ಒಂದುವೇಳೆ ರೋಗ ನಿರ್ಣಯವನ್ನು ಸಮರ್ಪಕವಾಗಿ ಮಾಡದಿದ್ದರೆ, ಸಕಾಲದಲ್ಲಿ ಚಿಕಿತ್ಸೆಯನ್ನು ನೀಡದಿದ್ದರೆ, ಪಾರ್ಶ್ವವಾಯು ಆಗಿ ಒಂದು ವರ್ಷಕ್ಕಿಂತ ಹೆಚ್ಚು ಸಮಯವಾಗಿದ್ದರೆ ಚಿಕಿತ್ಸೆಯು ಅಸಾಧ್ಯವಾಗುತ್ತದೆ ಎಂಬುದನ್ನು ಚರಕಸಂಹಿತೆಯಲ್ಲೇ ಸೂಚಿಸಲಾಗಿದೆ.
ಹೃದ್ರೋಗ, ಪ್ಲೀಹರೋಗ, ಅರ್ಬುದಗಳು, ಉಪದ್ರವ ರೂಪದಲ್ಲಿ ಕಾಣಿಸಿಕೊಳ್ಳುವ ಅನ್ಯರೋಗಗಳು ಇದ್ದರೆ, ಗರ್ಭಿಣಿಯರು, ಬಾಣಂತಿಯರು, ಬಾಲಕರು, ಅತಿವೃದ್ಧರು, ಕ್ಷೀಣ ದೇಹಿಗಳು, ಶರೀರದಿಂದ ಅತಿಯಾದ ರಕ್ತಸ್ರಾವ ಆಗುತ್ತಿರುವವರಲ್ಲಿ, ಸ್ಪರ್ಶಜ್ಞಾನ ಪೂರ್ತಿ ಹೋಗಿರುವವರಲ್ಲಿ ಪಕ್ಷಾಘಾತದ ಚಿಕಿತ್ಸೆಯು ಫಲಕಾರಿಯಾಗುವುದು ಕಷ್ಟ. ಶರೀರವು ವಾತಪ್ರಕೃತಿಯದಾಗಿದ್ದು, ವಾತ ಹೆಚ್ಚಾಗಿರುವ ಜಾಂಗಲ ಪ್ರದೇಶದಲ್ಲಿ ಹುಟ್ಟಿಬೆಳೆದಿದ್ದು, ವಾತಪ್ರಕೋಪಗೊಳ್ಳುವ ಕಾಲವಾದ ಮಳೆಗಾಲದಲ್ಲಿ ಪಾರ್ಶ್ವವಾಯು ಉಂಟಾಗಿದ್ದು, ವಯಸ್ಸಿಗನುಗುಣವಾಗಿ ದೇಹದಲ್ಲಿ ವಾತವು ಹೆಚ್ಚು ಪ್ರಬಲವಾಗಿರುವ ವೃದ್ಧಾಪ್ಯದಲ್ಲಿ ಪಕ್ಷಾಘಾತ ಉಂಟಾಗಿದ್ದರೆ ಅದು ಚಿಕಿತ್ಸೆಯ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸುತ್ತದೆ. ಈ ಪಾರ್ಶ್ವವಾಯುವಿನಲ್ಲಿ ಶಿರಸ್ಸಿನ ರಕ್ತ ಹಾಗೂ ಸೂಕ್ಷ್ಮನಾಡಿಗಳಲ್ಲಿ ಉಂಟಾಗಿರುವ ಅಡೆತಡೆ ನಿವಾರಣೆ, ತನ್ಮೂಲಕ ಶಿರಸ್ಸಿಗೆ ಸರಾಗವಾದ ರಕ್ತ ಸಂಚಾರ, ದೂಷಿತವಾಗಿರುವ ಮಸ್ತಿಷ್ಕದ ಮಜ್ಜಾಧಾತುವಿನ ಶುದ್ಧಿ, ಮಿದುಳು, ರಕ್ತನಾಳಗಳು, ನರಮಂಡಲ ಹಾಗೂ ಸ್ನಾಯುಗಳ ಪೋಷಣೆ ಸಮರ್ಪಕವಾಗಿ ಆಗುವಂತೆ ನೋಡಿಕೊಳ್ಳುವುದು ಪಕ್ಷಾಘಾತ ಚಿಕಿತ್ಸೆಯ ತಿರುಳು.
ಸ್ನೇಹನ, ಸ್ವೇದನ, ವಿರೇಚನಗಳೆಂಬ ಮೂರು ಚಿಕಿತ್ಸಾ ಕ್ರಮಗಳಿಗೆ ಆಯುರ್ವೆದದ ಮೂಲ ಗ್ರಂಥಗಳಲ್ಲಿ ಒತ್ತು ನೀಡಲಾಗಿದೆ. ಅನುವಾಸನ ಬಸ್ತಿ, ಆಸ್ಥಾಪನ ಬಸ್ತಿ, ನಸ್ಯಕರ್ಮ, ಶಿರೋಬಸ್ತಿ, ಸ್ನೇಹಧಾರಾಸ್ವೇದ, ಶಿರೋಪಿಚು, ಶಿರೋಭ್ಯಂಗ, ಶಿರಃಸೇಕ, ಪಿಂಡಸ್ವೇದ, ಅಕ್ಷಿತರ್ಪಣ, ಕರ್ಣಪೂರಣ, ವಿಕೃತ ಪಾರ್ಶ್ವಾಭ್ಯಂಗ, ಅವಗಾಹ ಇನ್ನಿತರ ಸ್ವೇದನ ಚಿಕಿತ್ಸೆ, ಬಿಸಿನೀರು ಸ್ನಾನ, ಅಗ್ನಿಕರ್ಮವೇ ಮೊದಲಾದ ಚಿಕಿತ್ಸೆಗಳು ಅತ್ಯಂತ ಪರಿಣಾಮಕಾರಿಯಾಗಿವೆ. ಇಂದಿಗೂ ಪಕ್ಷಾಘಾತ ರೋಗಿಗಳಿಗೆ ಈ ವಿಶೇಷ ಚಿಕಿತ್ಸಾಕ್ರಮಗಳ ಸರ್ವಾಂಗೀಣ ಕಾರ್ಯಕ್ಷಮತೆ ಅತಿದೊಡ್ಡ ವರದಾನ. ಕೇವಲ ರೋಗವನ್ನು ಶಮನಗೊಳಿಸುವ ಔಷಧಗಳಿಂದಲೇ ಪಕ್ಷಾಘಾತವನ್ನು ಗುಣಪಡಿಸುವುದು ಸಾಧ್ಯವಿಲ್ಲದಿರುವುದರಿಂದ ಈ ಪಂಚಕರ್ಮ ಚಿಕಿತ್ಸೆಗಳಿಗೆ ಬಹಳಷ್ಟು ಮಹತ್ವವಿದೆ. ಮಹಾರೋಗವಾದುದರಿಂದ ಸಣ್ಣಪುಟ್ಟ ಚಿಕಿತ್ಸೆಗಳಿಗೆ ಬಗ್ಗುವ ಕಾಯಿಲೆ ಇದಲ್ಲ.
ಅಭ್ಯಂಗ, ಶಿರೋಬಸ್ತಿ, ಶಿರೋಸ್ನೇಹಧಾರ, ಸ್ನೇಹಪಾನ ಮೊದಲಾದ ಚಿಕಿತ್ಸೆಗಳು ಮಿದುಳಿನಲ್ಲಿ ಅಡೆತಡೆ ಉಂಟುಮಾಡಿರುವ ಅವಯವಗಳನ್ನು ಸ್ನೇಹಪೂರಿತವನ್ನಾಗಿಸಿ ಅವುಗಳ ನಿವಾರಣೆಗೆ ಕಾರ್ಯ ನಿರ್ವಹಿಸುತ್ತವೆ. ಪಿಂಡಸ್ವೇದ, ಅವಗಾಹಸ್ವೇದ, ಧಾರಾಸ್ವೇದ ಮೊದಲಾದ ಸ್ವೇದನ ಕ್ರಿಯೆಗಳು ತಡೆಯೊಡ್ಡಿದ ಅಂಶಗಳನ್ನು ಉದರಕ್ಕೆ ತಂದು ಸೇರಿಸುವ ಕಾರ್ಯವೆಸಗುತ್ತವೆ. ವಿರೇಚನ ಕರ್ಮ ಹಾಗೂ ಬಸ್ತಿ ಚಿಕಿತ್ಸೆಗಳು ದೋಷಗಳನ್ನು ದೇಹದಿಂದ ಹೊರಹಾಕಿ ಶರೀರ ಶೋಧನೆಯನ್ನು ಮಾಡುತ್ತವೆ. ವಿರೇಚನವು ಪಿತ್ತದೋಷಕ್ಕೆ ಮಾಡುವ ಪ್ರಧಾನ ಚಿಕಿತ್ಸೆ. ಪಿತ್ತಧರಾ ಕಲಾದ ಅರ್ಥಾತ್ ಮಜ್ಜಾಧರಾ ಕಲಾದ ಮೇಲೆ ಕಾರ್ಯವೆಸಗುತ್ತದೆ.
ಮಿದುಳಿನಲ್ಲಿರುವ ಮಜ್ಜಾಧಾತುವಿನ ಸ್ನೇಹ ಮಲಾಂಶವನ್ನು ಬೇರ್ಪಡಿಸಿ ಜೀರ್ಣಕ್ರಿಯೆ ನಡೆಯುವ ಉದರಕ್ಕೆ ತಂದು ಆಹಾರ ಮಲದಲ್ಲಿ ಸ್ನೇಹಾಂಶ ಹೆಚ್ಚಿಸುವುದು. ವಿರೇಚನದ ಮೂಲಕ ಕೋಷ್ಠ ಶೋಧನೆಯು ನಡೆದು ಮಸ್ತಿಷ್ಕದ ಮಜ್ಜಾ ಶುದ್ಧಿಯೂ ಜೊತೆಯಲ್ಲೇ ಆಗುವುದರಿಂದ ವಾತವೂ ಶಮನವಾಗುತ್ತದೆ.