ಲೈಫ್‌ಸ್ಟೈಲ್

ತಲೆಗೂದಲಿನ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

Mandara
ತಲೆಗೂದಲಿಗೆ ಜೀವವಿಲ್ಲದಿದ್ದರೂ ಎಷ್ಟೋ ಜನರಿಗೆ ಅದೆಂದರೆ ಜೀವ. ಏಕೆಂದರೆ ಸುಂದರವಾಗಿ ಕಾಣಲು ಅದು ಅತ್ಯವಶ್ಯ. ಕೂದಲಿನ ಸ್ವಾಸ್ಥ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಎಷ್ಟೋ ರೀತಿಯ ಹೇರ್ ಆಯಿಲ್ ಮತ್ತು ಶ್ಯಾಂಪೂಗಳನ್ನು ಬಳಸಿ ನೋಡಿದರೂ ಕೂದಲು ಉದುರುವ ಸಮಸ್ಯೆ ಮಾತ್ರ ಪರಿಹಾರವಾಗುತ್ತಿಲ್ಲ ಎನ್ನುವವರು ಬಹಳ ಮಂದಿ. ತಲೆಗೆ ಎಣ್ಣೆ ಹಚ್ಚುವುದು ಕೂದಲಿಗೆ ಹಿತಕರವೇ ಆದರೂ ಕೂದಲು ಉದುರುವಿಕೆಯ ಮೂಲ ಕಾರಣಕ್ಕೆ ಚಿಕಿತ್ಸೆ ಮಾಡಿಕೊಳ್ಳದಿದ್ದರೆ ಅದು ಪರಿಹಾರವಾಗಲು ಸಾಧ್ಯವಿಲ್ಲ. ಎಷ್ಟೋ ಬಾರಿ ಥೈರಾಯ್್ಡೆ ಸಂಬಂಧಿಸಿದ ಸಮಸ್ಯೆಗಳು, ರಕ್ತಹೀನತೆ, ಅಸಿಡಿಟಿ, ಹಾಮೋನ್ ವ್ಯತ್ಯಯ ಮತ್ತು ಸೋರಿಯಾಸಿಸ್​ಗಳ ಕಾರಣದಿಂದಲೂ ಕೂದಲು ಉದುರುತ್ತದೆ. ಹಾಗಾಗಿ ಈ ಮೂಲ ಸಮಸ್ಯೆಗಳಿಗೆ ಚಿಕಿತ್ಸೆ ಮಾಡಿಕೊಂಡರೆ ಸಮಸ್ಯೆಯೂ ತಾನಾಗಿಯೇ ನಿವಾರಣೆಯಾಗುತ್ತದೆ. ಕೂದಲು ಸೊಂಪಾಗಿ ಬೆಳೆಯಲು ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶ ಇರುವ ಆಹಾರವನ್ನು ಹೆಚ್ಚಾಗಿ ಸೇವಿಸುವುದು ಅವಶ್ಯ. ಹಾಗಾಗಿ ನೆಲ್ಲಿಕಾಯಿ ಅತ್ಯುತ್ತಮವಾದದ್ದು. ಬೆಟ್ಟದ ನೆಲ್ಲಿಕಾಯಿಯನ್ನು ದಿನಕ್ಕೊಂದರಂತೆ ವರ್ಷಪೂರ್ತಿ ಸೇವಿಸಬಹುದು. ಒಣದ್ರಾಕ್ಷಿಯನ್ನು ಹೆಚ್ಚಾಗಿ ಸೇವಿಸುವುದರಿಂದ ಆಹಾರದಲ್ಲಿ ಸೇವಿಸಿದ ಕಬ್ಬಿಣದ ಅಂಶವನ್ನು ದೇಹ ಚೆನ್ನಾಗಿ ಹೀರಿಕೊಳ್ಳಲು ಸಹಾಯವಾಗುತ್ತದೆ. ಒಳ್ಳೆಯ ಕೊಬ್ಬಿನ ಸೇವನೆ ಕೂದಲಿನ ಆರೋಗ್ಯಕ್ಕೆ ಅವಶ್ಯವಾಗುತ್ತದೆ. ದೇಸಿ ಆಕಳ ಹಾಲು, ತುಪ್ಪ, ಬೆಣ್ಣೆ, ಗಾಣದಲ್ಲಿ ತೆಗೆದ ಎಣ್ಣೆ ಉಪಯುಕ್ತವಾದವು. ಎಳ್ಳನ್ನು ನಿಯತವಾಗಿ ಸೇವಿಸುವುದರಿಂದ ದೇಹಕ್ಕೆ ಸರಿಯಾಗಿ ಕ್ಯಾಲ್ಸಿಯಂ ಸಿಕ್ಕಿ ಮೂಳೆ ಮತ್ತು ಕೂದಲಿನ ಆರೋಗ್ಯ ವೃದ್ಧಿಯಾಗುತ್ತದೆ. ಬಾದಾಮಿ, ಗೋಡಂಬಿ, ತೆಂಗಿನಕಾಯಿ, ಗೋದಿಹುಲ್ಲು ಮುಂತಾದವು ಕೂದಲು ಹುಟ್ಟುವ ಸ್ಥಳದಲ್ಲಿ (ಹೇರ್ ಫಾಲಿಕಲ್ಸ್) ಶೀಘ್ರವಾಗಿ ಬೆಳೆಯುವುದನ್ನು ಪ್ರಚೋದಿಸುತ್ತವೆ.

ಹುಟ್ಟಿದ ಕೂದಲು ನೀಳವಾಗಿ, ಸುಂದರವಾಗಿ ಬೆಳೆಯ ಬೇಕೆಂದರೆ ಮೆಂತ್ಯ, ನೆಲ್ಲಿಕಾಯಿ, ನೆಲನೆಲ್ಲಿ, ದಾಸವಾಳಗಳ ಸೇವನೆ ಅತ್ಯಂತ ಹಿತಕರ. ಕೂದಲು ಬೆಳ್ಳಗಾಗುವುದನ್ನು ತಪ್ಪಿಸಲು ಕನಿಷ್ಠ ಅಡುಗೆಯಲ್ಲಾದರೂ ಆಗಾಗ ಭೃಂಗರಾಜ, ಮದರಂಗಿ ಎಲೆ, ನೆಲ್ಲಿಕಾಯಿ, ಕರಿಬೇವುಗಳ ಸೇವನೆ ಮಾಡಬೇಕು. ಆಯುರ್ವೆದ ಸಿದ್ಧಾಂತದ ಪ್ರಕಾರ ಜಠರಾಗ್ನಿಯ ಕೊರತೆಯಿಂದ ಕೂಡ ಧಾತುಗಳಿಗೆ ಪೋಷಣೆ ಸಿಗದೆ ಕೂದಲು ಉದುರುವಂತಹ ಸಮಸ್ಯೆಗಳಾಗುತ್ತವೆ. ಹಾಗಾಗಿ ಹಿತಮಿತ ಆಹಾರ ಮತ್ತು ಜೀರ್ಣಶಕ್ತಿ ಹೆಚ್ಚು ಮಾಡುವಂತಹ ಜೀರಿಗೆ, ಕೊತ್ತಂಬರಿ, ಶುಂಠಿ ಮುಂತಾದ ಸಾಂಬಾರಪದಾರ್ಥಗಳ ಕಷಾಯವನ್ನು ದಿನಕ್ಕೊಮ್ಮೆ ಸೇವಿಸುವುದರಿಂದ ಪರೋಕ್ಷವಾಗಿ ಪ್ರಯೋಜನವಾಗುತ್ತದೆ.

ಕೂದಲಿಗೆ ಹೊರಗಡೆಯಿಂದ ಅನುಕೂಲ ಮಾಡಿಕೊಡ ಬೇಕೆಂದರೆ ಕೂದಲ ಬುಡಗಳಿಗೆ ಎಣ್ಣೆ ಹಚ್ಚುವುದು ಅತ್ಯುತ್ತಮವಾದದ್ದು. ಹಾಗಾಗಿಯೇ ಆಯುರ್ವೆದದಲ್ಲಿ ‘ನಿತ್ಯಂ ಸ್ನೇಹಾರ್ದೃ ಶಿರಸಃ’ ಎಂದಿದ್ದಾರೆ. ಅಂದರೆ ನಿತ್ಯವೂ ನೆತ್ತಿಯು ಎಣ್ಣೆಯಿಂದ ಒದ್ದೆಯಾಗಿರಬೇಕೆಂದು. ಆದರೆ ನಾವು ಹಚ್ಚುವ ಎಣ್ಣೆ ಶುದ್ಧವಾಗಿರಬೇಕಷ್ಟೇ. ಗಾಣದಲ್ಲಿ ತೆಗೆಸಿದ ಕೊಬ್ಬರಿ ಎಣ್ಣೆ, ಎಳ್ಳೆಣ್ಣೆಯನ್ನು ಬಳಸಬಹುದು. ವರ್ಜಿನ್ ಕೊಬ್ಬರಿ ಎಣ್ಣೆ ಇನ್ನೂ ಸಹಕಾರಿ. ಮನೆಯಲ್ಲಿಯೇ ಸುಲಭವಾಗಿ ಆಯುರ್ವೆದ ತೈಲಗಳನ್ನೂ ಮಾಡಿಕೊಳ್ಳಬಹುದು. ಒಂದು ಲೋಟ ಕೊಬ್ಬರಿ ಎಣ್ಣೆಗೆ ಒಂದು ಲೋಟ ನೆಲ್ಲಿಕಾಯಿ ರಸ, ಒಂದು ಲೋಟ ಭೃಂಗರಾಜದ ರಸ ಅಥವಾ ಕಷಾಯ (ಭೃಂಗರಾಜವು ಗ್ರಂಥಿಗೆ ಅಂಗಡಿಯಲ್ಲಿ ಸಿಗುತ್ತದೆ; ಇದನ್ನು ತಂದು ಕಷಾಯ ಮಾಡಿಕೊಳ್ಳಬಹುದು), ಮೂರು ಲೋಟ ಆಕಳ ಹಾಲು, ಎರಡು ಚಮಚದಷ್ಟು ಜ್ಯೇಷ್ಠಮಧುವಿನ ಚಿಕ್ಕ ಚಿಕ್ಕ ತುಂಡುಗಳನ್ನು ಹಾಕಿ ಸಣ್ಣ ಬೆಂಕಿಯಲ್ಲಿ ನೀರಿನ ಅಂಶ ಪೂರ್ತಿಯಾಗಿ ಆವಿಯಾಗುವವರೆಗೆ ಕುದಿಸಿ ಮಾಡಿಟ್ಟುಕೊಂಡ ತೈಲವನ್ನು ತಲೆಗೆ ಹಚ್ಚಿದರೆ ಕೂದಲು ಉದುರುವ, ಬೆಳ್ಳಗಾಗುವ ಮತ್ತು ಹೊಟ್ಟಿನ ಸಮಸ್ಯೆಯಲ್ಲಿ ತುಂಬ ಸಹಕಾರಿಯಾಗುತ್ತದೆ. ಅಂಟವಾಳ ಕಾಯಿ, ತ್ರಿಫಲಾ ಚೂರ್ಣ, ಭೃಂಗರಾಜ, ಮೆಂತ್ಯ ಮತ್ತು ದಾಸವಾಳದ ಹೂವಿನ ಪುಡಿಗಳನ್ನು ಸೇರಿಸಿ ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಕೂದಲಿಗೆ ಹಚ್ಚಿ ಪ್ಯಾಕ್ ಮಾಡಿ 2 ಗಂಟೆಯ ಬಳಿಕ ಸ್ನಾನ ಮಾಡಿದರೆ ಕೂದಲು ಉದುರುವ, ಬೆಳ್ಳಗಾಗುವ ಮತ್ತು ಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ. ಹೀಗೆ ವಾರಕ್ಕೆ ಎರಡು ದಿನವಾದರೂ ಮಾಡಬೇಕು.

ಹೇರ್ ಕಂಡಿಷನರ್​ಗಳ ಬದಲಿಗೆ ಲೋಳೆಸರ (ಅಲೋವೆರಾ), ದಾಸವಾಳದ ಎಲೆಗಳ ಲೋಳೆಯನ್ನು ಹಚ್ಚುವುದು ಕೂದಲಿನ ಆರೋಗ್ಯಕ್ಕೆ ಅತ್ಯಂತ ಸಹಾಯಕ. ಅತಿಯಾಗಿ ಉಪ್ಪು, ಹುಳಿ, ಖಾರ, ಸಕ್ಕರೆ, ಸಂಸ್ಕರಿತ - ರಾಸಾಯನಿಕಯುಕ್ತ ಆಹಾರಗಳ ಬಳಕೆ ಕೂದಲಿಗೆ ಮಾರಕವಾಗುತ್ತದೆ. ರಾತ್ರಿ ನಿದ್ದೆಗೆಡುವುದು, ಅತಿಯಾದ ಚಿಂತೆ, ದುಃಖ, ಸಿಟ್ಟು ಮುಂತಾದ ಮಾನಸಿಕ ವೈಪರೀತ್ಯಗಳೂ ಕೂದಲು ಉದುರಲು ಕಾರಣವಾಗುತ್ತವೆ. ಹಾಗಾಗಿ ಒಳಗಿನಿಂದ, ಹೊರಗಿನಿಂದ ಮತ್ತು ಮಾನಸಿಕವಾಗಿ ಸಮತೋಲನದಲ್ಲಿ ನಡೆದುಕೊಳ್ಳುವುದು ಕೂದಲಿನ ಆರೋಗ್ಯ ಕಾಪಾಡಲು ಆವಶ್ಯಕ.