ಅಡುಗೆಮನೆಯಲ್ಲಿನ ಔಷಧೀಯ ಗುಣಗಳುಳ್ಳ ಹಲವು ಸಾಂಬಾರಪದಾರ್ಥಗಳಲ್ಲಿ ಶುಂಠಿಯೂ ಒಂದು. ಇದನ್ನು ಉತ್ಪಾದಿಸುವ ರಾಷ್ಟ್ರಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಇಡೀ ವರ್ಷ ಧಾರಾಳವಾಗಿ ಸಿಗುವ ಶುಂಠಿಯನ್ನು ತಾಜಾ ಆಗಿ ಅಥವಾ ಒಣಗಿಸಿ, ಪುಡಿ ರೂಪದಲ್ಲೂ ಬಳಸಬಹುದು. ನಾಟಿ ಮಾಡಲು ಬಳಸುವ ಶುಂಠಿಯ ಭಾಗವೇ ಆಹಾರ, ಔಷಧದಲ್ಲೂ ಬಳಕೆಯಾಗುತ್ತದೆ.
- ಸ್ನಾಯುಸೆಳೆತ ಮೊದಲಾದ ನೋವುಗಳ ಶಮನಕ್ಕೆ ಶುಂಠಿ ಹೆಚ್ಚು ಪ್ರಯೋಜನಕಾರಿ. ಅಧ್ಯಯನದ ಪ್ರಕಾರ 12 ದಿನ 2 ಗ್ರಾಂ. ಶುಂಠಿಯನ್ನು ಸೇವಿಸಿದರೆ ನಿಧಾನವಾಗಿ ನೋವು ಕಡಿಮೆಗೊಳಿಸುತ್ತದೆ.
- ಊಟಕ್ಕಿಂತ ಮೊದಲು ಅವರೆಕಾಳಿನಷ್ಟು ಪ್ರಮಾಣದ ಹಸಿಶುಂಠಿಯನ್ನು ನಾಲ್ಕು ಹರಳು ಉಪ್ಪು ಸಹಿತ ಅಗಿದು ತಿಂದರೆ ಅಜೀರ್ಣದ ಸಮಸ್ಯೆ ದೂರವಾಗುತ್ತದೆ.
- ಅರ್ಧ ಬೆರಳಿನಷ್ಟು ಉದ್ದದ ಹಸಿಶುಂಠಿಯನ್ನು ಚೆನ್ನಾಗಿ ಅರೆದು ನೀರಿನಲ್ಲಿ ಕದಡಿ ನಂತರ ಜೇನುತುಪ್ಪ ಮತ್ತು ನಿಂಬೆರಸ ಬೆರೆಸಿ ಸೇವಿಸುವುದರಿಂದಲೂ ಅಜೀರ್ಣ ಮತ್ತು ಹೊಟ್ಟೆಯುಬ್ಬರ ನಿವಾರಣೆಯಾಗುತ್ತದೆ.
- ಹಸಿಶುಂಠಿಯನ್ನು ನೀರಿನಲ್ಲಿ ತೇಯ್ದು ಹಣೆಗೆ ಹಚ್ಚಿ ಬೆಚ್ಚಗೆ ಹೊದ್ದು ಮಲಗಿದರೆ ಸ್ವಲ್ಪ ಸಮಯದ ನಂತರ ಬೆವರು ಬಂದು ತಲೆನೋವು ಮಾಯವಾಗುತ್ತದೆ.
- ಪ್ರತಿದಿನ ಊಟದ ಬಳಿಕ ಅಲ್ಪ ಪ್ರಮಾಣದಲ್ಲಿ ಶುಂಠಿಯನ್ನು ಅಗಿದು ಚಪ್ಪರಿಸುತ್ತಿದ್ದರೆ ಅಜೀರ್ಣ ಹಾಗೂ ಪಿತ್ತದ ತೊಂದರೆ ನಿವಾರಣೆಯಾಗುತ್ತದೆ.
- ಹಸಿಶುಂಠಿ ರಸಕ್ಕೆ ಜೇನುತುಪ್ಪ ಬೆರೆಸಿ ಕೊಡುವುದರಿಂದ ಮಕ್ಕಳ ಕರುಳು ಮತ್ತು ಜಠರಕ್ಕೆ ಸಂಬಂಧಿಸಿದ ತೊಂದರೆಗಳು ದೂರವಾಗುತ್ತವೆ.
- ಒಣಶುಂಠಿಯನ್ನು ಕೆಂಡದ ಮೇಲೆ ಸುಟ್ಟು ಪುಡಿ ಮಾಡಿ ಉಪ್ಪಿನ ಪುಡಿ ಬೆರೆಸಿ ಹಲ್ಲು ತಿಕ್ಕಿದರೆ ಹಲ್ಲುನೋವು ಶಮನವಾಗುತ್ತದೆ.
- ಒಂದು ಚೂರು ಹಸಿಶುಂಠಿ, ಅರ್ಧ ಟೀ ಚಮಚ ಜೀರಿಗೆ ಮತ್ತು ಕಲ್ಲುಸಕ್ಕರೆಯನ್ನು ಚೆನ್ನಾಗಿ ಅಗಿದು ಚಪ್ಪರಿಸುವುದರಿಂದ ರುಚಿಗ್ರಹಣ ಶಕ್ತಿ ಅಧಿಕವಾಗುತ್ತದೆ.
ರಕ್ತಪರಿಚಲನೆಯನ್ನು ಚುರುಕುಗೊಳಿಸಿ ಅಂಗಾಂಗಳ ಕ್ಷಮತೆ ಹೆಚ್ಚಿಸಲು ಇದರಲ್ಲಿನ ಪೋಷಕಾಂಶಗಳು ನೆರವಾಗುತ್ತವೆ. ತಜ್ಞವೈದ್ಯರ ಪ್ರಕಾರ ಗರ್ಭಿಣಿಯರು ದಿನಕ್ಕೆ 2.5 ಗ್ರಾಂ.ಗಿಂತ ಹೆಚ್ಚು ಶುಂಠಿಯನ್ನು ಸೇವಿಸಬಾರದು. ಅಜೀರ್ಣಸಂಬಂಧಿ ಸಮಸ್ಯೆಗಳಿದ್ದರೆ ದಿನಕ್ಕೆ 1.2 ಗ್ರಾಂ.ಗಿಂತ ಹೆಚ್ಚು ಶುಂಠಿಯನ್ನು ಸೇವಿಸಬಾರದು. ಒಬ್ಬ ವ್ಯಕ್ತಿಗೆ ಪ್ರತಿನಿತ್ಯ 5 ಗ್ರಾಂ ಶುಂಠಿ ಸಾಕು. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ.