ಸಾಮಾನ್ಯವಾಗಿ ವಾಸ್ತು ವಿನ್ಯಾಸದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಆಯಗಳಿಗೆ ಪ್ರಾಣಿಗಳ ಹೆಸರಿರುತ್ತವೆ. ಯಾವ ಪ್ರಾಣಿಯ ಹೆಸರು ಯಾವ ಆಯಕ್ಕೆ ಇಡಲಾಗಿದೆಯೋ ಆ ಆಯವು ಆ ಪ್ರಾಣಿಯ ಗುಣಲಕ್ಷಣ ಹೊಂದಿರುವುದು ಅದಕ್ಕೆ ಕಾರಣ. ಅಂತೆಯೇ ಏಳನೇಯದಾದ ಗಜಾಯವು ಆನೆಯ ಹೆಸರಿನಿಂದ ಕರೆಯಲ್ಪಡುತ್ತಿದ್ದು, ಆನೆ ಎಂಬುದು ಪ್ರಾಣಿಗಳಲ್ಲೇ ಅತ್ಯಂತ ವಿಶಿಷ್ಟವಾದುದು. ಆನೆ ಗಾತ್ರದಲ್ಲಿ ದೊಡ್ಡದಷ್ಟೇ ಅಲ್ಲ; ಅತ್ಯಂತ ಸೂಕ್ಷ್ಮಮತಿ, ಬುದ್ದಿವಂತ, ಸಾಮರ್ಥ್ಯವುಳ್ಳ ಹಾಗೂ ಗಾಂಭೀರ್ಯದ ನಡವಳಿಕೆ ಹೊಂದಿರುವ ಪ್ರಾಣಿ. ಆನೆಯನ್ನು ಸಂಪತ್ತಿನ ಪ್ರತೀಕವಾಗಿ ಗಜಲಕ್ಷ್ಮಿ ಎಂದು ಕರೆಯುತ್ತಾರೆ. ‘ಆನೆ ಇದ್ದರೂ ಲಕ್ಷ, ಸತ್ತರೂ ಲಕ್ಷ’ ಎಂಬ ಗಾದೆ ಮಾತಿನಂತೆ ಹೆಚ್ಚಿನ ಬೆಲೆಯುಳ್ಳ ಆನೆಯ ಹೆಸರಿನಲ್ಲಿರುವು ಗಜಾಯವು ವಾಸ್ತುವಿನ್ಯಾಸದಲ್ಲಿ ಪ್ರಮುಖವಾಗಿದೆ. ಗಜಾಯವು 1:1.666 ಅನುಪಾತವನ್ನು ಹೊಂದಿದ್ದು, ಮನೆ, ಕೈಗಾರಿಕೆ, ಕಚೇರಿ, ಕಲ್ಯಾಣಮಂಟಪ, ಸಮುದಾಯ ಭವನ ಇತ್ಯಾದಿ ಸ್ಥಳಗಳಲ್ಲಿ ಅಳವಡಿಸಲಾಗುತ್ತದೆ.
ಮನೆಯಲ್ಲಿ ಬೆಡ್ರೂಮ್ ಹೊರತುಪಡಿಸಿ, ಅಡುಗೆಕೋಣೆ, ಲಿವಿಂಗ್ ಹಾಲ್, ಡೈನಿಂಗ್ ಹಾಲ್ನಲ್ಲಿ ಗಜಾಯ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಶಾಲಾ ಕೊಠಡಿಗಳಲ್ಲಿ ಗಜಾಯದ ಅಳವಡಿಕೆಯಿಂದ ಕೊನೇ ಸಾಲಿನಲ್ಲಿ ಕುಳಿತ ವಿದ್ಯಾರ್ಥಿ ಕೂಡ ಉತ್ತಮ ರೀತಿಯಲ್ಲಿ ಪಾಠ ಕೇಳಲು ಪೂರಕವಾಗಿರುತ್ತದೆ. ಈಶಾನ್ಯ ಭಾಗದ ಚೈತನ್ಯಶಕ್ತಿಯನ್ನು ಬಳಸಿಕೊಂಡು ಗಜಾಯ ಅಳವಡಿಸಿದರೆ ಆ ಸ್ಥಳ ವ್ಯಾಪಾರ-ವಹಿವಾಟು ವೃದ್ಧಿಗೆ ಉತ್ತಮವಾಗಿರಲಿದೆ.
ವಿಶೇಷವಾಗಿ ಸೂಕ್ಷ್ಮವಸ್ತುಗಳನ್ನು ತಯಾರಿಸುವ ಕೈಗಾರಿಕೆಗಳಲ್ಲಿ ಗಜಾಯ ಬಹಳ ಮುಖ್ಯ. ವಾಚ್, ಕಂಪ್ಯೂಟರ್, ಡಿಫೆನ್ಸ್ ಸಂಬಂಧಿತ ವಸ್ತುಗಳ ನಿರ್ವಣ, ಫಾರ್ಮಸಿಟಿಕಲ್, ಸಂಶೋಧನೆ ಮತ್ತು ಅಭಿವೃದ್ಧಿ ಹೀಗೆ ಸೂಕ್ಷ್ಮಾತಿಸೂಕ್ಷ್ಮ ಉತ್ಪಾದನಾ ಸ್ಥಳಗಳಲ್ಲಿ ಗಜಾಯ ಬಳಸುವುದರಿಂದ ಉತ್ತಮ ಫಲಿತಾಂಶ ದೊರೆಯಲಿದೆ. ಇತ್ತೀಚಿನ ದಿನಗಳಲ್ಲಿ ಜನರನ್ನು ಆಕರ್ಷಿಸುತ್ತಿರುವ ವಿವಿಧೋದ್ದೇಶದ ವಾಣಿಜ್ಯ ಸಂಕೀರ್ಣಗಳಿಗೆ ಗಜಾಯ ಅತ್ಯಂತ ಪರಿಣಾಮಕಾರಿಯಾಗಿದೆ.
ಸಾರ್ವಜನಿಕವಾಗಿ ಬಳಕೆಯಾಗುವ ಹೋಟೆಲ್, ಕ್ಯಾಂಟೀನ್, ಪಾರ್ಟಿ ಹಾಲ್, ಕಲ್ಯಾಣಮಂಟಪಗಳ ಡೈನಿಂಗ್ ಹಾಲ್ನಲ್ಲಿ ಗಜಾಯ ಅಳವಡಿಸಬಹುದು. ದೊಡ್ಡ ಕ್ಷೇತ್ರಗಳಲ್ಲಿ ನಿರ್ವಿುಸುವ ವಸತಿ ಛತ್ರ ಮತ್ತು ಯೋಧರಿಗಾಗಿ ನಿರ್ವಿುಸುವ ವಸತಿ ನಿಲಯಗಳಲ್ಲಿ ಗಜಾಯದ ಬಳಕೆ ಪರಿಣಾಮಕಾರಿ. ಆಸ್ಪತ್ರೆಯ ವಾರ್ಡ್ಗಳನ್ನು ಗಜಾಯದಲ್ಲಿ ನಿರ್ವಿುಸುವುದರಿಂದ ರೋಗಿಗಳ ಚೇತರಿಕೆಗೆ ಸಹಾಯವಾಗುತ್ತದೆ.
ಗಜಾಯವನ್ನು ಸುವರ್ಣ ಆಯತಾಕಾರ ಎಂದು ಕರೆಯಲಾಗುತ್ತದೆ. ತತ್ವಜ್ಞಾನಿಗಳ ತವರು ಎಂದು ಕರೆಯಿಸಿಕೊಳ್ಳುವ ಗ್ರೀಕ್ ರಾಷ್ಟ್ರದ ಶಿಲ್ಪಕಾರನಾಗಿದ್ದ ಫಿಲೀಡಿಯಸ್ ಎಂಬಾತ ಗಜಾಯವನ್ನು ‘ಗೋಲ್ಡನ್ ರೆಕ್ಟಾಂಗಲ್’ ಎಂದು ಕರೆದಿದ್ದಾನೆ. ಸಾವಿರಾರು ವರ್ಷಗಳ ಹಿಂದಿನ ಫಿಲೀಡಿಯಸ್ನ ಈ ಉದ್ಗಾರವು ಇಂದಿಗೂ ರೂಢಿಯಲ್ಲಿದೆ. ವಿದೇಶಿಯರು ಹೇಳಿದ ಮಾತನ್ನು ಅನುಸರಿಸುವ ಪರಿಪಾಠ ಭಾರತೀಯರಲ್ಲಿ ಇತ್ತೀಚೆಗೆ ಹೆಚ್ಚಾಗಿದೆ. ಗಮನಿಸಬೇಕಾದ ಅಂಶವೇನೆಂದರೆ ಫಿಲೀಡಿಯಸ್ನಿಗಿಂತಲೂ ಬಹಳ ಹಿಂದೆಯೇ ನಮ್ಮ ಪೂರ್ವಿಕರು ಗಜಾಯವನ್ನು ಸುವರ್ಣ ಆಯತಾಕಾರ ಎಂದು ಗುರುತಿಸಿಸಿದ್ದರು. ಕರ್ನಾಟಕದ ಐತಿಹಾಸಿಕ ತಾಣಗಳಲ್ಲಿ ಈ ಬಗ್ಗೆ ಸಾಕಷ್ಟು ಶಿಲ್ಪಗಳು ಸಾಕ್ಷಿ ಒದಗಿಸುತ್ತವೆ.
ಪ್ರಮುಖವಾಗಿ ಬಾದಾಮಿಯ ಗುಹಾಂತರ ದೇವಾಲಯದಲ್ಲಿರುವ ನವಬಾಹು ನಟರಾಜನ ವಿಶೇಷ ಭಂಗಿಯ ಶಿಲ್ಪವು ಗಜಾಯಕ್ಕೆ ಒಂದು ಉತ್ತಮ ಉದಾಹರಣೆಯಾಗಿದೆ. ಹೇಳುವ ತಾತ್ಪರ್ಯವಿಷ್ಟೆ. ವಾಸ್ತು ಲೆಕ್ಕಾಚಾರ ಮತ್ತು ಮಹತ್ವದ ಬಗ್ಗೆ ಭಾರತೀಯ ಪುರಾತನರಿಗೆ ಬಹಳ ಮೊದಲೇ ತಿಳಿದಿತ್ತು. ಇತ್ತೀಚೆಗೆ ಪಂಜಾಬ್ ರಾಜ್ಯದ ಚಂಡಿಗಢ ನಗರದಲ್ಲಿ ನಿರ್ವಣಗೊಂಡಿರುವ ಹಲವು ಸರ್ಕಾರಿ ಕಟ್ಟಗಳನ್ನು ವಾಸ್ತು ವಿನ್ಯಾಸಗೊಳಿಸಿದ ವಿದೇಶಿ ಮೂಲದ ಲೀ-ಕಾರ್ಬೂಸಿಯರ್ ಕೂಡ ಗಜಾಯವನ್ನು ಅನುಸರಿಸಿದ್ದಾನೆ. ಆತನ ವಾಸ್ತು ಜ್ಞಾನಕ್ಕೆ ಭಾರತವೇ ಮೂಲ ಎಂಬುದು ಗಮನಾರ್ಹ.
ಆಯಗಳಲ್ಲಿ ಕೊನೆಯದು ಕಾಕಾಯ. ಕಾಕ ಎಂದರೆ ಕಾಗೆ. ಕಾಗೆಯ ಗುಣ ಕೂಡಿ ತಿನ್ನುವುದು. ತನಗೆ ಸಿಕ್ಕಿದ್ದನ್ನು ಸಮುದಾಯದಲ್ಲಿ ಹಂಚಿಕೊಂಡು ತಿನ್ನಬೇಕು ಎಂಬ ನೈತಿಕ ಪಾಠವನ್ನು ಕಾಗೆಯಿಂದ ಕಲಿಯಬೇಕು. ಅದೇ ಹೆಸರಿನಲ್ಲಿರುವ ಆಯದ ಬಳಕೆ ಕೂಡ ಅದೇ ವಿಷಯವನ್ನಾಧರಿಸಿದೆ. ಕಾಕಾಯವನ್ನು ವಿಶೇಷವಾಗಿ ಕಲ್ಯಾಣ ಮಂಟಪ, ಸಮುದಾಯ ಭವನ, ಸಿನಿಮಾ ಥಿಯೇಟರ್, ಪ್ರದರ್ಶನ ಮಂದಿರಗಳು, ಪ್ರಾರ್ಥನಾ ಮಂದಿರಗಳು, ರೀಡಿಂಗ್ ಲೈಬ್ರರಿ, ವೇರ್ ಹೌಸ್, ಸಾರ್ವಜನಿಕ ಅಡುಗೆಮನೆ ಹೀಗೆ ಹೆಚ್ಚು ಜನರು ಒಂದೇ ಉದ್ದೇಶಕ್ಕೆ ಸೇರುವ ಸ್ಥಳಗಳಿಗೆ ಕಾಕಾಯ ಅಳವಡಿಸಲಾಗುತ್ತದೆ. ಕಾಕಾಯವು ಜನರಲ್ಲಿ ಪರಸ್ಪರ ಸೌಹಾರ್ಧ ಭಾವ ಮೂಡಿಸಲು ಪೂರಕವಾಗಿದೆ.
ಒಟ್ಟಾರೆ ವಾಸ್ತು ವಿನ್ಯಾಸದಲ್ಲಿ ಪ್ರಮುಖವಾಗಿರುವ ಆಯಗಳ ಅಳವಡಿಕೆ ಮಾಡುವಾಗ, ಆ ಸ್ಥಳದಲ್ಲಿ ನಡೆಯುವ ಚಟುವಟಿಕೆ, ಕೆಲಸ ಮಾಡುವ ಜನ, ಉತ್ಪಾದಿಸುವ ವಸ್ತು, ಅಲ್ಲಿನ ಪರಿಸರ ಹೀಗೆ ವಿವಿಧ ಅಂಶಗಳನ್ನು ಅಧ್ಯಯನ ಮಾಡಿ ಅದಕ್ಕೆ ಪೂರಕವಾಗಿ ಅಳವಡಿಸುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.