ಸಾಂದರ್ಭಿಕ ಚಿತ್ರ 
ಆರೋಗ್ಯ

ಒಂಟಿತನ ಇನ್ನು ನೋವಲ್ಲ! ನಿಮ್ಮನ್ನು ನೀವು ಪ್ರೀತಿಸಲು ಸಿಗುವ ಸಮಯ | It's time to love yourself

ಪ್ರಮುಖ ಮುಖ್ಯಾಂಶಗಳು

  • ಒಂಟಿತನ ಮತ್ತು ಏಕಾಂಗಿತನ ಎರಡೂ ಒಂದೇ ಅಲ್ಲ
  • ನಿಮ್ಮ ಜತೆ ನೀವು ಆರಾಮವಾಗಿರಲು ಕಲಿಯುವುದು ಮುಖ್ಯ
  • ಒಂಟಿತನ ಆತ್ಮವಿಶ್ವಾಸ ಗಳಿಸಿಕೊಳ್ಳಲು ಸಿಗುವ ಅವಕಾಶ
love yourself: 

ಇತ್ತಿಚೀಗೆ ‘ನಾನು ಒಂಟಿ‘ ಎಂದು ಗೋಳಾಡುವವರ ಸಂಖ್ಯೆ ಹೆಚ್ಚಾಗಿದೆ. 

ಈ ಏಕಾಂಗಿತನಕ್ಕೂ, ಒಂಟಿತನಕ್ಕೂ ವ್ಯತ್ಯಾಸವಿದೆ. ಸುತ್ತಲೂ ಜನರಿದ್ದರೂ ಒಂದು ಸಮಯದಲ್ಲಿ ಮನಸ್ಸು ಮಾತ್ರ ಖಾಲಿ-ಖಾಲಿ ಎನಿಸುತ್ತೆ ಅದನ್ನು ಒಂಟಿತನ ಅಂತ ಹೇಳಬಹುದು. ಆದ್ರೆ ಮತ್ತೊಂದು ಸಲ ಯಾರಿಲ್ಲದ್ದರೂ ಮನಸ್ಸು ನಿರಾಳವಾಗಿರುತ್ತೆ, ನೆಮ್ಮದಿ ಆವರಿಸಿರುತ್ತೆ ಇದನ್ನೇ ನಾವು ಏಕಾಂಗಿತನ ಎಂದು ಹೇಳಬಹುದು.

ಒಂದು ಹಂತದವರೆಗೆ ಒಬ್ಬರೇ ಇರೋದು ನಮಗೆ ಕಷ್ಟವಾಗುತ್ತೆ. ಆದರೆ, ಮನುಷ್ಯ ಸಂಘಜೀವಿ ಅಲ್ವಾ? ಇನ್ನೊಮ್ಮೆ ಯಾರಿಗಾದರೂ ಮೆಸೇಜ್ ಮಾಡಬೇಕು, ಯಾರನ್ನಾದರೂ ಮಾತಾಡಿಸಬೇಕು, ಏನಾದರೂ ಮಾಡುತ್ತಾ ಬ್ಯುಸಿಯಾಗಿರಬೇಕು ಅನ್ನಿಸುತ್ತದೆ. ಆದರೆ ಒಂದು ದಿನ ನಾವು ಸ್ವತಂತ್ರವಾಗಿ ಯೋಚಿಸಲು ಶುರು ಮಾಡಿದಾಗ, ಜೀವನದ ಬಗ್ಗೆ ಕೆಲವು ಸತ್ಯಗಳು ಅರ್ಥವಾಗುತ್ತೆ.
ಇನ್ನೊಂದೆಡೆ, ಕನ್ನಡದ ವರಕವಿ ಬೇಂದ್ರೆ ಹೇಳುತ್ತಾರೆ; ‘ನನ್ನನ್ನು ನಾನಷ್ಟೇ ಬಲ್ಲೆ, ಇತರರದು ಅಂದಾಜು ಮಾತ್ರ’  ಅಂದರೆ, ನಮ್ಮನ್ನು ನಾವು ಎಷ್ಟು ಚೆನ್ನಾಗಿ ತಿಳಿದಿದ್ದೇವೋ, ಮತ್ತೊಬ್ಬರನ್ನು ಅಷ್ಟೇ ಚೆನ್ನಾಗಿ ಅರ್ಥ ಮಾಡಿಕೊಳ್ಳುವುದು ಕಷ್ಟ ಅಂತ. ಇನ್ನೂ ಸರಳವಾಗಿ ಹೇಳುವುದಾದರೆ, ನನ್ನನ್ನು ನಿಜವಾಗಿ ಬಲ್ಲವನು ನಾನೇ, ನನ್ನ ಬಗ್ಗೆ ಬೇರೆಯವರು ಅಂದುಕೊಳ್ಳುವುದು ಅವರ ಊಹೆ ಮಾತ್ರ. ನಮಗೆ ಒಂದು ಜೀವದ ಸಾಂಗತ್ಯದಷ್ಟೇ ಏಕಾಂಗಿತನವೂ ಮುಖ್ಯ.

1. ಎಲ್ಲರ ಗಮನವೂ ನಮ್ಮ ಮೇಲೆಯೇ ಇರಬೇಕೆಂದೆನಿಲ್ಲ!

ಯಾರಾದರೂ ಮೆಸೇಜ್ ಮಾಡಬೇಕು, ನಮ್ಮನ್ನು ನೆನಪಿಸಿಕೊಳ್ಳಬೇಕು, ನಮ್ಮ ಜೊತೆ ಇರಬೇಕು ಅನ್ನೋ ಹಂಬಲ ಕಡಿಮೆಯಾಗುತ್ತೆ. ನಮ್ಮನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳುವ ಕೆಲವೇ ಜನ ಸಾಕು ಅನ್ನಿಸುತ್ತೆ. ಸಾಕಷ್ಟು ಜನ ಇದ್ದಾರೆ ಎನ್ನುವುದು ಮುಖ್ಯ ಅಲ್ಲ.  ಅವರ ಗೆಳೆತನದ ಆಳ ಮುಖ್ಯ ಅನ್ನೋದು ಗೊತ್ತಾಗುತ್ತದೆ.

2. ನಿಜಕ್ಕೂ ನನಗೆ ಏನು ಬೇಕು? ಅನ್ನೋದು ಗೊತ್ತಾಗುತ್ತದೆ

ಬೇರೆಯವರು ಏನು ಇಷ್ಟಪಡುತ್ತಾರೆ ಅನ್ನೋದನ್ನು ನೋಡಿಕೊಂಡು ಬದುಕುವುದಕ್ಕಿಂತ, ನಮಗೆ ಏನು ಇಷ್ಟ ಅನ್ನೋದನ್ನು ಕೇಳಿಕೊಳ್ಳಲು ಶುರು ಮಾಡುತ್ತೇವೆ. ಯಾರಿಗೂ ಇಂಪ್ರೆಸ್ ಮಾಡಬೇಕಿಲ್ಲ. ಯಾರ ಅನುಮತಿಯೂ ಬೇಕಿಲ್ಲ. ನಮ್ಮ ಜೀವನದ ರಿಮೋಟ್ ನಮ್ಮ ಕೈಯಲ್ಲೇ ಇರಬೇಕು ಅನ್ನೋದು ಅರ್ಥವಾಗುತ್ತದೆ.

3. ಮನಸ್ಸು ಓಡುವುದನ್ನು ನಿಲ್ಲಿಸುತ್ತೆ

ಅಂದರೆ, ನಾವು ಮುಂಚಿನಂತೆ ಭಾವೋದ್ರೆಕಗಳಿಗೆ ಒಳಗಾಗಲ್ಲ. ಸ್ವಲ್ಪ ನಿಂತು ನಿಧಾನವಾಗಿ, ಮೌನವಾಗಿ ಆಲೋಚಿಸುತ್ತೇವೆ. ಆದರೆ, ಆಗ ಕೆಲವು ನೋವು ಕೊಡುತ್ತೆ. ಪ್ರಶ್ನೆಗಳು ಕಾಡುತ್ತವೆ. ಆದರೆ ಅವುಗಳಲ್ಲಿಯೇ ಮುಳುಗದೆ, ಅವುಗಳನ್ನು ಅರ್ಥಮಾಡಿಕೊಳ್ಳಲು ಶುರು ಮಾಡುತ್ತೇವೆ. ಆಗ ಗೊತ್ತಾಗುತ್ತದೆ ಪ್ರತಿಯೊಂದು ನೋವಿಗೂ ಯಾರೋ ಒಬ್ಬರು ಸಾಂತ್ವನ ಹೇಳಬೇಕಾಗಿಲ್ಲ. ಕೆಲವೊಮ್ಮೆ ನಮಗೆ ನಾವೇ ಬೇಕು ಅಂತ.

5. ಒಬ್ಬರೇ ಇದ್ದರೂ ಜೀವನ ಬೋರ್ ಅನ್ನಿಸಲ್ಲ

ಒಬ್ಬರೇ ಕಾಫಿ ಕುಡಿಯುವುದು, ಸಿನಿಮಾ ನೋಡುವುದು, ವಾಕಿಂಗ್ ಹೋಗುವುದು, ಇಷ್ಟದ ಹಾಡು ಕೇಳುವುದು. ಇವೆಲ್ಲವೂ ನಿಧಾನವಾಗಿ ಖುಷಿ ಕೊಡಲು ಶುರು ಮಾಡುತ್ತೆ. ಸಂತೋಷಕ್ಕೆ ಯಾವಾಗಲೂ ನಮ್ಮ ಸುತ್ತ ಜನಗಳೇ ಬೇಕು ಅಂತೇನಿಲ್ಲ ಅನ್ನೋದು ಆಗ ಅರ್ಥವಾಗುತ್ತೆ.

5. ಯಾರಾದರೂ ಜೊತೆ ಬಂದರೆ ಖುಷಿ, ಬರದಿದ್ದರೂ ಜೀವನ ನಿಲ್ಲಲ್ಲ

ಇದು ಬಹುಶಃ ದೊಡ್ಡ ಬದಲಾವಣೆ. ಯಾರಾದರೂ ಹಿತವಾದವರು ನಮ್ಮ ಜೀವನಕ್ಕೆ ಬಂದರೆ ಖುಷಿಯಾಗುತ್ತೆ. ಆದರೆ ಅಕಸ್ಮಾತ್​ ಅವರೂ ದೂರವಾದ್ರು ಅಂದ್ರೆ, ನಮ್ಮ ಜೀವನವೇ ಮುಗಿದುಹೋಯಿತು ಅನ್ನಿಸಲ್ಲ. ಏಕೆಂದರೆ ಆಗ ನಮಗೆ ಗೊತ್ತಿರುತ್ತದೆ- ನನ್ನ ಲೈಫ್​ ಅನ್ನು ಪೂರ್ಣಗೊಳಿಸಲು ಇನ್ನೊಬ್ಬರು ಬೇಕಿಲ್ಲ. ನಾನು ಈಗಾಗಲೇ ಸಂಪೂರ್ಣ ಎಂದು.
ಕೆಲವೊಮ್ಮೆ ಎಲ್ಲರಿಂದ ದೂರವಾಗಿ ಬದುಕುವುದು ಸಮಸ್ಯೆಯಲ್ಲ. ನಮ್ಮಿಂದ ನಾವೇ ದೂರವಾಗಿರುವುದೇ ನಿಜವಾದ ಸಮಸ್ಯೆ. ನಮ್ಮದೇ ಗೆಳೆತನವನ್ನು ನಾವು ಇಷ್ಟಪಡಲು ಕಲಿತ ದಿನ, ಒಂಟಿತನದಿಂದ ನೋವಾಗುವುದಿಲ್ಲ.. ಅದೇ ಹಿತವಾಗಿದೆ ಎನಿಸುತ್ತೆ...