ಸಾಂದರ್ಭಿಕ ಚಿತ್ರ (AI) 
ಆರೋಗ್ಯ

​ನಿದ್ರೆಗೆ ಜಾರಿದಾಗ ಏನು ಮಾಡುತ್ತೆ ಮಿದುಳು? ಕಣ್ಣು ಮುಚ್ಚಿದ ಮೇಲೂ ಬುರುಡೆಯೊಳಗೆ ನಡೆಯುತ್ತೆ ಈ ಅಚ್ಚರಿಯ ಕೆಲಸ! Brain Health

Brain Health: ಹಗಲೆಲ್ಲ ದುಡಿದು ದಣಿವಾಗಿ ಮನೆಗೆ ಬರುವ ಪ್ರತಿಯೊಬ್ಬರು ನಿದ್ರೆಗೆ ಜಾರಿದರೆ ಸಾಕಪ್ಪ ಎಂದು ಕಣ್ಣು ಮುಚ್ಚಿದರೂ ಕೆಲವರಿಗೆ ನಿದ್ರೆಯೇ ಬರುವುದಿಲ್ಲ. ಇನ್ನೂ ಕೆಲವರಿಗೆ ಕಣ್ತುಂಬ ನಿದ್ದೆ ಆವರಿಸಿದ್ದರೂ ಮಲಗಲು ನೈಟ್​ಶಿಫ್ಟ್​ ಸೇರಿದಂತೆ ಇನ್ನಿತರ ಅಡಚಣೆಗಳು ಕಾಡುತ್ತವೆ. ಬೆಳಗ್ಗೆಯಿಂದ ಮಲಗುವವರೆಗೂ ನಮ್ಮ ಮಿದುಳು ಒಂದಲ್ಲ ಒಂದು ವಿಷಯದ ಬಗ್ಗೆ ನಮಗೆ ಮಾಹಿತಿ ಕೊಡುತ್ತಲೇ ಇರುತ್ತದೆ. ಆದರೆ, ಮಲಗಿದಾಗ ಯಾವುದೇ ಸೂಚನೆ ಸಿಗುವುದಿಲ್ಲ. ಅಲ್ಲಿಗೆ, ನಿದ್ದೆಗೆ ಹೋದಾಗ ನಮ್ಮ ಮಿದುಳು ಕೆಲಸ ಮಾಡುತ್ತೋ? ಇಲ್ಲವೋ? ಎಂಬ ಪ್ರಶ್ನೆಗೆ ಇಲ್ಲಿದೆ ನೋಡಿ ಅಚ್ಚರಿ ಉತ್ತರ.
ರಾತ್ರಿ ಕಣ್ಣು ಮುಚ್ಚಿದ ತಕ್ಷಣ, ನಮ್ಮ ಕಣ್ಣುಗಳು ಮಾತ್ರವಲ್ಲ, ಮಿದುಳು ಕೂಡ ಕಂಪ್ಲೀಟ್​ ರೆಸ್ಟ್​ ಮೋಡ್​ಗೆ ಹೋಗುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ, ಅದು ನೀವು ಅಂದುಕೊಂಡಂತಿಲ್ಲ. ದೇಹ ವಿಶ್ರಾಂತಿಗೆ ಜಾರಿದಾಗಲೂ ನಮ್ಮ ಮಿದುಳು ಮಾತ್ರ ತನ್ನದೇ ಆದ ಕೆಲಸದಲ್ಲಿ ಸಖತ್ ಬಿಜಿಯಾಗಿರುತ್ತದೆ. ದಿನವಿಡೀ ಸಂಗ್ರಹವಾದ ಮಾಹಿತಿಯನ್ನು ಜೋಡಿಸುವುದರಿಂದ ಹಿಡಿದು ದೇಹದ ಹಲವು ಪ್ರಕ್ರಿಯೆಗಳನ್ನು ಹತೋಟಿಗೆ ತರುವಲ್ಲಿ, ಮಿದುಳು ಚುರುಕಾಗಿ ಕಾರ್ಯನಿರ್ವಹಿಸುತ್ತದೆ.

ನೆನಪುಗಳ ಜೋಡಣೆಯ ಕೆಲಸ

ನಾವು ಆ ದಿನದಲ್ಲಿ ಕಂಡ ದೃಶ್ಯ, ಆಲಿಸಿದ ಮಾತುಗಳು ಮತ್ತು ಕಲಿತ ಪ್ರತಿಯೊಂದು ವಿಷಯವೂ ಒಂದೇ ರೀತಿಯಲ್ಲಿ ನೆನಪಿನಲ್ಲಿ ಉಳಿಯುವುದಿಲ್ಲ. ನಿದ್ದೆಯ ಸಮಯದಲ್ಲಿ ಮಿದುಳು ದಿನದ ಅನುಭವಗಳನ್ನು ಪರಿಶೀಲಿಸಿ, ಅಗತ್ಯ ಮಾಹಿತಿಯನ್ನು ನೆನಪಿನಲ್ಲಿ ಗಟ್ಟಿಗೊಳಿಸುವ ಪ್ರಕ್ರಿಯೆಯನ್ನು ತೆರೆಮರೆಯಲ್ಲಿ ನಡೆಸುತ್ತದೆ. ಇದರಿಂದ ಹೊಸದಾಗಿ ಕಲಿತ ವಿಷಯಗಳನ್ನು ನಂತರ ನೆನಪಿಸಿಕೊಳ್ಳಲು ಸಹಾಯವಾಗಬಹುದು. ಹೀಗಾಗಿಯೇ, ವಿದ್ಯಾರ್ಥಿಗಳಿಗೆ ಓದಿದ ಬಳಿಕ ಒಳ್ಳೆಯ ನಿದ್ರೆ ಮಾಡುವುದದು ಕಲಿಕೆಗೆ ಮುಖ್ಯ ಎಂದು ವಿಜ್ಞಾನಿಗಳು ಮತ್ತು ಶಿಕ್ಷಕರು ಹೇಳುತ್ತಾರೆ.

ಮಿದುಳಿನಲ್ಲಿ ಕ್ಲೀನಿಂಗ್​ ಕೂಡ ನಡೆಯುತ್ತೆ

ನಿದ್ರೆಯ ವೇಳೆ ಮಿದುಳಿನೊಳಗಿನ ಕೆಲವು ಬೇಡದ ವಿಷಯಗಳನ್ನು ಹೊರಹಾಕುವ ಪ್ರಕ್ರಿಯೆಯೂ ಚುರುಕುಗೊಳ್ಳುತ್ತದೆ. ಮಿದುಳಿನ ಸುತ್ತಲಿನ ದ್ರವದ ಚಲನೆ ಹೆಚ್ಚಾಗಿ, ದಿನದ ಚಟುವಟಿಕೆಗಳಿಂದ ಸಂಗ್ರಹವಾಗಿರುವ ಕೆಲವು ಅನಗತ್ಯ ಮಾಹಿತಿಗಳನ್ನು ಅಳಿಸಿ ಹಾಕಲು ಸಹಾಯ ಮಾಡುತ್ತದೆ. ಇದನ್ನು ವಿಜ್ಞಾನಿಗಳು ಬ್ರೇನ್​ ಕ್ಲೀನಿಂಗ್ ಎಂದು ಪರಿಗಣಿಸುತ್ತಾರೆ ಎನ್ನಲಾಗಿದೆ.

ರಾತ್ರಿಯಲ್ಲೇ ಕನಸುಗಳು ಏಕೆ?

ನಿದ್ದೆಯಲ್ಲಿರುವಾಗ ಮಿದುಳು ಸಂಪೂರ್ಣವಾಗಿ ರೆಸ್ಟ್​ನಲ್ಲಿ ಇರುವುದಿಲ್ಲ. ಹೀಗಾಗಿ, REM ( ಈ ನಿದ್ರೆಯ ಹಂತದಲ್ಲಿ ನೀವು ಅತ್ಯಂತ ತೀವ್ರವಾದ ಕನಸುಗಳನ್ನು ಕಾಣುತ್ತೀರಿ) ನೀವು ಕಣ್ಣು ಮುಚ್ಚಿದಾಗ ಮಿದುಳಿನ ಚಟುವಟಿಕೆಯನ್ನು ಹೆಚ್ಚಿಸುತ್ತದೆ. ಈ ಹಂತದಲ್ಲೇ ಸ್ಪಷ್ಟವಾದ ಕನಸುಗಳು ಗೋಚರಿಸುತ್ತವೆ. ದಿನದ ನೆನಪುಗಳು, ಭಾವನೆಗಳು ಮತ್ತು ಕಲ್ಪನೆಗಳು ಸೇರಿ ವಿಚಿತ್ರವಾದ ದೃಶ್ಯಗಳ ರೂಪದಲ್ಲಿ ನಿಮಗೆ ಕಾಣಿಸಿಕೊಳ್ಳುತ್ತವೆ.

ದೇಹದ ಮೇಲೂ ಪರಿಣಾಮ

ನಿದ್ರೆಯ ಅವಧಿಯಲ್ಲಿ ಮಿದುಳು ದೇಹದ ಹಲವು ಕಾರ್ಯಗಳನ್ನು ಸಮನ್ವಯಗೊಳಿಸುತ್ತದೆ. ಹಾರ್ಮೋನ್‌ಗಳ ಬಿಡುಗಡೆಯ ನಿಯಂತ್ರಣ, ದೇಹದ ಚಯಾಪಚಯ, ರೋಗನಿರೋಧಕ ವ್ಯವಸ್ಥೆ ಮತ್ತು ಭಾವನಾತ್ಮಕ ಸಮತೋಲನದಂತಹ ಪ್ರಕ್ರಿಯೆಗಳು ನಿದ್ರೆಯಲ್ಲಿಯೇ ಆಗುವುದು ಗಮನಾರ್ಹ,(ಏಜೆನ್ಸೀಸ್).

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.