯಿತು. ವರ್ಗಶಿಕ್ಷಕರು ಬಂದು ವಿದ್ಯಾರ್ಥಿಗಳ ಹಾಜರಿ ತೆಗೆದುಕೊಂಡಾಗ ರಮೇಶನನ್ನು ಬಿಟ್ಟು ಎಲ್ಲ ಹುಡುಗರು ಹಾಜರಿದ್ದರು. ಸ್ವಲ್ಪ ಸಮಯದ ನಂತರ ರಮೇಶ ‘ನಾನು ಒಳಗೆ ಬರಬಹುದಾ ಸರ್?’ ಎಂದ. ಬರುವಂತೆ ಸೂಚಿಸಿದ ಶಿಕ್ಷಕ ಬೆತ್ತ ಕೈಗೆ ತೆಗೆದುಕೊಂಡರು. ‘ತಡವಾಗಿ ಬಂದಿದ್ದಕ್ಕೆ ಹತ್ತು ಛಡಿ ಏಟಿನ ಶಿಕ್ಷೆ ತಪ್ಪಿದ್ದಲ್ಲ! ಹೂಂ ಕೈ ಮುಂದೆ ಮಾಡು!’ ಎಂದರು ಕೋಪದಿಂದ.

ರಮೇಶ ವಿನಯದಿಂದ ‘ನಾನು ತಡವಾಗಿ ಬಂದ ಕಾರಣ ಹೇಳುವೆ, ಬೇಕಾದರೆ ನಂತರ ಶಿಕ್ಷಿಸಿ’ ಎಂದಾಗ ‘ಹೇಳು ಏಕೆ ತಡವಾಯ್ತು?’ ಎಂದು ಕೇಳಿದರು ಗುರುಗಳು. ‘ನಾನು ಶಾಲೆಗೆ ಬರುತ್ತಿರುವಾಗ ಹಾದಿಯಲ್ಲಿ ವಯಸ್ಸಾದ ಅಜ್ಜಿಯೊಬ್ಬಳು ಭಾರವಾದ ಗೋಣಿಚೀಲ ಹೊತ್ತುಕೊಂಡು ಪ್ರಯಾಸದಿಂದ ಹೊರಟಿದ್ದಳು. ಅವಳಿಗೆ ಸಹಾಯಕರಾರೂ ಇರಲಿಲ್ಲ. ದೀನ, ಬಡವ, ಅಸಹಾಯಕರಿಗೆ ನಮ್ಮಿಂದಾದ ಸಹಾಯ ಮಾಡಬೇಕೆಂದು ನೀವು ಹೇಳಿದ ನೀತಿಕಥೆ ಜ್ಞಾಪಕಕ್ಕೆ ಬಂತು. ಆಗ ನಾನೇ ಆ ಭಾರವಾದ ಗೋಣಿಚೀಲ ಹೊತ್ತುಕೊಂಡು ಅಜ್ಜಿಯನ್ನು ಕ್ಷೇಮವಾಗಿ ಮನೆಗೆ ತಲುಪಿಸಿದೆ’ ಎಂದ ರಮೇಶ. ಈ ನಿಜಸಂಗತಿಯನ್ನು ಕೇಳಿ ಕೈಯಲ್ಲಿದ್ದ ಬೆತ್ತ ಜಾರಿ ಬಿತ್ತು. ಆನಂದದಿಂದ ಶಿಷ್ಯನನ್ನು ತಬ್ಬಿಕೊಂಡರು ಗುರುಗಳು.

ಮನುಷ್ಯ ಸಂಘಜೀವಿ ಇನ್ನೊಬ್ಬರ ಸಹಾಯ, ಸಹಕಾರ ಇಲ್ಲದೆ ಸುಖವಾಗಿ ಬಾಳಲು ಯಾರಿಂದಲೂ ಸಾಧ್ಯವಿಲ್ಲ. ಅಲ್ಲದೆ, ಮಾನವರಲ್ಲಿ ಎಲ್ಲರೂ ಆರ್ಥಿಕವಾಗಿ ಅಥವಾ ಜೀವನದಲ್ಲಿ ಬರಬಹುದಾದ ಕಷ್ಟಸುಖಗಳಲ್ಲಿ ಸಮಾನರಾಗಿರಲು ಸಾಧ್ಯವೇ ಇಲ್ಲ. ಹಾಗಿರುವಾಗ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಬೇಕಾದುದು ಮಾನವನ ಸಹಜ ಪ್ರವೃತ್ತಿ.

ಪರೋಪಕಾರಾಯ ಫಲಂತಿ ವೃಕ್ಷಾಃ

ಪರೋಪಕಾರಾಯ ವಹಂತಿ ನಧ್ಯಾಃ

ಪರೋಪಕಾರಾಯ ದುಹಂತಿಗಾವಃ

ಪರೋಪಕಾರಾರ್ಥ ಮಿದಂಶರೀರಂ

ಮರಗಳು ಇತರರಿಗಾಗಿಯೇ ಹಣ್ಣುಗಳನ್ನು ಕೊಡುತ್ತವೆ

ನದಿಗಳು ಇತರರಿಗಾಗಿಯೇ ಹರಿಯುತ್ತವೆ

ಹಸುಗಳು ಇತರರಿಗಾಗಿಯೇ ಹಾಲನ್ನು ಕೊಡುತ್ತವೆ

ಅಂತೆಯೇ ಮನುಷ್ಯನ ಶರೀರ ಸಹ ಪರೋಪಕಾರಕ್ಕಾಗಿಯೇ

ನಾವೇ ನಮಗಾಗಿ ಬೇಕಾದ ಆಹಾರ, ಬಟ್ಟೆ, ಔಷಧ, ಇತ್ಯಾದಿಗಳನ್ನು ಪಡೆದಾಗ ನಮಗೆ ಸಂತೋಷವಾಗುವುದು ನಿಜ. ಆದರೆ ಅದನ್ನೇ ಬೇರೆಯವರಿಗೆ ಕೊಟ್ಟಾಗ, ಅದರಿಂದಾಗಿ ಅವರು ಸಂತೋಷಪಟ್ಟಾಗ ನಮಗಾಗುವ ಆನಂದ ಇನ್ನೂ ಹೆಚ್ಚು. ಅದೇ ಮನುಷ್ಯನ ಹಿರಿಮೆ. ತಾನು ತನ್ನ ಬದುಕನ್ನು ಸುಖಮಯವನ್ನಾಗಿ ಮಾಡಿಕೊಳ್ಳುವುದು ಮನುಷ್ಯತ್ವ. ಇನ್ನೊಬ್ಬರ ಕಷ್ಟ, ದುಃಖಗಳನ್ನು ಹೋಗಲಾಡಿಸಿ ಅವರ ಕಣ್ಣೀರನ್ನು ಒರೆಸಿ ಅವರಿಗೆ ಸುಖ, ಆನಂದ ಉಂಟುಮಾಡುವುದು ದೈವತ್ವ. ಆದುದರಿದಲೇ ಪರರ ಸೇವೆ ಪರಮಾತ್ಮನ ಸೇವೆಯಂತೆ ಎಂಬುದು ನಮ್ಮ ಜೀವನಮೌಲ್ಯವಾಗಿದೆ. ನರಸೇವೆಯೇ ನಾರಾಯಣನ ಸೇವೆ, ಪರೋಪಕಾರವೇ ಪುಣ್ಯ, ಪರಪೀಡನವೇ ಪಾಪ ಎಂಬ ನಾಣ್ಣುಡಿಗಳು ಜನಜನಿತವಾಗಿರುವುದು ಇದರಿಂದಲೇ. ಈ ತತ್ತ್ವದ ಆಧಾರದ ಮೇಲೆ ಸಾವಿರಾರು ವಿದ್ಯಾಸಂಸ್ಥೆಗಳು, ಅನಾಥಾಲಯಗಳು, ಬಡವಿದ್ಯಾರ್ಥಿಗಳಿಗಾಗಿ ಉಚಿತ ವಿದ್ಯಾರ್ಥಿನಿಲಯಗಳು, ಆಸ್ಪತ್ರೆಗಳು ಸೇವೆ ಸಲ್ಲಿಸುತ್ತಿವೆ. ಹೀಗೆ ಪರೋಪಕಾರದಲ್ಲಿ ತೊಡಗಿಸಿಕೊಂಡು ಮಾನವ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನಿಸೋಣ!

(ಲೇಖಕರು ನಿವೃತ್ತ ಪ್ರಾಧ್ಯಾಪಕರು)