ಸಕ್ಕರೆ ಕಾಯಿಲೆ ಯಾರಿಗೆ ಹೆಚ್ಚು ಮಾರಕ? ಪುರುಷರಿಗೋ ಅಥವಾ ಮಹಿಳೆಯರಿಗೋ? ಇಲ್ಲಿದೆ ವೈದ್ಯಕೀಯ ವಿಶ್ಲೇಷಣೆ... Health Tips 
ಆರೋಗ್ಯ

ಸಕ್ಕರೆ ಕಾಯಿಲೆ ಯಾರಿಗೆ ಹೆಚ್ಚು ಮಾರಕ? ಪುರುಷರಿಗೋ ಅಥವಾ ಮಹಿಳೆಯರಿಗೋ? ಇಲ್ಲಿದೆ ವೈದ್ಯಕೀಯ ವಿಶ್ಲೇಷಣೆ... Health Tips

ಪ್ರಮುಖ ಮುಖ್ಯಾಂಶಗಳು

  • ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಇನ್ಸುಲಿನ್ ಪ್ರತಿರೋಧದಂತಹ ಅಂಶಗಳನ್ನು ನಿಯಮಿತವಾಗಿ ಪರಿಶೀಲಿಸಿ
  • ಅತಿಯಾದ ಬಾಯಾರಿಕೆ, ಪದೇಪದೆ ಮೂತ್ರ ವಿಸರ್ಜನೆ, ಆಯಾಸ, ದೃಷ್ಟಿ ಮಸುಕಾಗುವುದು ಮತ್ತು ಕಾರಣವಿಲ್ಲದೆ ತೂಕ ಇಳಿಯುವುದನ್ನು ನಿರ್ಲಕ್ಷಿಸಬೇಡಿ
  • ಪುರುಷರು ಮತ್ತು ಮಹಿಳೆಯರಲ್ಲಿ ಹಾರ್ಮೋನ್​ಗಳು, ದೇಹದ ರಚನೆ ಮತ್ತು ಅನುವಂಶಿಕ ಅಂಶಗಳಿಂದ ಪರಿಣಾಮಗಳು ಬದಲಾಗಬಹುದು
Diabetes: ಮಧುಮೇಹ ಎನ್ನುವುದು ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಸರ್ವೇ ಸಾಮಾನ್ಯವಾಗಿ ಕಾಣಿಸಿಕೊಳ್ಳತ್ತಿದೆ. ಮಧುಮೇಹವು ಪುರುಷರು ಮತ್ತು ಮಹಿಳೆಯರ ಮೇಲೆ ವಿಭಿನ್ನ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಹಾರ್ಮೋನ್​ಗಳು, ಹೃದಯ ಸಂಬಂಧಿ ಅಪಾಯಗಳು, ಮಾನಸಿಕ ಆರೋಗ್ಯ ಸೇರಿದಂತೆ ಹಲವು ಅಂಶಗಳು ಮಧುಮೇಹದ ಆರೈಕೆಯ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬ ಉಪಯುಕ್ತ ಮಾಹಿತಿಯನ್ನು ನಾವಿಂದು ವಿವರವಾಗಿ ತಿಳಿದುಳ್ಳೋಣ.
ಮೊದಲಿಗೆ ಮಧುಮೇಹ ಅಂದರೆ ಏನು ಅಂತ ತಿಳಿದುಕೊಳ್ಳೋಣ. ಮಧುಮೇಹವನ್ನು ಸಕ್ಕರೆ ಕಾಯಿಲೆ ಅಂತಾನೂ ಕರೆಯುತ್ತಾರೆ. ಅಂದರೆ, ಇದು ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುವ ಕಾಯಿಲೆ. ಈ ಕಾಯಿಲೆಯ ಪರಿಣಾಮ ಪುರುಷರು ಮತ್ತು ಮಹಿಳೆಯರಲ್ಲಿ ಒಂದೇ ರೀತಿ ಇರುವುದಿಲ್ಲ. ಹಾರ್ಮೋನ್​ಗಳ ಮಟ್ಟ, ದೇಹದ ರಚನೆ, ಅನುವಂಶಿಕ ಅಂಶಗಳು ಹಾಗೂ ಹೃದಯ ಸಂಬಂಧಿ ಅಪಾಯಗಳು ಮಧುಮೇಹದ ಬೆಳವಣಿಗೆ, ಅದರ ಪರಿಣಾಮವಾಗಿ ಉಂಟಾಗುವ ತೊಂದರೆಗಳು ಮತ್ತು ಚಿಕಿತ್ಸೆಗೆ ದೇಹವು ನೀಡುವ ಪ್ರತಿಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಮಧುಮೇಹ ಪುರುಷರು ಮತ್ತು ಮಹಿಳೆಯರ ಮೇಲೆ ಏಕೆ ವಿಭಿನ್ನ ಪರಿಣಾಮ ಬೀರುತ್ತದೆ?
ಪುರುಷರು ಮತ್ತು ಮಹಿಳೆಯರಲ್ಲಿ ಹಾರ್ಮೋನ್​ಗಳ ಮಟ್ಟ, ದೇಹದ ರಚನೆ, ಅನುವಂಶಿಕ ಗುಣಗಳು ಮತ್ತು ಹೃದಯ ಸಂಬಂಧಿ ಅಪಾಯದ ಅಂಶಗಳು ವಿಭಿನ್ನವಾಗಿರುವುದರಿಂದ ಮಧುಮೇಹದ ಪರಿಣಾಮವೂ ಬದಲಾಗಬಹುದು. ಮಹಿಳೆಯರಲ್ಲಿ ಹೃದಯ ಕಾಯಿಲೆ, ಖಿನ್ನತೆ ಹಾಗೂ ಕೆಲವು ಇತರ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು. ಮತ್ತೊಂದೆಡೆ, ಪುರುಷರಲ್ಲಿ ಕೆಲವು ಮಧುಮೇಹ ಸಂಬಂಧಿತ ತೊಂದರೆಗಳು ಇತರರಿಗಿಂತ ಮುಂಚಿತವಾಗಿಯೇ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಮಧುಮೇಹ ಹೊಂದಿರುವ ಪುರುಷರಿಗೆ ಹೆಚ್ಚಿನ ನಿಗಾ ಏಕೆ ಅಗತ್ಯ?

ಮಧುಮೇಹ ಹೊಂದಿರುವ ಪುರುಷರಲ್ಲಿ ಹೃದಯ ಮತ್ತು ಮೂತ್ರಪಿಂಡದ ಆರೋಗ್ಯಕ್ಕೆ ಸಂಬಂಧಿಸಿದ ಅಪಾಯಗಳು ಗಮನಾರ್ಹವಾಗಿರಬಹುದು. ಇನ್ಸುಲಿನ್ ಪ್ರತಿರೋಧ, ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್‌ನಲ್ಲಿ ಅಸಮತೋಲನ ಹಾಗೂ ಇತರ ಚಯಾಪಚಯ ಸಂಬಂಧಿತ ಅಂಶಗಳು ಈ ಅಪಾಯಗಳನ್ನು ಹೆಚ್ಚಿಸಬಹುದು. ಅಧ್ಯಯನಗಳ ಪ್ರಕಾರ, ಪುರುಷರಲ್ಲಿ ಕೆಲವು ಮಧುಮೇಹ ಸಂಬಂಧಿತ ತೊಂದರೆಗಳು ಬೇಗನೆ ಕಾಣಿಸಿಕೊಳ್ಳಬಹುದು. ಆದ್ದರಿಂದ ನಿಯಮಿತವಾಗಿ ರಕ್ತದೊತ್ತಡ ಪರೀಕ್ಷೆ, ಕೊಲೆಸ್ಟ್ರಾಲ್ ಪರೀಕ್ಷೆ, ಮೂತ್ರಪಿಂಡದ ಕಾರ್ಯಕ್ಷಮತೆ ಪರೀಕ್ಷೆ, ಮೂತ್ರ ಪರೀಕ್ಷೆ ಮತ್ತು ಹೃದಯ ಸಂಬಂಧಿತ ಅಪಾಯಗಳ ಮೌಲ್ಯಮಾಪನ ಮಾಡಿಸಿಕೊಳ್ಳುವುದು ಅಗತ್ಯ. ಇದರಿಂದ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಗುರುತಿಸಿ ತಡೆಗಟ್ಟಲು ಸಹಾಯವಾಗುತ್ತದೆ.

ಮಹಿಳೆಯರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಾ ಮಧುಮೇಹ?

ಮಧುಮೇಹ ಮತ್ತು ಮಾನಸಿಕ ಆರೋಗ್ಯ ಪರಸ್ಪರ ನಿಕಟವಾಗಿ ಸಂಬಂಧ ಹೊಂದಿವೆ. ದೀರ್ಘಕಾಲದ ಕಾಯಿಲೆಯೊಂದಿಗೆ ಬದುಕುವುದು ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಹೆಚ್ಚಿಸಬಹುದು. ಅದೇ ರೀತಿ ಮಾನಸಿಕ ಒತ್ತಡ ಹೆಚ್ಚಾದಾಗ ಮಧುಮೇಹವನ್ನು ಸರಿಯಾಗಿ ನಿಯಂತ್ರಿಸುವುದು ಕಷ್ಟವಾಗಬಹುದು. ಮಧುಮೇಹ ಹೊಂದಿರುವ ಮಹಿಳೆಯರಲ್ಲಿ ಖಿನ್ನತೆ ಮತ್ತು ಮಧುಮೇಹದಿಂದ ಉಂಟಾಗುವ ಮಾನಸಿಕ ಒತ್ತಡದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ನಿಯಮಿತ ಮಾನಸಿಕ ಆರೋಗ್ಯ ತಪಾಸಣೆ, ಭಾವನಾತ್ಮಕ ಬೆಂಬಲ ಮತ್ತು ಅಗತ್ಯವಿದ್ದಾಗ ಸಮಾಲೋಚನೆ ಪಡೆಯುವುದು ಮಧುಮೇಹದ ಸಮಗ್ರ ಆರೈಕೆಯ ಭಾಗವಾಗಬೇಕು. ಮಧುಮೇಹದ ನಿರ್ವಹಣೆ ಕೇವಲ ದೈಹಿಕ ಆರೋಗ್ಯಕ್ಕೆ ಸೀಮಿತವಾಗಿರಬಾರದು. ವ್ಯಕ್ತಿಯ ಭಾವನಾತ್ಮಕ ಮತ್ತು ಮಾನಸಿಕ ಆರೋಗ್ಯವೂ ಮಧುಮೇಹವನ್ನು ಎಷ್ಟು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂಬುದರ ಮೇಲೆ ಪರಿಣಾಮ ಬೀರುತ್ತದೆ.

ಹಾರ್ಮೋನ್​ಗಳು ಮೇಲೆ ಹೇಗೆ ಪರಿಣಾಮ ಬೀರುತ್ತವೆ?

ಹಾರ್ಮೋನ್​ಗಳು ಮತ್ತು ದೇಹದಲ್ಲಿನ ವಿವಿಧ ಶಾರೀರಿಕ ಬದಲಾವಣೆಗಳು ಗ್ಲೂಕೋಸ್ ಚಯಾಪಚಯ ಮತ್ತು ಇನ್ಸುಲಿನ್ ಪ್ರತಿರೋಧದ ಮೇಲೂ ಪರಿಣಾಮ ಬೀರಬಹುದು. ಮಹಿಳೆಯರಲ್ಲಿ ಪ್ರೌಢಾವಸ್ಥೆ, ಗರ್ಭಾವಸ್ಥೆ, ಋತುಚಕ್ರ ಮತ್ತು ಮೆನೋಪಾಸ್‌ನಂತಹ ಹಂತಗಳಲ್ಲಿ ಹಾರ್ಮೋನ್​ಗಳಲ್ಲಿ ಬದಲಾವಣೆಗಳು ಉಂಟಾಗುತ್ತವೆ. ಇವು ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣ ಮತ್ತು ಇನ್ಸುಲಿನ್ ಪ್ರತಿರೋಧದ ಮೇಲೆ ಪರಿಣಾಮ ಬೀರಬಹುದು. ಪುರುಷರಲ್ಲಿಯೂ ವಯಸ್ಸು ಮತ್ತು ಇತರ ದೈಹಿಕ ಕಾರಣಗಳಿಂದ ಹಾರ್ಮೋನು ಹಾಗೂ ಶಾರೀರಿಕ ಬದಲಾವಣೆಗಳು ಸಂಭವಿಸುತ್ತವೆ. ಇವು ಚಯಾಪಚಯ ಕ್ರಿಯೆ ಮತ್ತು ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.

ಮಧುಮೇಹದ ನಿಯಂತ್ರಣ ರಕ್ತದಲ್ಲಿನ ಸಕ್ಕರೆಗೆ ಮಾತ್ರ ಸೀಮಿತವಲ್ಲ

ಮಧುಮೇಹ ನಿರ್ವಹಣೆ ಎಂದರೆ ಕೇವಲ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವುದಲ್ಲ. ಹೃದಯ ಮತ್ತು ಮೂತ್ರಪಿಂಡದ ಆರೋಗ್ಯ, ದೇಹದ ತೂಕ, ರಕ್ತದೊತ್ತಡ, ಕೊಲೆಸ್ಟ್ರಾಲ್, ಮಾನಸಿಕ ಆರೋಗ್ಯ, ಸಂತಾನೋತ್ಪತ್ತಿ ಅಥವಾ ಹಾರ್ಮೋನ್​ ಸಂಬಂಧಿತ ಅಂಶಗಳು, ಜೀವನಶೈಲಿ ಮತ್ತು ಚಿಕಿತ್ಸೆಗೆ ವ್ಯಕ್ತಿಯ ದೇಹ ನೀಡುವ ಪ್ರತಿಕ್ರಿಯೆಗಳನ್ನು ಕೂಡ ಪರಿಗಣಿಸಬೇಕು. ಪುರುಷರು ಮತ್ತು ಮಹಿಳೆಯರಲ್ಲಿ ಕಂಡುಬರುವ ವಿಭಿನ್ನ ಅಪಾಯಗಳನ್ನು ಗುರುತಿಸುವುದರಿಂದ ವೈದ್ಯರು ಪ್ರತಿಯೊಬ್ಬ ರೋಗಿಯ ಅಗತ್ಯಕ್ಕೆ ತಕ್ಕಂತೆ ತಪಾಸಣೆ, ಮುನ್ನೆಚ್ಚರಿಕೆ ಕ್ರಮಗಳು, ಔಷಧೋಪಚಾರ ಮತ್ತು ಮುಂದಿನ ಚಿಕಿತ್ಸಾ ಕ್ರಮಗಳನ್ನು ರೂಪಿಸಲು ಸಾಧ್ಯವಾಗುತ್ತದೆ.

ನಿರ್ಲಕ್ಷಿಸಿದರೆ ಅಪಾಯಗಳೇನು ?

ಮಧುಮೇಹವನ್ನು ನಿರ್ಲಕ್ಷಿಸುವುದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟ ಪದೇಪದೆ ಹೆಚ್ಚಾಗುತ್ತಿದ್ದರೆ ಅಥವಾ ಅತಿಯಾದ ಬಾಯಾರಿಕೆ, ಪದೇಪದೆ ಮೂತ್ರ ವಿಸರ್ಜನೆ, ಕಾರಣವಿಲ್ಲದೆ ತೂಕ ಇಳಿಕೆ, ಅತಿಯಾದ ಆಯಾಸ, ದೃಷ್ಟಿ ಮಸುಕಾಗುವುದು ಹಾಗೂ ಗಾಯಗಳು ನಿಧಾನವಾಗಿ ಗುಣವಾಗುವಂತಹ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷಿಸಬಾರದು. ಇಂತಹ ಲಕ್ಷಣಗಳು ಕಾಣಿಸಿಕೊಂಡಾಗ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯ. ಮಧುಮೇಹವನ್ನು ನಿಯಂತ್ರಣದಲ್ಲಿಡದೆ ದೀರ್ಘಕಾಲ ಬಿಟ್ಟರೆ ಹೃದಯ, ಮೂತ್ರಪಿಂಡ, ಕಣ್ಣು ಮತ್ತು ನರಗಳ ಮೇಲೆ ಪರಿಣಾಮ ಬೀರುವ ಅಪಾಯವಿದೆ ಎಂದು ವೈದ್ಯರು ಹೇಳುತ್ತಾರೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ, (ಏಜೆನ್ಸೀಸ್​).