ನಮ್ಮನ್ನು ಕಾಡುವ ಅನೇಕ ಕಾಯಿಲೆಗಳನ್ನು ತಡೆಯಲು ನೆಲ್ಲಿಕಾಯಿ ರಾಮಬಾಣ. ಇದರ ಮಹತ್ವವನ್ನು ತಿಳಿದಿದ್ದ ಹಿರಿಯರು ಹಿಂದಿನ ಕಾಲದಲ್ಲಿ ನೆಲ್ಲಿಕಾಯಿಯನ್ನು ಅನೇಕ ಔಷಧಿಯಾಗಿ ಬಳಸುತ್ತಿದ್ದರು. ಹವಾಮಾನ ಬದಲಾವಣೆಯಿಂದ ಕಂಡುಬರುವ ಹಾಮೋನ್ಗಳ ವ್ಯತ್ಯಾಸ ಸರಿಪಡಿಸಲು ಹಾಗೂ ಶೀತ, ಕೆಮ್ಮನ್ನು ದೂರ ಮಾಡಲು ನೆಲ್ಲಿಕಾಯಿ ಸೇವನೆ ಉತ್ತಮ. ನೆಲ್ಲಿಕಾಯಿಯಲ್ಲಿ ಕಿತ್ತಳೆಹಣ್ಣಿಗಿಂತ ಶೇ. 20ರಷ್ಟು ಹೆಚ್ಚಿನ ಸಿ ವಿಟಮಿನ್ ಇದೆ. ನೆಲ್ಲಿಕಾಯಿ ಕಹಿಯಾಗಿರುವುದರಿಂದ ತಿನ್ನಲು ಕಷ್ಟವೆನಿಸಿದರೆ ಉಪ್ಪಿನಕಾಯಿ, ಜಾಮ್ ತಂಬುಳಿ, ಪಾನಕ, ಚಟ್ನಿ ಮುಂತಾದ ರೂಪದಲ್ಲಿಯೂ ಸೇವಿಸಬಹುದು. ಇದರಿಂದ ನೆಲ್ಲಿಕಾಯಿಯ ಉತ್ತಮ ಪೋಷಕಾಂಶಗಳನ್ನು ಪಡೆಯಬಹುದು. ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ತಿನ್ನುವುದು ಆರೋಗ್ಯಕ್ಕೆ ಉತ್ತಮ.
- ನಿತ್ಯ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ದೇಹದ ಕೆಟ್ಟ ಕೊಲೆಸ್ಟರಾಲ್ ನಿಯಂತ್ರಿಸಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.
- ಮಧುಮೇಹದಿಂದ ಬಳಲುತ್ತಿರುವವರು ತಮ್ಮ ಆಹಾರದಲ್ಲಿ ನೆಲ್ಲಿಕಾಯಿಯನ್ನು ಸೇರಿಸಿಕೊಳ್ಳುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.
- ಹೃದ್ರೋಗಿಗಳು ನೆಲ್ಲಿಕಾಯಿಯನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ಉತ್ಪಾದನೆ ನಿಯಂತ್ರಿಸಲ್ಪಟ್ಟು, ಹೃದಯಕ್ಕೆ ರಕ್ಷಣೆ ದೊರೆಯುತ್ತದೆ.
- ಶರೀರದಲ್ಲಿ ಕಬ್ಬಿಣಾಂಶದ ಸಂಯೋಜನೆಗೆ ನೆರವಾಗುವ ಮೂಲಕ ಹಿಮೊಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವ ನೆಲ್ಲಿಕಾಯಿ ರಕ್ತಹೀನತೆಯನ್ನು ನಿವಾರಿಸುತ್ತದೆ.
- ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ನೆಲ್ಲಿಕಾಯಿ ಗಾಯಗಳು ಬೇಗನೆ ಗುಣವಾಗಲು ಸಹಾಯಕವಾಗಿದೆ. ್ಝ ಮಹಿಳೆಯರು ನಿರ್ದಿಷ್ಟವಾಗಿ ಬೆಳಗಿನ ಸಮಯದಲ್ಲಿ ನಿಯತವಾಗಿ ನೆಲ್ಲಿಕಾಯಿ ಸೇವಿಸುವುದರಿಂದ ಮುಟ್ಟಿನ ದಿನಗಳ ಹೊಟ್ಟೆನೋವು ಕಡಿಮೆಯಾಗುತ್ತದೆ.
- ಕಣ್ಣು ಹಾಗೂ ಬಾಯಿಯ ಆರೋಗ್ಯವನ್ನು ಹೆಚ್ಚಿಸುವುದರಲ್ಲಿಯೂ ನೆಲ್ಲಿಕಾಯಿ ಪ್ರಯೋಜನಕಾರಿ.
- ಉಪ್ಪು ಬೆರೆಸಿ ಒಣಗಿಸಿದ ನೆಲ್ಲಿಕಾಯಿಯ ನಿಯತ ಸೇವನೆಯು ಜೀರ್ಣಕ್ರಿಯೆಯನ್ನು ಹೆಚ್ಚಿಸುವುದಲ್ಲದೆ ಅಸಿಡಿಟಿಯನ್ನು ನಿಯಂತ್ರಿಸುತ್ತದೆ.
- ಬೇಸಿಗೆಯಲ್ಲಿ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ದಾಹ ನೀಗುವುದಲ್ಲದೆ, ಅನೇಕ ಆರೋಗ್ಯಕರ ಪ್ರಯೋಜನಗಳು ಲಭ್ಯವಾಗುತ್ತವೆ. ಜತೆಗೆ ದಣಿವು, ಜಡತೆಗಳು ನಿವಾರಣೆಯಾಗಿ ಶರೀರಕ್ಕೆ ಚೇತರಿಕೆ ಸಿಗುತ್ತದೆ. ಇದರ ಅತಿಬಳಕೆಯು ಅನೇಕ ದುಷ್ಪರಿಣಾಮಗಳನ್ನೂ ಉಂಟುಮಾಡುತ್ತದೆಂಬುದನ್ನು ಮರೆಯಬಾರದು.