ಲೈಫ್‌ಸ್ಟೈಲ್

ಆರೋಗ್ಯ ವೃದ್ಧಿ, ನಿದ್ರಾಹೀನತೆ ಸಮಸ್ಯೆ ಪರಿಹರಿಸಲು ಸಹಕಾರಿ ಸಬ್ಬಸಿಗೆ ಸೊಪ್ಪು

ಸಾಮಾನ್ಯವಾಗಿ ಸಬ್ಬಸಿಗೆ ಸೊಪ್ಪಿನ ಪರಿಚಯ ಎಲ್ಲರಿಗೂ ಇರುತ್ತದೆ. ಇತರ ಹಸಿರು ಸೊಪ್ಪುಗಳಂತಿರದೆ ವಿಭಿನ್ನವಾಗಿರುವ ಇದರ ಎಲೆಗಳು ಅಗಲವಾಗಿರದೆ ಸಣ್ಣ ಕಡ್ಡಿಗಳಂತೆ ನೀಳವಾಗಿರುತ್ತವೆ. ಇದರ ವೈಜ್ಞಾನಿಕ ಹೆಸರು ಅನೆಥಮ್ ಗ್ರಾವೆಲನ್ಸ್. ಈ ಸೊಪ್ಪಿನ ಪ್ರತಿ ಭಾಗವೂ ಪರಿಮಳದಿಂದ ಕೂಡಿರುವ ಕಾರಣ ಕೆಲವರಿಗೆ ಇಷ್ಟವಾಗುವುದಿಲ್ಲ. ಸಾಂಬಾರು, ಪಲ್ಯ, ಪಲಾವ್​ಗಳಲ್ಲಿ ಪರಿಮಳಕ್ಕಾಗಿ ಇದನ್ನು ಬಳಸುತ್ತಾರೆ. ಇದರಿಂದ ಇನ್ನೂ ಬೇರೆ ಬೇರೆ ಬಗೆಯ ಅಡುಗೆಗಳನ್ನೂ ಮಾಡುತ್ತಾರೆ. ಸಬ್ಬಸಿಗೆ ಬೀಜಗಳನ್ನು ಸಾಂಬಾರಿನಲ್ಲಿ ಬಳಸುತ್ತಾರೆ. ಅನೇಕ ಪೋಷಕಾಂಶಗಳನ್ನು ಹೊಂದಿರುವುದರಿಂದ ಹತ್ತು ಹಲವಾರು ರೋಗಗಳನ್ನು ವಾಸಿಮಾಡುವ ಗುಣಗಳನ್ನು ಸಬ್ಬಸಿಗೆ ಸೊಪ್ಪು ಹೊಂದಿದೆ.

* ಪ್ರತಿನಿತ್ಯ ಆಹಾರದಲ್ಲಿ ಸಬ್ಬಸಿಗೆ ಸೊಪ್ಪಿನ ಬಳಕೆ ಮಾಡುವುದರಿಂದ ನಿದ್ರಾಹೀನತೆಯ ಸಮಸ್ಯೆ ಉಂಟಾಗುವುದಿಲ್ಲ.* ಗಾಯಕ್ಕೆ ಸಬ್ಬಸಿಗೆ ಸೊಪ್ಪಿನ ರಸ ಹಚ್ಚುವುದರಿಂದ ರಕ್ತಸ್ರಾವ ನಿಲ್ಲುವುದರ ಜತೆಗೆ ಗಾಯವೂ ಬೇಗನೆ ವಾಸಿಯಾಗುತ್ತದೆ.* ಸಬ್ಬಸಿಗೆ ಸೊಪ್ಪಿನ ರಸಕ್ಕೆ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಅಜೀರ್ಣದಿಂದುಂಟಾದ ಹೊಟ್ಟೆನೋವು ನಿವಾರಣೆಯಾಗುತ್ತದೆ.* ಅರಿಶಿಣದ ಜತೆ ಸಬ್ಬಸಿಗೆ ಸೊಪ್ಪನ್ನು ಅರೆದು ಅಲರ್ಜಿಯುಂಟಾದ ಚರ್ಮದ ಭಾಗಕ್ಕೆ ಹಚ್ಚುವುದರಿಂದ ಅದು ಕಡಿಮೆಯಾಗುತ್ತದೆ.* ಸಬ್ಬಸಿಗೆ ಸೊಪ್ಪಿನ ಜತೆ ಮೆಂತೆ ಸೇರಿಸಿ, ತುಪ್ಪದಲ್ಲಿ ಹುರಿಯಬೇಕು. ಅದಕ್ಕೆ ಒಣಮೆಣಸು, ಕಾಯಿತುರಿ, ಉಪ್ಪು, ಸಾಸಿವೆ ಸೇರಿಸಿ ಚಟ್ನಿಪುಡಿ ಮಾಡಬೇಕು. ಅದನ್ನು ಅನ್ನದಲ್ಲಿ ಮಜ್ಜಿಗೆಯೊಂದಿಗೆ ಕಲಸಿ ಉಣ್ಣುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ.* ಹೆರಿಗೆಯಾದವರು ಸಬ್ಬಸಿಗೆ ಸೊಪ್ಪನ್ನು ಆಹಾರದಲ್ಲಿ ಬಳಸುವುದರಿಂದ ಹಾಲಿನ ಪ್ರಮಾಣ ವೃದ್ಧಿಸುತ್ತದೆ. ಅಲ್ಲದೆ ಇದು ಆರೋಗ್ಯಕ್ಕೂ ತುಂಬ ಒಳ್ಳೆಯದು.* ಆಹಾರಪದಾರ್ಥದಲ್ಲಿ ಸಬ್ಬಸಿಗೆ ಸೊಪ್ಪನ್ನು ಅಳವಡಿಸಿಕೊಳ್ಳುವುದರಿಂದ ಅದರಲ್ಲಿರುವ ಕ್ಯಾಲ್ಸಿಯಂ ಅಂಶವು ಮೂಳೆಗಳನ್ನು ಬಲಪಡಿಸುತ್ತದೆ.* ಪ್ರತಿನಿತ್ಯವೂ ಆಹಾರದ ರೂಪದಲ್ಲಿ ಸಬ್ಬಸಿಗೆ ಸೊಪ್ಪನ್ನು ಸೇವಿಸುವುದರಿಂದ ಅನಿಯಮಿತ ಋತುಚಕ್ರದ ಸಮಸ್ಯೆ ನಿವಾರಣೆಯಾಗುತ್ತದೆ.* ದೈನಂದಿನ ಆಹಾರದಲ್ಲಿ ಸಬ್ಬಸಿಗೆ ಸೊಪ್ಪಿನ ಬಳಕೆಯನ್ನು ಹೆಚ್ಚಿಸಿದಲ್ಲಿ ಪದೇಪದೆ ಬಿಕ್ಕಳಿಕೆ ಬರುವುದನ್ನು ನಿಯಂತ್ರಿಸಬಹುದು.* ಮಧುಮೇಹಿಗಳು ಸಬ್ಬಸಿಗೆ ಸೊಪ್ಪನ್ನು ಬಳಸುವುದರಿಂದ, ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡಬಹುದು.