ಬೆಳಗ್ಗಿನ ತಿಂಡಿಗೆ ಮೊಟ್ಟೆ-ಸಿಹಿ ಗೆಣಸು ಮಾತ್ರ ತಿಂದರೆ ಏನಾಗುತ್ತದೆ?.
ಜೀರ್ಣಕ್ರಿಯೆ, ತೂಕ ಹೆಚ್ಚಾಗಲು ಸಹಾಯ ಮಾಡುತ್ತದೆ ಮೊಟ್ಟೆ, ಗೆಣಸು.
ಎರಡು ಅಥವಾ ಒಂದು ಮೊಟ್ಟೆ, ತುಪ್ಪದೊಂದಿಗೆ ಗೆಣಸು ತಿನ್ನುವುದು ಬೆಸ್ಟ್ ಬ್ರೇಕ್ಫಾಸ್ಟ್.
ಮನುಷ್ಯನ ಗುಣವೇ ಹಾಗೆ ತೆಳ್ಳಗೆ ಕಾಣುತ್ತಿರುವಾಗ, ದಪ್ಪ ಆಗಬೇಕು..ದಪ್ಪಗಿದ್ದಾಗ ತೆಳ್ಳಗಾಗಬೇಕು..ಎಂದು ಬಯಸುತ್ತಾರೆ. ಇದು ಸಹಜ ಗುಣ. ಆದರೆ, ಯಾವುದು ಸಹ ನಮ್ಮ ಕೈಲಿ ಇರೋದಿಲ್ಲ. ಹುಟ್ಟುತ್ತಲೇ ಸಿಕ್ಕ ಆಕಾರ..ಆರೋಗ್ಯವನ್ನು ಶಕ್ತಿಯುತವಾಗಿ, ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳುವುದು ಮಾತ್ರ ನಮ್ಮ ಕೆಲಸವಾಗಿರುತ್ತದೆ. ದೇಹಕ್ಕೆ ನಿತ್ಯವೂ ಪ್ರೋಟಿನ್, ಕ್ಯಾಲ್ಸಿಯಂ, ಕಾರ್ಬೋ ಹೈಡ್ರೇಟ್ ಹೀಗೆ ನಾನಾ ರೀತಿಯ ಖನಿಜಾಂಶ ಅಗತ್ಯವಿರುತ್ತದೆ. ಹೀಗಾಗಿ ಇದಕ್ಕೆ ಪೂರಕವಾಗಿ ಆಹಾರ ಸೇವಿಸೋದು ಅಗತ್ಯ.
ಮುಂಜಾನೆ ಸಮಯದಲ್ಲಿ ಶಾಲಾ-ಕಾಲೇಜು, ಕೆಲಸ, ಕಾರ್ಯಕ್ಕೆ ಹೋಗುವ ಸಲುವಾಗಿ ಅಡುಗೆ ಮಾಡಿಕೊಳ್ಳಲು ಬೇಸರವಾಗುತ್ತದೆ. ಹೀಗಾಗಿ ಹೋಟೆಲ್ ಊಟ ಸೇವಿಸಿ, ಗ್ಯಾಸ್ಟ್ರಿಕ್ ಹೆಚ್ಚಿಸಿಕೊಳ್ಳುತ್ತೇವೆ. ಇಲ್ಲದಿದ್ದರೆ ಆಹಾರ ಸ್ಕಿಪ್ ಮಾಡಿ ರೋಗಕ್ಕೆ ತುತ್ತಾಗುತ್ತೇವೆ. ಆದರೆ, ಸಿಂಪಲ್ ಆದ ಕೆಲವು ಆಹಾರದ ಮೂಲಕ ನಿಮ್ಮ ಬೆಳಗಿನ ಉಪಹಾರ ಮುಗಿಸಬಹುದು. ಹೇಗೆ ಎನ್ನುತ್ತೀರಾ..? ಆ ಬಗ್ಗೆ ಡಿಟೇಲ್ಸ್ ಇಲ್ಲಿದೆ ನೋಡಿ.
ರಾತ್ರಿ ಮಲಗುವುದು ಲೇಟಾಗಿ..ಮುಂಜಾನೆ ಏಳುವುದು ತಡವಾಗಿ ಕಚೇರಿಗೆ ಹೋಗುವ ಭರದಲ್ಲಿ ತಿಂಡಿ ತಯಾರಿಸಿಕೊಳ್ಳದಿದ್ದರೆ, ನೀವು ಸ್ನಾನಕ್ಕೆ ಹೋಗುವ ಮುನ್ನ..ಒಂದೆರಡು ಗೆಣಸು, ಮೊಟ್ಟೆಯನ್ನು ಬೇಯಿಸಲು ಇಟ್ಟು ಹೋಗಿ. ನಂತರ ಅದನ್ನು ಸೇವಿಸಿ. ಇಷ್ಟು ನಿಮ್ಮ ತಿಂಡಿಗೆ ಸಾಕು.
ದೇಹದ ತೂಕ ಕಡಿಮೆ ಇರುವವರು ಮುಂಜಾನೆ ಗೆಣಸು ಮತ್ತು ಮೊಟ್ಟೆ ಬೇಯಿಸಿ ತಿನ್ನುವುದರಿಂದ ತೂಕವನ್ನು ಹೆಚ್ಚಿಸಲು ಮತ್ತು ದೇಹಕ್ಕೆ ಶಕ್ತಿಯನ್ನು ನೀಡಲು ಅತ್ಯುತ್ತಮವಾದ ಆಹಾರಗಳಾಗಿವೆ. ಮೊಟ್ಟೆ ಹಾಗೂ ಸಿಹಿ ಗೆಣಸಿನಲ್ಲಿರುವ ಅಂಶವು ನಿಮಗೆ ಪ್ರತ್ಯೇಕವಾದ ರೀತಿಯಲ್ಲಿ ದೇಹಕ್ಕೆ ಆರೋಗ್ಯಕರ ಅಂಶವನ್ನು ನೀಡುತ್ತದೆ.
ಮೊಟ್ಟೆಯಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್ ಇರುವ ಕಾರಣ, ಇದು ಸ್ನಾಯುಗಳ ಬೆಳವಣಿಗೆಗೆ ಮತ್ತು ದೇಹ ಸದೃಢವಾಗಲು ಸಹಾಯ ಮಾಡುತ್ತದೆ. ಮೊಟ್ಟೆಯಲ್ಲಿರುವ ಆರೋಗ್ಯಕರ ಕೊಬ್ಬು ಮತ್ತು ಕ್ಯಾಲೊರಿಗಳು ತೂಕವನ್ನು ಸಮತೋಲನವಾಗಿಡಲು ಸಹಾಯ ಮಾಡುತ್ತದೆ. ಮೊಟ್ಟೆಯ ಹಳದಿ ಭಾಗದಲ್ಲಿ ವಿಟಮಿನ್ ಡಿ, ಬಿ-ಕಾಂಪ್ಲೆಕ್ಸ್ ಮತ್ತು ಕೋಲಿನ್ನಂತಹ ಪ್ರಮುಖ ಪೋಷಕಾಂಶಗಳಿದ್ದು, ಇದು ಮೆದುಳಿನ ಬೆಳವಣಿಗೆಗೆ ಮತ್ತು ಮೂಳೆಯನ್ನು ಬುಡದಿಂದ ಬಲಪಡಿಸಲು ಸಹಾಯ ಮಾಡುತ್ತದೆ.
ಗೆಣಸಿನಲ್ಲಿ ಭಾರವಾದ ಆಹಾರವನ್ನು ಸುಲಭವಾಗಿ ಜೀರ್ಣಿಸುವಂತೆ ಮಾಡುವ ಕಾರ್ಬೋಹೈಡ್ರೇಟ್ಗಳು ಮತ್ತು ಕ್ಯಾಲೊರಿ ಅಧಿಕವಾಗಿರುತ್ತದೆ. ಇದು ಸಣ್ಣಗಿರುವವರಿಗೆ ಅಗತ್ಯವಿರುವ ಶಕ್ತಿಯನ್ನು ನೀಡುತ್ತದೆ. ಗೆಣಸು ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಮತ್ತು ಹಸಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಗೆಣಸಿನಲ್ಲಿರುವ ವಿಟಮಿನ್ ಎ ಬಿಟಾ ಕ್ಯಾರೋಟಿನ್ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಪರೋಕ್ಷವಾಗಿ ಸಹಾಯ ಮಾಡುತ್ತದೆ. ಕಣ್ಣಿನ ಆರೋಗ್ಯಕ್ಕೆ ಉತ್ತಮ ಆಯ್ಕೆ ಇದಾಗಿದೆ.
ದಿನಕ್ಕೆ ಒಂದು ಅಥವಾ ಎರಡು ಬೇಯಿಸಿದ ಮೊಟ್ಟೆಯನ್ನು ತಿನ್ನಬಹುದು. ಮಕ್ಕಳಿಗೆ ಕೊಡುವುದಾದರೆ ಚೆನ್ನಾಗಿ ಬೇಯಿಸಿ ಕೊಡಿ. ಗೆಣಸನ್ನು ಬೇಯಿಸಿ, ಅದಕ್ಕೆ ಸ್ವಲ್ಪ ತುಪ್ಪ ಅಥವಾ ಹಾಲು ಸೇರಿಸಿ ಮ್ಯಾಶ್ ಮಾಡಿ ತಿನ್ನಬಹುದು. ಸಿಹಿ ಗೆಣಸಾದ ಕಾರಣ ಹಾಗೆಯೇ ತಿನ್ನಲೂ ಬಹುದು. ತುಪ್ಪ ಸೇರಿಸುವುದರಿಂದ ಕ್ಯಾಲೊರಿ ಹೆಚ್ಚಿ ತೂಕ ಹೆಚ್ಚಾಗಲು ಇನ್ನು ಬೇಗ ಸಹಾಯವಾಗುತ್ತದೆ
ಹೊಸ ಆಹಾರ ಅಲರ್ಜಿಯನ್ನುಂಟು ಮಾಡುತ್ತದೆ ಎಂದರೆ, ನಿಮ್ಮ ವೈದ್ಯರ ಮಾಹಿತಿ ಅಥವಾ ಸಲಹೆ ಪಡೆದು ಈ ತೂಕ ಹೆಚ್ಚಿಸುವ ಆಹಾರ ಸೇವನೆ ಮಾಡುವುದು ಸೂಕ್ತ ಎನ್ನಲಾಗುತ್ತದೆ,(ಏಜೆನ್ಸೀಸ್).