ಎಐ ಚಿತ್ರ 
ಆರೋಗ್ಯ

ನವ ವಧು-ವರರೇ ಗಮನಿಸಿ; ತ್ವರಿತ ಸೌಂದರ್ಯ, ತೂಕ ಇಳಿಕೆಗೆ ಬೇಡ ಶಾರ್ಟ್​​ಕಟ್ ಪರಿಹಾರ; ಈ 6 ಟ್ರೆಂಡ್‌ಗಳ ಹಿಂದೆ ಬಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ!..Health

  • ಮದುವೆ ದಿನ ಸುಂದರವಾಗಿ ಕಾಣಲು ಎಂದಿಗೂ ಶಾರ್ಟ್​ಕಟ್ ಪರಿಹಾರ ಪಾಲಿಸಬೇಡಿ.

  • ಪೀರಿಯಡ್ಸ್ ಮುಂದೂಡುವ ಮಾತ್ರೆ, ವಜೈನಲ್ ಸ್ಟೀಮಿಂಗ್, ತೂಕ ಇಳಿಸುವ ಇಂಜೆಕ್ಷನ್​ಗೆ ಗುಡ್​ಬೈ ಹೇಳಿ.

  • ಆರೋಗ್ಯದ ಸಮಸ್ಯೆಗೆ ಕಾರಣವಾಗುವ ಶಾರ್ಟ್​ ಕಟ್ ಟ್ರೆಂಡ್​ಗಳನ್ನು ಪಾಲನೆ ಮಾಡುವ ಮುನ್ನ ಇರಲಿ ಎಚ್ಚರ.

Wedding Season Wellness Trends: ಜೀವನದ ಹಲವು ಪ್ರಮುಖ ಘಟ್ಟಗಳಲ್ಲಿ ಮದುವೆಯೂ ಒಂದು. ಇದು ಬದುಕಿನ ಟರ್ನಿಂಗ್​ ಪಾಯಿಂಟ್ ಎಂದು ನಂಬಲಾಗುತ್ತದೆ. ಇದಕ್ಕಾಗಿ ಸಾಕಷ್ಟು ತಯಾರಿ ನಡೆಸುತ್ತೇವೆ. ಬಟ್ಟೆ, ಚಪ್ಪಲಿ, ಹೇರ್​ ಕೇರ್​..ಮುಖದ ಕೇರ್, ದೇಹದ ಗಾತ್ರವನ್ನು ಸೇರಿದಂತೆ ಹಲವು ವಿಚಾರದ ಬಗ್ಗೆ ಗಮನ ಹರಿಸುತ್ತೇವೆ. ಅದರಂತೆ ಫೋಟೋಶೂಟ್ ಚೆನ್ನಾಗಿ ಬರಲೆಂದು ವಧು-ವರರು ಸೋಶಿಯಲ್​ ಮೀಡಿಯಾದಲ್ಲಿ ಕಾಣಿಸುವ ಅಪಾಯಕಾರಿ ‘ವೆಲ್‌ನೆಸ್ ಟ್ರೆಂಡ್’ಗಳ ಮೊರೆ ಹೋಗುತ್ತಾರೆ. ವೈದ್ಯರ ಸಲಹೆ ಇಲ್ಲದೆ, ಅನುಸರಿಸುವ ಈ ಟ್ರೆಂಡ್ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು ಎನ್ನುತ್ತಾರೆ ನುರಿತ ವೈದ್ಯರು.

ಇದು ಮದುವೆ ಸೀಸನ್​ ನವೆಂಬರ್​ 20ರಿಂದ ಡಿಸೆಂಬರ್​ವರೆಗೂ 52 ಲಕ್ಷ ಮದುವೆ ಜರುಗಲಿದೆ ಎಂದು CIAT ಹೇಳಿದೆ. ಸಾಮಾನ್ಯವಾಗಿ ಮದುವೆ ದಿನಗಳು ಹತ್ತಿರವಾಗುತ್ತಿದ್ದಂತೆ ನವ ವಧು-ವರರು ತೂಕ ಇಳಿಸಿಕೊಳ್ಳಲು ಪರದಾಡುವುದು, ಮೊಡವೆ, ಪೀಲಿಂಗ್​​, ತೂಕ ಹೆಚ್ಚಿಸಿಕೊಳ್ಳುವುದು, ಹೇರ್​ ಟ್ರೀಟ್​ಮೆಂಟ್​, ವಿಟಮಿನ್ ಐ ವಿ ಡ್ರಿಪ್ಸ್, ಮದುವೆಯಾಗುವ ದಿನ ಪೀರಿಯಡ್ಸ್ ಆಗದಂತೆ ಮಾತ್ರೆ ಸೇವಿಸುವುದು. ಕೊಬ್ಬನ್ನು ಕರಗಿಸಲು ಯತ್ನಿಸುವ ಶಾರ್ಟ್​ ಕಟ್ ಟ್ರೆಂಡ್​ಗೆ ಒಗ್ಗಿಕೊಳ್ಳಲು ಯತ್ನಿಸುತ್ತಾರೆ. ಇದು ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರಲಿದೆ ಎನ್ನಲಾಗಿದೆ.

ಯಾವೆಲ್ಲ ನಿಮ್ಮ ವೆಲ್​​ನೆಸ್ ಟ್ರೆಂಡ್​ನಿಂದ ದೂರವಿರಬೇಕು?

ಪೀರಿಯಡ್ಸ್ ಮುಂದೂಡುವ ಮಾತ್ರೆ ನುಂಗುವುದು

ಪೀರಿಯಡ್ಸ್​ ದಿನಗಳಲ್ಲಿ ಕಾಡುವ ಸೊಂಟ, ಹೊಟ್ಟೆ ನೋವು ಹಾಗೂ ಇನ್ನಿತರ ಸಮಸ್ಯೆಯಿಂದ ತಮ್ಮನ್ನು ತಾವು ಕಾಪಾಡಿಕೊಳ್ಳಲು ಸಾಮಾನ್ಯವಾಗಿ ಮಹಿಳೆಯರು ಮದುವೆ ದಿನ ಬರುವ ಪೀರಿಯಡ್​ ಅನ್ನು ಮುಂದೂಡಲು ಮಾತ್ರೆಗಳನ್ನು ಸೇವಿಸುತ್ತಾರೆ. ವೈದ್ಯರ ಸಲಹೆ ಇಲ್ಲದೆ ಈ ಪ್ರವೃತ್ತಿ ಪಾಲಿಸುವುದು ಸರಿಯಿಲ್ಲ ಎನ್ನಲಾಗುತ್ತದೆ. ವೈದ್ಯರ ಸಲಹೆಯಿಲ್ಲದೆ ನೊರೆಥಿಸ್ಟೆರಾನ್‌ನಂತಹ ಮಾತ್ರೆಗಳನ್ನು ಸೇವಿಸುವುದರಿಂದ ರಕ್ತ ಹೆಪ್ಪುಗಟ್ಟುವಿಕೆ ಮತ್ತು ತೀವ್ರ ತಲೆನೋವು ಕಾಣಿಸಿಕೊಳ್ಳಬಹುದು ಎನ್ನಲಾಗಿದೆ.

ತೂಕ ಇಳಿಸುವ ಇಂಜೆಕ್ಷನ್‌ ಬಳಕೆ

ಮದುವೆಯ ದಿನ ತೆಳ್ಳಗೆ ಅಂದವಾಗಿ ಕಾಣಬೇಕು ಎನ್ನುವ ಹುಮ್ಮಸ್ಸಿನಲ್ಲಿ, ತೂಕ ಇಳಿಸಲು ಸಹಾಯ ಮಾಡುವ ಔಷಧವನ್ನು ವೈದ್ಯರ ಸಲಹೆ ಇಲ್ಲದೆ ಬಳಕೆ ಮಾಡಲಾಗುತ್ತದೆ. ಇದು ವಾಂತಿ, ನಿರ್ಜಲೀಕರಣ, ಸ್ನಾಯುಗಳ ನಷ್ಟ ಹಾಗೂ ಕಿಡ್ನಿಯಲ್ಲಿ ಕಲ್ಲಾಗುವಂತೆ ಮಾಡಬಹುದು.

ವಜೈನಲ್ ಸ್ಟೀಮಿಂಗ್

ಯೋನಿಯು ಸ್ವಯಂ ಶುದ್ಧೀಕರಣಗೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಇದನ್ನು ಸ್ವಚ್ಛಗೊಳಿಸಲು ಗಿಡಮೂಲಿಕೆಯ ಹಬೆ ಹಾಕಿ ತಾಗಿಸುವ ಪದ್ಧತಿ ಸರಿಯಲ್ಲ ಎನ್ನಲಾಗುತ್ತದೆ. ಇದರಿಂದ ಯಾವುದೇ ವೈಜ್ಞಾನಿಕ ಪ್ರಯೋಜನವಿಲ್ಲ. ಬದಲಾಗಿ ಸುಟ್ಟ ಗಾಯಗಳು ಮತ್ತು ಸೋಂಕು ತಗಲುವ ಅಪಾಯವಿದೆ.

ಕೊನೆಯ ಕ್ಷಣದ ಬೊಟಾಕ್ಸ್ ಮತ್ತು ಕೆಮಿಕಲ್ ಪೀಲ್ಸ್

ಮದುವೆಗೆ ಇನ್ನೇನು ಕೆಲವೇ ದಿನ ಇದೆ ಎನ್ನುವಾಗ ಮಾಡಿಸಿಕೊಳ್ಳುವ ಕೊನೆಯ ಕ್ಷಣದ ಬೊಟಾಕ್ಸ್ ಮತ್ತು ಕೆಮಿಕಲ್ ಪೀಲ್ಸ್ ಸರಿಯಲ್ಲ. ಬೊಟಾಕ್ಸ್​ ಚುಚ್ಚು ಮದ್ದು ತಕ್ಷಣ ಕೆಲಸ ಮಾಡಲ್ಲ. ಫಲಿತಾಂಶ ಸಿಗಲು ಏಳು ದಿನ ಬೇಕಾಗುತ್ತದೆ. ಈ ಶಾರ್ಟ್​ಕಟ್ ಚುಚ್ಚುಮದ್ದು ಚರ್ಮ ಸುಡುವುದು, ಕಲೆಗಳು, ಊತ ಮತ್ತು ಅಪರೂಪದ ಸಂದರ್ಭಗಳಲ್ಲಿ ದೃಷ್ಟಿ ನಷ್ಟಕ್ಕೂ ಕಾರಣವಾಗಬಹುದು.

ಡಿಟಾಕ್ಸ್ ಟೀ ಹಾಗೂ ಕ್ರ್ಯಾಶ್ ಡಯಟ್

ಡಿಟಾಕ್ಸ್ ಟೀ ಹಾಗೂ ಕ್ರ್ಯಾಶ್ ಡಯಟ್ ತೂಕ ಇಳಿಕೆ ಸರಿಯಾದ ಮಾರ್ಗವಲ್ಲ. ತಾತ್ಕಾಲಿಕವಾಗಿ ನೀರಿನಾಂಶ ಮತ್ತು ಸ್ನಾಯುವನ್ನು ಕರಗಿಸಿ, ನಂತರ ಗಂಭೀರವಾದ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಅತಿಯಾದ ಕ್ಯಾಲೋರಿ ಕಡಿತ ಮತ್ತು ಡಿಟಾಕ್ಸ್ ಟೀಗಳ ಸೇವನೆಯು ದೇಹದಲ್ಲಿ ನೀರಿನಂಶ ಕಡಿಮೆ ಮಾಡಿ, ಸುಸ್ತು, ಕೂದಲು ಉದುರುವಿಕೆ ಮತ್ತು ಹೃದಯದ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆ ಇರುತ್ತದೆ

ಹೇರ್ ಗಮ್ಮೀಸ್ ಮತ್ತು ಬಯೋಟಿನ್

ಹೆಚ್ಚಿನ ಪ್ರಮಾಣದ ಬಯೋಟಿನ್ ಸೇವನೆಯು ಥೈರಾಯ್ಡ್ ಹಾಗೂ ಹೃದಯಾಘಾತ ಪತ್ತೆಹಚ್ಚುವ ರಕ್ತ ಪರೀಕ್ಷೆಗಳ ವರದಿಯಲ್ಲಿ ವ್ಯತ್ಯಾಸ ಉಂಟುಮಾಡುತ್ತದೆ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ