ಪೀನಟ್ ಬಟರ್ ಅಂದರೆ ಕಡಲೆಕಾಯಿ ಬೆಣ್ಣೆ, ಇದರ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಂಬಲಾಗಿದೆ. ಇದರಲ್ಲಿರುವ ಪೋಷಕಾಂಶಗಳು ಅನೇಕ ಸಮಸ್ಯೆಗಳನ್ನು ತೊಡೆದುಹಾಕಲು ಸಹಕಾರಿ ಎಂದು ಹೇಳುತ್ತಾರೆ. ಇದು ಸಾಕಷ್ಟು ಪ್ರಮಾಣದಲ್ಲಿ ಪ್ರೋಟೀನ್, ಡಯೆಟರಿ ಫೈಬರ್, ವಿಟಮಿನ್ ಬಿ6, ಪೋಲೇಟ್, ಮೆಗ್ನೀಸಿಯಮ್ ಅಂಶಗಳನ್ನು ಒಳಗೊಂಡಿದೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ತುಂಬಾ ಉಪಯುಕ್ತವಾಗಿದೆ. ಇದನ್ನು ಸೇವಿಸುವುದರಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ. ಆದರೆ ಇನ್ನೂ ಕೆಲವರಿಗೆ ಇದರ ಸೇವನೆಯಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಯಾರೆಲ್ಲಾ ಪೀನಟ್ ಬಟರ್ನಿಂದ ದೂರವಿರಬೇಕು ಎಂಬುದರ ಮಾಹಿತಿ ಇಲ್ಲಿದೆ.
- ಅಲರ್ಜಿ ಇರುವವರು: ಚರ್ಮ ಮತ್ತು ಆಹಾರಕ್ಕೆ ಸಂಬಂಧಿಸಿದ ಅಲರ್ಜಿ ಇರುವವರು ಕಡಲೆಕಾಯಿ ಬೆಣ್ಣೆಯಿಂದ ದೂರವಿರಿ. ಇದನ್ನು ಸೇವಿಸುವುದರಿಂದ ಚರ್ಮದ ದದ್ದುಗಳು, ತುರಿಕೆ, ಉಸಿರಾಟದ ತೊಂದರೆ ಉಂಟಾಗಬಹುದು.
- ಜೀರ್ಣಕಾರಿ ಸಮಸ್ಯೆ ಇರುವವರು: ಗ್ಯಾಸ್ ಅಥವಾ ಇತರ ಜೀರ್ಣಕಾರಿ ಸಮಸ್ಯೆಗಳನ್ನು ಹೊಂದಿರುವವರು ಕಡಲೆಕಾಯಿ ಬೆಣ್ಣೆಯನ್ನು ಸೇವಿಸುವುದರಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗಬಹುದು. ಗ್ಯಾಸ್, ಉಬ್ಬುವುದು ಮತ್ತು ಹೊಟ್ಟೆ ನೋವು ಸಂಭವಿಸಬಹುದು.
- ಅಧಿಕ ರಕ್ತದೊತ್ತಡ ಇರುವವರು: ಕಡಲೆಕಾಯಿ ಬೆಣ್ಣೆಯಲ್ಲಿ ಸೋಡಿಯಂ ಅಧಿಕವಾಗಿದ್ದು, ಇದು ಅಧಿಕ ರಕ್ತದೊತ್ತಡ ಹೊಂದಿರುವ ಜನರಿಗೆ ಹಾನಿಕಾರಕವಾಗಿದೆ. ಅಧಿಕ ಸೋಡಿಯಂ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ.
- ಮೂತ್ರಪಿಂಡದ ಸಮಸ್ಯೆ ಇರುವವರು: ಮೂತ್ರಪಿಂಡದ ತೊಂದರೆ ಇರುವವರು ಪೊಟ್ಯಾಸಿಯಮ್ ಮತ್ತು ರಂಜಕವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಕಡಲೆಕಾಯಿ ಬೆಣ್ಣೆಯು ಈ ಎರಡೂ ಪೋಷಕಾಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುತ್ತದೆ. ಇದು ಮೂತ್ರಪಿಂಡಗಳಿಗೆ ಹೆಚ್ಚು ಹಾನಿ ಮಾಡುತ್ತದೆ.