ಭಾರತೀಯರ ಅಡುಗೆಯಲ್ಲಿ ಬಳಸಲ್ಪಡುವ ಪ್ರತಿ ಸಾಂಬಾರ ಪದಾರ್ಥದಲ್ಲೂ ಅನೇಕ ಆರೋಗ್ಯಕರ ಗುಣಗಳಿವೆ. ಹಿಂದಿನ ಕಾಲದವರ ಆಹಾರಕ್ರಮವನ್ನು ಗಮನಿಸಿದರೆ ಅವರ ಆರೋಗ್ಯದ ಗುಟ್ಟು ತಿಳಿಯುತ್ತದೆ. ನಿತ್ಯ ಅಡುಗೆಯಲ್ಲಿ ಬಳಸುವ ಸಾಂಬಾರಪದಾರ್ಥಗಳಲ್ಲಿ ಬೆಳ್ಳುಳ್ಳಿಯೂ ಒಂದು.
ಈರುಳ್ಳಿಯ ಪ್ರಭೇದಕ್ಕೆ ಸೇರಿರುವ ಇದರ ವೈಜ್ಞಾನಿಕ ಹೆಸರು ಆಲಿಯಮ್ ಸ್ಯಾಟೀವಮ್ ಏಳು ಸಾವಿರ ವರ್ಷಗಳಿಗಿಂತ ಹೆಚ್ಚು ಮಾನವ ಬಳಕೆಯ ಇತಿಹಾಸವಿರುವ ಬೆಳ್ಳುಳ್ಳಿಯು ಮಧ್ಯ ಏಷ್ಯಾಕ್ಕೆ ಸ್ಥಳೀಯ ಸಾಂಬಾರಪದಾರ್ಥವಾಗಿದೆ. ಜಗತ್ತಿನಲ್ಲಿ ಚೀನಾದವರು ಅತಿ ಹೆಚ್ಚು ಬೆಳ್ಳುಳ್ಳಿಯನ್ನು ಬೆಳೆಯುತ್ತಾರೆ. ನಮ್ಮ ದೇಶದ ಉತ್ಪಾದನೆ ಮತ್ತು ಬೆಳೆಯುವ ಪ್ರದೇಶವನ್ನು ಗಮನಿಸಿದಾಗ ಮಧ್ಯಪ್ರದೇಶ ಪ್ರಥಮ ಸ್ಥಾನದಲ್ಲಿದೆ. ಗುಜರಾತ್, ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ, ಮತ್ತು ಕರ್ನಾಟಕ ರಾಜ್ಯಗಳಲ್ಲೂ ಬೆಳ್ಳುಳ್ಳಿಯನ್ನು ಬೆಳೆಯುತ್ತಾರೆ.
ಎಲ್ಲರ ಅಡುಗೆಮನೆಯಲ್ಲೂ ಇರುವ ಬೆಳ್ಳುಳ್ಳಿಯನ್ನು ಸಾಮಾನ್ಯವಾಗಿ ಆಹಾರಕ್ಕೆ ಪರಿಮಳ, ವಿಶಿಷ್ಟ ರುಚಿ ನೀಡಲು ಬಳಸಲಾಗುತ್ತದೆ. ಮನೆಮದ್ದು ಮತ್ತು ಆಯುರ್ವೆದ ವೈದ್ಯಕೀಯ ಪದ್ಧತಿಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಬೆಳ್ಳುಳ್ಳಿಯಲ್ಲಿ ಹಲವಾರು ಖನಿಜಾಂಶಗಳು, ಪ್ರೋಟೀನ್, ವಿಟಮಿನ್ ಎ, ಬಿ, ಸಿ ಸೇರಿದಂತೆ ಹಲವು ಪೌಷ್ಟಿಕಾಂಶಗಳು ಮತ್ತು ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವಂತಹ ಗುಣಗಳಿವೆ. ಅಧಿಕ ರಕ್ತದೊತ್ತಡ, ಹೃದ್ರೋಗ, ಕ್ಷಯ ಮತ್ತು ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳ ತಡೆಗೆ ತಯಾರಿಸುವ ಔಷಧಗಳಿಗೆ ಬೆಳ್ಳುಳ್ಳಿ ಬೇಕೇ ಬೇಕು.
ಆಂಟಿ ಫಂಗಲ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಗುಣ ಹೊಂದಿರುವ ಬೆಳ್ಳುಳ್ಳಿಯನ್ನು ಪ್ರತಿದಿನ ಸೇವನೆ ಮಾಡಿದರೆ ಕೊಲೆಸ್ಟರಾಲ್ನಂತಹ ಹಲವಾರು ಸಮಸ್ಯೆಗಳು ದೂರವಾಗುತ್ತವೆ. ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ಹಸಿಯಾಗಿ ತಿನ್ನುವುದರಿಂದ ಕರುಳಿನ ಹುಣ್ಣು ನಿವಾರನೆಯಾಗುತ್ತದೆ ಎಂಬುದು ವೈದ್ಯರ ಅನುಭವ. ತುಂಬ ಘಾಟು ಹೊಂದಿರುವ ಹಸಿ ಬೆಳ್ಳುಳ್ಳಿ ಸೇವಿಸುವುದರಿಂದ ಖಿನ್ನತೆ ದೂರವಾಗುತ್ತದೆ ಮತ್ತು ರಕ್ತಶುದ್ಧಿಯಾಗುತ್ತದೆ. ಮಕ್ಕಳಲ್ಲಿನ ಜಂತುಹುಳದ ಸಮಸ್ಯೆ, ಅಜೀರ್ಣ ಸಮಸ್ಯೆ ಸೇರಿದಂತೆ ಹಲವಾರು ಸಣ್ಣಪುಟ್ಟ ಆರೋಗ್ಯಸಂಬಂಧಿ ತೊಂದರೆಗಳಿಗೆ ಬೆಳ್ಳುಳ್ಳಿ ತತ್ಕ್ಷಣದ ರಾಮಬಾಣವಾಗಿದೆ. ಇದರಿಂದ ದೀರ್ಘಕಾಲೀನ ಆರೋಗ್ಯ ಪ್ರಯೋಜನಗಳೂ ಇವೆ.