ಲೈಫ್‌ಸ್ಟೈಲ್

ಹಲೋ ಡಾಕ್ಟರ್​; ಉನ್ನತಿ, ಅವನತಿಗಳನ್ನು ನಿರ್ಧರಿಸುವ ಮನಃಸ್ಥಿತಿ

‘ನನಗೇಕೋ ಇಂದು ಮನಸ್ಸಿಗೆ ತುಂಬ ಬೇಜಾರಾಗಿದೆ. ಸ್ವಲ್ಪವೂ ಸಮಾಧಾನವಿಲ್ಲ. ಏನು ಮಾಡಲೂ ಉತ್ಸಾಹವಿಲ್ಲ. ಏನೋ ಕಳವಳ, ಕನವರಿಕೆ’ - ಹೀಗೆ ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಒಂದಲ್ಲ ಒಂದು ಬಾರಿ ಹೇಳದೆ ಇರುವುದಿಲ್ಲ. ಇದು ಮನಃಸ್ಥಿತಿ. ಇದರ ಅರಿವು ಆದಾಗ ಆತ ವಿಚಲಿತನಾಗಿರುತ್ತಾನೆ. ಅದನ್ನೇ ‘ಸಮಾಧಾನವಿಲ್ಲ’ ಎಂಬ ಅರ್ಥದಲ್ಲಿ ಆ ವ್ಯಕ್ತಿ ವ್ಯಕ್ತಪಡಿಸುತ್ತಾನೆ.

ಹಾಗಿದ್ದರೆ ಏನೀ ಅಸಮಾಧಾನ, ಆಲಸ್ಯ ಅಥವಾ ನಿರುತ್ಸಾಹ ಎಂದು ನೋಡಿದಾಗ ತಿಳಿದುಬರುವ ಅಂಶ ಎಂದರೆ - ಮನುಷ್ಯನ ಪ್ರಜ್ಞೆ, ಗ್ರಹಿಕೆ, ವಿವೇಚನೆಗಳು ಕೆಲವು ಸಮಯ ಸ್ತಬ್ಧವಾಗಿರುತ್ತವೆ. ದೇಹದ ತರಂಗದ ವೇಗ ಕ್ಷೀಣಿಸಿರುತ್ತದೆ. ಅದರ ಪರಿಣಾಮವಾಗಿ ಎದುರಾಗುವ ವಿಕಲಸ್ಥಿತಿಯೇ ಬೇಸರ, ಖಿನ್ನತೆ, ಜುಗುಪ್ಸೆಗೆ ಕಾರಣ.

ಮನುಷ್ಯನಲ್ಲಿ ಗ್ರಹಿಕೆ, ಪ್ರಜ್ಞಾವಸ್ಥೆ ಹಲವು ಆಲೋಚನೆಗಳನ್ನು ಹುಟ್ಟುಹಾಕುತ್ತದೆ. ಇನ್ನು ಸುಪ್ತಾವಸ್ಥೆ ಕನಸಿನ ರೂಪ ಪಡೆಯುತ್ತದೆ. ಪ್ರಜ್ಞಾಪೂರ್ವಕ ಮನಸ್ಸು ಎಲ್ಲ ವಿಷಯಗಳನ್ನು ಒಳಗೊಂಡಿದ್ದಾಗಿರುತ್ತದೆ. ಅದೇ ರೀತಿ ಸುಪ್ತಾವಸ್ಥೆಯಲ್ಲಿನ ಕನಸಿನ ರೂಪದ ಮನಃಸ್ಥಿತಿ ವೇಷರೂಪದಲ್ಲಿರುತ್ತದೆ. ಮನುಷ್ಯನಿಗೆ ಭಾವನೆ, ಪ್ರೇರಣೆ, ಸಂವೇದನೆ, ಪ್ರೇಮ, ಸಂವಹನ ಮತ್ತು ಸಂಶೋಧನಾ ವಿಷಯಗಳ ಬಗ್ಗೆ ತಿಳಿಯುವುದು ಮನಸ್ಸಿನಿಂದ ಮಾತ್ರ ಸಾಧ್ಯ. ಅದು ಕೂಡ ಆ ಮನಸ್ಸು ಕ್ರಿಯಾಶೀಲ ಹಾಗೂ ಸ್ವಸ್ಥವಾಗಿದ್ದಲ್ಲಿ ಮಾತ್ರ ಎಂಬುದರ ಅರಿವು ಇಂದು ಎಲ್ಲರಿಗೂ ಅಗತ್ಯವಾಗಿದೆ.

ಮನುಷ್ಯನ ಮಾನಸಿಕ ಪ್ರಕ್ರಿಯೆ ಮತ್ತು ನಡವಳಿಕೆಗಳ ಅಧ್ಯಯನವೇ ಮನೋವಿಜ್ಞಾನ. ಇದು ವೈಜ್ಞಾನಿಕ ಜಗತ್ತಿನ ಎಲ್ಲ ಶಾಸ್ತ್ರಗಳೊಡನೆ ಸಂಬಂಧ ಹೊಂದಿರುತ್ತದೆ. ದೈನಂದಿನ ಚಟುವಟಿಕೆಗಳಲ್ಲಿ ಮನೋವಿಜ್ಞಾನ ಇರುತ್ತದೆ. ಅದು ನಮ್ಮ ಗಮನಕ್ಕೆ ಬರದಿದ್ದರೂ ಇರುವುದಂತೂ ಸತ್ಯ. ಮನೋವಿಜ್ಞಾನ ಅತ್ಯಂತ ಆಕರ್ಷಕ ಮತ್ತು ಶ್ರೀಮಂತ ವಿಷಯವೂ ಹೌದು. ಮನುಷ್ಯ ಮನೋವೈಜ್ಞಾನಿಕವಾಗಿ ಕಾರ್ಯನಿರ್ವಹಿಸಿದ್ದೇ ಆದರೆ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರುವವರು ಎಲ್ಲ ಸಮಸ್ಯೆಗಳಿಂದ ಮುಕ್ತಿ ಪಡೆಯುವುದು ಸುಲಭ.

ಆರೋಗ್ಯ, ಸಂತೋಷ ಮತ್ತು ಸಮಗ್ರ ಯೋಗಕ್ಷೇಮವನ್ನು ಪ್ರಭಾವಿಸುವ ಪಾತ್ರವನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ಮನೋವಿಜ್ಞಾನ ತಂದುಕೊಡುತ್ತದೆ. ಹೀಗಾಗಿ ಅದರ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಮನುಷ್ಯನ ಉನ್ನತಿ ಮತ್ತು ಅವನತಿ ಎರಡನ್ನೂ ಮನಃಸ್ಥಿತಿಯೇ ನಿರ್ಧರಿಸುತ್ತದೆ ಮತ್ತು ರೂಪಿಸುತ್ತದೆ.

ಈ ಹಿಂದೆ ಹೇಳಿದಂತೆ ಮನಸ್ಸು ಸರಿ ಇದ್ದರೆ ಎಲ್ಲದಕ್ಕೂ ಹುಮ್ಮಸ್ಸು ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ. ಚಿಂತೆ, ಯೋಚನೆ, ಆಲೋಚನೆಗಳ ಕಂತೆಯ ಸಂತೆ ಮನಸ್ಸಿನದು. ಮನಸ್ಸು ಸ್ವಸ್ಥ ಆಲೋಚನೆಗಳತ್ತ ಸುತ್ತಾಡಿದಾಗ ಸ್ವಸ್ಥ ಚಿಂತನೆ ಅಥವಾ ಉತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯ. ಮಾನಸಿಕ ಕ್ಷೋಭೆ ತರುವ ಸಂಕಷ್ಟ ಅಷ್ಟಿಷ್ಟಲ್ಲ. ಅದಕ್ಕೆ ನಮ್ಮೆದುರು ಸಾಕಷ್ಟು ನಿದರ್ಶನಗಳು ಸಿಗುತ್ತವೆ.

ಮನಸ್ಸು ಭೌತಿಕ ಹತೋಟಿಯಲ್ಲಿ ಇಲ್ಲದಿದ್ದರೂ ನರಮಂಡಲ ಇರುವುದು ಮಿದುಳಿನಲ್ಲಿ. ನರಕೋಶಗಳ ಸಮೂಹದಿಂದ ಈ ಮಿದುಳಿನ ಮೂಲಕ ಮನಸ್ಸು ನಿಯಂತ್ರಿಸಲ್ಪಡುತ್ತದೆ. ಬೇಡಿಕೆಗಳಿಗೆ ಕಡಿವಾಣ ಹಾಕುವುದು ಮತ್ತು ಪ್ರೇರೇಪಿಸುವುದು ಈ ಎರಡೂ ಆಲೋಚನೆಗಳನ್ನು ಸೃಷ್ಟಿಸುವುದು ಮನಸ್ಸೇ. ಹಲವರಲ್ಲಿ ಈ ಮನಸ್ಸು ವಿಶ್ಲೇಷಣಾತ್ಮಕವಾಗಿರಬಹುದು ಇನ್ನು ಕೆಲವರಲ್ಲಿ ಇದು ವಿಕೃತರೂಪದಲ್ಲಿರಬಹುದು. ವಿಶ್ಲೇಷಣಾತ್ಮಕ ಮನಸ್ಸಿಗೆ ರ್ತಾಕ ಸರಪಳಿಗಳನ್ನು ನಿರ್ವಿುಸುವ ಸಾಮರ್ಥ್ಯವಿದ್ದರೆ, ಹಿಂಸಾತ್ಮಕ ಮನಸ್ಸು ವಿಕೃತರೂಪದ್ದಾಗಿರುತ್ತದೆ.

ಮಾನಸಿಕ ಖಿನ್ನತೆಯನ್ನು ಗೆಲ್ಲಲು ಇಂದು ಮನೋವಿಜ್ಞಾನದಲ್ಲಿ ಹಲವು ಕ್ರಮಗಳು ಬಂದಿವೆ. ನಾವು ವಾಸಿಸುವ ಪರಿಸರ ಮತ್ತು ನಮ್ಮ ಮನಸ್ಸಿನ ಚಿಂತನೆಗಳು ನಮ್ಮ ನಡವಳಿಕೆಯನ್ನು ರೂಪಿಸುತ್ತವೆ. ಅದಕ್ಕೆ ಪೂರಕವಾಗಿ ನಮ್ಮಲ್ಲಿರುವ ಧ್ಯಾನ, ಯೋಗದಂತಹ ಪದ್ಧತಿಗಳನ್ನು ಅನುಸರಿಸಿದಲ್ಲಿ ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಸ್ವಸ್ಥ ಮನಸ್ಸನ್ನು ಹೊಂದುವ ಮೂಲಕ ಸ್ವಸ್ಥ ಸಮಾಜ ನಿರ್ವಣಕ್ಕೆ ತನ್ನದೇ ಆದ ಕೊಡುಗೆ ನೀಡಬಹುದು.