ಮಾರ್ಚ ಎರಡು ಅಥವಾ ಮೂರನೆಯ ವಾರ ಬಂತೆಂದರೆ ಸಾಕು ಪಾಲಕರಿಗೆ, ಪೋಷಕರಿಗೆ ಇನ್ನಿಲ್ಲದ ತಳಮಳ ಶುರುವಾಗಿರುತ್ತದೆ. ಪಿಯುಸಿ ಮತ್ತು ಎಸ್ಎಸ್ಎಲ್ಸಿ ಮಾತ್ರವಲ್ಲ, ಈಗಂತೂ ಎಲ್ಲ ತರಗತಿಗಳ ಮಕ್ಕಳಿಗೂ ಈ ಪರೀಕ್ಷೆ ಜ್ವರ ಕೂಡ ಕಾಡಲಾರಂಭಿಸುತ್ತದೆ. ಈ ಜ್ವರಕ್ಕೆ ಮದ್ದು ಎಂದರೆ ಮನೋಬಲ. ಹೌದು, ಮನಸ್ಸು ಬಲಯುತವಾಗಿದ್ದರೆ ಎಂತಹ ದುಗುಡ, ಆತಂಕ, ಸಮಸ್ಯೆಯನ್ನು ಧೈರ್ಯದಿಂದ ಎದುರಿಸಬಹುದು. ಇದಕ್ಕೆ ಪರೀಕ್ಷೆ ಕೂಡ ಹೊರತಾಗಿಲ್ಲ.
ಎಸ್ಎಸ್ಎಲ್ಸಿ ಅಥವಾ ಪಿಯುಸಿ ಜೀವನದ ನಿರ್ಣಾಯಕ ಹಂತಗಳು.ಯೌವನದ ಹೊಸ್ತಿಲಲ್ಲಿ ಹೊಂಗನಸು ಕಾಣುವ ವಯಸ್ಸು. ಭವಿಷ್ಯ ಬಗ್ಗೆ ಕಟ್ಟಿಕೊಂಡ ಕನಸುಗಳನ್ನು ನನಸಾಗಿಸಲು ಉತ್ತಮ ವೇದಿಕೆ ಕೂಡ ಹೌದು. ಆದರೆ ಈ ಹಂತದಲ್ಲೇ ಬಹುಪಾಲು ವಿದ್ಯಾರ್ಥಿಗಳು ಇಂದು ಮಾನಸಿಕ ಅಸ್ವಸ್ಥತೆಗೆ ಒಳಗಾಗುತ್ತಿರುವುದು ಕಂಡುಬರುತ್ತಿದೆ. ಇವರ ಸ್ಥಿತಿ ನೋಡಿ ಪಾಲಕರೂ ಖಿನ್ನತೆಗೆ ಒಳಗಾಗಿದ ಉದಾಹರಣೆಗಳು ನಮ್ಮ ಮಧ್ಯೆ ಹಲವು. ಓದಿನಲ್ಲಿ ಅತೃಪ್ತಿ, ನಿರೀಕ್ಷೆಯ ಭಾರ - ಹೀಗೆ ನೂರೆಂಟು ತಳಮಳಗಳು ವಿದ್ಯಾರ್ಥಿಯನ್ನು ಇಂದು ಮಾನಸಿಕ ಖಿನ್ನತೆಗೆ ನೂಕುತ್ತಿವೆ. ಜತೆಜತೆಗೆ ಕೀಳರಿಮೆಯನ್ನೂ ಉಂಟುಮಾಡುತ್ತಿವೆ. ಪಾಲಕರಿಂದ ಅಂಕಗಳಿಕೆಯ ಒತ್ತಡದ ಮಧ್ಯೆ ಸ್ನೇಹಿತರೊಡನೆ ಮೋಜು ಮಸ್ತಿ ಮಾಡಬೇಕೆನ್ನುವ ಹಂಬಲ, ವಯಸ್ಸಹಜ ಮನೋಕಾಮನೆಗಳನ್ನು ಅದಮಿಟ್ಟುಕೊಳ್ಳಲಾಗದ ಸ್ಥಿತಿ ಎದುರಿಸುವ ಹದಿಹರೆಯದ ವಿದ್ಯಾರ್ಥಿಗಳು ಇಂದು ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ. ವೈಯಕ್ತಿಕ ಬದುಕಿನ ಜತೆಗೆ ಪಾಲಕರ ಆತಂಕವೂ ವೃದ್ಧಿಯಾಗುತ್ತ ಹೋಗುತ್ತದೆ. ಪಾಲಕರು ಸಹ ಮಕ್ಕಳನ್ನು ಈ ವೇಳೆ ಸ್ನೇಹಿತರಂತೆ ಭಾವಿಸಬೇಕು. ಕಟ್ಟುನಿಟ್ಟಿನ ಆಚರಣೆ, ಜೀವನಶೈಲಿ ಹೇರಬಾರದು. ಉತ್ತಮ ಸ್ನೇಹಿತನಾಗಿ ಅವನ ಆಸೆ ಆಕಾಂಕ್ಷೆಗಳನ್ನು ಅರಿತು ಸೂಕ್ತ ಸಲಹೆ ಹಾಗೂ ಆಪ್ತಸಂವಾದ ನಡೆಸಿದಾಗ ಮಕ್ಕಳು ಕೀಳರಿಮೆ ಹಾಗೂ ಖಿನ್ನತೆಯಿಂದ ಹೊರಬರುತ್ತಾರೆ. ಲವಲವಿಕೆಯಿಂದ ಪುಟಿದೇಳುತ್ತಾರೆ. ಚೈತನ್ಯದ ಚಿಲುಮೆಗಳಾಗುತ್ತಾರೆ. ವಿದ್ಯಾರ್ಥಿಜೀವನವನ್ನು ಎಂಜಾಯ್ ಮಾಡುತ್ತ ಸಾಧನೆಯ ಮೆಟ್ಟಿಲು ಏರಬೇಕೆಂದರೆ ಮನಸ್ಸು ಸ್ವಸ್ಥವಾಗಿರಬೇಕು. ಮನೋಬಲ ವೃದ್ಧಿಸಿಕೊಂಡು ಹೆತ್ತವರಿಗೂ ಹೆಮ್ಮೆಯ ಮಕ್ಕಳಾಗಬೇಕು.
ಪರೀಕ್ಷೆ ಬಂದಾಗ ನಿದ್ದೆಗೆಟ್ಟು ಓದುವ ಬದಲು ನಿಯಮಾನುಸಾರ ಶಿಸ್ತುಬದ್ಧ ಓದಿನ ಕ್ರಮ ಅನುಸರಿಸಿದಲ್ಲಿ ಟೆನ್ಶನ್ ಮಾಯವಾಗುತ್ತದೆ. ನಿದ್ದೆಗೆಟ್ಟು ಓದುವುದರಲ್ಲಿ ಅರ್ಥವಿಲ್ಲ. ಎಲ್ಲರಲ್ಲೂ ಪರೀಕ್ಷಾ ಕೊಠಡಿ ಪ್ರವೇಶಿಸುವ ಮುನ್ನ ಒಂದು ತರಹದ ದುಗುಡ ಇದ್ದೇ ಇರುತ್ತದೆ. ಎಂತಹ ಪ್ರಶ್ನೆಗಳು ಬರುತ್ತವೆ? ನಾನು ಬರೆಯಬಲ್ಲೆನೋ ಇಲ್ಲವೋ? ಓದಿದ್ದು ನೆನಪಾಗುತ್ತವೋ ಇಲ್ವೋ? ಹೀಗೆ ನೂರೆಂಟು ಆತಂಕ ಸಹಜ. ಇದರ ಮಧ್ಯೆಯೂ ಆತಂಕಕ್ಕೆ ಒಳಗಾಗದೇ ಸಮಾಧಾನದಿಂದ ತಾಳ್ಮೆಯಿಂದ ಪರೀಕ್ಷೆ ಎದುರಿಸಿ. ಓದಿದ್ದೆಲ್ಲ ಸ್ಮೃತಿಪಟಲದಲ್ಲಿ ಇರುತ್ತದೆ. ಬರೆಯುತ್ತ ಹೋದಂತೆ ಒಂದೊಂದಾಗಿ ಸರಾಗವಾಗಿ ನೆನಪಾಗುತ್ತ ಹೋಗುತ್ತದೆ. ಅನಗತ್ಯ ಆತಂಕ ಬೇಡ. ಶಿಸ್ತುಬದ್ಧ ಅಧ್ಯಯನ, ತಾಳ್ಮೆ ರೂಢಿಸಿಕೊಂಡಿದ್ದೇ ಆದಲ್ಲಿ ಯಶಸ್ಸು ಖಚಿತ. ಆಲ್ ದಿ ಬೆಸ್ಟ್.