ಚಿಕ್ಕ ಪುಟ್ಟ ವಿಚಾರಕ್ಕೂ ನೀವು ತಾಳ್ಮೆ ಕಳೆದುಕೊಳ್ಳುತ್ತೀರಾ? ನಿಮ್ಮ ಸಿಟ್ಟಿನ ಅಸಲಿ ರಹಸ್ಯ ಮತ್ತು ಪರಿಹಾರ ಇಲ್ಲಿದೆ... Anger  
ಆರೋಗ್ಯ

ಚಿಕ್ಕ ಪುಟ್ಟ ವಿಚಾರಕ್ಕೂ ನೀವು ತಾಳ್ಮೆ ಕಳೆದುಕೊಳ್ಳುತ್ತೀರಾ? ನಿಮ್ಮ ಸಿಟ್ಟಿನ ಅಸಲಿ ರಹಸ್ಯ ಮತ್ತು ಪರಿಹಾರ ಇಲ್ಲಿದೆ... Anger

ಪ್ರಮುಖ ಮುಖ್ಯಾಂಶಗಳು

  • ಸಣ್ಣಪುಟ್ಟ ವಿಷಯಗಳಿಗೂ ಅತಿಯಾಗಿ ಕೋಪ ಮಾಡಿಕೊಳ್ಳುವ ಸ್ವಭಾವದಿಂದ ಸಮಸ್ಯೆಗಳು ಉಂಟಾಗುತ್ತವೆ
  • ಕೋಪವನ್ನು ಹೊರಹಾಕುವುದು ಅಥವಾ ಮುಚ್ಚಿಡುವುದಕ್ಕಿಂತ ಆರೋಗ್ಯಕರ ಸಂವಹನವೇ ಉತ್ತಮ ಮಾರ್ಗ
  • ಆಲೋಚನೆಗಳನ್ನು ಬದಲಾಯಿಸಿ ಮತ್ತು ದೀರ್ಘವಾದ ಉಸಿರಾಟದಿಂದ ಕೋಪವನ್ನು ನಿಯಂತ್ರಿಸಬಹುದು
  • ಕೋಪ ನಿಮ್ಮನ್ನು ನಿಯಂತ್ರಿಸುವ ಮುನ್ನ ಅದನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಸರಳ ವಿಧಾನಗಳಿವೆ
Anger : ಸಣ್ಣ ವಿಷಯಕ್ಕೂ ಕೋಪ ಬರುತ್ತಿದೆಯೇ? ಇದರ ಹಿಂದೆ ಇರುವ ಕಾರಣ ನಿಮಗೆ ಗೊತ್ತೇ? ಬೆಳಗ್ಗೆ ಎದ್ದಾಗಿನಿಂದಲೇ ದಿನ ಒಂದರ ಹಿಂದೆ ಮತ್ತೊಂದು ಕೆಲಸಗಳೊಂದಿಗೆ ಶುರುವಾಗುತ್ತದೆ. ಸಮಯಕ್ಕೆ ಸರಿಯಾಗಿ ಕೆಲಸ ಮುಗಿಯದಿರುವುದು, ಟ್ರಾಫಿಕ್‌ನಲ್ಲಿ ಸಿಲುಕುವುದು, ಯಾರಾದರೂ ನಾವು ಹೇಳಿದ್ದನ್ನು ಕೇಳದಿರುವುದು, ಮನೆಯಲ್ಲಿ ಸಣ್ಣ ವಿಷಯಕ್ಕೆ ಮಾತಿನ ಚಕಮಕಿ.... ಹೀಗೆ ದಿನನಿತ್ಯದ ಬದುಕಿನಲ್ಲಿ ಕಿರಿಕಿರಿ ಉಂಟುಮಾಡುವ ಸಂದರ್ಭಗಳು ಒಂದಲ್ಲ ಒಂದು ರೀತಿಯಲ್ಲಿ ಎದುರಾಗುತ್ತಲೇ ಇರುತ್ತವೆ. ಕೆಲವೊಮ್ಮೆ ಇಂತಹ ಸಣ್ಣ ಘಟನೆಗಳೇ ನಮ್ಮ ತಾಳ್ಮೆಯನ್ನು ಕೆರಳಿಸುತ್ತವೆ. ಮಾತಿನ ದಾಟಿ ಬದಲಾಗುತ್ತದೆ, ಧ್ವನಿ ಏರುತ್ತದೆ, ಕೋಪದಲ್ಲಿ ಏನೋ ಹೇಳಿಬಿಡುತ್ತೇವೆ. ಆದರೆ, ಕೆಲವೇ ಹೊತ್ತಿನ ನಂತರ ಕೋಪ ಕಡಿಮೆಯಾದಾಗ, “ಇದಕ್ಕೆ ಇಷ್ಟೊಂದು ಕೋಪ ಮಾಡಿಕೊಳ್ಳಬೇಕಿತ್ತಾ?” ಎಂದು ನಮಗೇ ಅನಿಸಬಹುದು.
ವಾಸ್ತವವಾಗಿ ಕೋಪ ಎಲ್ಲರಿಗೂ ಬರುವ ಸಹಜ ಭಾವನೆ. ಕೋಪ ಬರುವುದು ತಪ್ಪಲ್ಲ, ಆದರೆ ಅದನ್ನು ಹೇಗೆ ನಿಭಾಯಿಸುತ್ತೇವೆ ಎಂಬುದು ಮುಖ್ಯ. ಏಕೆಂದರೆ ನಿಯಂತ್ರಣ ತಪ್ಪಿದ ಕೋಪ ನಮ್ಮ ನೆಮ್ಮದಿಯಷ್ಟೇ ಅಲ್ಲ, ಸಂಬಂಧಗಳು, ಕೆಲಸ ಮತ್ತು ದಿನನಿತ್ಯದ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಹಾಗಾದರೆ ಕೋಪ ಬಂದಾಗ ಅದನ್ನು ಒತ್ತಿಹಿಡಿಯಬೇಕೇ? ಅಥವಾ ಮನಸ್ಸಿಗೆ ಬಂದಂತೆ ಹೊರಹಾಕಬೇಕೇ? ಕೋಪವನ್ನು ಆರೋಗ್ಯಕರವಾಗಿ ನಿಭಾಯಿಸುವ ಸರಿಯಾದ ಮಾರ್ಗ ಯಾವುದು?
ಒಂದು ಸಣ್ಣ ಮಾತು ಸಾಕು... ಕೋಪ ಬರುತ್ತದೆ. ಕೆಲವೊಮ್ಮೆ ಮನೆಯವರ ಮೇಲೆ, ಕೆಲಸದ ಜಾಗದಲ್ಲಿ, ಸ್ನೇಹಿತರ ಮೇಲೆ ಅಥವಾ ನಮಗೆ ಎದುರಾದ ಯಾವುದೋ ಪರಿಸ್ಥಿತಿಯ ಮೇಲೆ. ಆ ಕ್ಷಣದಲ್ಲಿ ಕೋಪ ಸರಿಯೇ ಅನ್ನಿಸಬಹುದು. ಆದರೆ ಕೋಪದಲ್ಲಿ ಹೇಳಿದ ಒಂದು ಮಾತು, ಮಾಡಿದ ಒಂದು ಕೆಲಸ ನಂತರ ಎಷ್ಟೇ ವಿಷಾದಿಸಿದರೂ ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ. ಹಾಗಾದರೆ ಕೋಪವನ್ನು ಸಂಪೂರ್ಣವಾಗಿ ಇಲ್ಲವಾಗಿಸಬೇಕೇ? ಇಲ್ಲ. ಕೋಪ ಒಂದು ಸಹಜ ಭಾವನೆ. ಆದರೆ ಅದು ನಮ್ಮನ್ನು ನಿಯಂತ್ರಿಸುವಷ್ಟು ಬೆಳೆದಾಗ ಸಮಸ್ಯೆಯಾಗುತ್ತದೆ.
ಕೋಪ ಎನ್ನುವುದು ಕೇವಲ ಮನಸ್ಸಿನ ಭಾವನೆಯಲ್ಲ. ಕೋಪ ಬಂದಾಗ ಹೃದಯ ಬಡಿತ ಮತ್ತು ರಕ್ತದೊತ್ತಡ ಹೆಚ್ಚಾಗಬಹುದು. ದೇಹದಲ್ಲಿ ಒತ್ತಡಕ್ಕೆ ಸಂಬಂಧಿಸಿದ ಹಾರ್ಮೋನ್‌ಗಳ ಮಟ್ಟವೂ ಹೆಚ್ಚುತ್ತದೆ. ಅಂದರೆ, ಕೋಪ ಬಂದಾಗ ನಮ್ಮ ದೇಹವೂ ಒಂದು ರೀತಿಯಲ್ಲಿ ‘ಅಪಾಯ ಎದುರಾಗಿದೆ’ ಎಂಬ ಸ್ಥಿತಿಗೆ ಹೋಗುತ್ತದೆ.

ಕೋಪಕ್ಕೆ ಕಾರಣ ಏನು?

ಕೋಪಕ್ಕೆ ಒಂದೇ ಕಾರಣ ಇರುವುದಿಲ್ಲ. ಟ್ರಾಫಿಕ್‌ನಲ್ಲಿ ಸಿಲುಕುವುದು, ವಿಮಾನ ರದ್ದಾಗುವುದು, ಕೆಲಸದ ಒತ್ತಡ, ಯಾರಾದರೂ ನಮ್ಮನ್ನು ಟೀಕಿಸುವುದು, ನಮ್ಮ ನಿರೀಕ್ಷೆಯಂತೆ ವಿಷಯಗಳು ನಡೆಯದಿರುವುದು ಹೀಗೆ ಹೊರಗಿನ ಘಟನೆಗಳು ಕೋಪಕ್ಕೆ ಕಾರಣವಾಗಬಹುದು. ಕೆಲವೊಮ್ಮೆ ಹಳೆಯ ನೋವು, ಕೆಟ್ಟ ನೆನಪುಗಳು, ವೈಯಕ್ತಿಕ ಸಮಸ್ಯೆಗಳ ಬಗ್ಗೆ ನಿರಂತರವಾಗಿ ಯೋಚಿಸುವುದೂ ಕೋಪವನ್ನು ಹೆಚ್ಚಿಸಬಹುದು.
ಕೆಲವರು ಸಣ್ಣ ವಿಷಯಕ್ಕೂ ಬೇಗ ಕೋಪಗೊಳ್ಳುತ್ತಾರೆ. ಮನೋವಿಜ್ಞಾನದಲ್ಲಿ ಇದನ್ನು ಕೆಲವೊಮ್ಮೆ ಕಡಿಮೆ ಸಹಿಷ್ಣುತೆ ಎಂದು ವಿವರಿಸಲಾಗುತ್ತದೆ. ಅಂದರೆ, ಅನಾನುಕೂಲತೆ, ಕಾಯುವಿಕೆ, ತೊಂದರೆ ಅಥವಾ ನಿರಾಶೆಯನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಕಡಿಮೆ ಇರುವುದು. ಇಂತಹ ಸ್ವಭಾವಕ್ಕೆ ದೈಹಿಕ ಅಥವಾ ವಂಶವಾಹಿ ಕಾರಣಗಳ ಜೊತೆಗೆ ಬೆಳೆದ ಪರಿಸರವೂ ಕಾರಣವಾಗಬಹುದು. ಬಾಲ್ಯದಿಂದಲೇ ಮನೆಯಲ್ಲಿ ಭಾವನೆಗಳನ್ನು ಆರೋಗ್ಯಕರವಾಗಿ ವ್ಯಕ್ತಪಡಿಸುವುದನ್ನು ಕಲಿಯದಿದ್ದರೆ, ಮುಂದೆ ಕೋಪವನ್ನು ನಿಭಾಯಿಸುವುದು ಕಷ್ಟವಾಗಬಹುದು.

ಕೋಪ ಬಂದಾಗ ಏನು ಮಾಡುತ್ತೇವೆ?

ಕೋಪವನ್ನು ಎದುರಿಸುವಲ್ಲಿ ಸಾಮಾನ್ಯವಾಗಿ ಮೂರು ರೀತಿಯ ಪ್ರತಿಕ್ರಿಯೆಗಳು ಕಂಡುಬರುತ್ತವೆ. ಅವುಗಳೆಂದರೆ, ಕೋಪವನ್ನು ಹೊರಹಾಕುವುದು, ಒಳಗೇ ಮುಚ್ಚಿಡುವುದು ಅಥವಾ ಶಾಂತಗೊಳಿಸುವುದು. ಕೋಪವನ್ನು ಕೂಗಾಟ, ಅವಮಾನ ಅಥವಾ ಹಿಂಸೆಯ ಮೂಲಕ ಹೊರಹಾಕುವುದು ಆರೋಗ್ಯಕರ ಮಾರ್ಗವಲ್ಲ. ಅದೇ ಸಮಯದಲ್ಲಿ ಕೋಪವನ್ನು ಸಂಪೂರ್ಣವಾಗಿ ಒಳಗೇ ಮುಚ್ಚಿಟ್ಟುಕೊಳ್ಳುವುದೂ ಸರಿಯಲ್ಲ. ಹೇಳಿಕೊಳ್ಳದ ಕೋಪವು ಒಳಗೊಳಗೇ ಬೆಳೆಯುತ್ತಾ ಒತ್ತಡ, ನಿರಾಶೆ ಅಥವಾ ಇತರ ಸಂಬಂಧದ ಸಮಸ್ಯೆಗಳಿಗೆ ಕಾರಣವಾಗಬಹುದು. ಕೆಲವರು ನೇರವಾಗಿ ಮಾತನಾಡದೆ ವ್ಯಂಗ್ಯ, ನಿರ್ಲಕ್ಷ್ಯ ಅಥವಾ ಪರೋಕ್ಷವಾಗಿ ಪ್ರತೀಕಾರ ತೀರಿಸಿಕೊಳ್ಳುವ ರೀತಿಯಲ್ಲಿ ಕೋಪ ವ್ಯಕ್ತಪಡಿಸುತ್ತಾರೆ. ಅದಕ್ಕಿಂತ ಉತ್ತಮವಾದ ಮಾರ್ಗ ಮಾತುಕತೆ ಅಥವಾ ಸಂವಹನ... ಅಂದರೆ, ಇತರರನ್ನು ನೋಯಿಸದೆ, ನಿಮ್ಮ ಅಗತ್ಯ ಮತ್ತು ಭಾವನೆಗಳನ್ನು ಸ್ಪಷ್ಟವಾಗಿ ಹೇಳುವುದು.

ಕೋಪ ಬಂದಾಗ ಎಲ್ಲವನ್ನೂ ಹೊರಹಾಕಿಬಿಡಿ ಎನ್ನುವುದು ಸರಿಯೇ?

ಇದು ಬಹಳ ಜನ ನಂಬಿರುವ ತಪ್ಪು ಕಲ್ಪನೆ. ಕೋಪವನ್ನು ಕೂಗಿ, ವಸ್ತುಗಳನ್ನು ಎಸೆದು ಅಥವಾ ಇನ್ನೊಬ್ಬರ ಮೇಲೆ ಸಿಟ್ಟು ತೋರಿಸುವ ಮೂಲಕ ಹೊರಹಾಕಿದರೆ ಕೋಪ ಕಡಿಮೆಯಾಗುತ್ತದೆ ಎನ್ನುವುದು ಸರಿಯಲ್ಲ. ಇಂತಹ ವರ್ತನೆ ಕೆಲವೊಮ್ಮೆ ಕೋಪ ಮತ್ತು ಆಕ್ರಮಣಶೀಲತೆಯನ್ನು ಇನ್ನಷ್ಟು ಹೆಚ್ಚಿಸಬಹುದು. ಆದ್ದರಿಂದ ಕೋಪವನ್ನು ಹೊರಹಾಕುವುದಕ್ಕಿಂತ ಕೋಪವನ್ನು ಹುಟ್ಟಿಸುವ ಕಾರಣವನ್ನು ಗುರುತಿಸಿ, ಅದಕ್ಕೆ ನಮ್ಮ ಪ್ರತಿಕ್ರಿಯೆಯನ್ನು ಬದಲಿಸುವುದು ಮುಖ್ಯ.

ಮೊದಲು ನಿಮ್ಮ ಆಲೋಚನೆ ಬದಲಿಸಿ

ಕೋಪ ಬಂದಾಗ ನಮ್ಮ ಆಲೋಚನೆಗಳು ಅತಿರೇಕಕ್ಕೆ ಹೋಗಬಹುದು. ‘ಇದು ಯಾವಾಗಲೂ ಹೀಗೇ ಆಗುತ್ತದೆ’, ‘ಅವನು ಎಂದಿಗೂ ನನ್ನ ಮಾತು ಕೇಳುವುದಿಲ್ಲ’, ‘ಎಲ್ಲವೂ ಹಾಳಾಯಿತು’ ಎಂಬಂತಹ ಪದಗಳು ಕೋಪವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಅದರ ಬದಲು, ‘ಇದು ನನಗೆ ಬೇಸರ ತಂದಿದೆ, ಆದರೆ ಇದು ಜಗತ್ತಿನ ಅಂತ್ಯವಲ್ಲ’, ‘ಈಗ ಕೋಪಗೊಂಡರೆ ಸಮಸ್ಯೆ ಬಗೆಹರಿಯುವುದಿಲ್ಲ’ ಎಂದು ನಿಮ್ಮನ್ನೇ ಸಮಾಧಾನಪಡಿಸಿಕೊಳ್ಳಿ. ವಿಶೇಷವಾಗಿ ‘ಯಾವಾಗಲೂ’, ‘ಎಂದಿಗೂ’, ‘ನನಗೆ ಹೀಗೇ ಆಗಬೇಕು’ ಎಂಬ ಕಠಿಣ ನಿರೀಕ್ಷೆಗಳನ್ನು ಕಡಿಮೆ ಮಾಡುವುದು ಸಹಾಯ ಮಾಡುತ್ತದೆ. ‘ಇದು ನನಗೆ ಬೇಕು’ ಎನ್ನುವುದಕ್ಕಿಂತ ‘ಇದು ನನಗೆ ಸಿಕ್ಕರೆ ಚೆನ್ನಾಗಿರುತ್ತದೆ’ ಎಂಬ ಮನೋಭಾವ ಬೆಳೆಸಿಕೊಳ್ಳಿ. ಎಲ್ಲವೂ ನಮ್ಮ ಇಷ್ಟದಂತೆ ನಡೆಯಬೇಕು ಎಂಬ ನಿರೀಕ್ಷೆ ಹೆಚ್ಚಾದಷ್ಟೂ ನಿರಾಶೆ ಹೆಚ್ಚುತ್ತದೆ, ನಿರಾಶೆ ಹೆಚ್ಚಾದಾಗ ಕೋಪವೂ ಹೆಚ್ಚಾಗಬಹುದು.

ಎಲ್ಲ ಸಮಸ್ಯೆಗೂ ತಕ್ಷಣ ಪರಿಹಾರ ಸಿಗುವುದಿಲ್ಲ

ಕೆಲವೊಮ್ಮೆ ಕೋಪಕ್ಕೆ ನಿಜವಾದ ಸಮಸ್ಯೆಯೇ ಕಾರಣವಾಗಿರುತ್ತದೆ. ಜೀವನದಲ್ಲಿ ಎದುರಾಗುವ ಪ್ರತಿಯೊಂದು ಸಮಸ್ಯೆಗೂ ತಕ್ಷಣ ಪರಿಹಾರ ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ ‘ಇದನ್ನು ಹೇಗೆ ತಕ್ಷಣ ಸರಿಪಡಿಸಲಿ?’ ಎನ್ನುವುದಕ್ಕಿಂತ, ‘ಈ ಪರಿಸ್ಥಿತಿಯನ್ನು ನಾನು ಹೇಗೆ ಉತ್ತಮವಾಗಿ ಎದುರಿಸಬಹುದು?’ ಎಂದು ಯೋಚಿಸುವುದು ಹೆಚ್ಚು ಉಪಯುಕ್ತ. ಒಂದು ಯೋಜನೆ ರೂಪಿಸಿ, ನಿಮ್ಮ ಪ್ರಯತ್ನವನ್ನು ಮುಂದುವರಿಸಿ. ಆದರೆ ತಕ್ಷಣ ಪರಿಹಾರ ಸಿಗಲಿಲ್ಲ ಎಂದು ನಿಮ್ಮನ್ನೇ ದೂಷಿಸಬೇಡಿ.

ನಿಮ್ಮ ಸುತ್ತಲಿನ ವಾತಾವರಣವನ್ನೂ ಬದಲಿಸಿ

ಕೆಲವೊಮ್ಮೆ ನಮ್ಮ ಸುತ್ತಲಿನ ಪರಿಸರವೇ ಕೋಪವನ್ನು ಹೆಚ್ಚಿಸುತ್ತದೆ. ಕೆಲಸದ ಒತ್ತಡ, ಮನೆಯ ಜವಾಬ್ದಾರಿ, ನಿರಂತರ ಗದ್ದಲ... ಇವೆಲ್ಲವೂ ಮನಸ್ಸನ್ನು ದಣಿಸಬಹುದು. ಹೀಗಾಗಿ ದಿನದ ಒತ್ತಡ ಹೆಚ್ಚಾಗುವ ಸಮಯದಲ್ಲಿ ನಿಮಗಾಗಿ ಅಂತ ಸ್ವಲ್ಪ ವೈಯಕ್ತಿಕ ಅಥವಾ ಖಾಸಗಿ ಸಮಯವನ್ನು ತೆಗೆದುಕೊಳ್ಳಿ. ಕೆಲವು ನಿಮಿಷ ಯಾರೊಂದಿಗೂ ಮಾತನಾಡದೆ ಶಾಂತವಾಗಿರುವುದು, ಸ್ವಲ್ಪ ನಡೆದು ಬರುವುದು ಅಥವಾ ನಿಮಗೆ ಇಷ್ಟವಾದ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ಮನಸ್ಸನ್ನು ಹಗುರಗೊಳಿಸಬಹುದು. ಪ್ರತಿದಿನದ ಟ್ರಾಫಿಕ್ ನಿಮ್ಮನ್ನು ಕೋಪಗೊಳಿಸುತ್ತಿದ್ದರೆ ಬೇರೆ ಮಾರ್ಗ ಅಥವಾ ಬೇರೆ ಪ್ರಯಾಣದ ಆಯ್ಕೆಯನ್ನು ಪ್ರಯತ್ನಿಸಿ. ಪದೇಪದೆ ಕಿರಿಕಿರಿ ಉಂಟುಮಾಡುವ ವಿಷಯವನ್ನು ಸಾಧ್ಯವಾದಷ್ಟು ದೂರವಿಡಿ. ಕೋಪ ಬಂದಾಗ ಅದು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಅಂತ ಅನಿಸಿದರೆ ಒಮ್ಮೆ ನಿಮ್ಮ ಉಸಿರನ್ನು ದೀರ್ಘವಾಗಿ ಒಳಗೆ ಎಳೆದುಕೊಂಡು ನಿಧಾನವಾಗಿ ಹೊರಗೆ ಬಿಡಿ. ಇದರಿಂದಲೂ ನಿಮ್ಮ ಕೋಪ ನಿಯಂತ್ರಣಕ್ಕೆ ಬರುತ್ತದೆ.

ನಿಮಗೆ ಕೋಪದ ಸಮಸ್ಯೆ ಇದೆ ಎಂದು ಯಾವಾಗ ಅರ್ಥಮಾಡಿಕೊಳ್ಳಬೇಕು?

ಕೋಪ ಬಂದಾಗ ನಿಮ್ಮ ವರ್ತನೆ ನಿಮ್ಮ ನಿಯಂತ್ರಣದಲ್ಲಿಲ್ಲ ಅನ್ನಿಸಿದರೆ, ನಿಮ್ಮ ಮಾತು ಅಥವಾ ವರ್ತನೆಯಿಂದ ಇತರರು ಹೆದರುತ್ತಿದ್ದರೆ, ಕೋಪದಿಂದ ನಿಮ್ಮ ಕುಟುಂಬ, ಸ್ನೇಹ, ಕೆಲಸ ಅಥವಾ ದಿನನಿತ್ಯದ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕು. ಅಂತಹ ಸಂದರ್ಭದಲ್ಲಿ ಮನೋವಿಜ್ಞಾನಿ ಅಥವಾ ಅರ್ಹ ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯುವುದು ಉತ್ತಮ. ಕೋಪವನ್ನು ಹೇಗೆ ಗುರುತಿಸಬೇಕು? ಯಾವ ಆಲೋಚನೆಗಳು ಅದನ್ನು ಹೆಚ್ಚಿಸುತ್ತವೆ ಮತ್ತು ಆ ಕ್ಷಣದಲ್ಲಿ ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ವೃತ್ತಿಪರ ಮಾರ್ಗದರ್ಶನದಿಂದ ಕಲಿಯಬಹುದು.
ಆತ್ಮವಿಶ್ವಾಸದ ತರಬೇತಿಯೂ ಕೆಲವರಿಗೆ ಉಪಯುಕ್ತವಾಗಬಹುದು. ಆದರೆ ಉದ್ದೇಶ ಕೋಪವನ್ನು ಮತ್ತಷ್ಟು ಹೊರಹಾಕುವುದು ಅಲ್ಲ, ಆಕ್ರಮಣಶೀಲರಾಗದೆ, ನಿಮ್ಮ ಮಾತನ್ನು ಗೌರವಯುತವಾಗಿ ಹೇಳುವುದನ್ನು ಕಲಿಯುವುದು. ಕೋಪವನ್ನು ಸಂಪೂರ್ಣವಾಗಿ ಅಳಿಸಲು ಸಾಧ್ಯವಿಲ್ಲ ಆದರೆ, ಅದನ್ನು ನಿಯಂತ್ರಿಸಬಹುದು. ಜೀವನದಲ್ಲಿ ನಿರಾಶೆ, ನೋವು, ನಷ್ಟ, ಅನ್ಯಾಯ ಮತ್ತು ಅನಿರೀಕ್ಷಿತ ಘಟನೆಗಳು ಇದ್ದೇ ಇರುತ್ತವೆ. ಹಾಗಾಗಿ ಕೋಪವನ್ನು ಸಂಪೂರ್ಣವಾಗಿ ಇಲ್ಲವಾಗಿಸುವುದು ಸಾಧ್ಯವೂ ಅಲ್ಲ, ಅಗತ್ಯವೂ ಅಲ್ಲ. ಹೀಗಾಗಿ, ಒಂದು ಕ್ಷಣ ತಾಳ್ಮೆ, ಕೆಲವು ಆಳವಾದ ಉಸಿರಾಟ, ಆಲೋಚನೆಗೆ ಸ್ವಲ್ಪ ಸಮಯ, ಎದುರಿನ ವ್ಯಕ್ತಿಯ ಮಾತನ್ನು ಕೇಳುವ ಮನಸ್ಸ, ಇಷ್ಟೇ ಕೆಲವೊಮ್ಮೆ ದೊಡ್ಡ ಜಗಳವನ್ನೇ ತಪ್ಪಿಸಬಹುದು. ಕೋಪ ನಿಮ್ಮ ಕೈಯಲ್ಲಿದ್ದರೆ ಅದು ಒಂದು ಭಾವನೆ. ಕೋಪವೇ ನಿಮ್ಮನ್ನು ನಿಯಂತ್ರಿಸಲು ಆರಂಭಿಸಿದರೆ ಅದು ಸಮಸ್ಯೆ. ಆದ್ದರಿಂದ ಕೋಪ ನಿಮ್ಮನ್ನು ನಿಯಂತ್ರಿಸುವ ಮುನ್ನ, ಅದನ್ನು ನಿಯಂತ್ರಿಸುವುದನ್ನು ಕಲಿಯಿರಿ, (ಏಜೆನ್ಸೀಸ್​).