ತಣ್ಣೀರಿನ ಸ್ನಾನ  AI image
ಆರೋಗ್ಯ

ನೀವು ಪ್ರತಿದಿನ ಬಿಸಿ ನೀರಲ್ಲೇ ಸ್ನಾನ ಮಾಡ್ತೀರಾ? ವಿಜ್ಞಾನಿಗಳು ಹೇಳೋದೇನು? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ.....Cold Shower

ಬೆಳಗ್ಗೆ ಎದ್ದ ತಕ್ಷಣ ಬಿಸಿನೀರಿನಿಂದ ಸ್ನಾನ ಮಾಡುವ ಅಭ್ಯಾಸ ಹಲವರಿಗಿರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ತಣ್ಣೀರಿನ ಸ್ನಾನ ಎಂದರೆ ಬಹುತೇಕರು ಹಿಂದೇಟು ಹಾಕುತ್ತಾರೆ. ಆದರೆ ತಣ್ಣೀರಿನಿಂದ ಸ್ನಾನ ಮಾಡುವ ಅಭ್ಯಾಸ ಆರೋಗ್ಯದ ಮೇಲೆ ಕೆಲವು ಸಕಾರಾತ್ಮಕ ಪರಿಣಾಮ ಬೀರಬಹುದು ಎಂಬ ಕುತೂಹಲಕಾರಿ ಸಂಗತಿ ಅಧ್ಯಯನವೊಂದರಲ್ಲಿ ಬೆಳಕಿಗೆ ಬಂದಿದೆ. ವಿಶೇಷವೆಂದರೆ, ನಿಯಮಿತವಾಗಿ ತಣ್ಣೀರಿನ ಸ್ನಾನ ಮಾಡಿದವರಲ್ಲಿ ಅನಾರೋಗ್ಯದ ಕಾರಣ ಕೆಲಸಕ್ಕೆ ಗೈರಾಗುವ ದಿನಗಳ ಸಂಖ್ಯೆ ಕಡಿಮೆಯಾಗಿರುವುದು ಸಂಶೋಧಕರ ಗಮನ ಸೆಳೆದಿದೆ.Cold Shower

Cold Showers : ಬೆಳಗ್ಗೆ ಎದ್ದ ತಕ್ಷಣ ಬಿಸಿನೀರಿನಿಂದ ಸ್ನಾನ ಮಾಡುವ ಅಭ್ಯಾಸ ಹಲವರಿಗಿರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ತಣ್ಣೀರಿನ ಸ್ನಾನ ಎಂದರೆ ಬಹುತೇಕರು ಹಿಂದೇಟು ಹಾಕುತ್ತಾರೆ. ಆದರೆ ತಣ್ಣೀರಿನಿಂದ ಸ್ನಾನ ಮಾಡುವ ಅಭ್ಯಾಸ ಆರೋಗ್ಯದ ಮೇಲೆ ಕೆಲವು ಸಕಾರಾತ್ಮಕ ಪರಿಣಾಮ ಬೀರಬಹುದು ಎಂಬ ಕುತೂಹಲಕಾರಿ ಸಂಗತಿ ಅಧ್ಯಯನವೊಂದರಲ್ಲಿ ಬೆಳಕಿಗೆ ಬಂದಿದೆ. ವಿಶೇಷವೆಂದರೆ, ನಿಯಮಿತವಾಗಿ ತಣ್ಣೀರಿನ ಸ್ನಾನ ಮಾಡಿದವರಲ್ಲಿ ಅನಾರೋಗ್ಯದ ಕಾರಣ ಕೆಲಸಕ್ಕೆ ಗೈರಾಗುವ ದಿನಗಳ ಸಂಖ್ಯೆ ಕಡಿಮೆಯಾಗಿರುವುದು ಸಂಶೋಧಕರ ಗಮನ ಸೆಳೆದಿದೆ.

719 ಜನರ ಮೇಲೆ ನಡೆದ ಅಧ್ಯಯನ

ಸ್ವಿಟ್ಜರ್ಲೆಂಡ್‌ನ ಬಾಸೆಲ್ ವಿಶ್ವವಿದ್ಯಾಲಯದ ಮನೋವಿಜ್ಞಾನ ಸಂಶೋಧಕಿ ಲೀನಾ ಗ್ಲೇಸರ್ ಅವರು ತಣ್ಣೀರಿನ ಸ್ನಾನದ ಪರಿಣಾಮಗಳ ಕುರಿತು ಅಧ್ಯಯನ ನಡೆಸಿದ್ದಾರೆ. ಮೂರು ಪ್ರತ್ಯೇಕ ನಿಯಂತ್ರಿತ ಪ್ರಯೋಗಗಳಲ್ಲಿ ಒಟ್ಟು 719 ಜನರನ್ನು ಒಳಗೊಂಡ ವಿಶ್ಲೇಷಣೆ ಮಾಡಲಾಗಿದೆ. ಈ ಅಧ್ಯಯನದಲ್ಲಿ ನಿಯಮಿತವಾಗಿ ತಣ್ಣೀರಿನ ಸ್ನಾನ ಮಾಡಿದವರು, ಹಾಗೆ ಮಾಡದವರಿಗೆ ಹೋಲಿಸಿದರೆ ಅನಾರೋಗ್ಯದ ಕಾರಣ ಕೆಲಸಕ್ಕೆ ರಜೆ ಪಡೆದ ದಿನಗಳಲ್ಲಿ ಶೇ.31ರಷ್ಟು ಇಳಿಕೆ ಕಂಡುಬಂದಿದೆ.

ಮಾನಸಿಕ ಆರೋಗ್ಯದ ಮೇಲೂ ಪರಿಣಾಮ

ತಣ್ಣೀರಿನ ಸ್ನಾನ ಮಾಡಿದವರು ಅಧ್ಯಯನದ ಅವಧಿಯಲ್ಲಿ ತಮ್ಮ ಮಾನಸಿಕ ಯೋಗಕ್ಷೇಮದಲ್ಲಿ ಸ್ವಲ್ಪ ಸುಧಾರಣೆ ಕಂಡಿರುವುದಾಗಿ ಪ್ರಶ್ನಾವಳಿಗಳ ಮೂಲಕ ತಿಳಿಸಿದ್ದಾರೆ. ದೈಹಿಕ ಆರೋಗ್ಯದಲ್ಲಿಯೂ ಕೆಲವು ಸಕಾರಾತ್ಮಕ ಬದಲಾವಣೆಗಳನ್ನು ವರದಿ ಮಾಡಿದ್ದಾರೆ. ಆದರೆ ದೈಹಿಕ ಆರೋಗ್ಯದ ಸುಧಾರಣೆ ಸಂಖ್ಯಾಶಾಸ್ತ್ರೀಯವಾಗಿ ಮಹತ್ವದ್ದಾಗಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿಲ್ಲ ಎಂದು ಸಂಶೋಧಕರು ತಿಳಿಸಿದ್ದಾರೆ.

ಆರಂಭದಲ್ಲಿ ಕಷ್ಟ ನಂತರ ಅಭ್ಯಾಸ

ಅಧ್ಯಯನದ ಆರಂಭದ ಎರಡು ವಾರಗಳಲ್ಲಿ ಅನೇಕರು ತಣ್ಣೀರಿನ ಸ್ನಾನದ ಪ್ರಯೋಗದಿಂದ ಹಿಂದೆ ಸರಿದಿದ್ದರು. ಆದರೆ ನಂತರ ಈ ಪ್ರಮಾಣ ಕಡಿಮೆಯಾಯಿತು. ನಿಯಮಿತವಾಗಿ ಪ್ರಯೋಗದಲ್ಲಿ ಭಾಗವಹಿಸಿದವರಲ್ಲಿ ಶೇ.77.3ರಿಂದ ಶೇ.90ರಷ್ಟು ಜನರು ಪ್ರತಿ ವಾರ ತಣ್ಣೀರಿನ ಸ್ನಾನ ಮಾಡಿರುವುದಾಗಿ ವರದಿಯಾಗಿದೆ. ಅಂದರೆ ಆರಂಭದಲ್ಲಿ ಕಷ್ಟವೆನಿಸಿದರೂ ಕ್ರಮೇಣ ದೇಹ ಮತ್ತು ಮನಸ್ಸು ಈ ಅಭ್ಯಾಸಕ್ಕೆ ಹೊಂದಿಕೊಳ್ಳಬಹುದು ಎಂಬುದನ್ನು ಸಂಶೋಧನೆ ಸೂಚಿಸುತ್ತದೆ.

ಇದನ್ನೂ ಓದಿ : ಕಾಲುಗಳೇ ಇಲ್ಲ ಆದರೂ ಗಂಟೆಗೆ 13 ಕಿ.ಮೀ ವೇಗದಲ್ಲಿ ಪಲ್ಟಿ ಹೊಡೆಯುವ ಹಾವುಗಳು: ವಿಜ್ಞಾನಿಗಳೇ ಬೆರಗು! Tinny Snakes

ಹಿಂದಿನ ಅಧ್ಯಯನದಲ್ಲೂ ಇದೇ ರೀತಿಯ ಫಲಿತಾಂಶ

2016ರಲ್ಲಿ ನಡೆದ ಮತ್ತೊಂದು ಅಧ್ಯಯನದಲ್ಲಿಯೂ ತಣ್ಣೀರಿನ ಸ್ನಾನ ಮಾಡಿದವರಲ್ಲಿ ಅನಾರೋಗ್ಯದ ಕಾರಣ ಕೆಲಸಕ್ಕೆ ಗೈರಾಗುವ ಪ್ರಮಾಣ ಶೇ.29ರಷ್ಟು ಕಡಿಮೆಯಾಗಿರುವುದು ಕಂಡುಬಂದಿತ್ತು. ಆದರೆ ಅನಾರೋಗ್ಯ ಅನುಭವಿಸಿದ ದಿನಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿರಲಿಲ್ಲ. ಇದೀಗ ನಡೆದಿರುವ ಮೂರು ಪ್ರಯೋಗಗಳ ಒಟ್ಟಾರೆ ವಿಶ್ಲೇಷಣೆಯು ಈ ವಿಷಯದಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

ರೋಗನಿರೋಧಕ ಶಕ್ತಿಗೂ ಸಂಬಂಧವಿದೆಯೇ?

ತಣ್ಣೀರಿನ ಸ್ನಾನದಿಂದ ದೇಹದಲ್ಲಿ ಯಾವ ಜೈವಿಕ ಬದಲಾವಣೆಗಳು ಉಂಟಾಗುತ್ತವೆ ಎಂಬುದನ್ನು ಈ ಅಧ್ಯಯನ ನೇರವಾಗಿ ಪರಿಶೀಲಿಸಿಲ್ಲ. ಆದರೆ 2024ರಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನದಲ್ಲಿ ತಣ್ಣೀರಿನ ಸ್ನಾನ ಮಾಡಿದವರಲ್ಲಿ ರೋಗನಿರೋಧಕ ಪ್ರತಿಕ್ರಿಯೆಗೆ ಸಂಬಂಧಿಸಿದ ಕೆಲವು ಸೂಚನೆಗಳು ಹೆಚ್ಚಾಗಿರುವುದು ಕಂಡುಬಂದಿತ್ತು. ಹೀಗಾಗಿ ತಣ್ಣೀರಿಗೆ ಪದೇಪದೆ ಒಡ್ಡಿಕೊಳ್ಳುವುದಕ್ಕೂ ರೋಗನಿರೋಧಕ ವ್ಯವಸ್ಥೆಗೂ ಸಂಬಂಧವಿರಬಹುದೆಂದು ಸಂಶೋಧಕರು ಊಹಿಸಿದ್ದಾರೆ. ಆದರೆ ಇದನ್ನು ಖಚಿತಪಡಿಸಲು ಇನ್ನಷ್ಟು ಅಧ್ಯಯನಗಳ ಅಗತ್ಯವಿದೆ.

ತಣ್ಣೀರಿನ ಸ್ನಾನ ಆರಂಭಿಸುವುದು ಹೇಗೆ?

ತಣ್ಣೀರಿನ ಸ್ನಾನ ಮಾಡಲು ಬಯಸುವವರು ಏಕಾಏಕಿ ಅತಿ ತಣ್ಣನೆಯ ನೀರನ್ನು ಬಳಸುವ ಬದಲು ನಿಧಾನವಾಗಿ ಆರಂಭಿಸುವುದು ಉತ್ತಮ. ಮೊದಲಿಗೆ ಸಾಮಾನ್ಯ ನೀರಿನಿಂದ ಸ್ನಾನ ಮಾಡಿ, ಕೊನೆಯಲ್ಲಿ ಸ್ವಲ್ಪ ತಣ್ಣನೆಯ ನೀರನ್ನು ಬಳಸುವ ಮೂಲಕ ಅಭ್ಯಾಸ ಮಾಡಿಕೊಳ್ಳಬಹುದು. ದೇಹದ ಪ್ರತಿಕ್ರಿಯೆಯನ್ನು ಗಮನಿಸುವುದು ಮುಖ್ಯ. ಅಸ್ವಸ್ಥತೆ ಕಂಡುಬಂದರೆ ಬಲವಂತವಾಗಿ ಮುಂದುವರಿಸಬಾರದು. ಹೃದಯ ಸಂಬಂಧಿ ಸಮಸ್ಯೆ ಅಥವಾ ಇತರ ಆರೋಗ್ಯ ತೊಂದರೆ ಇರುವವರು ವೈದ್ಯರ ಸಲಹೆ ಪಡೆಯದೆ ಇಂತಹ ಪ್ರಯೋಗ ಮಾಡಬಾರದು.ತಣ್ಣೀರಿನ ಸ್ನಾನವು ಕೇವಲ ಚಳಿಯನ್ನು ಸಹಿಸಿಕೊಳ್ಳುವ ಅಭ್ಯಾಸವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಸಂಶೋಧಕರ ಗಮನ ಸೆಳೆಯುತ್ತಿರುವ ವಿಷಯವಾಗಿದೆ. ಆದರೆ ಇದರಿಂದ ಎಲ್ಲರಿಗೂ ಒಂದೇ ರೀತಿಯ ಪ್ರಯೋಜನ ಸಿಗುತ್ತದೆ ಎಂದು ಹೇಳಲು ಸದ್ಯಕ್ಕೆ ಸಾಕಷ್ಟು ವೈಜ್ಞಾನಿಕ ಪುರಾವೆಗಳಿಲ್ಲ, (ಏಜೆನ್ಸೀಸ್​).