ಎಳನೀರು vs ಒಆರ್​ಎಸ್​... ದೇಹಕ್ಕೆ ನೀರಿನ ಕೊರತೆಯಾದಾಗ ಈ ಎರಡರಲ್ಲಿ ಯಾವುದು ಬೆಸ್ಟ್? Coconut Water or ORS  
ಆರೋಗ್ಯ

ಎಳನೀರು vs ಒಆರ್​ಎಸ್​... ದೇಹಕ್ಕೆ ನೀರಿನ ಕೊರತೆಯಾದಾಗ ಈ ಎರಡರಲ್ಲಿ ಯಾವುದು ಬೆಸ್ಟ್? ಇಲ್ಲಿದೆ ಉಪಯುಕ್ತ ಮಾಹಿತಿ... Coconut Water or ORS

ಪ್ರಮುಖ ಮುಖ್ಯಾಂಶಗಳು

  • ದೇಹದ ಹೈಡ್ರೇಶನ್ ಕಾಪಾಡಿಕೊಳ್ಳಲು ಎಳನೀರು ಅತ್ಯುತ್ತಮ ನೈಸರ್ಗಿಕ ಪಾನೀಯವಾಗಿದೆ
  • ಅತಿಸಾರ ಹಾಗೂ ವಾಂತಿಯ ಸಂದರ್ಭದಲ್ಲಿ ದೇಹಕ್ಕೆ ಒಆರ್​ಎಸ್ ಹೆಚ್ಚು ಪರಿಣಾಮಕಾರಿಯಾಗಿದೆ
  • ಎಳನೀರಿಗೆ ಹೋಲಿಸಿದರೆ ಒಆರ್​ಎಸ್‌ನಲ್ಲಿ ಸೋಡಿಯಂ ಪ್ರಮಾಣ ಸಮತೋಲಿತವಾಗಿರುತ್ತದೆ
  • ಕಿಡ್ನಿ ಸಮಸ್ಯೆ ಇರುವವರು ಎಳನೀರು ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆಯಬೇಕು
Coconut Water or ORS : ನಮ್ಮ ದಿನ ನಿತ್ಯದ ಜೀವನದಲ್ಲಿ ಕೆಲವರಿಗೆ ಸುಸ್ತಾದಾಗ ತಕ್ಷಣದ ಪರಿಹಾರಕ್ಕಾಗಿ ಎಳನೀರು ಸೇವಿಸುವುದನ್ನು ನೀವು ನೋಡಿರುತ್ತೀರಿ. ಅದೇ ರೀತಿ, ನಾವು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದಾಗ ತಕ್ಷಣದ ಎನರ್ಜಿಗಾಗಿ ವೈದ್ಯರು ಒಆರ್​ಎಸ್ ಕುಡಿಯುವಂತೆ ಸಲಹೆ ನೀಡುವುದನ್ನು ನೋಡಿರುತ್ತೀರಿ. ಈ ಎರಡು ಕೂಡ ಉತ್ತಮ ಪಾನೀಯವೇ? ಆದರೆ, ಎರಡರಲ್ಲಿ ಯಾವುದು ಬೆಸ್ಟ್​ ಅನ್ನೋ ಒಂದು ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಆ ಪ್ರಶ್ನೆಗೆ ನಾವಿಂದು ಉತ್ತರ ಕಂಡುಕೊಳ್ಳೋಣ.
ದೇಹದಲ್ಲಿ ನೀರಿನಾಂಶ ಕಾಪಾಡಿಕೊಳ್ಳಲು ಎಳನೀರು ಒಂದು ಉತ್ತಮ ನೈಸರ್ಗಿಕ ಪಾನೀಯವಾಗಿದೆ. ನೀರಿನ ಜತೆಗೆ ಪೊಟ್ಯಾಸಿಯಂ ಸೇರಿದಂತೆ ಹಲವು ಎಲೆಕ್ಟ್ರೋಲೈಟ್​ಗಳು ಇರುವುದರಿಂದ ಬಿಸಿಲಿನ ದಿನಗಳಲ್ಲಿ ದೇಹವನ್ನು ಹೈಡ್ರೇಟ್ ಆಗಿಡಲು ಹಲವರು ಎಳನೀರನ್ನು ಸೇವಿಸುತ್ತಾರೆ. ಆದರೆ ದೇಹದಲ್ಲಿ ನೀರಿನ ಕೊರತೆ ಉಂಟಾದಾಗ ಎಳನೀರು (coconut water) ಅಥವಾ ORS (oral redydration selution) ಇದರಲ್ಲಿ ಯಾವುದು ಹೆಚ್ಚು ಪರಿಣಾಮಕಾರಿ? ಈ ಪ್ರಶ್ನೆಗೆ ತಜ್ಞರ ಬಳಿ ಒಂದೇ ರೀತಿಯ ಉತ್ತರವಿಲ್ಲ. ದೇಹದಲ್ಲಿ ನೀರಿನ ಕೊರತೆ ಉಂಟಾಗಿರುವ ಕಾರಣವನ್ನು ಆಧರಿಸಿ ಯಾವುದು ಸೂಕ್ತ ಎಂದು ನಿರ್ಧಾರವಾಗುತ್ತದೆ. ಸಾಮಾನ್ಯವಾಗಿ ದೇಹಕ್ಕೆ ಅಗತ್ಯವಿರುವ ನೀರಿನಾಂಶ ಪಡೆಯಲು ಎಳನೀರು ಉತ್ತಮ ಆಯ್ಕೆಯಾಗಬಹುದು, ಅತಿಸಾರ ಅಥವಾ ವಾಂತಿಯಿಂದ ದೇಹದಲ್ಲಿ ಹೆಚ್ಚಿನ ಪ್ರಮಾಣದ ನೀರು ಮತ್ತು ಎಲೆಕ್ಟ್ರೋಲೈಟ್​ಗಳು ಕಡಿಮೆ ಇದ್ದಾಗ ORS ಸೂಕ್ತವಾಗಿದೆ ಎಂದು ತಜ್ಞರು ಹೇಳಿದ್ದಾರೆ.
ORS ಮತ್ತು ಎಳನೀರು ನಡುವಿನ ವ್ಯತ್ಯಾಸವೇನು?
ದೇಹದಲ್ಲಿ ಕಳೆದುಹೋದ ದ್ರವ ಹಾಗೂ ಎಲೆಕ್ಟ್ರೋಲೈಟ್​ಗಳನ್ನು ಮರುತುಂಬಿಸುವಲ್ಲಿ ಸೋಡಿಯಂ ಪ್ರಮುಖ ಪಾತ್ರವಹಿಸುತ್ತದೆ. ಎಳನೀರಿನಲ್ಲಿ ಖನಿಜಾಂಶಗಳು ಇದ್ದರೂ, ORSಗೆ ಹೋಲಿಸಿದರೆ ಸೋಡಿಯಂ ಪ್ರಮಾಣ ತುಂಬಾ ಕಡಿಮೆ ಇರುತ್ತದೆ. ORS (oral redydration selution) ದೇಹ ಕಳೆದುಕೊಂಡಿರುವ ಎಲೆಕ್ಟ್ರೋಲೈಟ್​ಗಳನ್ನು ಮರುತುಂಬಿಸುವ ಉದ್ದೇಶದಿಂದ ನಿರ್ದಿಷ್ಟ ಪ್ರಮಾಣದ ಗ್ಲೂಕೋಸ್ ಹಾಗೂ ಎಲೆಕ್ಟ್ರೋಲೈಟ್​ಗಳನ್ನು ಸಮತೊಲನದಲ್ಲಿ ತಯಾರಿಸಲಾಗುತ್ತದೆ. ಈ ಸಂಯೋಜನೆಯಿಂದ ದೇಹದಲ್ಲಿರುವ ನೀರಿನಾಂಶ ಪರಿಣಾಮಕಾರಿಯಾಗಿ ಹೀರಿಕೋಳ್ಳಲು ಸಹಾಯಮಾಡುತ್ತದೆ.

ಎಳನೀರು ಆರೋಗ್ಯಕರವೇ?

ಎಳನೀರಿನಲ್ಲಿ ಪೊಟ್ಯಾಸಿಯಂ, ಮೇಗ್ನಿಸಿಯಂ, ಕ್ಯಾಲ್ಸಿಯಂ ಸೇರಿದಂತೆ ಹಲವಾರು ಖನಿಜಾಂಶಗಳಿವೆ. ಇದರ ಜತೆಗೆ ಅಲ್ಪ ಪ್ರಮಾಣದಲ್ಲಿ ವಿಟಮಿನ್ ಸಿ ಮತ್ತು ಅಮೈನೋ ಆಮ್ಲಗಳಿರುತ್ತವೆ. ಹೀಗಾಗಿ, ಸಾಮಾನ್ಯ ದಿನಗಳಲ್ಲಿ ದೇಹಕ್ಕೆ ನೀರಿನಾಂಶ ಒದಗಿಸಿಕೊಳ್ಳಲು ಇದು ರಿಫ್ರೆಶಿಂಗ್ ಆಯ್ಕೆಯಾಗಿದೆ. ಎಳನೀರು ದೇಹದ ಆರೋಗ್ಯವನ್ನು ಕಾಪಾಡುತ್ತದೆ, ಉರಿಯೂತ ಕಡಿಮೆ ಮಾಡುತ್ತದೆ, ಸೋಂಕುಗಳ ವಿರುದ್ಧ ಹೋರಾಡುತ್ತದೆ ಎಂಬ ಹೇಳಿಕೆಗಳಿಗೆ ಮತ್ತಷ್ಟು ಬಲವಾದ ಅಧ್ಯಯನಗಳು ಅಗತ್ಯವಿದೆ. ಹಾಗಾಗಿ ಇವು ವೈಧ್ಯಕೀಯವಾಗಿ ಸಾಬೀತಾಗಿವೆ ಎಂದು ಹೇಳಲು ಸಾಧ್ಯವಿಲ್ಲ.

ವಾಂತಿ, ಅತಿಸಾರವಾದಾಗ ಒಆರ್​ಎಸ್​ ಮುಖ್ಯ ಏಕೆ?

ವಾಂತಿ ಅಥವಾ ಅತಿಸಾರದಿಂದ ದೇಹವು ಹೆಚ್ಚಿನ ಪ್ರಮಾಣದ ನೀರು ಮತ್ತು ಎಲೆಕ್ಟ್ರೋಲೈಟ್​ಗಳನ್ನು ಕಳೆದುಕೊಂಡಿರುತ್ತದೆ. ಇಂತಹ ಸಂದರ್ಭದಲ್ಲಿ ಎಳನೀರನ್ನು ಬಳಸುವುದರಿಂದ ದೇಹಕ್ಕೆ ಅಗತ್ಯವಾಗಿರುವ ಎಲ್ಲಾ ಎಲೆಕ್ಟ್ರೋಲೆಟ್​ಗಳು ಸೂಕ್ತ ಪ್ರಮಾಣದಲ್ಲಿ ದೊರೆಯುವುದಿಲ್ಲ.
ಎಳನೀರು ನೀರಿನಾಂಶ ಮತ್ತು ಕೆಲವು ಎಲೆಕ್ಟ್ರೋಲೈಟ್ ಒದಗಿಸಿದರು ಕೂಡ ಡಿ-ಹೈಡ್ರೇಶನ್ ಚಿಕಿತ್ಸೆಗಾಗಿ ಅದರ ನೈಸರ್ಗಿಕ ಸಂಯೋಜನೆ ನಿರ್ದಿಷ್ಟವಾಗಿ ರೂಪುಗೊಂಡಿರುವುದಿಲ್ಲ. ಆದರೆ, ORS ಅನ್ನು ದೇಹ ಕಳೆದುಕೊಂಡಿರುವ ಅಂಶಗಳನ್ನು ಮರು ಪೂರೈಸಲು ತಯಾರಿಸಲಾಗಿರುತ್ತದೆ. ಹೀಗಾಗಿ ವಾಂತಿ ಅಥವಾ ಅತಿಸಾರವಾದಾಗ ಎಳನೀರನ್ನು ORSಗೆ ಪರ್ಯಾಯವಾಗಿ ಬಳಸಬಾರದು.

ಕೆಲವರು ಎಳನೀರು ಕುಡಿಯುವಾಗ ಎಚ್ಚರವಹಿಸಬೇಕು!

ಎಳನೀರಿನಲ್ಲಿ ಪೊಟ್ಯಾಸಿಯಂ ಪ್ರಮಾಣ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಇದು ಆರೋಗ್ಯಕರ ಪಾನೀಯವಾಗಿದ್ದರು ಎಲ್ಲರಿಗೂ ಒಂದೇ ರೀತಿಯಲ್ಲಿ ಸೂಕ್ತವಾಗಿರುವುದಿಲ್ಲ. ವಿಶೇಷವಾಗಿ ಕಿಡ್ನಿ ಸಮಸ್ಯೆ ಇರುವವರು ಮೂತ್ರಪಿಂಡದಲ್ಲಿರುವ ಪೊಟ್ಯಾಸಿಯಂ ಅನ್ನು ಸರಿಯಾಗಿ ಹೊರ ಹಾಕಲು ಸಾಧ್ಯವಾಗುವುದಿಲ್ಲ, ಇಂತಹವರು ಎಷ್ಟು ಪ್ರಮಾಣದಲ್ಲಿ ಎಳನೀರು ಸೇವಿಸಬೇಕು ಎಂಬುದನ್ನು ವೈದ್ಯರ ಸಲಹೆ ಪಡೆಯುವುದು ಉತ್ತಮ.
ಹಾಗಾಗಿ ಬೇಸಿಗೆ ದಿನಗಳಲ್ಲಿ ಅಥವಾ ದೇಹವನ್ನು ಹೈಡ್ರೇಟ್ ಆಗಿಡಲು ಎಳನೀರು ಉತ್ತಮ ಆಯ್ಕೆಯಾಗಿದೆ.ಆದರ, ಅತಿಸಾರ ವಾಂತಿ, ನೀರಿನ ಪ್ರಮಾಣ ದೇಹದಲ್ಲಿ ಕಡಿಮೆ ಆಗಿ ಡಿಹೈಡ್ರೇಶನ್​ ಉಂಟಾದಾಗ ORS ಸೂಕ್ತವಾಗಿದೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ, (ಏಜೆನ್ಸೀಸ್​).