ಭಾರತೀಯರಾದ ನಾವು ಸಾಂಬಾರಪದಾರ್ಥಗಳನ್ನು ಹೆಚ್ಚಾಗಿಯೇ ಉಪಯೋಗಿಸುತ್ತೇವೆ. ಇವು ಅಡುಗೆಗೆ ಮಾತ್ರವಲ್ಲ; ಔಷಧೀಯ ವಸ್ತುಗಳಾಗಿ ಕೂಡ ಪ್ರಾಚೀನಕಾಲದಿಂದಲೂ ಉಪಯೋಗಿಸಲ್ಪಡುತ್ತಿವೆ. ಇಂಗು, ಓಮಕಾಳು (ಅಜವಾನ), ಲವಂಗ, ಜಾಯಿಕಾಯಿ, ಜಾಯಿಪತ್ರೆ, ಸಾಸಿವೆ, ದಾಲ್ಚಿನ್ನಿ (ಚಕ್ಕೆ), ಏಲಕ್ಕಿ, ಅರಿಶಿಣ, ಕಾಳುಮೆಣಸು, ಕೆಂಪುಮೆಣಸು, ಕೊತ್ತಂಬರಿ ಕಾಳು, ಶುಂಠಿ, ಜೀರಿಗೆ, ಮೆಂತ್ಯ, ಬಡೆಸೊಪ್ಪು (ಸೋಂಪುಕಾಳು), ಕೇಸರಿ, ಬೆಳ್ಳುಳ್ಳಿ ಇವು ಸಾಮಾನ್ಯವಾಗಿ ಬಳಕೆಯಾಗುವಂಥವು. ಇಂದು ಕಾಳುಮೆಣಸಿನ ಉಪಯುಕ್ತತೆಯ ಬಗ್ಗೆ ತಿಳಿದುಕೊಳ್ಳೋಣ.
ನಮ್ಮ ದೇಹಕ್ಕೆ ಅತ್ಯಗತ್ಯವಾಗಿ ಬೇಕಾದ ವಿಟಮಿನ್ ಸಿ ನೈಸರ್ಗಿಕವಾಗಿ ಹೆಚ್ಚಿರುವಂಥದ್ದು ಹಸಿರು ಮೆಣಸು. ಆಹಾರಪದಾರ್ಥಗಳ ತಯಾರಿಕೆಯಲ್ಲಿ ಬಳಸುವುದರಿಂದ ಅವುಗಳ ರುಚಿಯನ್ನು ಹೆಚ್ಚಿಸಲು ಸಹಕಾರಿ. ಇದು ಹಣ್ಣಾದಾಗ ಒಣಗಿಸಿ ಉಪಯೋಗಿಸಲಾಗುತ್ತದೆ. ಮೂಲವ್ಯಾಧಿ ಸಮಸ್ಯೆ ಇರುವವರು ಹಸಿರು ಮೆಣಸು ಸೇವಿಸದಿರುವುದು ಉತ್ತಮ. ಒಣಮೆಣಸಿನಿಂದ ಆರೋಗ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಆದರೆ ಅತಿಯಾಗಿ ಮೆಣಸನ್ನು ಉಪಯೋಗಿಸುವುದರಿಂದ ಹೊಟ್ಟೆಯನ್ನು ಹಾಳು ಮಾಡುವ ಸಂಭವವೂ ಇರುತ್ತದೆ. ಆದ್ದರಿಂದ ಬಳಸುವಾಗ ಎಚ್ಚರಿಕೆ ಅಗತ್ಯ. ಬಹುಶಃ ಸಾಂಬಾರಪದಾರ್ಥಗಳನ್ನು ಒಣಗಿಸಿ, ಒಣ ಜಾಗ ದಲ್ಲಿಯೇ ಶೇಖರಿಸಿಡಲಾಗುತ್ತದೆ. ಕೆಲವೊಂದು ಪದಾರ್ಥಗಳನ್ನು ಅತೀ ಹೆಚ್ಚು ಕಾಲ ಶೇಖರಿಸಿಡುವುದರಿಂದ ಅದರ ಪರಿಮಳ ಬದಲಾಗಬಹುದು, ಅದರ ಗುಣಗಳೂ ಕಡಿಮೆ ಆಗಬಹುದು. ಆದ್ದರಿಂದ ಚೆನ್ನಾಗಿ ಒಣಗಿಸಿದ ನಂತರ ಸಾಂಬಾರಪದಾರ್ಥಗಳನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಡಬೇಕು. ಇದರಿಂದ ಸಾಂಬಾರಪದಾರ್ಥಗಳ ಆರೋಗ್ಯ ಸಹಕಾರಿ ಗುಣಗಳು ನಷ್ಟವಾಗದಂತೆ ಹಾಗೂ ಅವು ತಾಜಾ ಇರುವಂತೆ ಕಾಪಾಡಿಕೊಳ್ಳಲು ಸಾಧ್ಯ.