ಲೈಫ್‌ಸ್ಟೈಲ್

ಹೃದಯಾಘಾತ ನಿಯಂತ್ರಣದ ಮಾರ್ಗೋಪಾಯಗಳು...

lakshmihegde
ಈ ಅಂಕಣದಲ್ಲಿ ಹೃದಯಾಘಾತದಲ್ಲಿ ನಿಯಂತ್ರಿಸಬಹುದಾದ (Modifiable Risk Factors) ಬೊಜ್ಜಿನ ಬಗ್ಗೆ ತಿಳಿಯೋಣ.

ಬೊಜ್ಜು (Obesity): ಬೊಜ್ಜುತನವು ಇತ್ತೀಚೆಗೆ ಜಗತ್ತಿನಾದ್ಯಂತ ತೀವ್ರಗತಿಯಲ್ಲಿ ಹೆಚ್ಚುತ್ತಿದೆ. ಇದರಿಂದ ಹೃದಯಾಘಾತ, ಪಾರ್ಶ್ವವಾಯು ಆಗುವ ಸಂಭವ ಮೂರ್ನಾಲ್ಕು ಪಟ್ಟು ಜಾಸ್ತಿಯಾಗುವುದಲ್ಲದೆ, ಇನ್ನೂ ಬೇರೆ ಮಾರಣಾಂತಿಕ ಹಾನಿಯೂ ಆಗುವುದುಂಟು.

ಬೊಜ್ಜುತನದಲ್ಲಿ ಎರಡು ಪ್ರಕಾರಗಳು 1) ಇಡೀ ದೇಹವು ಬೊಜ್ಜಾಗಿರುವುದು(Genarlized Obesity) ಮತ್ತು 2) ಹೊಟ್ಟೆಯ ಬೊಜ್ಜುತನ (Abdominal Obesity)

ಪಾಶ್ಚಾತ್ಯರಲ್ಲಿ ಉದಾಹರಣೆಗೆ ಅಮೆರಿಕದಲ್ಲಿ ಪ್ರತಿ ಮೂರು ಜನರಲ್ಲಿ ಒಬ್ಬರಿಗೆ ಇಡೀ ದೇಹದ ಬೊಜ್ಜುತನ ಕಂಡುಬರುತ್ತದೆ. ಬೊಜ್ಜುತನವನ್ನು ಪರೀಕ್ಷಿಸಲು ಎರಡು ಪ್ರಕಾರದ ಅಳತೆಯ ಪ್ರಮಾಣಗಳನ್ನು ಪರಿಗಣಿಸಲಾಗುತ್ತದೆ. 1) ಬಾಡಿ ಮಾಸ್ ಇಂಡೆಕ್ಸ್ (Body Mass Index) BMI 2) ಸೊಂಟದ ಸುತ್ತಳತೆ (Waist Circumference) (ಹೊಕ್ಕುಳದ ಮಟ್ಟಕ್ಕೆ) ತೂಕ ಮತ್ತು ಎತ್ತರಗಳಿಂದ BMI ಕಂಡುಹಿಡಿಯಬಹುದು. ಭಾರತೀಯರಲ್ಲಿ ಇಪ್ಪತ್ಮೂರಕ್ಕಿಂತ ಹೆಚ್ಚಾದಲ್ಲಿ ಬೊಜ್ಜು ಇದೆಯೆಂದು ಪರಿಗಣಿಸಲಾಗುವುದು (23 kg/m2)

ಈ ಕೆಳಗಿನ ಮಾಹಿತಿಯನ್ನು ಗಮನಿಸಿ

BMI                                       ಅರ್ಥ

18.5ಕ್ಕಿಂತ ಕಡಿಮೆ                         ಕಡಿಮೆ ತೂಕ

18.5ರಿಂದ 22.9ರವರೆಗೆ                  ಆರೋಗ್ಯಕರ ತೂಕ

23 ಮತ್ತು ಹೆಚ್ಚು                             ಬೊಜ್ಜುತನ

ಹೊಟ್ಟೆಯ ಸುತ್ತಳತೆಯು (Waist Circumference) ಗಂಡುಮಕ್ಕಳಲ್ಲಿ 90 cms (35.4 Inch),  ಹೆಣ್ಣುಮಕ್ಕಳಲ್ಲಿ80 cms (31.5 Inch).  ಇದೇ ಅಂಕಿಸಂಖ್ಯೆಗಳು ಪಾಶ್ಚಾತ್ಯ ಗಂಡುಮಕ್ಕಳಲ್ಲಿ 102 cms, ಹೆಣ್ಣುಮಕ್ಕಳಲ್ಲಿ 88cms ಇರುತ್ತದೆ. ಏಷ್ಯಾಖಂಡದಲ್ಲಿ ಇರುವ ಜನರಲ್ಲಿ ಈ ಅಂಕಿಸಂಖ್ಯೆಯು ಕಡಿಮೆ ಪ್ರಮಾಣದಲ್ಲಿದ್ದರೂ ಬೊಜ್ಜುತನದಿಂದ ಆಗುವ ಹಾನಿ ಪಾಶ್ಚಾತ್ಯರಿಗಿಂತ ತೀವ್ರ ಹೆಚ್ಚು. ವಿಶೇಷವಾಗಿ ಭಾರತೀಯರಲ್ಲಿ ಹೊಟ್ಟೆಯ ಕೊಬ್ಬು ಜಾಸ್ತಿ. ಅದಕ್ಕೆಂದೇ ಭಾರತೀಯರಿಗೆ ‘ತೆಳ್ಳಗಿನ ಕೈಕಾಲು, ದಪ್ಪಗಿನ ಹೊಟ್ಟೆ’ (Thin, Fat Indian) ಎಂಬ ಡೊಂಕು(Nick Name) ಹೆಸರು ಕೊಡಲಾಗುವುದು.

ಹೊಟ್ಟೆಯಲ್ಲಿಯ ಕೊಬ್ಬು ದೇಹದ ಇನ್ನಿತರ ಕೊಬ್ಬಿಗಿಂತ ಹೆಚ್ಚು ಹಾನಿಕರವಾಗಿದ್ದು, ರಕ್ತನಾಳಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆಗೊಳ್ಳುತ್ತದೆ. ಇದರಿಂದಾಗಿ ಇಂತಹವರಲ್ಲಿ ಹೃದಯಾಘಾತ, ಮಧುಮೇಹ ಹಾಗೂ ಬಿಪಿ ಜಾಸ್ತಿ. ಬೊಜ್ಜುತನದಿಂದ ಕೀಲುನೋವು, ನಿದ್ರೆಯಲ್ಲಿ ಉಸಿರುಗಟ್ಟುವುದು, ಪಾರ್ಶ್ವವಾಯು, ಮೂತ್ರಪಿಂಡ, ದೊಡ್ಡ ಕರುಳು ಹಾಗೂ ಯಕೃತ್ತಿನ ಕ್ಯಾನ್ಸರ್, ಹೊಟ್ಟೆಯಲ್ಲಿ ಹೆಚ್ಚು ಗ್ಯಾಸ್ ಆಗುವುದು, ಪಿತ್ತಕೋಶದಲ್ಲಿ ಹರಳುಗಳು, ಮೂತ್ರಪಿಂಡ ವೈಫಲ್ಯ, ಬಂಜೆತನ ಮುಂತಾದ ಸಮಸ್ಯೆಗಳು ಕೂಡ ಸಾಮಾನ್ಯ. ಬೊಜ್ಜುತನದಿಂದ ವಿಶೇಷವಾಗಿ ಮಕ್ಕಳಿಗೆ ಮುಜುಗರ ಆಗುವುದುಂಟು. ಭಾರತದ ಶಾಲಾ-ಕಾಲೇಜುಗಳಲ್ಲಿನ ಸಾಕಷ್ಟು ಬೊಜ್ಜುಳ್ಳ ಮಕ್ಕಳಲ್ಲಿ ನೂರಕ್ಕೆ 25ರಷ್ಟು ಮಾನಸಿಕ ತೊಂದರೆ ಸಾಮಾನ್ಯ. ಇದರಿಂದ ಅವರ ಶೈಕ್ಷಣಿಕ ಜೀವನ ಕೂಡ ಕುಂಠಿತವಾಗುವ ಸಂಭವ ಹೆಚ್ಚು. ಬೊಜ್ಜುತನಕ್ಕೆ ಸಾಮಾನ್ಯ ಕಾರಣಗಳೆಂದರೆ - ದೈಹಿಕ ಶ್ರಮ ಇಲ್ಲದಿರುವುದು, ತಾಸುಗಟ್ಟಲೆ ಆರಾಮ ಕುರ್ಚಿಯಲ್ಲಿ ಕುಳಿತು ಟಿವಿ ನೋಡುವುದು, ಅತಿ ಹೆಚ್ಚು ತಿನ್ನುವುದು, ಅನುವಂಶೀಯತೆ, ಹೆಚ್ಚು ಪಿಷ್ಟಪದಾರ್ಥ ಸೇವಿಸುವುದು, ಮೇಲಿಂದ ಮೇಲೆ ತಿನ್ನುವುದು ಮತ್ತು ಮಾನಸಿಕ ಒತ್ತಡ ಮುಂತಾದವುಗಳು. ಥೈರಾಯ್ಡ್​​ ಗ್ರಂಥಿಯ ಬೇನೆ, ಅಂಡಾಣು ತಯಾರಿಸುವ ಭಾಗದ ಬೇನೆ ಮುಂತಾದ ಹಲವಾರು ಜಡ್ಡುಗಳು ಕೂಡ ಬೊಜ್ಜುತನಕ್ಕೆ ಕಾರಣಗಳು.