ಮಲಪ್ಪುರಂ: ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ನೋಡಿದರೆ ಸಾಕು, "ಕೇವಲ 7 ದಿನಗಳಲ್ಲಿ ಬೆಳ್ಳಗಾಗಿ", "ಮೊಡವೆ, ಕಪ್ಪು ಕಲೆಗಳಿಗೆ ಗುಡ್ ಬೈ ಹೇಳಿ" ಎಂಬಂತಹ ಆಕರ್ಷಕ ಜಾಹೀರಾತುಗಳೇ ಕಾಣಿಸುತ್ತವೆ.
ಆದರೆ, ಇಂತಹ ಜಾಹೀರಾತುಗಳನ್ನು ನಂಬಿ ಫೇರ್ನೆಸ್ ಕ್ರೀಮ್ ಬಳಸಿದ ಕೇರಳದ ಮಲಪ್ಪುರಂನ 17 ವರ್ಷದ ಬಾಲಕಿಯೊಬ್ಬಳು ಬೆಳ್ಳಗಾಗುವ ಆಸೆಗೆ ಬಿದ್ದು, ಈಗ ಗಂಭೀರ ಕಿಡ್ನಿ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದಾಳೆ.
ಮಲಪ್ಪುರಂನ 17 ವರ್ಷದ ಬಾಲಕಿ ಆಗಸ್ಟ್ 2025 ರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಫೇರ್ನೆಸ್ ಕ್ರೀಮ್ ಜಾಹೀರಾತೊಂದನ್ನು ನೋಡಿದ್ದಾಳೆ. ಮುಖದ ಮೇಲಿನ ಕಪ್ಪು ಕಲೆ ಮತ್ತು ಮೊಡವೆ ಹೋಗಿ ಮುಖ ಕಾಂತಿಯುತವಾಗುತ್ತದೆ ಎಂಬ ಆಸೆಯಿಂದ ಆಕೆ ಆ ಕ್ರೀಮ್ ತರಿಸಿಕೊಂಡು ದಿನವೂ ಹಚ್ಚಲು ಶುರುಮಾಡಿದ್ದಾಳೆ. ಆರಂಭದಲ್ಲಿ ಮುಖ ಸ್ವಲ್ಪ ಬೆಳ್ಳಗಾದಂತೆ ಕಂಡಿದ್ದರಿಂದ ಆಕೆ ಖುಷಿಯಿಂದ ಕ್ರೀಮ್ ಬಳಸುವುದನ್ನು ಮುಂದುವರಿಸಿದ್ದಾಳೆ.
ಆದರೆ, ಕೆಲವೇ ತಿಂಗಳುಗಳಲ್ಲಿ ಆಕೆಯ ಆರೋಗ್ಯ ಕೈಕೊಡಲು ಶುರುವಾಗಿದೆ. ಇದ್ದಕ್ಕಿದ್ದಂತೆ ರಕ್ತದೊತ್ತಡ (BP) ಕುಸಿಯುವುದು, ತಲೆಸುತ್ತಿ ಬೀಳುವುದು ಮತ್ತು ಕಾಲುಗಳಲ್ಲಿ ವಿಪರೀತ ಊತ ಕಾಣಿಸಿಕೊಂಡಿದೆ. ಗಾಬರಿಗೊಂಡ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಪರೀಕ್ಷೆ ನಡೆಸಿದಾಗ ಬಾಲಕಿಗೆ 'ಮೆಂಬ್ರಾನಸ್ ನೆಫ್ರೋಪತಿ' (Membranous Nephropathy) ಎಂಬ ಗಂಭೀರ ಕಿಡ್ನಿ ಕಾಯಿಲೆ ಇರುವುದು ಪತ್ತೆಯಾಗಿದೆ.
ಬಾಲಕಿಯ ದೇಹದಲ್ಲಿ ಅಪಾಯಕಾರಿ ಮಟ್ಟದ ಪಾದರಸ (Mercury) ಇರುವುದನ್ನು ಕಂಡು ವೈದ್ಯರು ಬೆಚ್ಚಿಬಿದ್ದಿದ್ದಾರೆ. ಆಕೆ ಬಳಸುತ್ತಿದ್ದ ಕ್ರೀಮ್ ಅನ್ನು ಲ್ಯಾಬ್ಗೆ ಕಳುಹಿಸಿ ಪರೀಕ್ಷಿಸಿದಾಗ, ಅದರಲ್ಲಿ ಬರೋಬ್ಬರಿ 12,500 PPM ನಷ್ಟು ವಿಷಕಾರಿ ಪಾದರಸ ಇರುವುದು ಬಯಲಾಗಿದೆ. ಸಾಮಾನ್ಯವಾಗಿ ಸೌಂದರ್ಯವರ್ಧಕಗಳಲ್ಲಿ ಇಷ್ಟು ಪ್ರಮಾಣದ ಪಾದರಸ ಇರಲೇಬಾರದೆಂದು ವೈದ್ಯರು ತಿಳಿಸಿದ್ದಾರೆ.
ಚರ್ಮಕ್ಕೆ ಬಣ್ಣ ನೀಡುವ ಮೆಲನಿನ್ ಅಂಶವನ್ನು ತಡೆದು ಚರ್ಮವನ್ನು ಕೃತಕವಾಗಿ ಬೆಳ್ಳಗೆ ಕಾಣುವಂತೆ ಮಾಡಲು ನಕಲಿ ಕಂಪನಿಗಳು ಕ್ರೀಮ್ಗೆ ಪಾದರಸ ಸೇರಿಸುತ್ತವೆ. ನಾವು ಈ ಕ್ರೀಮ್ ಹಚ್ಚಿಕೊಂಡಾಗ ಚರ್ಮದ ಮೂಲಕ ಈ ವಿಷಕಾರಿ ಪಾದರಸ ರಕ್ತ ಸೇರುತ್ತದೆ.
ರಕ್ತವನ್ನು ಶುದ್ಧೀಕರಿಸುವ ಕೆಲಸ ಮಾಡುವ ಕಿಡ್ನಿಗಳಿಗೆ ಈ ವಿಷ ನೇರವಾಗಿ ಹೊಡೆತ ನೀಡುತ್ತದೆ. ಇದರಿಂದ ಕಿಡ್ನಿಯ ಫಿಲ್ಟರ್ಗಳು ಹಾಳಾಗಿ, ದೇಹಕ್ಕೆ ಬೇಕಾದ ಪ್ರೋಟೀನ್ ಕೂಡ ಮೂತ್ರದ ಮೂಲಕ ಹೊರಹೋಗಲು ಶುರುವಾಗುತ್ತದೆ.
ಕಿಡ್ನಿ ಸಮಸ್ಯೆಯ ಪ್ರಮುಖ ಲಕ್ಷಣಗಳೇನು?
ಕಾಲುಗಳು ಮತ್ತು ಪಾದಗಳಲ್ಲಿ ಊತ ಕಾಣಿಸಿಕೊಳ್ಳುವುದು.
ಮೂತ್ರ ವಿಸರ್ಜನೆ ಮಾಡಿದಾಗ ವಿಪರೀತ ನೊರೆ ಬರುವುದು.
ಕಾರಣವಿಲ್ಲದೆ ದೇಹದ ತೂಕ ಹೆಚ್ಚಾಗುವುದು ಮತ್ತು ಬಿಪಿ ಏರುಪೇರಾಗುವುದು.
ಲೇಬಲ್ ಓದಿ: ಕ್ರೀಮ್ ಖರೀದಿಸುವ ಮುನ್ನ ಅದರಲ್ಲಿ ಏನೇನು ಪದಾರ್ಥಗಳಿವೆ ಎಂದು ನೋಡಿ. ಲೇಬಲ್ ಮೇಲೆ 'Mercurous chloride', 'Calomel', 'Mercuric' ಅಥವಾ 'Mercurio' ಎಂದು ಬರೆದಿದ್ದರೆ ಅದು ಪಾದರಸದ ಇನ್ನೊಂದು ಹೆಸರು. ಅಂತಹ ಕ್ರೀಮ್ ಮುಟ್ಟಲೇಬೇಡಿ.
ರಾತ್ರೋರಾತ್ರಿ ಬೆಳ್ಳಗಾಗುವ ಭರವಸೆ ನಂಬಬೇಡಿ: ಕೇವಲ ವಾರದಲ್ಲಿ ಬಣ್ಣ ಬದಲಿಸುತ್ತೇವೆ ಎನ್ನುವ ಜಾಹೀರಾತುಗಳು ಶುದ್ಧ ಸುಳ್ಳು ಮತ್ತು ಅಪಾಯಕಾರಿ.
ವೈದ್ಯರ ಸಲಹೆ ಪಡೆಯಿರಿ: ಮೊಡವೆ ಅಥವಾ ಕಲೆಗಳಿದ್ದರೆ ಸೋಷಿಯಲ್ ಮೀಡಿಯಾ ಜಾಹೀರಾತು ನೋಡಿ ಕ್ರೀಮ್ ತರುವ ಬದಲು ಚರ್ಮರೋಗ ತಜ್ಞರನ್ನು ಭೇಟಿ ಮಾಡಿ.