ನವದೆಹಲಿ: ದೇಶದ ಜನರಿಗೆ ವಾರದ ಏಳೂ ದಿನ 24 ಗಂಟೆ ಕಾಲ ಮಾನಸಿಕ ಸ್ಥೈರ್ಯ ನೀಡುವ, ಧೈರ್ಯ ತುಂಬುವ ಸಲುವಾಗಿ ಟೋಲ್ ಫ್ರೀ ಸಹಾಯವಾಣಿ 'ಕಿರಣ್' (1800-599-0019) ಅನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಈ ಸಹಾಯವಾಣಿಗೆ ಸೋಮವಾರ ಚಾಲನೆ ನೀಡಿದ್ದಾರೆ.
ಈ ಸಹಾಯವಾಣಿಯು ಲೈಫ್ಲೈನ್ ರೀತಿ ಕೆಲಸ ಮಾಡಲಿದ್ದು, ಸಲಹೆ, ಸಮಾಲೋಚನೆ ಮತ್ತು ರೆಫರೆನ್ಸ್ಗಳನ್ನು ಕರೆಮಾಡುವವರಿಗೆ ಒದಗಿಸಲಿದೆ. ಈಗ ಆರಂಭಿಕ ಹಂತದಲ್ಲಿ ದೇಶದ 13 ಭಾಷೆಗಳಲ್ಲಿ ಇದರ ಸೇವೆ ಲಭ್ಯವಿದೆ. ಸಹಾಯವಾಣಿಯು ಮೆಂಟಲ್ ಹೆಲ್ತ್ ರಿಹ್ಯಾಬಿಲಿಟೇಶನ್ ಸರ್ವೀಸಸ್ಗೆ ಸಂಬಂಧಿಸಿದ್ದಾಗಿದ್ದು, ಆರಂಭಿಕ ಸ್ಕ್ರೀನಿಂಗ್, ಡಿಸ್ಟ್ರೆಸ್ ಮ್ಯಾನೇಜ್ಮೆಂಟ್, ಮಾನಸಿಕ ಸ್ವಾಸ್ಥ್ಯ, ಧನಾತ್ಮಕ ನಡವಳಿಕೆ ಉತ್ತೇಜಿಸುವುದು, ಮಾನಸಿಕ ಸಂಘರ್ಷ ನಿರ್ವಹಣೆ ಮುಂತಾದವುಗಳ ವಿಚಾರವಾಗಿ ನೆರವಿಗೆ ಬರಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಸಹಾಯವಾಣಿಯ ತಾಂತ್ರಿಕ ಮಾಹಿತಿಯನ್ನು ಒದಗಿಸಿದ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಬೋದ್ ಸೇಥ್, ಬಿಎಸ್ಎನ್ಎಲ್ ಇದರ ತಾಂತ್ರಿಕ ಸೇವೆಯನ್ನು ಒದಗಿಸುತ್ತಿದೆ. ದೇಶದ 660 ಕ್ಲಿನಿಕಲ್ ಮತ್ತು ರಿಹ್ಯಾಬಿಲಿಟೇಶನ್ ಸೈಕಾಲಜಿಸ್ಟ್ಗಳು ಮತ್ತು 668 ಸೈಕ್ರಿಯಾಟಿಸ್ಟ್ಗಳು ಈ ಸಹಾಯವಾಣಿ ಜತೆಗೆ ಕೈ ಜೋಡಿಸಿದ್ದಾರೆ. ಕನ್ನಡ, ಮಲಯಾಳಂ, ಮರಾಠಿ, ಬಂಗಾಳಿ, ಉರ್ದು, ಇಂಗ್ಲಿಷ್, ತಮಿಳು, ಒಡಿಯಾ, ತೆಲುಗು, ಪಂಜಾಬಿ, ಗುಜರಾತಿ, ಅಸ್ಸಾಮೀಸ್, ಹಿಂದಿ ಸೇರಿ 13 ಭಾಷೆಗಳಲ್ಲಿ ಈ ಸೇವೆ ಲಭ್ಯವಿದೆ ಎಂದು ವಿವರಿಸಿದರು. (ಏಜೆನ್ಸೀಸ್)