Cat lovers : ಬೆಕ್ಕು ಎಂದರೆ ಹಲವರಿಗೆ ಅಚ್ಚುಮೆಚ್ಚಿನ ಸಾಕುಪ್ರಾಣಿ. ಅದರ ಮುದ್ದಾದ ನಡವಳಿಕೆ, ಆಟ ಮತ್ತು ಒಡನಾಟ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಆದರೆ ಇದೇ ಬೆಕ್ಕುಗಳಿಗೂ ಮೆದುಳಿನ ಆರೋಗ್ಯಕ್ಕೂ ಯಾವುದಾದರೂ ಸಂಬಂಧವಿದೆಯೇ? ಬಾಲ್ಯದಲ್ಲಿ ಮನೆಯಲ್ಲಿ ಬೆಕ್ಕು ಸಾಕಿದ್ದವರಿಗೆ ಸ್ಕಿಜೋಫ್ರೇನಿಯಾ ಎಂಬ ಮಾನಸಿಕ ಕಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರಬಹುದು ಎಂಬ ಅಚ್ಚರಿಯ ವಿಚಾರವೊಂದು ವಿಜ್ಞಾನಿಗಳ ಅಧ್ಯಯನದಲ್ಲಿ ಚರ್ಚೆಗೆ ಬಂದಿದೆ. ಈ ಸಂಶೋಧನೆಯ ಹಿಂದೆ ಇರುವುದು ಬೆಕ್ಕುಗಳಲ್ಲಿ ಕಂಡುಬರುವ ಟಾಕ್ಸೊಪ್ಲಾಸ್ಮಾ ಗೊಂಡೈ ಎಂಬ ಸೂಕ್ಷ್ಮ ಪರಾವಲಂಬಿ ಜೀವಿ
1990ರ ದಶಕದಲ್ಲಿ ಮನೋವೈದ್ಯ ಇ. ಫುಲ್ಲರ್ ಟೋರಿ ಮತ್ತು ವೈರಾಲಜಿಸ್ಟ್ ರಾಬರ್ಟ್ ಯೋಲ್ಕೆನ್ ಈ ವಿಷಯದ ಬಗ್ಗೆ ಆಸಕ್ತಿ ತೋರಿಸಿದ್ದರು. ಬಾಲ್ಯದಲ್ಲಿ ಬೆಕ್ಕುಗಳೊಂದಿಗೆ ವಾಸಿಸಿದ್ದ ಕೆಲವು ವ್ಯಕ್ತಿಗಳಲ್ಲಿ ಸ್ಕಿಜೋಫ್ರೇನಿಯಾ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರಬಹುದು ಎಂಬ ಸಂಬಂಧವನ್ನು ಅವರು ಗಮನಿಸಿದ್ದರು. ಈ ಹಿಂದೆ ಟೋರಿಗೆ ಸ್ಕಿಜೋಫ್ರೇನಿಯಾದ ಕೆಲವು ಪ್ರಕರಣಗಳ ಹಿಂದೆ ಸೋಂಕುಕಾರಕ ಜೀವಿಗಳ ಪಾತ್ರವಿರಬಹುದು ಎಂಬ ಅನುಮಾನವಿತ್ತು. ಬೆಕ್ಕುಗಳೊಂದಿಗಿನ ಈ ಸಂಬಂಧ ಅವರ ಸಂಶೋಧನೆಗೆ ಹೊಸ ದಿಕ್ಕು ನೀಡಿತು.
ಟಾಕ್ಸೊಪ್ಲಾಸ್ಮಾ ಗೊಂಡೈ ಎಂಬುದು ಮನುಷ್ಯರು ಸೇರಿದಂತೆ ಹಲವು ಜೀವಿಗಳಿಗೆ ಸೋಂಕು ಉಂಟುಮಾಡಬಲ್ಲ ಪರಾವಲಂಬಿ ಜೀವಿಯಾಗಿದೆ. ಬೆಕ್ಕುಗಳು ಇದರ ಪ್ರಮುಖ ಆತಿಥೇಯ ಜೀವಿಗಳಾಗಿವೆ. ಸೋಂಕಿತ ಬೆಕ್ಕುಗಳ ಮಲದಲ್ಲಿರುವ ಸೂಕ್ಷ್ಮ ಕಣಗಳ ಸಂಪರ್ಕ, ಕಲುಷಿತ ಮಣ್ಣು, ಆಹಾರ ಅಥವಾ ನೀರು ಹಾಗೂ ಸರಿಯಾಗಿ ಬೇಯಿಸದ ಮಾಂಸದ ಸೇವನೆಯ ಮೂಲಕ ಈ ಸೋಂಕು ಮನುಷ್ಯರಿಗೆ ಹರಡಬಹುದು.
ಕೆಲವು ಸಂದರ್ಭಗಳಲ್ಲಿ ಈ ಪರಾವಲಂಬಿ ಮನುಷ್ಯನ ದೇಹ ಪ್ರವೇಶಿಸಿ ಮೆದುಳಿನ ಅಂಗಾಂಶಗಳಿಗೂ ತಲುಪಬಹುದು. ಇದರಿಂದ ಉಂಟಾಗುವ ಟಾಕ್ಸೊಪ್ಲಾಸ್ಮೋಸಿಸ್ ಸೋಂಕು ಬಹುತೇಕ ಆರೋಗ್ಯವಂತರಲ್ಲಿ ಯಾವುದೇ ಗಮನಾರ್ಹ ಲಕ್ಷಣಗಳನ್ನು ತೋರಿಸದೇ ಇರಬಹುದು. ಆದರೆ ಕೆಲವು ಸಂದರ್ಭಗಳಲ್ಲಿ ನರಮಂಡಲದ ಮೇಲೆ ಪರಿಣಾಮ ಬೀರಬಹುದು. ಗಂಭೀರ ಸಂದರ್ಭಗಳಲ್ಲಿ ಗೊಂದಲ, ನಡವಳಿಕೆಯ ಬದಲಾವಣೆ ಮತ್ತು ನರಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಸ್ಕಿಜೋಫ್ರೇನಿಯಾ ಎನ್ನುವುದು ವ್ಯಕ್ತಿಯ ಆಲೋಚನೆ, ಭಾವನೆ ಮತ್ತು ವಾಸ್ತವವನ್ನು ಗ್ರಹಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಯಾಗಿದೆ. ಕೆಲವರಲ್ಲಿ ಭ್ರಮೆಗಳು, ಇಲ್ಲದ ಧ್ವನಿಗಳು ಕೇಳಿಸುವ ಅನುಭವ ಮತ್ತು ಆಲೋಚನೆಗಳಲ್ಲಿ ಅಸ್ತವ್ಯಸ್ತತೆ ಕಾಣಿಸಿಕೊಳ್ಳಬಹುದು. ಟಾಕ್ಸೊಪ್ಲಾಸ್ಮಾ ಸೋಂಕು ಮೆದುಳಿನ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದಾದ್ದರಿಂದ, ಈ ಸೋಂಕಿಗೂ ಸ್ಕಿಜೋಫ್ರೇನಿಯಾಗೂ ಸಂಬಂಧವಿದೆಯೇ ಎಂಬುದನ್ನು ಸಂಶೋಧಕರು ಪರಿಶೀಲಿಸುತ್ತಿದ್ದಾರೆ.
2023ರಲ್ಲಿ ಪ್ರಕಟವಾದ 17 ಅಧ್ಯಯನಗಳ ವಿಮರ್ಶೆ ಮತ್ತು ಮೆಟಾ-ವಿಶ್ಲೇಷಣೆಯಲ್ಲಿ ಬೆಕ್ಕುಗಳ ಸಂಪರ್ಕಕ್ಕೆ ಒಳಗಾದವರಲ್ಲಿ ಸ್ಕಿಜೋಫ್ರೇನಿಯಾ ಕಾಣಿಸಿಕೊಳ್ಳುವ ಸಾಧ್ಯತೆಯು ಇತರರಿಗಿಂತ ಸರಿಸುಮಾರು ಎರಡು ಪಟ್ಟು ಹೆಚ್ಚಿರುವ ಸಂಬಂಧ ಕಂಡುಬಂದಿದೆ ಎಂದು ವರದಿಯಾಗಿದೆ. ಕಳೆದ ಎರಡು ದಶಕಗಳಲ್ಲಿ ಈ ಸಾಧ್ಯತೆಯನ್ನು ಪರಿಶೀಲಿಸುವ ಕನಿಷ್ಠ 20ಕ್ಕೂ ಹೆಚ್ಚು ಅಧ್ಯಯನಗಳು ನಡೆದಿವೆ.
ಇಲ್ಲ. ಬೆಕ್ಕನ್ನು ಮುದ್ದಾಡುವುದು, ಅದರೊಂದಿಗೆ ಆಟವಾಡುವುದು ಅಥವಾ ಮನೆಯಲ್ಲಿ ಸಾಕುವುದರಿಂದಲೇ ಟಾಕ್ಸೊಪ್ಲಾಸ್ಮಾ ಸೋಂಕು ಹರಡುತ್ತದೆ ಎನ್ನಲು ಯಾವುದೇ ಆಧಾರವಿಲ್ಲ. ಸೋಂಕಿತ ಬೆಕ್ಕಿನ ಮಲದಿಂದ ಕಲುಷಿತವಾದ ಮಣ್ಣಿನ ಸಂಪರ್ಕ ಅಥವಾ ಬೆಕ್ಕಿನ ಮಲವನ್ನು ಸ್ವಚ್ಛಗೊಳಿಸುವಾಗ ಸೂಕ್ತ ಮುನ್ನೆಚ್ಚರಿಕೆ ವಹಿಸದಿರುವುದು ಸೋಂಕಿನ ಸಂಭಾವ್ಯ ಮಾರ್ಗಗಳಾಗಿವೆ.
ಅಷ್ಟೇ ಅಲ್ಲ, ಸೋಂಕಿಗೆ ಒಳಗಾದ ಪ್ರತಿಯೊಬ್ಬರಿಗೂ ಮೆದುಳಿನ ಮೇಲೆ ಪರಿಣಾಮ ಉಂಟಾಗುವುದಿಲ್ಲ. ಬೆಕ್ಕು ಸಾಕುವುದು ಮತ್ತು ಸ್ಕಿಜೋಫ್ರೇನಿಯಾ ನಡುವೆ ಅಧ್ಯಯನಗಳಲ್ಲಿ ಕಂಡುಬಂದಿರುವ ಸಂಬಂಧವು ನೇರವಾಗಿ ಕಾಯಿಲೆಗೆ ಕಾರಣವಾಗುತ್ತದೆ ಎಂಬುದನ್ನು ಸಾಬೀತುಪಡಿಸುವುದಿಲ್ಲ.
ಟಾಕ್ಸೊಪ್ಲಾಸ್ಮಾ ಗೊಂಡೈ ಪರಾವಲಂಬಿ ಜೀವಿಯು ಮೆದುಳಿನ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದರ ಕುರಿತು ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯವಿದೆ. ಸೋಂಕು, ವಂಶವಾಹಿ ಅಂಶಗಳು, ಪರಿಸರ ಮತ್ತು ಇತರ ಆರೋಗ್ಯ ಪರಿಸ್ಥಿತಿಗಳ ನಡುವಿನ ಸಂಬಂಧವನ್ನು ವಿಜ್ಞಾನಿಗಳು ಅಧ್ಯಯನ ಮಾಡುತ್ತಿದ್ದಾರೆ.
ಹೀಗಾಗಿ ಬೆಕ್ಕು ಸಾಕುವವರು ಆತಂಕಪಡುವ ಅಗತ್ಯವಿಲ್ಲ. ಸಾಕುಪ್ರಾಣಿಗಳ ಸ್ವಚ್ಛತೆ ಕಾಪಾಡುವುದು, ಬೆಕ್ಕಿನ ಮಲವನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವುದು, ಕೈಗಳನ್ನು ಚೆನ್ನಾಗಿ ತೊಳೆಯುವುದು ಮತ್ತು ಮಾಂಸವನ್ನು ಸರಿಯಾಗಿ ಬೇಯಿಸಿದನ್ನು ಆಹಾರವಾಗಿ ನೀಡುವುದು ಸೂಕ್ತ . ವಿಜ್ಞಾನಿಗಳ ಅಧ್ಯಯನ ಮುಂದುವರಿದಿದ್ದು, ಬೆಕ್ಕುಗಳಿಗೂ ಮಾನವನ ಮೆದುಳಿಗೂ ಇರುವ ಈ ನಿಗೂಢ ಸಂಬಂಧದ ಸಂಪೂರ್ಣ ಚಿತ್ರಣ ಇನ್ನೂ ಹೊರಬರಬೇಕಿದೆ