ಇಂದು ಬೆಂಗಳೂರಿನಂಥ ಮಹಾನಗರಗಳಲ್ಲಿ ಮಾಲಿನ್ಯ ಹೆಚ್ಚುತ್ತಿರುವ ಕಾರಣ, ಸ್ವಚ್ಛ ಗಾಳಿಗಾಗಿ ಹುಡುಕಾಟ ನಡೆಸಬೇಕಾದ ಅನಿವಾರ್ಯತೆ ಉಂಟಾಗಿದೆ. ಆದ್ದರಿಂದ ಸಾಧ್ಯವಾದಷ್ಟು ಮನೆಯಲ್ಲಿಯೇ ಶುದ್ಧ ಗಾಳಿ ಸಿಗುವಂತೆ ಮಾಡುವ ಸಲುವಾಗಿ ಹಲವಾರು ಬೆಂಗಳೂರಿಗರು ಇನ್ಡೋರ್ ಪ್ಲಾ್ಯಂಟ್ (ಒಳಾಂಗಣ ಗಿಡಗಳು) ಬೆಳೆಸುತ್ತಿದ್ದಾರೆ. ಪರಿಶುದ್ಧ ಗಾಳಿಗಾಗಿ ಲಭ್ಯ ಇರುವ ಇಲೆಕ್ಟ್ರಾನಿಕ್ ಏರ್ ಫಿಲ್ಟರ್ಗಳ ಬದಲು ನೈಸರ್ಗಿಕ ಗಿಡಗಳೇ ಬೆಸ್ಟ್ ಎಂಬ ಕಾರಣಕ್ಕಾಗಿ ಈ ಗಿಡಗಳ ಮೊರೆ ಹೋಗುತ್ತಿದ್ದಾರೆ. ಮನೆಯ ಒಳಾಂಗಣಕ್ಕೆ ಯಾವೆಲ್ಲಾ ಗಿಡಗಳು ಸರಿಹೊಂದುತ್ತವೆ ಎಂಬ ಮಾಹಿತಿ ಇಲ್ಲಿ ನೀಡಲಾಗಿದೆ.
ಸ್ನೇಕ್ ಪ್ಲಾಂಟ್: ಹಾವಿನ ಹೆಡೆಯ ಆಕಾರದಲ್ಲಿ ನೇರವಾದ ಎಲೆಗಳನ್ನು ಹೊಂದಿರುವ ಕಾರಣ ಈ ಗಿಡಕ್ಕೆ ಸ್ನೇಕ್ ಪ್ಲಾ್ಯಂಟ್ ಎಂಬ ಹೆಸರು. ಇದು ವಾತಾವರಣ ತಂಪಾಗಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗಾಳಿಯಲ್ಲಿರುವ ಬೆಂಜೀನ್, ಟ್ರೖೆಕ್ಲೋರೆಥಿಲೀನ್ಸ್ , ಕ್ಸಿಲೀನ್,ಫಾರ್ವಲ್ಡಿಹೈಡ್, ಮತ್ತು ಟೊಲುಯೀನ್ ಎಂಬ ರಾಸಾಯನಿಕಗಳನ್ನು ಬೇರ್ಪಡಿಸಿ ಶುದ್ಧ ಗಾಳಿಯನ್ನು ನೀಡುತ್ತದೆ.
ಪೋಥೋಸ್: ಪೋಥೋಸ್ ಎಂಬ ಗಿಡವನ್ನು ಕ್ಯುಬಿಕಲ್ ಪ್ಲಾ್ಯಂಟ್ ಎಂದು ಕರೆಯಲಾಗುತ್ತದೆ. ಗಿಡದ ಆಕಾರ ಸಣ್ಣದಾಗಿದ್ದರೂ ಅದರ ಬಳ್ಳಿಗಳು 10 ಅಡಿಗಳವರೆಗೆ ಬೆಳೆಯುತ್ತದೆ. ಕಡಿಮೆ ಬೆಳಕಿನಲ್ಲಿಯೂ ಪ್ರಕಾಶಮಾನವಾಗಿ ಕಾಣುವ ಈ ಗಿಡ, ಬೆಳಕಿನ ಮೂಲಕ ಗಾಳಿಯನ್ನು ಶುದ್ಧಗೊಳಿಸುತ್ತದೆ. ಇದು ಸಹ ಸ್ನೇಕ್ ಪ್ಲಾ್ಯಂಟ್ನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಡ್ರಾಕೇನಾ ಲಿಸಾ: ಡ್ರಾಕೇನಾ ಲಿಸಾ ಇದೊಂದು ವಿಭಿನ್ನ ಸಸಿಯಾಗಿದ್ದು, ಹೆಚ್ಚು ಬೆಳಕಿನ ಪರಿಸರಕ್ಕೆ ಹೊಂದಿಕೊಳ್ಳುವುದಿಲ್ಲ. ಹಾಗಾಗಿ ಸೂರ್ಯನ ನೇರ ಬೆಳಕಿನಿಂದ ದೂರವಿಡುವುದು ಉತ್ತಮ. ಇದು ಒಳಾಂಗಣ ತಾಪಮಾನ ಕಡಿಮೆ ಮಾಡುವುದಲ್ಲದೆ ಕಾಲಕ್ಕೆ ತಕ್ಕಂತೆ ಸುತ್ತಮುತ್ತಲ ವಾತಾವರಣದ ರಾಸಾಯನಿಕ ಅಂಶಗಳನ್ನು ಶುದ್ಧಿಕರಿಸುವುದರಲ್ಲಿ ಇತರ ಸಸಿಗಳಿಗಿಂತ ವಿಭಿನ್ನವಾಗಿದೆ.
ರಬ್ಬರ್ ಪ್ಲಾಂಟ್: ರಬ್ಬರ್ ಪ್ಲಾಂಟ್ ಅತಿ ಕಡಿಮೆ ನೀರಿನಾಂಶದಲ್ಲಿ ಜೀವಿಸಬಲ್ಲ ಗೀಡ. ದಪ್ಪನೆಯ ಹಸಿರು ಎಲೆಗಳನ್ನು ಹೊಂದಿದೆ. ನಿರ್ವಹಣೆ ಮತ್ತು ಪೋಷಣೆಯು ಸುಲಭವಾಗಿರುವ ಈ ಗಿಡಕ್ಕೆ ಪ್ರಕಾಶಮಾನವಾದ ಬೆಳಕು ಅಗತ್ಯ. ಇದು ಗಾಳಿಯಲ್ಲಿರುವ ಇಂಗಾಲದ ಡೈಆಕ್ಸೈಡ್ ತೆಗೆದು ಹಾಕಿ ಉತ್ತಮ ಗಾಳಿ ನೀಡುತ್ತದೆ.
ಬರ್ಡ್ಸ್ನೆಸ್ಟ್ ಪರ್ನ್: ಪಕ್ಷಿಗಳ ಗೂಡಿನಂತಿರುವ ಬರ್ಡ್ಸ್ ನೆಸ್ಟ್ ಗಿಡಗಳನ್ನು ಕಿಟಕಿಗಳ ಬಳಿ ನೇತು ಹಾಕಿದರೆ ಕಿಟಿಕಿಯ ಅಂದ ಹೆಚ್ಚುತ್ತದೆ. ವಾತಾವರಣದಲ್ಲಿರುವ ಫಾರ್ವಲ್ಡಿಹೈಡ್, ಕ್ಸಿಲೀನ್ ಮತ್ತು ಟೊಲುಯೀನ್ಗಳನ್ನು ಇದು ಶುದ್ಧಿಕರಿಸುತ್ತದೆ. ವಾಸ್ತು ರೂಪದಲ್ಲಿಯೂ ಈ ಗಿಡಗಳನ್ನು ಬಳಸಲಾಗುತ್ತದೆ. ಸ್ನಾನಗೃಹದಲ್ಲಿ ನೇತು ಹಾಕಿದರೆ ಒಳ್ಳೆಯದು ಎನ್ನಲಾಗುತ್ತದೆ.
ಪೀಸ್ ಲಿಲ್ಲಿ: ಇತರ ಒಳಾಂಗಣ ಸಸ್ಯಗಳಿಗೆ ಹೋಲಿಸಿದರೆ ಇದಕ್ಕೆ ಹೆಚ್ಚಿನ ಗಮನ ಹರಿಸಬೇಕು.ಕಡಿಮೆ ತೇವಾಂಶದ ನೆರಳಿನ ಸ್ಥಳದಲ್ಲಿ ಇರಿಸಿ ಪೋಷಿಸಬೇಕು. ಇದು ರಾತ್ರಿ ಸಮಯದಲ್ಲಿ ಆಮ್ಲಜನಕ ಉತ್ಪಾದಿಸುವ ವಿಶೇಷ ಗಿಡವಾಗಿದ್ದು, ಮಲಗುವ ಕೋಣೆಯಲ್ಲಿ ಇರಿಸಬಹುದಾಗಿದೆ. ಆಮ್ಲಜನಕ ಉತ್ಪಾದಿಸುವುದರ ಜತೆಗೆ ಅಮೋನಿಯಾ, ಬೆಂಜೀನ್,ಫಾರ್ವಲ್ಡಿಹೈಡ್ ಮತ್ತು ಟ್ರೖೆಕ್ಲೋರೆಥಿಲೀನ್ ಸಹ ತೆಗೆದುಹಾಕುತ್ತದೆ. ಆದರೆ, ಗಿಡದಿಂದ ಹೊರಸೂಸುವ ಸುವಾಸನೆ ಕೆಲವರಿಗೆ ಅಲರ್ಜಿ ಉಂಟು ಮಾಡುತ್ತದೆ. ಆದ್ದರಿಂದ ಅಲರ್ಜಿಯಿಂದ ಬಳಲುತ್ತಿರುವವರಿಗೆ ಇದು ಉತ್ತಮ ಆಯ್ಕೆಯಲ್ಲ.