ಪ್ರತಿವರ್ಷ ಮೇ 31ರಂದು ಜಗತ್ತಿನಾದ್ಯಂತ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ. ಸಿಗರೇಟಿನ ಹೊಗೆಯಲ್ಲಿ ತಮ್ಮ ಯೌವನಕ್ಕೇ ಕೊಳ್ಳಿ ಇಟ್ಟುಕೊಳ್ಳುತ್ತಿರುವ, ಗುಟ್ಕಾ ಜಗಿಯುತ್ತ ತಮಗೇ ಅರಿವಿಲ್ಲದಂತೆ ಕ್ಯಾನ್ಸರ್ಗೆ ಆಹ್ವಾನ ನೀಡುತ್ತಿರುವ ಇಂದಿನ ಪೀಳಿಗೆಗೆ ಎಚ್ಚರಿಕೆಯ ಗಂಟೆ ಬಾರಿಸುವ ದಿನವಿದು. ಆರೋಗ್ಯವಂತ ಬದುಕನ್ನು ರಕ್ಷಿಸಿಕೊಳ್ಳಲು, ಮುಂದಿನ ಪೀಳಿಗೆಯನ್ನು ವ್ಯಸನಮುಕ್ತಗೊಳಿಸಲು ಜಾಗೃತಿ ಮತ್ತು ದೃಢ ಸಂಕಲ್ಪ ಅತ್ಯಗತ್ಯ.
ಧೂಮಪಾನ ಆರೋಗ್ಯಕ್ಕೆ ಹಾನಿಕರ, ತಂಬಾಕು ಸೇವನೆ ಕ್ಯಾನ್ಸರ್ಗೆ ಕಾರಣವಾಗುತ್ತದೆ... ಈ ವಾಕ್ಯಗಳು ಸಿಗರೇಟ್ ಪ್ಯಾಕ್ಗಳ ಮೇಲೆ, ಸಿನಿಮಾ ಮಂದಿರಗಳ ಪರದೆಯ ಮೇಲೆ ನಿರಂತರವಾಗಿ ರಾರಾಜಿಸುತ್ತಲೇ ಇವೆ. ಹಲವು ದಶಕಗಳಿಂದ ಇದನ್ನು ಓದುತ್ತಿದ್ದರೂ ಮತ್ತೊಂದು ಸಿಗರೇಟ್ ಹಚ್ಚಿಕೊಳ್ಳುವ ಅಥವಾ ಇನ್ನೊಂದು ಗುಟ್ಕಾ ಪ್ಯಾಕೇಟ್ ಹರಿದು ಬಾಯಿಗೆ ಹಾಕಿಕೊಳ್ಳುವ ಜನರ ಸಂಖ್ಯೆ ಸ್ವಲ್ಪವೂ ಕಡಿಮೆಯಾಗಿಲ್ಲ.
ಪ್ರತಿ ವರ್ಷ ಮೇ 31ರಂದು ಜಾಗತಿಕವಾಗಿ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸುವ ಮೂಲಕ ವಿಶ್ವ ಆರೋಗ್ಯ ಸಂಸ್ಥೆ ಮತ್ತು ಜಗತ್ತಿನಾದ್ಯಂತ ಆರೋಗ್ಯ ಸಂಸ್ಥಗಳು ತಂಬಾಕಿನ ಭೀಕರ ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿವೆ. ತಂಬಾಕು ಒಬ್ಬ ವ್ಯಕ್ತಿಯ ಆರೋಗ್ಯವನ್ನಷ್ಟೇ ಅಲ್ಲ, ಇಡೀ ಕುಟುಂಬವನ್ನು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಜರ್ಜರಿತಗೊಳಿಸುತ್ತದೆ.
ಆರೋಗ್ಯದ ಮೇಲಾಗುವ ಪರಿಣಾಮಗಳು
ತಂಬಾಕು ಸೇವನೆಯ ದುಷ್ಪರಿಣಾಮ ಶ್ವಾಸಕೋಶಕ್ಕೆ ಮಾತ್ರ ಸೀಮಿತವಾಗಿಲ್ಲ. ತಲೆಯಿಂದ ಕಾಲಿನ ಉಗುರಿನವರೆಗೆ ದೇಹದ ಪ್ರತಿಯೊಂದು ಅಂಗವನ್ನೂ ಇದು ಆಹುತಿ ತೆಗೆದುಕೊಳ್ಳುತ್ತದೆ.
ಕ್ಯಾನ್ಸರ್ ಮಹಾಮಾರಿ: ತಂಬಾಕು ಸೇವನೆಯಿಂದ ಬಾಯಿ, ಗಂಟಲು, ಶ್ವಾಸಕೋಶ, ಅನ್ನನಾಳ, ಹೊಟ್ಟೆ ಮತ್ತು ಮೂತ್ರಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಶೇ. 90ರಷ್ಟು ಹೆಚ್ಚಿರುತ್ತದೆ. ಭಾರತದಲ್ಲಿ ಪುರುಷರಲ್ಲಿ ಕಂಡುಬರುವ ಕ್ಯಾನ್ಸರ್ಗಳಲ್ಲಿ ಬಾಯಿಯ ಕ್ಯಾನ್ಸರ್ ಮೊದಲ ಸ್ಥಾನದಲ್ಲಿದೆ, ಇದಕ್ಕೆ ಪ್ರಮುಖ ಕಾರಣ ಗುಟ್ಕಾ ಮತ್ತು ಪಾನ್ ಮಸಾಲಾ ಜಗಿಯುವುದು.
ಹೃದಯಾಘಾತ, ಪಾರ್ಶ್ವವಾಯು: ನಿಕೋಟಿನ್ ರಕ್ತನಾಳಗಳನ್ನು ಕಿರಿದಾಗಿಸುತ್ತದೆ. ಇದರಿಂದಾಗಿ ರಕ್ತದೊತ್ತಡ (ಬಿಪಿ) ಹೆಚ್ಚಾಗಿ ಹೃದಯಕ್ಕೆ ರಕ್ತದ ಪೂರೈಕೆ ಕಡಿಮೆಯಾಗುತ್ತದೆ. ಇದು ಹೃದಯಾಘಾತ ಅಥವಾ ಪಾರ್ಶ್ವವಾಯುವಿಗೆ ದಾರಿ ಮಾಡಿಕೊಡಬಹುದು. ಇತ್ತೀಚಿನ ದಿನಗಳಲ್ಲಿ 30-40 ವರ್ಷದ ಯುವಕರಲ್ಲಿಯೂ ಹೃದಯಾಘಾತ ಹೆಚ್ಚಾಗಲು ಧೂಮಪಾನವೇ ಪ್ರಮುಖ ಕಾರಣ.
ಸಂತಾನಹೀನತೆ: ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು ಮತ್ತು ಮಹಿಳೆಯರಲ್ಲಿ ಗರ್ಭಪಾತದಂತಹ ಸಮಸ್ಯೆಗಳಿಗೆ ತಂಬಾಕು ಕಾರಣವಾಗುತ್ತದೆ. ಗರ್ಭಿಣಿಯರು ಧೂಮಪಾನ ಮಾಡಿದರೆ ಅಥವಾ ಆ ಹೊಗೆಯನ್ನು ಸೇವಿಸಿದರೆ ಹುಟ್ಟುವ ಮಗುವಿಗೆ ಅಂಗವೈಕಲ್ಯ ಇರುವ ಸಾಧ್ಯತೆ ಹೆಚ್ಚು.
ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳ ಪ್ರಕಾರ, ಜಗತ್ತಿನಲ್ಲಿ ಪ್ರತಿವರ್ಷ ಸುಮಾರು 80 ಲಕ್ಷಕ್ಕೂ ಹೆಚ್ಚು ಜನರು ತಂಬಾಕು ಸೇವನೆಯಿಂದಲೇ ಸಾವಿಗೀಡಾಗುತ್ತಿದ್ದಾರೆ. ಇದರಲ್ಲಿ ಧೂಮಪಾನ ಮಾಡುವವರಷ್ಟೇ ಅಲ್ಲ, ಧೂಮಪಾನಿಗಳ ಪಕ್ಕದಲ್ಲಿ ನಿಂತು ಆ ಹೊಗೆಯನ್ನು ಉಸಿರಾಡುವ (ಪ್ಯಾಸಿವ್ ಸ್ಮೋಕರ್ಸ್) ಸುಮಾರು 12 ಲಕ್ಷ ಅಮಾಯಕರೂ ಸೇರಿದ್ದಾರೆ ಎಂಬುದು ಅತ್ಯಂತ ಆಘಾತಕಾರಿ ವಿಷಯ.
ತಂಬಾಕಿನ ಆರ್ಥಿಕ ಹೊಡೆತ
ತಂಬಾಕು ಕೇವಲ ದೈಹಿಕ ಆರೋಗ್ಯವನ್ನಷ್ಟೇ ಅಲ್ಲ, ಆರ್ಥಿಕ ಆರೋಗ್ಯವನ್ನೂ ನಾಶ ಮಾಡುತ್ತದೆ. ಸಿಗರೇಟ್ ಅಥವಾ ಗುಟ್ಕಾಕ್ಕೆ ಪ್ರತಿದಿನ 100 ರೂ. ಖರ್ಚು ಮಾಡುವ ವ್ಯಕ್ತಿ, ವರ್ಷಕ್ಕೆ 36,000 ರೂ.ಗೂ ಹೆಚ್ಚು ಹಣವನ್ನು ವ್ಯಯಿಸುತ್ತಾನೆ. ಮುಂದೊಂದು ದಿನ ಕಾಯಿಲೆ ಬಂದಾಗ ಆಸ್ಪತ್ರೆಗೆ ಲಕ್ಷಾಂತರ ರೂ. ಸುರಿಯಬೇಕಾಗುತ್ತದೆ. ಆ ಹಣವನ್ನು ಮಕ್ಕಳ ಶಿಕ್ಷಣಕ್ಕೆ ಅಥವಾ ಭವಿಷ್ಯದ ಉಳಿತಾಯಕ್ಕೆ ಬಳಸಿದರೆ ಇಡೀ ಕುಟುಂಬ ಸುಖವಾಗಿರುತ್ತದೆ.
ಭಾರತದಲ್ಲೇನಿದೆ ಪರಿಸ್ಥಿತಿ?
ಭಾರತದಲ್ಲಿ ತಂಬಾಕು ಬಳಕೆದಾರರ ಸಂಖ್ಯೆ ಜಗತ್ತಿನಲ್ಲೇ 2ನೇ ಸ್ಥಾನದಲ್ಲಿದೆ. ನಮ್ಮ ದೇಶದಲ್ಲಿ ತಂಬಾಕನ್ನು 2 ರೂಪದಲ್ಲಿ ಬಳಸಲಾಗುತ್ತದೆ. 1. ಹೊಗೆ ಸಹಿತ ತಂಬಾಕು- ಸಿಗರೇಟ್, ಬೀಡಿ, ಹುಕ್ಕಾ ಇತ್ಯಾದಿ. 2. ಹೊಗೆ ರಹಿತ ತಂಬಾಕು- ಗುಟ್ಕಾ, ಖೈನಿ, ಪಾನ್ ಮಸಾಲಾ, ಜರ್ದಾ ಇತ್ಯಾದಿ. ಭಾರತದಲ್ಲಿ ವಾರ್ಷಿಕ ಸುಮಾರು 13 ಲಕ್ಷಕ್ಕೂ ಹೆಚ್ಚು ಜನರು ತಂಬಾಕು ಸಂಬಂಧಿತ ಕಾಯಿಲೆಗಳಿಂದ ಸಾವಿಗೀಡಾಗುತ್ತಿದ್ದಾರೆ. ಯುವಜನತೆ ಫ್ಯಾಷನ್ ಅಥವಾ ಸ್ಟೇಟಸ್ ಸಿಂಬಲ್ ಎಂದುಕೊಂಡು ಆರಂಭಿಸುವ ಈ ಅಭ್ಯಾಸ, ನಂತರದ ದಿನಗಳಲ್ಲಿ ಬಿಡಿಸಲಾರದ ಕಠಿಣ ವ್ಯಸನವಾಗಿ (ಅಡಿಕ್ಷನ್) ಬದಲಾಗುತ್ತಿದೆ.
ಮಾಡದ ತಪ್ಪಿಗೂ ಶಿಕ್ಷೆ!
ನೀವು ಧೂಮಪಾನ ಮಾಡದೇ ಇರಬಹುದು, ಆದರೆ ನಿಮ್ಮ ಸ್ನೇಹಿತ ಅಥವಾ ಸಹೋದ್ಯೋಗಿ ಸೇದುವ ಸಿಗರೇಟಿನ ಹೊಗೆಯನ್ನು ನೀವು ಬಹುಕಾಲ ಉಸಿರಾಡುತ್ತಿದ್ದರೆ, ನಿಮಗೂ ಸಮಾನವಾಗಿ ಅಪಾಯ ಕಾದಿದೆ ಎಂದೇ ಅರ್ಥ. ಇದನ್ನು ‘ಪ್ಯಾಸಿವ್ ಸ್ಮೋಕಿಂಗ್’ ಅಥವಾ ಸೆಕೆಂಡ್ಹ್ಯಾಂಡ್ ಸ್ಮೋಕಿಂಗ್ ಎನ್ನಲಾಗುತ್ತದೆ. ಮನೆಯಲ್ಲಿ ತಂದೆ ಅಥವಾ ಹಿರಿಯರು ಧೂಮಪಾನ ಮಾಡುವುದರಿಂದ, ಅಲ್ಲಿರುವ ಸಣ್ಣ ಮಕ್ಕಳಿಗೆ ಅಸ್ತಮಾ, ನ್ಯುಮೋನಿಯಾ ಮತ್ತು ಕಿವಿ ಸೋಂಕಿನಂತಹ ಕಾಯಿಲೆಗಳು ಬರುತ್ತವೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಿರುವುದರ ಹಿಂದಿನ ಆಶಯವೇ ಇದು- ಮತ್ತೊಬ್ಬರ ಆರೋಗ್ಯವನ್ನು ರಕ್ಷಿಸುವುದು.
ಉಸಿರಾಟದ ತೊಂದರೆ
ದೀರ್ಘಕಾಲದ ಧೂಮಪಾನದಿಂದ ಶ್ವಾಸಕೋಶದ ಕಾರ್ಯಕ್ಷಮತೆ ಕುಂದುತ್ತದೆ. ಕ್ರೋನಿಕ್ ಬ್ರಾಂಕೈಟಿಸ್ ಮತ್ತು ಎಂಫಿಸೆಮಾದಂತಹ ಉಸಿರಾಟದ ತೀವ್ರ ತೊಂದರೆಗಳು ಕಾಣಿಸಿಕೊಂಡು, ವ್ಯಕ್ತಿ ಸದಾ ಆಮ್ಲಜನಕದ ಸಿಲಿಂಡರ್ ನೆರವಿನಿಂದ ಬದುಕಬೇಕಾದ ಸ್ಥಿತಿ ಬರಬಹುದು.
ತಂಬಾಕಿನಿಂದ ಮುಕ್ತರಾಗಲು ಹೀಗೆ ಮಾಡಿ!
ತಂಬಾಕು ಸೇವನೆ ಬಿಡುವುದು ಕಷ್ಟ ಎಂಬುದೇನೋ ನಿಜ, ಆದರೆ ಅಸಾಧ್ಯವೇನಲ್ಲ. ಮನಸ್ಸಿದ್ದಲ್ಲಿ ಮಾರ್ಗವಿದೆ. ವ್ಯಸನದಿಂದ ಹೊರಬರಲು ಈ ಕೆಳಗಿನ ಕ್ರಮಗಳು ಸಹಕಾರಿ.
1. ‘ದಿನ’ ನಿಗದಿಪಡಿಸಿ: ನಾನು ಇಂತಹದೇ ದಿನದಿಂದ ಧೂಮಪಾನ ಅಥವಾ ತಂಬಾಕು ನಿಲ್ಲಿಸುತ್ತೆನೆ ಎಂದು ಒಂದು ದಿನಾಂಕವನ್ನು ನಿಗದಿಪಡಿಸಿಕೊಳ್ಳಿ.
2. ಪ್ರೇರಕ ಅಂಶಗಳನ್ನು ದೂರವಿಡಿ: ಲೈಟರ್, ಆಶ್ ಟ್ರೇ ಮುಂತಾದವು ನಿಮಗೆ ಸಿಗರೇಟನ್ನು ನೆನಪಿಸುತ್ತಿರುತ್ತವೆ. ಆದ್ದರಿಂದ ಅವು ಕಣ್ಣಿಗೆ ಕಾಣದಂತೆ ದೂರ ಇಟ್ಟುಬಿಡಿ. ಗುಟ್ಕಾ ಪ್ಯಾಕೆಟ್ಗಳನ್ನೂ ಮನೆಯಿಂದ ಹೊರಹಾಕಿ. ತಂಬಾಕು ಉತ್ಪನ್ನಗಳನ್ನು ಬಳಸುವ ಸ್ನೇಹಿತರ ಸಹವಾಸದಿಂದ ಕೆಲವು ದಿನ ದೂರವಿರಿ.
3. ದೈಹಿಕ ಚಟುವಟಿಕೆ: ತಂಬಾಕು ತಿನ್ನಬೇಕು ಎನಿಸಿದಾಗ ನೀರು ಕುಡಿಯಿರಿ, ಚೂಯಿಂಗ್ ಗಮ್ ಅಥವಾ ಚಾಕಲೇಟ್ ತಿನ್ನಿ. ಇಲ್ಲವೇ, ವಾಕಿಂಗ್ ಮಾಡಿ. ಯೋಗ ಮತ್ತು ಪ್ರಾಣಾಯಾಮ ಮಾಡುವುದರಿಂದ ಮನಸ್ಸು ಶಾಂತವಾಗಿ ವ್ಯಸನದ ಕಡೆಗೆ ಗಮನ ಹರಿಸುವುದು ಕಡಿಮೆಯಾಗುತ್ತದೆ.
4. ನಿಕೋಟಿನ್ ರಿಪ್ಲೇಸ್‌ಮೆಂಟ್ ಥೆರಪಿ (ಎನ್ಆರ್ಟಿ): ತೀರಾ ಕಷ್ಟವೆನಿಸಿದರೆ ವೈದ್ಯರ ಸಲಹೆ ಮೇರೆಗೆ ನಿಕೋಟಿನ್ ಗಮ್ ಗಳನ್ನು ಬಳಸಬಹುದು.
ಪ್ಲ್ಯಾನ್ ಬಿ: ವ್ಯಸನಿಗಳು ತಂಬಾಕು ಮುಕ್ತರಾಗಲು ಉಚಿತ ಸಹಾಯವಾಣಿಯನ್ನು (ಕ್ವಿಟ್‌ಲೈನ್ 1800-11-2356) ಕೇಂದ್ರ ಆರೋಗ್ಯ ಸಚಿವಾಲಯ ಆರಂಭಿಸಿದೆ. ಇದಕ್ಕೆ ಫೋನ್ ಮಾಡಿ ಕೌನ್ಸೆಲಿಂಗ್ ಪಡೆಯಬಹುದು.
ಒಂದು ಸಣ್ಣ ಸಿಗರೇಟ್ ಹೊಗೆಯಲ್ಲಿ ಸುಮಾರು 7,000ಕ್ಕೂ ಹೆಚ್ಚು ರಾಸಾಯನಿಕಗಳು ಇರುತ್ತವೆ. ಅವುಗಳಲ್ಲಿ ಕನಿಷ್ಠ 70 ರಾಸಾಯನಿಕಗಳು ನೇರವಾಗಿ ಕ್ಯಾನ್ಸರ್ ತರಬಲ್ಲ (ಕಾರ್ಸಿನೋಜೆನಿಕ್) ಗುಣ ಹೊಂದಿವೆ. ತಂಬಾಕು ಮೇಲ್ನೋಟಕ್ಕೆ ಒಂದು ಎಲೆ ಅಂತ ಅನ್ನಿಸಿದರೂ ಅದರಲ್ಲಿ ನಿಕೋಟಿನ್, ಟಾರ್, ಫಾರ್ಮಾಲ್ಡಿಹೈಡ್, ಆರ್ಸೆನಿಕ್ ಮುಂತಾದ ಅಪಾಯಕಾರಿ ರಾಸಾಯನಿಕಗಳಿವೆ. ಅವು ಆರೋಗ್ಯದ ಮೇಲೆ ಹೇಗೆಲ್ಲ ಪರಿಣಾಮ ಬೀರುತ್ತವೆ ಎಂಬುದರ ವಿವರ ಇಲ್ಲಿದೆ ನೋಡಿ.