ದೇಹದ ಈ 5 ಭಾಗಗಳಲ್ಲಿ ಪದೇ ಪದೇ ನೋವು ಕಾಡ್ತಿದ್ಯಾ? ಹಾಗಿದ್ರೆ ಎಚ್ಚರ! ಇದು ಕ್ಯಾನ್ಸರ್ ಮುನ್ಸೂಚನೆ ಇರಬಹುದು  
ಆರೋಗ್ಯ

ದೇಹದ ಈ 5 ಭಾಗಗಳಲ್ಲಿ ಪದೇ ಪದೇ ನೋವು ಕಾಡ್ತಿದ್ಯಾ? ಹಾಗಿದ್ರೆ ಎಚ್ಚರ! ಇದು ಕ್ಯಾನ್ಸರ್ ಮುನ್ಸೂಚನೆ ಇರಬಹುದು

Health Tips: ದಿನನಿತ್ಯದ ಜೀವನದಲ್ಲಿ ತಲೆನೋವು, ಬೆನ್ನುನೋವು ಮತ್ತು ಹೊಟ್ಟೆನೋವಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಕೆಲಸದ ಒತ್ತಡ, ಪ್ರಯಾಣ ಹಾಗೂ ದೈಹಿಕ ಆಯಾಸದಿಂದ ಇಂತಹ ನೋವುಗಳು ಆಗಾಗ್ಗೆ ಬಹುತೇಕರಲ್ಲಿ ಕಾಡುತ್ತದೆ. ಆದರೆ, ದೇಹದ ಕೆಲವು ಭಾಗಗಳಲ್ಲಿ ನಿರಂತರವಾಗಿ ಅಂದರೆ ಪದೇ ಪದೇ ನೋವು ಕಾಣಿಸಿಕೊಳ್ಳುತ್ತಿದೆ ಎಂದರೆ ಅದನ್ನು ಖಂಡಿತ ನಿರ್ಲಕ್ಷಿಸಬೇಡಿ.

ಕಾರಣ, ಪದೇ ಪದೇ ಕಾಣಿಸಿಕೊಳ್ಳುವ ಹೊಟ್ಟೆ, ಮೈಕೈ ಮತ್ತು ಆಯಾಸಗಳ ಹಿಂದೆ ಯಾವುದಾದರೂ ದೊಡ್ಡ ಸಮಸ್ಯೆಯ ಮುನ್ಸೂಚನೆಗಳು ಇದ್ದೇ ಇರುತ್ತವೆ. ಹೀಗಾಗಿ, ಚಿಕ್ಕದಾಗಿದ್ದಾಗಲೇ ಪತ್ತೆಹಚ್ಚಿ, ಗುಣಪಡಿಸಿಕೊಳ್ಳುವುದು ಬುದ್ಧಿವಂತರ ಲಕ್ಷಣ. ಕೆಲವೊಮ್ಮೆ ಇಂತಹ ನೋವುಗಳು ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳ ಲಕ್ಷಣವೂ ಆಗಿರಬಹುದು. ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆಯಾದರೆ ಚಿಕಿತ್ಸೆ ಸುಲಭ ಹಾಗೂ ಸರಳ. ಹಾಗಿದ್ದರೆ, ಯಾವ ಐದು ಭಾಗಗಳಲ್ಲಿ ಕಾಣಿಸಿಕೊಳ್ಳುವ ನಿರಂತರ ನೋವು ಕ್ಯಾನ್ಸರ್‌ನ ಎಚ್ಚರಿಕೆಯ ಸೂಚನೆ ಎಂಬುದನ್ನು ಇಲ್ಲಿ ತಿಳಿಯೋಣ.

1. ಬೆನ್ನು ನೋವು

ಪದೇ ಪದೇ ಬೆನ್ನು ನೋವು ಮೇದೋಜ್ಜೀರಕ ಗ್ರಂಥಿ, ಸ್ತನ, ಶ್ವಾಸಕೋಶ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್‌ಗಳಿಂದಲೂ ಕಾಣಿಸಿಕೊಳ್ಳಬಹುದು. ರಾತ್ರಿ ವೇಳೆ ನೋವು ಹೆಚ್ಚಾಗುವುದು, ಹಸಿವು ಕಡಿಮೆಯಾಗುವುದು ಮತ್ತು ತೂಕ ಇಳಿಕೆಯಾಗುವ ಲಕ್ಷಣಗಳಿದ್ದರೆ ವೈದ್ಯರನ್ನು ತಕ್ಷಣವೇ ಸಂಪರ್ಕಿಸಿ.

2. ಹೊಟ್ಟೆ ನೋವು

ಹೊಟ್ಟೆಯಲ್ಲಿ ನಿರಂತರ ನೋವು ಕಾಣಿಸಿಕೊಳ್ಳುತ್ತಿದ್ದರೆ ಅಥವಾ ನೋವು ಹೆಚ್ಚಾಗುತ್ತಿದ್ದರೆ ಯಾವುದೇ ಕಾರಣಕ್ಕೂ ಕಡೆಗಣಿಸಬೇಡಿ. ಇದು ಲಿವರ್​, ಕೊಲೊನ್ ಅಥವಾ ಗರ್ಭಾಶಯದ ಕ್ಯಾನ್ಸರ್‌ನ ಲಕ್ಷಣವೂ ಆಗಿರುವ ಸಾಧ್ಯತೆಗಳಿವೆ.

3. ತಲೆನೋವು

ಹಿಂದೆಂದೂ ಕಾಣಿಸಿಕೊಳ್ಳದ ಹೊಸ ರೀತಿಯ ತಲೆನೋವು ನಿರಂತರವಾಗಿ ಕಾಡುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ದೃಷ್ಟಿ ಕಡಿಮೆಯಾಗುವುದು, ನೆನಪಿನ ಶಕ್ತಿ ಕುಂದುವುದು ಮತ್ತು ನಡವಳಿಕೆಯಲ್ಲಿ ದಿಢೀರ್ ಬದಲಾವಣೆಗಳು ಕಾಣಿಸಿಕೊಳ್ಳುವುದು ಮಿದುಳಿನ ಗಡ್ಡೆಯ ಲಕ್ಷಣಗಳೂ ಆಗಿರಬಹುದು.

4. ಮೂಳೆ ಮತ್ತು ಕೀಲು ನೋವು

ವಯಸ್ಸಾದಂತೆ ಕೀಲು ನೋವು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ನಿರ್ದಿಷ್ಟ ಮೂಳೆಯ ಭಾಗದಲ್ಲಿ ನಿರಂತರ ನೋವು ಕಾಣಿಸಿಕೊಂಡು, ವಿಶ್ರಾಂತಿ ಪಡೆದರೂ ಕಡಿಮೆಯಾಗದಿದ್ದರೆ ಗಮನಹರಿಸಬೇಕು. ಕೆಲವೊಮ್ಮೆ ಇದು ಲ್ಯುಕೇಮಿಯಾ ಅಥವಾ ಆಸ್ಟಿಯೊಸಾರ್ಕೋಮಾದಂತಹ ಕ್ಯಾನ್ಸರ್‌ಗಳ ಸೂಚನೆ ಆಗಿರಬಹುದು.

5. ಎದೆ ನೋವು

ಎದೆ ನೋವು ಕಾಣಿಸಿಕೊಂಡರೆ ಅನೇಕರು ಅದನ್ನು ಹೃದಯದ ಸಮಸ್ಯೆ ಎಂದು ಭಾವಿಸುತ್ತಾರೆ. ಆದರೆ, ಕೆಲವೊಮ್ಮೆ ಶ್ವಾಸಕೋಶದ ಕ್ಯಾನ್ಸರ್‌ನಿಂದಲೂ ಎದೆನೋವು ಉಂಟಾಗಬಹುದು. ನಿರಂತರ ಕೆಮ್ಮು, ಕಫದಲ್ಲಿ ರಕ್ತ ಕಾಣಿಸಿಕೊಳ್ಳುವುದು, ಉಸಿರಾಟದ ತೊಂದರೆ ಮತ್ತು ಧ್ವನಿಯಲ್ಲಿ ಬದಲಾವಣೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ನಿಮ್ಮ ಗಮನಕ್ಕೆ: ಈ ನೋವುಗಳು ಕಾಣಿಸಿಕೊಂಡ ಮಾತ್ರಕ್ಕೆ ಕ್ಯಾನ್ಸರ್ ಇದೆ ಎಂದರ್ಥವಲ್ಲ. ಆದರೆ, ನೋವು ಪದೇ ಪದೇ ಕಾಡುತ್ತಿದ್ದರೆ ಅಥವಾ ಇತರ ಲಕ್ಷಣಗಳೂ ಕಂಡುಬಂದರೆ ವೈದ್ಯರ ಬಳಿ ತೋರಿಸಿಕೊಳ್ಳುವುದು, ಹೆಚ್ಚಿನ ಮಾಹಿತಿ ಪಡೆಯುವುದು ಉತ್ತಮ.